ADVERTISEMENT

ಜನಧನಿ: ಚಾಮರಾಜನಗರ ಜಿಲ್ಲೆಯಲ್ಲಿ ಮುಗಿಯದ ಆಧಾರ್‌ ತಿದ್ದುಪಡಿ ಸಂಕಟ

ಗ್ಯಾರಂಟಿ ಯೋಜನೆಗಳಿಗೆ ಆಧಾರ್‌ ಅಗತ್ಯ, ಮೊಬೈಲ್‌ ಸಂಖ್ಯೆ ಜೋಡಿಸುವುದು ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 0:24 IST
Last Updated 23 ಜುಲೈ 2023, 0:24 IST
ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಮುಂದೆ ಆಧಾರ್ ತಿದ್ದುಪಡಿಗಾಗಿ ಕಾದು ಕುಳಿತಿರುವ ಮಹಿಳೆಯರು.
ಚಾಮರಾಜನಗರ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಮುಂದೆ ಆಧಾರ್ ತಿದ್ದುಪಡಿಗಾಗಿ ಕಾದು ಕುಳಿತಿರುವ ಮಹಿಳೆಯರು.   

ಚಾಮರಾಜನಗರ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರುವಂತೆಯೇ, ಜನರು ಮತ್ತೆ ಆಧಾರ್‌ ತಿದ್ದುಪಡಿಗಾಗಿ ತಿದ್ದುಪಡಿ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. 

ಜೂನ್‌ 30ರವರೆಗಿನ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 10,90,429 ಮಂದಿ ಆಧಾರ್‌ ಸಂಖ್ಯೆ ಹೊಂದಿದ್ದಾರೆ.

ಐದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರೂ ಆಧಾರ್‌ ನೋಂದಣಿ ಮಾಡಿಕೊಳ್ಳಬೇಕು. ಆಧಾರ್‌ ನೋಂದಣಿ ಮಾಡಿಸಿ 10 ವರ್ಷಗಳಾಗಿದ್ದವರು, ಮತ್ತೆ ಬಯೊಮೆಟ್ರಿಕ್‌ ವಿವರಗಳನ್ನು ಪರಿಷ್ಕರಿಸಬೇಕು ಎಂದು ಭಾರತೀಯ ವಿಶೇಷ ಗುರುತಿನ ಚೀಟಿ ಪ್ರಾಧಿಕಾರ ಹೇಳಿದೆ. ಇದಕ್ಕಾಗಿ ಆಧಾರ್‌ ತಿದ್ದುಪಡಿ ಕೇಂದ್ರಗಳಿಗೆ ಬರುವವರು ಒಂದು ಕಡೆಯಾದರೆ, ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್‌ಗೆ ಮೊಬೈಲ್‌ ಸಂಖ್ಯೆ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಆಧಾರ್‌ ಆಧಾರಿತ ಒಟಿಪಿ ಮೂಲಕ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಒಟಿಪಿ ಬರಲು ಆಧಾರ್‌ ಸಂಖ್ಯೆಗೆ ಫಲಾನುಭವಿಗಳ ಮೊಬೈಲ್‌ ಸಂಖ್ಯೆ ಜೋಡಿಸಬೇಕು. 

ADVERTISEMENT

ಈ ಹಿಂದೆ ಆಧಾರ್‌ಗೆ ನೋಂದಣಿ ಮಾಡುವಾಗ ಮೊಬೈಲ್‌ ನಂಬರ್‌ ಅಗತ್ಯವಿರಲಿಲ್ಲ. ಮೊಬೈಲ್‌ ಸಂಪರ್ಕ ಇಲ್ಲದಿದ್ದರೂ ನೋಂದಣಿ ಸಾಧ್ಯವಿತ್ತು. ಹಾಗಾಗಿ, ಈಗ ನಾಗರಿಕರು ಆಧಾರ್‌ ಕಾರ್ಡ್‌ನಲ್ಲಿ ಮೊಬೈಲ್‌ ಸಂಖ್ಯೆ ಸೇರ್ಪಡೆಗೊಳಿಸಲು ತಿದ್ದುಪಡಿ ಕೇಂದ್ರಕ್ಕೆ ಹೋಗಬೇಕಾಗಿದೆ. 

