ಚಾಮರಾಜನಗರ: ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ತಂಗುದಾಣಗಳ ಸೌಕರ್ಯ ಸರಿಯಾಗಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಕೆಲವು ಕಡೆಗಳಲ್ಲಿ ತಂಗುದಾಣಗಳು ಇದ್ದರೂ, ನಿರ್ವಹಣೆ ಸರಿ ಇಲ್ಲದಿರುವುದರಿಂದ ಜನರ ಉಪಯೋಗಕ್ಕೆ ಬರದಂತಾಗಿದೆ. ಇರುವ ತಂಗುದಾಣಗಳು ಅಶುಚಿತ್ವದ ತಾಣಗಳಾಗಿವೆ. ಕುಡುಕರ ಅಡ್ಡೆಗಳಾಗಿವೆ. ಮಹಿಳೆಯರು, ಮಕ್ಕಳು ಈ ತಂಗುದಾಣಗಳಲ್ಲಿ ನಿಂತು ಬಸ್ ಇಲ್ಲವೇ ವಾಹನಗಳಿಗೆ ಕಾಯುವಂತಿಲ್ಲ. ಕೆಲವು ಕಡೆಗಳಲ್ಲಿ ಕಟ್ಟಡಗಳು ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿವೆ.
ಜಿಲ್ಲಾ ಕೇಂದ್ರದಲ್ಲೇ ಇಲ್ಲ: ಜಿಲ್ಲೆಯ ಕೇಂದ್ರವಾಗಿರುವ ಚಾಮರಾಜನಗರದಲ್ಲೇ ಬಸ್ ತಂಗುದಾಣಗಳಿಲ್ಲ. ಜನರು ಬಿಸಿಲಿನಲ್ಲಿ ಇಲ್ಲವೇ ಗಿಡ ಮರದ ಕೆಳಗೆ ನಿಂತು ಬಸ್‌ಗಳಿಗೆ ಕಾಯಬೇಕಾದ ಸ್ಥಿತಿ ಇದೆ. ನಗರಸಭೆಯು ಬಸ್ ತಂಗುದಾಣಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ.
ನಂಜನಗೂಡು ರಸ್ತೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಎದುರು ಒಂದು ತಂಗುದಾಣ ಇದೆ. ಅದು ಹೆಚ್ಚು ಉಪಯೋಗ ಆಗುತ್ತಿಲ್ಲ. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು ಬಳಿ ರೋಟರಿ ನಿರ್ಮಿಸಿದ ತಂಗುದಾಣ ಇದೆ. ಅದು ಬಿಟ್ಟರೆ ಬೇರೆಲ್ಲೂ ಕಾಣುತ್ತಿಲ್ಲ.
ನಗರದಿಂದಮೈಸೂರು, ತಮಿಳುನಾಡು ಸೇರಿದಂತೆ ತಾಲ್ಲೂಕು, ಗ್ರಾಮೀಣ ಭಾಗಗಳಿಗೆ ಪ್ರತಿ ದಿನ ನೂರಾರು ಜನರು ಪ್ರಯಾಣಿಸುತ್ತಾರೆ.ನಂಜನಗೂಡು–ಮೈಸೂರು ಕಡೆಗೆ ಹೋಗುವವರು ಎಲ್‌ಐಸಿ ಕಚೇರಿ ಮುಂದೆ, ತಿ.ನರಸೀಪುರ, ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ ಕಡೆಗೆ ಹೋಗುವವರು ಸಂತೇಮರಹಳ್ಳಿ ವೃತ್ತದಲ್ಲಿ ಬಸ್‌ಗಳಿಗೆ ಕಾಯುತ್ತಾರೆ. ಭುವನೇಶ್ವರಿ ವೃತ್ತದಲ್ಲಿ ಬಸ್‌ಗಳನ್ನು ಹತ್ತುವ ನೂರಾರು ಪ್ರಯಾಣಿಕರಿದ್ದಾರೆ. ಇಲ್ಲಿ ತಂಗುದಾಣಗಳಿಲ್ಲ. ಬೇಸಿಗೆಯಲ್ಲಿ ಬಿಸಿಲಿಗೆ ಮಳೆಗಾಲದಲ್ಲಿ ಮಳೆಗೆ ನೆನೆದುಕೊಂಡೇ ಪ್ರಯಾಣಿಕರು ಬಸ್‌ಗೆ ಕಾಯಬೇಕು.
