ADVERTISEMENT

ಚಾಮರಾಜನಗರ | ವಾಹನ ನಿಲುಗಡೆ ಅವ್ಯವಸ್ಥೆ, ಸಂಚಾರ ದುರವಸ್ಥೆ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌, ವಾಹನ ನಿಲುಗಡೆ ಸ್ಥಳ ಗುರುತಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 19:45 IST
Last Updated 16 ಅಕ್ಟೋಬರ್ 2022, 19:45 IST
ಚಾಮರಾಜನಗರದ ಜೋಡಿ ರಸ್ತೆಯಲ್ಲಿ (ಜಿಲ್ಲಾಸ್ಪತ್ರೆ ಮುಂಭಾಗ) ಖಾಸಗಿ ಬಸ್‌ಗಳು, ಆಟೊಗಳು, ಟ್ಯಾಕ್ಸಿಗಳು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ
ಚಾಮರಾಜನಗರದ ಜೋಡಿ ರಸ್ತೆಯಲ್ಲಿ (ಜಿಲ್ಲಾಸ್ಪತ್ರೆ ಮುಂಭಾಗ) ಖಾಸಗಿ ಬಸ್‌ಗಳು, ಆಟೊಗಳು, ಟ್ಯಾಕ್ಸಿಗಳು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ   

ಚಾಮರಾಜನಗರ: ನಗರ, ಪಟ್ಟಣ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿರಬೇಕಾದರೆ ವಾಹನಗಳ ನಿಲುಗಡೆ ವ್ಯವಸ್ಥೆ ಸಮರ್ಪಕವಾಗಿರಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾಹನಗಳ ಪಾರ್ಕಿಂಗ್‌ ವೈಜ್ಞಾನಿಕವಾಗಿ ನಡೆಯದೇ ಇರುವುದರಿಂದ ವಾಹನಗಳು ಹಾಗೂ ಜನರ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಕೆಲವು ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇದೆ. ಪೊಲೀಸರು ನಿಗಾ ಇಟ್ಟರೆ ಪಾರ್ಕಿಂಗ್‌ ನಿಯಮ ಪಾಲನೆಯಾಗುತ್ತದೆ. ಇಲ್ಲದಿದ್ದರೆ, ನಿಯಮ ಫಲಕಗಳಿಗಷ್ಟೇ ಸೀಮಿತವಾಗಿರುತ್ತದೆ.

ಕೊಳ್ಳೇಗಾಲದಲ್ಲಿ ಬಹುತೇಕ ಕಡೆ ನಿಯಮಗಳು ಕಡತಕ್ಕೆ ಮಾತ್ರ ಮೀಸಲು. ಪೊಲೀಸರು ಕಾರ್ಯಾಚರಣೆ ನಡೆಸಿದ ಒಂದು ವಾರ ವಾಹನಗಳ ನಿಲುಗಡೆ ಸಮರ್ಪಕವಾಗಿರುತ್ತದೆ. ನಂತರ ಎಂದಿನಂತೆಯೇ ಅಡ್ಡಾದಿಡ್ಡಿಯಾಗಿರುತ್ತದೆ. ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿ, ಹನೂರು ಮತ್ತು ಯಳಂದೂರು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ.

ADVERTISEMENT

ಅಡ್ಡಾದಿಡ್ಡಿ ಪಾರ್ಕಿಂಗ್‌: ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಿಬ್ಬಂದಿ, ಪೊಲೀಸರು ವಾಹನಗಳ ನಿಲುಗಡೆ ವ್ಯವಸ್ಥೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಪಾರ್ಕಿಂಗ್‌ ಸ್ಥಳ ಅಥವಾ ಪಾರ್ಕಿಂಗ್‌ ಸ್ಥಳ ಅಲ್ಲ ಎಂಬ ಫಲಕಗಳಿದ್ದರೂ, ದ್ವಿಚಕ್ರ ವಾಹನ ಸವಾರರು, ಕಾರು, ಬಸ್‌ ಚಾಲಕರು ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ರಸ್ತೆಯಲ್ಲಿ ಖಾಲಿ ಇದ್ದರೆ ಸಾಕು. ಅಲ್ಲೇ ವಾಹನ ನಿಲ್ಲಿಸುತ್ತಾರೆ. ಒಬ್ಬರು ನಿಲ್ಲಿಸಿದ್ದಾರೆ ಎಂದು ಉಳಿದವರೂ ನಿಲುಗಡೆ ಮಾಡುತ್ತಾರೆ.