ಸದ್ಯ ವಿಳಾಸ ಬದಲಾವಣೆಯನ್ನು ಜನರೇ ಆನ್‌ಲೈನ್‌ ಮೂಲಕ ಮಾಡಬಹುದು. ಅದಕ್ಕೂ ವಿಳಾಸ ದೃಢೀಕರಿಸುವ ಸರಿಯಾದ ದಾಖಲೆಗಳನ್ನು ನೀಡಬೇಕು. ಉಳಿದ ತಿದ್ದುಪಡಿಗಳಿಗಾಗಿ ಆಧಾರ್‌ ಕೇಂದ್ರಳಲ್ಲೇ ಮಾಡಿಸಬೇಕು. 

ಕೇಂದ್ರಗಳ ಕೊರತೆ: ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನ, ತಾಲ್ಲೂಕು ಕಚೇರಿಗಳು, ನಾಡ ಕಚೇರಿಗಳು, ಮುಖ್ಯ ಅಂಚೆ ಕಚೇರಿಗಳು, ಬ್ಯಾಂಕುಗಳು, ಕೆಲವು ಬಿಎಸ್‌ಎನ್‌ಎಲ್‌ ಕಚೇರಿ, ಕರ್ನಾಟಕ ಒನ್‌ (ಮೊಬೈಲ್‌ ಸಂಖ್ಯೆ ಜೋಡಣೆ ಮಾತ್ರ)ಗಳಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರಗಳಿವೆ. ಆದರೆ, ತಾಂತ್ರಿಕ ಕಾರಣಗಳು, ತಿದ್ದುಪಡಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಕೇಂದ್ರಗಳು ಸಾಕಾಗುತ್ತಿಲ್ಲ. 

ವಾರ ಪೂರ್ತಿ ಈ ಕೇಂದ್ರಗಳ ಮುಂದೆ ಜನರ ಗುಂಪು ಇರುತ್ತದೆ. ಕೆಲವು ಕಡೆಗಳಲ್ಲಿ ಟೋಕನ್‌ ವ್ಯವಸ್ಥೆ ಇದೆ. 30ರಿಂದ 45 ಜನರವರೆಗೆ ಟೋಕನ್‌ ನೀಡಲಾಗುತ್ತದೆ. ಅದರ ಆಧಾರದಲ್ಲಿ ಸಿಬ್ಬಂದಿ ಆಧಾರ್‌ ತಿದ್ದುಪಡಿ ಮಾಡುತ್ತಾರೆ. ಇದರ ಮಾಹಿತಿ ಇಲ್ಲದ ಜನರು ಆಧಾರ್‌ ತಿದ್ದುಪಡಿಗಾಗಿ ಪ್ರತಿದಿನ ಓಡಾಡುತ್ತಲೇ ಇರುತ್ತಾರೆ. 

ದಿನವಿಡೀ ಕಾಯಬೇಕು: ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಕೇಂದ್ರಗಳಿಲ್ಲ. ಹೋಬಳಿ ಮಟ್ಟದಲ್ಲಿ, ದೊಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಇಲ್ಲವೇ ಎರಡು ಕೇಂದ್ರಗಳಿವೆ. ಹಾಗಾಗಿ, ಆ ಭಾಗದ ಜನರು ತಿದ್ದುಪಡಿಗಾಗಿ ತಾಲ್ಲೂಕು ಕೇಂದ್ರಗಳಿಗೇ ಬರುತ್ತಿದ್ದಾರೆ. 

ಬೆಳಿಗ್ಗೆ 5 ಗಂಟೆಗೆ ಬಂದು ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವವರೂ ಇದ್ದಾರೆ. ಕೇಂದ್ರಗಳ ಸಿಬ್ಬಂದಿ ತಿದ್ದುಪಡಿ ಮಾಡಿಕೊಡಲು ತಯಾರಿದ್ದರೂ, ಲಾಗಿನ್‌ ಸಮಸ್ಯೆ, ಸರ್ವರ್‌ ಸಮಸ್ಯೆಗಳಂತಹ ತಾಂತ್ರಿಕ ಕಾರಣಗಳಿಂದ ಎಲ್ಲ ದಿನವೂ ನಿಗದಿಯಷ್ಟು ತಿದ್ದುಪಡಿ ಮಾಡಲು ಆಗುತ್ತಿಲ್ಲ. ನಾಡಕಚೇರಿಗಳಲ್ಲಿ ಲಾಗಿನ್‌ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ದಿನಗಳ ಕಾಲ ತಿದ್ದುಪಡಿ ಮಾಡಲು ಆಗದ ಸ್ಥಿತಿ ಉಂಟಾಗುತ್ತದೆ.