ಹಿಂದೆ ನಗರದ ಕೆಎಸ್‌ಆರ್‌ಟಿಸಿ ಸಮೀಪದ ಶಿವವೈನ್ ಶಾಪ್, ಆರ್‌ಟಿಒ ಕಚೇರಿ, ರೈಲ್ವೆ ಬಡಾವಣೆ, ಆಟೊ ನಿಲ್ದಾಣಗಳ ಸಮೀಪ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ತಂಗುದಾಣಗಳನ್ನು ತೆರವು ಮಾಡಲಾಗಿತ್ತು. ಈ ತಂಗುದಾಣಗಳ ಮರು ನಿರ್ಮಾಣ ಆಗಿಲ್ಲ.
ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಸಂತೇಮರಹಳ್ಳಿ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಅಲ್ಲಿ ಬಸ್ ನಿಲ್ದಾಣವೇ ಇಲ್ಲ. ಪ್ರಯಾಣಿಕರು ರಸ್ತೆ ಬದಿಯೇ ನಿಂತುಕೊಳ್ಳಬೇಕಾಗಿದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ನಗರ ಕೊಳ್ಳೇಗಾಲದಲ್ಲೂ ಇದೇ ಪರಿಸ್ಥಿತಿ. ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಇನ್ನೂ ನಡೆಯುತ್ತಿದೆ. ತಾತ್ಕಾಲಿಕ ಬಸ್ ನಿಲ್ಧಾಣ ಹೆಸರಿಗಷ್ಟೇ ಇದೆ. ಸೌಕರ್ಯಗಳಿಲ್ಲ.ಸದ್ಯ ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕೋರ್ಟ್ ಮುಂಭಾಗ, ಮುಡಿಗುಂಡ ಮಾರುಕಟ್ಟೆ ಮುಂಭಾಗದಲ್ಲಿ ಶಾಸಕರ ಅನುದಾನದಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಉಳಿದ ಪ್ರಮುಖ ರಸ್ತೆಗಳಲ್ಲಿ ತಂಗುದಾಣಗಳಿಲ್ಲ. ಹೀಗಾಗಿ ಮಹಿಳೆಯರು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಮರದ ನೆರಳಿನ ಅಡಿಯಲ್ಲಿ ಇಲ್ಲವೇ ಬಿಸಿಲು, ಮಳೆಗೆ ನಿಂತುಕೊಂಡೇ ಬಸ್‌ಗೆ ಕಾಯಬೇಕಿದೆ.
ಹೆದ್ದಾರಿಗಳಲ್ಲಿ ಇಲ್ಲ: ಗುಂಡ್ಲುಪೇಟೆ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬಸ್ ತಂಗುದಾಣಗಳಿಲ್ಲ. ಇರುವ ಕಡೆಗಳಲ್ಲಿ ಅನೇಕವು ಕುಡುಕರ ತಾಣವಾಗಿ ಅಥವಾ ಶಿಥಿಲವಾಗಿ ಬೀಳುವ ಹಂತದಲ್ಲಿವೆ. ತಾಲ್ಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಹೆದ್ದಾರಿಯಲ್ಲಿ ಬರುವ ಅನೇಕ ಗ್ರಾಮಗಳಲ್ಲಿ ಬಸ್ ತಂಗುದಾಣವಿಲ್ಲದೆ, ಅಂಗಡಿ ಬದಿ ಮರದ ನೆರಳಿನಲ್ಲಿ ಜನ ಸಾರಿಗೆಗೆ ಕಾಯುತ್ತಾರೆ.