ಸಾಮಾನ್ಯವಾಗಿ ಸೋಮವಾರ ಹಾಗೂ ಮಂಗಳವಾರ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜನರ ಓಡಾಟ ಹೆಚ್ಚಿರುತ್ತದೆ. ಬ್ಯಾಂಕುಗಳು, ಹೋಟೆಲ್‌ಗಳ ಮುಂಭಾಗ ರಸ್ತೆಯ ಕಾಲು ಭಾಗದವರೆಗೂ ವಾಹನಗಳು ಇರುತ್ತವೆ.

ಚಾಮರಾಜನಗರದಲ್ಲಿ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ರಥದ ಬೀದಿ, ಸಂಪಿಗೆ ರಸ್ತೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ. ಸೋಮವಾರ ಒಂದು ಬದಿಯಲ್ಲಿ ನಿಲ್ಲಿಸಲು ಅವಕಾಶ ಇದ್ದರೆ, ಮಂಗಳವಾರ ಇನ್ನೊಂದು ಬದಿಯಲ್ಲಿ ಅವಕಾಶ. ದೊಡ್ಡಂಗಡಿ, ಚಿಕ್ಕಂಗಡಿ ಬೀದಿಯಲ್ಲಿ ಪೊಲೀಸ್‌ ಸಿಬ್ಬಂದಿ ಹಾಜರಿದ್ದು, ವಾಹನ ನಿಲುಗಡೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳುತ್ತಾರೆ, ಉಳಿದ ಕಡೆಗಳಲ್ಲಿ ನಿಯಮ ಪಾಲನೆ ಸಮರ್ಪಕವಾಗಿ ಇರುವುದಿಲ್ಲ.

ಜಿಲ್ಲಾ ಕೇಂದ್ರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲೇ ಸವಾರರು ಬೇಕಾಬಿಟ್ಟಿಯಾಗಿ ತಮ್ಮ ವಾಹನ ನಿಲ್ಲಿಸುತ್ತಾರೆ. ಇದರ ಮಧ್ಯೆ, ಖಾಸಗಿ ಬಸ್‌ಗಳು, ಆಟೊಗಳು ಟ್ಯಾಕ್ಸಿಗಳು ಪ್ರಯಾಣಿಕರನ್ನು ಹತ್ತಿಸುವುದಕ್ಕಾಗಿ ರಸ್ತೆಯಲ್ಲೇ ನಿಂತು ವಾಹನ ಸವಾರರಿಗೆ ತಡೆ ಒಡ್ಡುತ್ತಾರೆ.

ನಡುರಸ್ತೆಯಲ್ಲೇ ವಾಹನ!
ಕೊಳ್ಳೇಗಾಲ ವರದಿ:
ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವಾದಕೊಳ್ಳೇಗಾಲದಲ್ಲಿ ಬೈಕ್, ಕಾರು, ಬಸ್ ಸೇರಿದಂತೆ ಇತರೆ ವಾಹನಗಳನ್ನು ನಡುರಸ್ತೆಯಲ್ಲಿಯೇ ನಿಲ್ಲಿಸುತ್ತಾರೆ.

ಎಷ್ಟೇ ಹೇಳಿದರೂ ಕೆಲವರು ಇದೇ ಚಾಳಿಯನ್ನು ಮುಂದುವರೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ನಗರದ ಚಿನ್ನ ಬೆಳ್ಳಿ ಅಂಗಡಿ ರಸ್ತೆ, ಹಳೆ ನಗರಸಭೆ ರಸ್ತೆಗಳು ಮೊದಲೇ ಚಿಕ್ಕದು. ಅದರಲ್ಲೂ ಕೆಲವರು ಬೈಕ್‍ಗಳನ್ನು ಇಷ್ಟ ಬಂದ ಕಡೆ ನಿಲ್ಲಿಸುತ್ತಿದ್ದಾರೆ.