ಹನೂರು ಭಾಗದಲ್ಲಿ ನಾಲ್ಕೈದು ದಿನಗಳಿಂದ ಈ ಸಮಸ್ಯೆ ತಲೆದೋರಿದ್ದು, ತಿದ್ದುಪಡಿ ಆಗುತ್ತಿಲ್ಲ. ಹನೂರು ತಾಲ್ಲೂಕು  ಅತ್ಯಂತ ಹೆಚ್ಚು ವಿಸ್ತಾರವಾಗಿರುವುದರಿಂದ  ಗೋಪಿನಾಥಂ, ಮೀಣ್ಯಂ, ಹೂಗ್ಯಂ ಮುಂತಾದ ದೂರದ ಊರುಗಳಿಂದ ಜನರು ಆಧಾರ್ ತಿದ್ದುಪಡಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ. ಸಾರ್ವಜನಿಕರ ಜತೆಗೆ ವಿದ್ಯಾರ್ಥಿಗಳು ಸಹ ಶಾಲಾ ಕಾಲೇಜುಗಳನ್ನು ಬಿಟ್ಟು ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆಧಾರ್‌ ತಿದ್ದುಪಡಿಗಾಗಿ ಜನರು ಕೂಲಿಕೆಲಸ ಬಿಟ್ಟು ದಿನವಿಡೀ ಕಾಯುವಂತಾಗಬಾರದು. ಇದಕ್ಕಾಗಿ ಹೆಚ್ಚು ಕೇಂದ್ರಗಳನ್ನು ತೆರೆಯಬೇಕು ಎಂಬುದು ಸಾರ್ವಜನಿಕರ ಆಗ್ರಹ. 

ಗ್ರಾಮ ಒನ್‌ನಲ್ಲಿ ಆರಂಭಿಸುವ ಪ್ರಸ್ತಾವ: ‘ಗ್ರಾಮ ಒನ್‌ ಕೇಂದ್ರಗಳಲ್ಲೂ ಆಧಾರ್‌ ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು ಎಂಬ ಪ್ರಸ್ತಾವ ಸರ್ಕಾರದ ಮುಂದೆ ಇದೆ. ಆದರೆ, ಗ್ರಾಮ ಒನ್‌ ನಿರ್ವಾಹಕರ ಮೇಲೆ ಈಗಾಗಲೇ ಸಾಕಷ್ಟು ಒತ್ತಡ ಇದ್ದು, ಇದನ್ನೂ ಸೇರಿಸಿದರೆ ಇನ್ನಷ್ಟು ಹೊರೆಯಾಗಲಿದೆ. ಒಂದು ಆಧಾರ್ ತಿದ್ದುಪಡಿಗೆ ಬೇಕಾದ ಉಪಕರಣಗಳಿಗೆ ₹1.5 ಲಕ್ಷದಷ್ಟು ವ್ಯಯಿಸಬೇಕು. ಆ ಬಂಡವಾಳವನ್ನು ಅವರೇ ಹೊಂದಿಸಬೇಕು. ಹಾಗಾಗಿ, ಸದ್ಯಕ್ಕೆ ಗ್ರಾಮ ಒನ್‌ ಕೇಂದ್ರಗಳಲ್ಲಿ ಆಧಾರ್‌ ತಿದ್ದುಪಡಿ ಸೌಲಭ್ಯ ದೊರೆಯುವುದು ಕಷ್ಟ’ ಎಂದು ಹೇಳುತ್ತಾರೆ ಅಧಿಕಾರಿಗಳು.  

ನಿರ್ವಹಣೆ: ಸೂರ್ಯನಾರಾಯಣ ವಿ. 