ಹೋಬಳಿ ಕೇಂದ್ರವಾದರೂ ಹಂಗಳ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲ. ಇದೀಗ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದೆ.ಚಾಮರಾಜನಗರ ರಸ್ತೆಯ ಚಿಕ್ಕತೂಪ್ಪರು, ಶಿಂಡನಪುರ, ಕಗ್ಗಳ, ದೇಪಾಪುರ , ಮೈಸೂರು ರಸ್ತೆಯ ಮಡಹಳ್ಳಿ, ಗರಗನಹಳ್ಳಿ, ರಾಘವಪುರ ಗ್ರಾಮದಲ್ಲಿ ತಂಗುದಾಣಗಳಿಲ್ಲ.
ನಿರ್ವಹಣೆಯ ಕೊರತೆ:ಯಳಂದೂರು ತಾಲ್ಲೂಕಿನ29 ಗ್ರಾಮಗಳಲ್ಲಿ ಬಸ್‌ಗಳು ಸಂಚರಿಸುತ್ತವೆ. ಕೆಲವೆಡೆ ಹಳೆಯ ಕಾಲದ ಕಟ್ಟಡಗಳು ಇವೆ. ಶಿಥಿಲಾವಸ್ಥೆ ತಲುಪಿವೆ.ಉಳಿದ ಗ್ರಾಮೀಣ ಪ್ರದೇಶಗಳಲ್ಲಿ ನಿಲ್ದಾಣಗಳೇ ನಾಪತ್ತೆಯಾಗಿವೆ. ಪಟ್ಟಣ ಸೇರಿದಂತೆ ಪ್ರಮುಖ ಗ್ರಾಮಗಳಲ್ಲಿ ಶಾಸಕರ ಅನುದಾನದಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಯಳಂದೂರು ಹೊನ್ನೂರು ಭಾಗಗಳಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಕೆಸ್ತೂರಿನಲ್ಲಿ ಆರು ಬಸ್ ನಿಲುಗಡೆ ಸ್ಥಳಗಳಿವೆ. ಆದರೆ ಯಾವ ಕಡೆಯೂ ಬಸ್ ನಿಲ್ದಾಣ ಕಂಡುಬರುತ್ತಿಲ್ಲ. ಕಟ್ನವಾಡಿ, ಮಲಾರ ಪಾಳ್ಯ, ಮಾಂಬಳ್ಳಿ ಅಗರ ಮೊದಲಾದ ಭಾಗಗಳಲ್ಲಿ ಇರುವ ಕಟ್ಟಡಗಳು ಶಿಥಿಲವಾಗಿದ್ದು ಉಪಯೋಗಕ್ಕೆ ಬರುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.
ಗುಡ್ಡಗಾಡು ಪ್ರದೇಶಗಳಿಂದ ಆವೃತವಾದ ಹನೂರು ತಾಲ್ಲೂಕಿನ ಪರಿಸ್ಥಿತಿಯೂ ಉಳಿದ ಕಡೆಗಳಂತೆಯೇ ಇದೆ.
***
ಜನರು ಏನು ಹೇಳುತ್ತಾರೆ?
ಅಗತ್ಯವಿರುವಲ್ಲಿ ಇಲ್ಲ
ಅಗತ್ಯವಿರುವ ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಿಸಿಲ್ಲ. ಪ್ರಯಾಣಿಕರು ಕಡಿಮೆ ಇರುವ ಸ್ಥಳಗಳಲ್ಲಿ ತಂಗುದಾಣಗಳಿವೆ. ಪ್ರಯಾಣಿಕರಲ್ಲದೆ, ಬಸ್ ನಿಲ್ದಾಣಗಳಲ್ಲಿ ಕುಳಿತು ಕಾಲ ಕಳೆಯುವವರು ಹೆಚ್ಚಾಗಿದ್ದಾರೆ. ಬಸ್ ತಂಗುದಾಣಗಳು ಪ್ರಯಾಣಿಕರಿಗೆ ಮೀಸಲಿಡಬೇಕು.