ವಾರದಲ್ಲಿ ಮೂರು ದಿನ ಒಂದು ಬದಿ ನಿಲ್ಲಿಸಬೇಕು ಮತ್ತು ಉಳಿದ ಮೂರು ದಿನ ಇನ್ನೊಂದು ಬದಿ ನಿಲ್ಲಿಸಬೇಕು ಎಂದು ನಾಮಫಲಕವನ್ನು ಹಾಕಿದ್ದರೂ ಇದನ್ನು ಯಾರೂ ಪಾಲಿಸುವುದಿಲ್ಲ. ಬೆರಳೆಣಿಕೆಯಷ್ಟು ಜನ ಮಾತ್ರ ಪಾಲಿಸುತ್ತಾರೆ. ಕಾಮಗಾರಿ ಪ್ರಗತಿಯಲ್ಲಿರುವ ಬಸ್ ನಿಲ್ದಾಣದ ಮುಂದೆ ಯಾವಾಗಲೂ ಬಸ್‌ಗಳು ನಿಂತು ರಸ್ತೆ ಸಂಚಾರವನ್ನು ತಡೆಯುತ್ತಿರುತ್ತವೆ. ಸಂಚಾರ ದಟ್ಟಣೆ ಉಂಟಾಗುತ್ತಿರುತ್ತದೆ.

ಬೇಕಾಬಿಟ್ಟಿ ಪಾರ್ಕಿಂಗ್‌
ಗುಂಡ್ಲುಪೇಟೆ ವರದಿ: ಪ
ಟ್ಟಣ ವ್ಯಾಪ್ತಿಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಹಾಗಾಗಿ, ವಾಹನಗಳ ಸಂಖ್ಯೆ ಇಲ್ಲಿ ಹೆಚ್ಚು. ಆದರೂ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಬರುವ ಬ್ಯಾಂಕ್, ಹೋಟೆಲ್ ಮತ್ತು ಕ್ರೀಡಾಂಗಣದ ಮುಂಭಾಗ ಸಾರ್ವಜನಿಕರು ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಾರೆ. ಇದರಿಂದಾಗಿ ಉಳಿದ ವಾಹನ ಸವಾರರು ಮತ್ತು ಸಣಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಹಳೆ ಆಸ್ಪತ್ರೆ ರಸ್ತೆ, ಮತ್ತು ಚಾಮರಾಜನಗರ ರಸ್ತೆಯಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ.

‌ಸಂಚಾರ ದುಸ್ತರ
ಹನೂರು ವರದಿ: ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಬಸ್ ನಿಲ್ದಾಣದೊಳಗೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

‘ಖಾಸಗಿ ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಬೇರೆ ವಾಹನಗಳು ಸಂಚರಿಸಲು ಹಾಗೂ ಪಾದಚಾರಿಗಳು ತಿರುಗಾಡಲು ಹೆಣಗಾಡುವಂತಾಗಿದೆ. ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲೇ ಬೇಕಾಬಿಟ್ಟಿಯಾಗಿ ವಾಹನ ನಿಂತಿರುವುದು ಗೊತ್ತಿದ್ದರೂ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡುತ್ತಿಲ್ಲ’ ಎಂಬುದು ಪಾದಚಾರಿಗಳ ಆರೋಪ.

ಮಹದೇಶ್ವರ ಬೆಟ್ಟ, ಬಂಡಳ್ಳಿ ತೆರಳುವ ಮುಖ್ಯ ರಸ್ತೆಯಲ್ಲಿ ರಸ್ತೆ ಸಮೀಪವೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಬಸ್‌, ಲಾರಿ ಹಾಗೂ ಇನ್ನಿತರೆ ಭಾರಿ ವಾಹನಗಳು ಮುಖ್ಯ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ.