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್‌ ವಿ., ಬಿ.ಬಸವರಾಜು, ಎಂ.ಮಲ್ಲೇಶ 

ಚಾಮರಾಜನಗರ ತಾಲ್ಲೂಕು ಕಚೇರಿಯಲ್ಲಿರುವ ಆಧಾರ್‌ ತಿದ್ದುಪಡಿ ಕೇಂದ್ರದ ಮುಂದೆ ಕಂಡು ಬಂದ ಜನಸಂದಣಿ.
ಹನೂರು ಬಿಎಸ್‌ಎನ್‌ಎಲ್‌ ಕೇಂದ್ರದ ಮುಂದೆ ಆಧಾರ್‌ ತಿದ್ದುಪಡಿಗಾಗಿ ಸರತಿ ಸಾಲಿನಲ್ಲಿ ನಿಂತ ಜನರು
ಕೊಳ್ಳೇಗಾಲದ  ವಾಸವಿ ಮಹಲ್ ರಸ್ತೆಯಲ್ಲಿರುವ ಕರ್ನಾಟಕ ಒನ್‌ ಕೇಂದ್ರದ ಮುಂದೆ ತಮ್ಮ ಸರದಿಗೆ ಕಾಯುತ್ತಿರುವ ಜನರು
ರಾಚಪ್ಪಾಜಿ
ಸೋಮಣ್ಣ
ಶ್ರೀನಿವಾಸ್‌
ಶಿವಕುಮಾರ್‌
ಪ್ರದೀಪ್‌ಕುಮಾರ್‌
ನಾಗರಾಜು
ದೇವೇಂದ್ರ ನಾಯಕ್‌
ಶಿಲ್ಪಾನಾಗ್‌ ಟಿ.ಸಿ.

ಜನರು ಏನಂತಾರೆ?

ಪರ್ಯಾಯ ವ್ಯವಸ್ಥೆ ಮಾಡಿ ಬ್ಯಾಂಕ್ ಪಾಸ್ ಪುಸ್ತಕ ಅಪ್‌ಟೇಡ್‌ ಹಾಗೂ ಕೆವೈಸಿ ಮಾಡಿಸುವುದಕ್ಕಾಗಿ ಬ್ಯಾಂಕ್‌ಗಳಲ್ಲಿ ಗ್ರಾಹಕರು ತುಂಬಿರುತ್ತಾರೆ. ಅದರ ಮಧ್ಯೆ ಆಧಾರ್‌ ತಿದ್ದುಪಡಿಗಾಗಿ ಕಾಯಬೇಕು. ಕೂಲಿ ಕೆಲಸ ಕಾರ್ಯಗಳನ್ನು ಬಿಟ್ಟು ದಿನಪೂರ್ತಿ ಇದಕ್ಕಾಗಿ ನಿಂತಿರಬೇಕು. ಸಂಜೆವರೆಗೂ ಕೆಲಸ ಆಗುವುದಿಲ್ಲ. ಮತ್ತೊಂದು ಬ್ಯಾಂಕ್ ಅಥವಾ ಬೇರೆ ವ್ಯವಸ್ಥೆ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. –ರಾಚ್ಚಪ್ಪಾಜಿ ತೆಳ್ಳನೂರು ಚಾಮರಾಜನಗರ ತಾಲ್ಲೂಕು

ಹೆಚ್ಚುವರಿ ಕೇಂದ್ರ ತೆರೆಯಿರಿ ಆಧಾರ್ ತಿದ್ದುಪಡಿಗಾಗಿ ಮಹಿಳೆಯರು ಮಕ್ಕಳು ಪ್ರತಿನಿತ್ಯ ತಾಲ್ಲೂಕು ಕಚೇರಿ ಬ್ಯಾಂಕ್‌ ನಾಡಕಚೇರಿಗಳಲ್ಲಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಆಧಾರ್‌ ತಿದ್ದುಪಡಿ ಕೇಂದ್ರಗಳನ್ನು ಹೆಚ್ಚು ತೆರೆಯಬೇಕು.  –ಶ್ರೀನಿವಾಸ್ ಬೂದುಬಾಳು ಗ್ರಾಮ ಹನೂರು ತಾಲ್ಲೂಕು

ಕೆಲವು ಗ್ರಾಮಗಳಲ್ಲಿ ಸಮಸ್ಯೆ ಕೆಲವು ಗ್ರಾಮಗಳಲ್ಲಿ ಆಧಾರ್ ಆಧಾರಿತ ಸಮಸ್ಯೆಗಳು ಕಂಡು ಬಂದಿವೆ. ಕೆಲವು ಗ್ರಾಮಗಳಲ್ಲಿ ಆಧಾರ್ ನಂಬರಿಗೆ ಮೊಬೈಲ್ ಸಂಖ್ಯೆ ಜೋಡಿಸಬೇಕಾದ ಬಗ್ಗೆ ಅರಿವೇ ಇಲ್ಲ. ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಮ ಕೇಂದ್ರಗಳಲ್ಲಿ ಸರಿಯಾದ ಮಾಹಿತಿ ಸಿಗುತ್ತಿಲ್ಲ –ಸೋಮಣ್ಣ ಗೌಡಹಳ್ಳಿ ಯಳಂದೂರು ತಾಲ್ಲೂಕು

