ಚಾಮರಾಜನಗರ: ಕೋವಿಡ್ ಹಾವಳಿ ಸಂಪೂರ್ಣವಾಗಿ ನಿಲ್ಲದೇ ಇದ್ದರೂ, ರಾಜ್ಯದಾದ್ಯಂತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ.
ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆಗಾಗಿ, ರಾಜ್ಯ ಸರ್ಕಾರ ಮಾನದಂಡಗಳ ಶಿಷ್ಟಾಚಾರ ರೂಪಿಸಿದ್ದು, ಶಿಕ್ಷಣ ಇಲಾಖೆ ಹಾಗೂ ಶಾಲೆಗಳ ಆಡಳಿತ ಮಂಡಳಿ ಅವುಗಳ ಪಾಲನೆಗೆ ಗರಿಷ್ಠ ಒತ್ತು ನೀಡುತ್ತಿವೆ.
ಜಿಲ್ಲೆಯಲ್ಲಿ ಆಗಸ್ಟ್ 23ರಿಂದಲೇ ಪ್ರೌಢಶಾಲೆ ತಗರತಿಗಳು (9ನೇ ಮತ್ತು 10ನೇ) ಆರಂಭವಾಗಿವೆ. ಒಟ್ಟು 25,062 ವಿದ್ಯಾರ್ಥಿಗಳಿದ್ದು, ಶೇ 85ರಷ್ಟು ಮಕ್ಕಳು ಹಾಜರಾಗುತ್ತಿದ್ದಾರೆ. ಹಿರಿಯ ಪ್ರಾಥಮಿಕ ತರಗತಿಗಳು (6ನೇ ತರಗತಿಯಿಂದ 8ವರೆಗೆ) ಸೆ.4ರಂದು ಆರಂಭಗೊಂಡಿವೆ. ಮೊದಲ ದಿನವೇ ಶೇ 51ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಆ ಬಳಿಕ ಎರಡನೇ ದಿನ ತರಗತಿಗಳು ನಡೆದಿದ್ದು, ನಂತರ ಗೌರಿ–ಗಣೇಶ ಹಬ್ಬದ ಪ್ರಯುಕ್ತ ಮಕ್ಕಳಿಗೆ ರಜೆ ನೀಡಲಾಗಿದೆ. ತರಗತಿಗಳು ಆರಂಭವಾದ ನಂತರದ ಎರಡು ದಿನಗಳಲ್ಲಿ ಶೇ 60ರಿಂದ ಶೇ 65ರಷ್ಟು ಮಕ್ಕಳು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಳುಕಿನ ನಡುವೆ ಲವಲವಿಕೆ: ಒಂದೂವರೆ ವರ್ಷದಿಂದ ಮನೆಗಷ್ಟೇ ಸೀಮಿತವಾಗಿದ್ದ ಆನ್‌ಲೈನ್, ಟಿವಿ ಪಾಠಗಳಿಂದ ಬೇಸತ್ತಿದ್ದ ಮಕ್ಕಳು ಭೌತಿಕ ತರಗತಿಗಳಿಗೆ ಖುಷಿ ಖುಷಿಯಾಗಿಯೇ ಹಾಜರಾಗುತ್ತಿದ್ದಾರೆ. ಕೋವಿಡ್ ಭಯ ಮಕ್ಕಳಲ್ಲಿ ಅಷ್ಟಾಗಿ ಕಂಡು ಬರುತ್ತಿಲ್ಲ.ಸಹಪಾಠಿಗಳ ಸಾಂಗತ್ಯ, ಶಿಕ್ಷಕರ ಮಾರ್ಗದರ್ಶನ ಮತ್ತು ಸೃಜನಶೀಲ ಕಲಿಕೆ ಅವರಲ್ಲಿ ಲವಲವಿಕೆ ತುಂಬಿದೆ.
‘ಪೋಷಕರಲ್ಲಿ ಇನ್ನೂ ಕೋವಿಡ್ ಭಯ ಇದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಪೋಷಕರಲ್ಲಿ ಇರುವ ಭಯ ಕೂಡ ದಿನೇ ದಿನೇ ಕಡಿಮೆಯಾಗುತ್ತಿದೆ.ಮಕ್ಕಳು ಮನೆಯಲ್ಲೇ ಕುಳಿತು ಕೇಳಿದ ಪಾಠ ಪರಿಣಾಮಕಾರಿಯಾಗಿರಲಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಬಹುತೇಕ ಪೋಷಕರು, ‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಅತ್ಯಂತ ಮುಖ್ಯ. ಇದುವರೆಗೂ ಮೊಬೈಲ್ ಹಾಗೂ ಟಿವಿಗಳಿಗೆ ಅವರು ಜೋತು ಬಿದ್ದಿದ್ದರು. ಶಾಲೆ ಆರಂಭವಾದಾಗಿನಿಂದ ಹಳೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಅವರು ಮರಳುತ್ತಿದ್ದಾರೆ’ ಎಂದು ಹೇಳುತ್ತಿದ್ದಾರೆ.ಸರ್ಕಾರ ರೂಪಿಸಿರುವ ಸುರಕ್ಷತಾ ಮಾನದಂಡಗಳು ಕೂಡ ಅವರಲ್ಲಿ ಸ್ವಲ್ಪ ಧೈರ್ಯ ತಂದಂತೆ ಕಾಣಿಸುತ್ತಿದೆ.