–ರಹೀಂ, ದಿಡ್ಡಾಪುರ, ಚಾಮರಾಜನಗರ ತಾಲ್ಲೂಕು
***
ನಿರ್ವಹಣೆ ಸರಿ ಇಲ್ಲ
ಕೆಲವು ಕಡೆಗಳಲ್ಲಿ ತಂಗುದಾಣ ಇದ್ದರೂ, ಅವು ಕುಡುಕರ ತಾಣವಾಗಿದೆ. ಸೋಮಾರಿ ಕಟ್ಟೆಗಳಾಗಿವೆ. ನಿರ್ವಹಣೆ ಇಲ್ಲದೇ ಬೀಡಿ, ಸಿಗರೇಟ್ ತುಂಡುಗಳು ಹಾಗೂ ಕಸ, ತ್ಯಾಜ್ಯ ವಸ್ತುಗಳು ಶೇಖರಣೆಗೊಂಡು ಅನೈರ್ಮಲ್ಯ ಉಂಟಾಗಿದೆ. ಮುಖ್ಯವಾಗಿ ಬಸ್ ಶೆಲ್ಟರ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
– ದೇವರಾಜು ದೇಶವಳ್ಳಿ, ಚಾಮರಾಜನಗರ ತಾಲ್ಲೂಕು
***
ಒಂದೂ ತಂಗುದಾಣ ಇಲ್ಲ
ತಾಲೂಕಿನ ದೊಡ್ಡ ಗ್ರಾಮ ಕೆಸ್ತೂರಿನಲ್ಲಿ ಆರು ಕಡೆಗಳಲ್ಲಿ ಬಸ್ ನಿಲುಗಡೆ ಸ್ಥಳವಿದೆ. ಆದರೆ ಎಲ್ಲೂ ತಂಗುದಾಣ ಇಲ್ಲ. ಇದರಿಂದ ಚಾಲಕರಿಗೆ ಬಸ್ ನಿಲುಗಡೆ ಮಾಡುವ ಪ್ರದೇಶಗಳು ತಿಳಿಯದೆ ಪರಿತಪಿಸುವಂತಾಗಿದೆ. ಗ್ರಾಮೀಣ ಜನರು ಬಿಸಿಲು ಮಳೆಯ ಸಂದರ್ಭದಲ್ಲಿ ರಸ್ತೆ ಬದಿ ನಿಂತು ಕಾಯುವಂತಾಗಿದೆ.
–ಪಣಿ ಪ್ರಸಾದ್,ಕೆಸ್ತೂರು ಯಳಂದೂರು ತಾಲ್ಲೂಕು
***
ನಿಲ್ದಾಣದಲ್ಲಿ ಅಶುಚಿತ್ವ
ಮಾಂಬಳ್ಳಿ ಗ್ರಾಮದಲ್ಲಿ ಶಿಥಿಲ ಬಸ್ ನಿಲ್ದಾಣವಿದೆ. ಸ್ವಚ್ಛವಾಗಿಲ್ಲ. ಪ್ರಯಾಣಿಕರು ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಇಲ್ಲ. ಬಿಸಿಲು ಮತ್ತು ಮಳೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುವಂತಾಗಿದೆ. ಹೊಸದಾಗಿ ಬಸ್ ನಿಲ್ದಾಣ ನಿರ್ಮಿಸಲು ಸ್ಥಳೀಯ ಆಡಳಿತ ಕ್ರಮ ವಹಿಸಬೇಕು
ನಟರಾಜು,ಮಾಂಬಳ್ಳಿ, ಯಳಂದೂರು ತಾಲ್ಲೂಕು
***
ಆಧುನಿಕ ಬಸ್ ನಿಲ್ದಾಣ ಇರಲಿ
ತಾಲ್ಲೂಕಿನಲ್ಲಿ ಯಾವ ಪ್ರದೇಶದಲ್ಲಿ ಆಧುನಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡಿಲ್ಲ. ಇದರಿಂದ ಬಸ್ ಬರುವ ಸಮಯ ಮತ್ತು ಬಸ್‌ಗಳ ಮಾಹಿತಿ ಪ್ರಯಾಣಿಕರಿಗೆ ಲಭಿಸುತ್ತಿಲ್ಲ. ಆಧುನೀಕರಣಗೊಳಿಸುವತ್ತ ಸಂಬಂಧಪಟ್ಟವರು ಆಸ್ಥೆ ವಹಿಸಬೇಕು
– ಹೇಮಂತಕುಮಾರ್ ಆರ್,ಯರಿಯೂರು, ಯಳಂದೂರು ತಾಲ್ಲೂಕು
***
ಬಿಸಿಲು, ಮಳೆಗೆ ರಕ್ಷಣೆ ಇಲ್ಲ
ನಿತ್ಯವೂ ನಾವು ಸುಡು ಬಿಸಿಲಿನಲ್ಲೇ ನಿಂತು ಬಸ್‍ಗಾಗಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಕೆಲವು ಸಂದರ್ಭದಲ್ಲಿ ಬಸ್‍ಗಳು ನಿಲ್ಲಿಸುವುದಿಲ್ಲ. ಆಗ ಪ್ರಯಾಣಿಕರು ಬಸ್ ಹಿಂದೆ ಓಡಬೇಕಾಗಿದೆ.