ಯಳಂದೂರು ಪಟ್ಟಣದ ಪರಿಸ್ಥಿತಿ ಭಿನ್ನವೇನಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲೆ ವಾಹನಗಳು ನಿಂತುಕೊಳ್ಳುವುದರಿಂದ ವಾಹನಗಳ ಸರಾಗ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ.

ಜನರು ಏನಂತಾರೆ?
ಪುಟ್‌ಪಾತ್‌ಗೂ ರಸ್ತೆಗೂ ವ್ಯತ್ಯಾಸ ಇಲ್ಲ

ಯಳಂದೂರಿನ ಪಾದಚಾರಿ ರಸ್ತೆಗಳಲ್ಲಿ ಅಡೆತಡೆ ಹೆಚ್ಚಾಗಿದೆ. ದಿನಬಳಕೆಯ ವಸ್ತುಗಳು, ಅಂಗಡಿ ಸಾಮಾನು, ಕ್ಯಾಂಟೀನ್ ಹಾಗೂ ಕಂಪನಿಗಳ ಮೋಟಾರ್ ಬೈಕ್‌ಗಳಿಗನ್ನು ನಿಲ್ಲಿಸಲಾಗಿದೆ. ಇದರಿಂದ ಬಹಳಷ್ಟು ಪಾದಚಾರಿಗಳು ರಸ್ತೆ ಬದಿಯಲ್ಲಿ ಸಂಚರಿಸಬೇಕಿದೆ. ಪುಟ್‌ಪಾತ್ ಇಲ್ಲದ ಕಡೆ ನಡೆದಾಡಲು ಪ್ರಯಾಸ ಪಡಬೇಕಾಗಿದೆ.
–ಸಿದ್ದರಾಜು,ಯರಿಯೂರು. ಯಳಂದೂರು ತಾಲ್ಲೂಕು

ಮಕ್ಕಳಿಗೆ‌, ಹಿರಿಯರಿಗೆ ತೊಂದರೆ
ವಾಹನಗಳನ್ನು ಮನ ಬಂದಂತೆ ನಡುರಸ್ತೆಯಲ್ಲಿಯೇ ನಿಲ್ಲಿಸುತ್ತಾರೆ. ಇದರಿಂದ ಶಾಲಾ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ನಿತ್ಯವೂ ತೊಂದರೆಯಾಗುತ್ತಿದೆ. ಇದರ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ಪರಿಗಣಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.
–ಕೃಷ್ಣಮೂರ್ತಿ, ಕೊಳ್ಳೇಗಾಲ

ಪೊಲೀಸರು ದಂಡ ವಿಧಿಸಲಿ
ಬಸ್ ನಿಲ್ದಾಣದ ಸುತ್ತಮುತ್ತಲ ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರವಾಹನಗಳು ನಿಂತಿರುತ್ತವೆ. ಸ್ಕೂಟರ್, ಬಸ್, ಇತರ ವಾಹನಗಳು ಅಡ್ಡಾದಿಡ್ಡಿ ನಿಂತು ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತವೆ. ಇದರಿಂದ ಪ್ರಾಣಪಾಯಗಳು ಸಂಭವಿಸಿದ ಉದಾಹರಣೆಗಳಿವೆ. ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಪೊಲೀಸರು ಕ್ರಮ ವಹಿಸಬೇಕಾಗಿದೆ.
–ಸಿದ್ದಪ್ಪಾಜಿ,ಕೆಸ್ತೂರು, ಯಳಂದೂರು ತಾಲ್ಲೂಕು

ಸವಾರರಿಗೆ ತೊಂದರೆ
ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ. ಜತೆಗೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯ ಮಗ್ಗುಲಲ್ಲಿರುವ ಹೋಟೆಲ್, ಕ್ಯಾಂಟೀನ್ ಮುಂಭಾಗ ವಾಹನಗಳನ್ನು ನಿಲ್ಲಿಸದಂತೆ ನಿರ್ಬಂಧ ಹೇರಬೇಕು.
–ಪ್ರವೀಣ್‌, ಸಂತೇಮರಹಳ್ಳಿ, ಚಾಮರಾಜನಗರ ತಾಲ್ಲೂಕು