ಹೆಚ್ಚು ಜನರಿಗೆ ಅವಕಾಶ ಕೊಡಿ ದಿನಕ್ಕೆ 30 ಜನರಿಗೆ ಮಾತ್ರ ಆಧಾರ್ ತಿದ್ದುಪಡಿಗೆ ಅವಕಾಶವಿರುವುದರಿಂದ ಸಮಸ್ಯೆ ಉಲ್ಭಣಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಜನರಿಗೆ ಪರ್ಯಾಯವಾಗಿ ಅವಕಾಶ ಕಲ್ಪಿಸಿಕೊಡಬೇಕು. –ಎಲ್.ಪ್ರದೀಪ್ ಕುಮಾರ್ ಹನೂರು

ಕೂಲಿ ಬಿಟ್ಟು ಬರಬೇಕಿದೆ ನಾವು ಕೂಲಿ ಮಾಡಿ ಜೀವನ ನಡೆಸುತ್ತೇವೆ. ಈ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾದರೆ ಒಂದು ದಿನವೇ ರಜಾ ಹಾಕಿ ಬರಬೇಕು. ಹಾಗಾಗಿ ತಾಲ್ಲೂಕು ಆಡಳಿತ ಹೆಚ್ಚಿನ ಆಧಾರ್ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

–ನಾಗರಾಜು ಕೊಳ್ಳೇಗಾಲ

ಹೆಚ್ಚು ಕೇಂದ್ರ ತೆರೆಯಿರಿ ಆಧಾರ್ ತಿದ್ದುಪಡಿ  ಮೊಬೈಲ್ ನಂಬರ್ ಜೋಡಣೆಗಾಗಿ ಪಟ್ಟಣಕ್ಕೆ ಬಂದರೆ ದಿನವೆಲ್ಲ ಇಲ್ಲಿಯೇ ಇರಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ದಿನದ ಕೂಲಿಯನ್ನು ಬಿಟ್ಟು ತಿದ್ದುಪಡಿಗೆ ನಿಲ್ಲಬೇಕಿದೆ. ಆದ್ದರಿಂದ ತಾಲ್ಲೂಕು ಮತ್ತು ಜಿಲ್ಲಾಡಳಿತದಿಂದ ಪಟ್ಟಣದ ವ್ಯಾಪ್ತಿಯಲ್ಲಿ ಹೆಚ್ಚು ಆಧಾರ್ ತಿದ್ದುಪಡಿ ಕೇಂದ್ರ ತೆರೆಯಬೇಕು. –ಬಿ.ಜಿ.ಶಿವಕುಮಾರ್ ಬೀಮನಬೀಡು ಗ್ರಾ.ಪಂ. ಅಧ್ಯಕ್ಷ ಗುಂಡ್ಲುಪೇಟೆ ತಾಲ್ಲೂಕು

ಯಳಂದೂರಲ್ಲಿ ಸಮಸ್ಯೆ ಇಲ್ಲ ಯಳಂದೂರು ಪಟ್ಟಣದಲ್ಲಿ ಬಿಎಸ್ಎನ್ಎಲ್ ಕೇಂದ್ರ ತಾಲ್ಲೂಕು ಕಚೇರಿಯಲ್ಲಿ ಆಧಾರ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡಲು ಕೇಂದ್ರಗಳನ್ನು ತೆರೆಯಲಾಗಿದೆ. ಹೆಬ್ಬೆಟ್ಟು ಸವೆದಿದ್ದರೆ ಬೆರಳಚ್ಚು ತೆಗೆದುಕೊಳ್ಳುವಲ್ಲಿ ಮಾತ್ರ ಸಮಸ್ಯೆಯಾಗಿದೆ. ಇಂತಹವರ ಸಂಖ್ಯೆ ಕಡಿಮೆ. ಹಾಗಾಗಿ ತಾಲ್ಲೂಕಿನಲ್ಲಿ ಹೆಚ್ಚು ಸಮಸ್ಯೆ ಕಂಡು ಬಂದಿಲ್ಲ.