–ನಿತಿನ್,ಪ್ರಯಾಣಿಕ, ಕೊಳ್ಳೇಗಾಲ
–––
ಅನುದಾನ ಕೇಳಿದ್ದೇನೆ
ಈಗಾಗಲೇ ತಾಲ್ಲೂಕು ಹಾಗೂ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ತಂಗುದಾಣ ಅಗತ್ಯವಿರುವ ಜಾಗಗಳನ್ನು ಪಟ್ಟಿ ಮಾಡಲಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೇಳಿದ್ದೇನೆ. ಹಣ ಬಿಡುಗಡೆಯಾದ ಬಳಿಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
–ಎನ್.ಮಹೇಶ್, ಕೊಳ್ಳೇಗಾಲ ಶಾಸಕ
***
ಶೀಘ್ರ ನಿರ್ಮಾಣ
ಚಾಮರಾಜನಗರದಲ್ಲಿ ಈ ಹಿಂದೆ ಹಲವು ಕಡೆಗಳಲ್ಲಿ ತಂಗುದಾಣ ಇದ್ದವು. ರಸ್ತೆ ಅಭಿವೃದ್ಧಿ ಪಡಿಸುವಾಗ ತೆರವುಗೊಳಿಸಲಾಗಿತ್ತು. ಆ ಮೇಲೆ ನಿರ್ಮಾಣ ಆಗಿಲ್ಲ. ಕೋವಿಡ್ ಕಾರಣಕ್ಕೆ ನಮಗೂ ಸರಿಯಾಗಿ ಅನುದಾನ ಸಿಗಲಿಲ್ಲ. ಶಾಸಕರ ನಿಧಿ ಬಳಸಿಕೊಂಡು ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಜಾಗ ಗುರುತಿಸಲು ನಗರಸಭೆ ಆಯುಕ್ತರಿಗೆ ಸೂಚಿಸಲಾಗುವುದು.
-ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ
***
ತಂಗುದಾಣ ನಿರ್ಮಿಸುವ ವಿಚಾರ ಇದುವರೆಗೂ ಚರ್ಚೆಗೆ ಬಂದಿಲ್ಲ. ನಗರೋತ್ಥಾನ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು
- ಕರಿಬಸವಯ್ಯ, ಚಾಮರಾಜನಗರ ನಗರಸಭೆ ಆಯುಕ್ತ
***
ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು. ನಗರಸಭೆಯ ವತಿಯಿಂದ ತಂಗುದಾಣಗಳನ್ನು ನಿರ್ಮಿಸಲಾಗುವುದು
- ಸುಶೀಲಾ, ಕೊಳ್ಳೇಗಾಲ ನಗರ ಸಭೆ ಅಧ್ಯಕ್ಷೆ
***
ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ.,ಮಹದೇವ್ ಹೆಗ್ಗವಾಡಿಪುರ, ಅವಿನ್ ಪ್ರಕಾಶ್ ವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.