ಸಂಚಾರ ಠಾಣೆ ಬೇಕು
ವಾಹನಗಳ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ರೂಪಿಸುವ ಗೋಜಿಗೆ ಅಧಿಕಾರಿಗಳು, ಪೊಲೀಸರು ಹೋಗಿಲ್ಲ. ಇದರಿಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ.ಪಟ್ಟಣಕ್ಕೆ ಒಂದು ಸಂಚಾರ ಠಾಣೆಯ ಅವಶ್ಯಕತೆ ಇದೆ. ರಾಷ್ಟ್ರೀಯ ಹೆದ್ದಾರಿ ಎರಡು ಬದಿಯಲ್ಲಿ ಅಡ್ಡಾದಿಡ್ಡ ವಾಹನ ನಿಲುಗಡೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು.
–ಶಿವಪುರ ಮಂಜಪ್ಪ, ಗುಂಡ್ಲುಪೇಟೆ

ಗ್ರಾಮೀಣ ಜನರಿಗೆ ತೊಂದರೆ
ಹನೂರು ಪಟ್ಟಣದಲ್ಲಿ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪೊಲೀಸರು ಗಮನಿಸುವುದಿಲ್ಲ, ಪಟ್ಟಣ ಪಂಚಾಯಿತಿ ಅಧಿಕಾರಿಗಳೂ ಕ್ರಮವಹಿಸುವುದಿಲ್ಲ.
–ಕೀರ್ತಿ, ಹನೂರು

ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ
ಈ ವಿಚಾರವನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಜೊತೆಗೆ,ಪೊಲೀಸ್‌ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಗೆ ಜಾಗ ಗುರುತಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗುವುದು.
ಎಂ.ವಿ.ಸುಧಾ,ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ

ಸ್ಥಳೀಯ ಸಂಸ್ಥೆಗಳು ಸ್ಥಳ ಗುರುತಿಸಬೇಕು
ವಾಹನ ನಿಲುಗಡೆಗೆ ನಗರ ಸ್ಥಳೀಯ ಸಂಸ್ಥೆಗಳು ಜಾಗ ಗುರುತಿಸಿದರೆ, ನಿಯಮ ಪಾಲನೆಯನ್ನು ನಾವು ನೋಡಿಕೊಳ್ಳುತ್ತೇವೆ. ಚಾಮರಾಜನಗರದಲ್ಲಿ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಜಾಗ ಗುರುತಿಸಲಾಗಿದೆ. ಕೊಳ್ಳೇಗಾಲದಲ್ಲಿ ಜಾಗ ಕಡಿಮೆ ಇದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಾಮಗಾರಿ ನಡೆಯುತ್ತಿರುವುದರಿಂದ ಬಸ್‌ಗಳೆಲ್ಲ ರಸ್ತೆಯಲ್ಲೇ ನಿಲ್ಲುತ್ತಿವೆ. ಪೊಲೀಸ್‌ ಸಿಬ್ಬಂದಿ ಬಸ್‌ ಹಾಗೂ ಇತರ ವಾಹನಗಳನ್ನು ಬೇಗ ಕಳುಹಿಸುತ್ತಿದ್ದಾರೆ. ಗುಂಡ್ಲುಪೇಟೆಯಲ್ಲಿ ವಾಹನ ನಿಲುಗಡೆ ಜಾಗ ಗುರುತಿಸಲು ಅವಕಾಶ ಇದೆ. ನಗರ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು, ವ್ಯವಸ್ಥಿತ ಪಾರ್ಕಿಂಗ್‌ಗೆ ಕ್ರಮ ವಹಿಸಲಾಗುವುದು
–ಟಿ.‌ಪಿ.ಶಿವಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

_____

ನಿರ್ವಹಣೆ: ಸೂರ್ಯನಾರಾಯಣ ವಿ.
ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಬಿ.ಬಸವರಾಜು, ಅವಿನ್‌ ಪ್ರಕಾಶ್‌ ವಿ. ಮಹದೇವ್‌ ಹೆಗ್ಗವಾಡಿಪುರ, ಮಲ್ಲೇಶ ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.