–ದೇವೇಂದ್ರ ನಾಯಕ್ ಗ್ರಾಮ ಲೆಕ್ಕಿಗ ಯಳಂದೂರು

ತಹಶೀಲ್ದಾರರು ಹೇಳುವುದೇನು?

ಮತ್ತೊಂದು ಕೇಂದ್ರ ಶೀಘ್ರ ತಾಲ್ಲೂಕು ಕೇಂದ್ರ  ಬ್ಯಾಂಕ್‌ಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳು ನಡೆಯುತ್ತಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ಮುಂದೆ ಬರುತ್ತಿದ್ದಾರೆ. ಹಾಗಾಗಿ ತಾಲ್ಲೂಕು ಕಚೇರಿಯಲ್ಲಿ ಮತ್ತೊಂದು ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರ ತೆರೆಯಲಾಗುವುದು. –ಮಂಜುಳ ಕೊಳ್ಳೇಗಾಲ ತಹಶೀಲ್ದಾರ್‌

ಲಾಗಿನ್‌ ಸಮಸ್ಯೆ ಬಿಎಸ್‌ಎನ್‌ಎಲ್‌ ಅಂಚೆ ಕಚೇರಿ ನಾಡಕಚೇರಿ ಬ್ಯಾಂಕುಗಳಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ನಾಡಕಚೇರಿಯಲ್ಲಿ ಲಾಗಿನ್ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿದೆ. ಈಗಾಗಲೇ ಜಿಲ್ಲಾ ನೋಡೆಲ್ ಅಧಿಕಾರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಎರಡು ದಿನಗಳೊಳಗೆ ಸಮಸ್ಯೆ ಬಗೆಹರಿಯಲಿದೆ.

–ಧನಂಜಯ್ ಹನೂರು ತಹಶೀಲ್ದಾರ್ ನಾಲ್ಕು ತಿದ್ದುಪಡಿ ಕೇಂದ್ರ ತಾಲ್ಲೂಕಿನಲ್ಲಿ ನಾಲ್ಕು ಕಡೆಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ತೆರೆಯಲಾಗಿದೆ. ಪಟ್ಟಣದ ತಾಲ್ಲೂಕು ಕಚೇರಿ ಮತ್ತು ಬಿಎಸ್ಎನ್ಎಲ್ ಕಚೇರಿ ಹಾಗೂ ತೆರಕಣಾಂಬಿ ಬೇಗೂರಿನಲ್ಲಿ ಆಧಾರ್ ತಿದ್ದುಪಡಿ ಮಾಡಲಾಗುತ್ತದೆ. ಪಟ್ಟಣದಲ್ಲಿ ಬಿಟ್ಟು ಬೇರೆ ಕಡೆಗಳಲ್ಲಿ ಜನಸಂದಣಿ ಇಲ್ಲ. ತಾಲ್ಲೂಕು ಕಚೇರಿಯಲ್ಲಿ ಪ್ರತಿದಿನ ಬೆಳಿಗ್ಗೆ 45 ಟೋಕನ್ ನೀಡಲಾಗುತ್ತದೆ

– ಶ್ರೀಶೈಲಾ ಯಮನಪ್ಪ ತಳವಾರ್ ಗುಂಡ್ಲುಪೇಟೆ ತಾಲ್ಲೂಕು

ಸಮಸ್ಯೆ ಬಗೆಹರಿಸಲು ಕ್ರಮ

ಡಿ.ಸಿ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಸಿ.ಟಿ ‘ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಆಧಾರ್‌ ತಿದ್ದುಪಡಿ ನೋಂದಣಿ ಸಮಸ್ಯೆಗಳ ಬಗ್ಗೆ ಗಮನ ಹರಿಸುವೆ. ಸದ್ಯ ಮೂರು ಸಂಚಾರಿ ಆಧಾರ್‌ ನೋದಣಿ ಘಟಕಗಳಿಗಾಗಿ ಪ್ರಸ್ತಾವ ಕಳುಹಿಸಲಾಗಿದೆ. ಜನರು ಆಧಾರ್‌ ನೋಂದಣಿ ತಿದ್ದುಪಡಿಗಾಗಿ ಹೆಚ್ಚು ಸಮಯ ಕಾಯಬಾರದು. ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.