ಕೋವಿಡ್ ನಿಯಮ ಪಾಲನೆಗೆ ಒತ್ತು: ಎಲ್ಲ ಶಾಲೆಗಳಲ್ಲಿ ಕೋವಿಡ್ ನಿಯಮ ಪಾಲನೆಗೆ ಗಮನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ತರಗತಿ ಪ್ರವೇಶಕ್ಕೂ ಮೊದಲೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸ್ಯಾನಿಟೈಸರ್ ಒದಗಿಸಲಾಗುತ್ತಿದೆ. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಒಂದು ತರಗತಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆಯುತ್ತಿವೆ. ಪ್ರೌಢ ಶಾಲೆಗಳಲ್ಲಿರುವ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2ರಿಂದ 4ರವರೆಗೆ ತರಗತಿಗಳು ನಡೆಯುತ್ತಿವೆ.
ಕೆಲವು ಚಟುವಟಿಕೆ ನಿಷೇಧ: ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಾಮೂಹಿಕ ಪ್ರಾರ್ಥನೆ ಸದ್ಯಕ್ಕೆ ನಡೆಯುತ್ತಿಲ್ಲ. ಮಕ್ಕಳು ಶಾಲೆಯ ಪಡೆಸಾಲೆ, ಆವರಣ, ಮೈದಾನದಲ್ಲಿ ಗುಂಪು ಕೂಡದಂತೆ ನೋಡಿಕೊಳ್ಳಲಾಗುತ್ತಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ.
ಸ್ಯಾನಿಟೈಸೇಷನ್ ಸಮಸ್ಯೆ: ಶಾಲಾ ಆವರಣ ಹಾಗೂ ಕೊಠಡಿಗಳನ್ನು ಪ್ರತಿದಿನ ಸ್ಯಾನಿಟೈಸ್ ಮಾಡಬೇಕು (ಸೋಂಕು ನಿವಾರಕ ಸಿಂಪಡಣೆ) ಎಂದು ಸರ್ಕಾರ ಹೇಳುತ್ತದೆ. ಆದರೆ, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪ್ರತಿದಿನ ಸ್ಯಾನಿಟೈಸ್ ಮಾಡುವುದಕ್ಕೆ ಸಮಸ್ಯೆ ಆಗುತ್ತಿದೆ. ಆರಂಭದಲ್ಲಿ ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರ, ಪಟ್ಟಣ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತದ ವತಿಯಿಂದ ಸ್ಯಾನಿಟೈಸ್ ಮಾಡಲಾಗುತ್ತಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದ ಪ್ರತಿದಿನ ಮಾಡಲು ತೊಂದರೆಯಾಗುತ್ತಿದೆ.
‘ಶಿಕ್ಷಣ ಇಲಾಖೆಯಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನ ಇಲ್ಲ. ಸ್ಥಳೀಯ ಆಡಳಿತಗಳು ಈ ಕೆಲಸ ಮಾಡಬೇಕು ಎಂಬುದು ಸರ್ಕಾರದ ಸೂಚನೆ. ಅಲ್ಲೂ ಸಿಬ್ಬಂದಿ ಸಮಸ್ಯೆ ಇರುವುದರಿಂದ ಸ್ವಲ್ಪ ತೊಂದರೆಯಾಗುತ್ತಿದೆ. ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಎಸ್‌ಡಿಎಂಸಿಯ ಸದಸ್ಯರೆಲ್ಲ ಸೇರಿ ಸ್ಯಾನಿಟೈಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಹಳೆ ಪಠ್ಯಪುಸ್ತಕ ಬಳಕೆ: ಶಿಕ್ಷಣ ಇಲಾಖೆಯು ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಪೂರೈಸಲು ಆರಂಭಿಸಿದೆ. ಆದರೆ, ಜಿಲ್ಲೆಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಬಂದಿಲ್ಲ. ಬಂದಿರುವ ಪುಸ್ತಕಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಹಳೆಯ ಪಠ್ಯಪುಸ್ತಕಗಳ ಬ್ಯಾಂಕ್ ಸ್ಥಾಪಿಸಿರುವುದು ಪಠ್ಯಪುಸಸ್ತಕಗಳ ಕೊರತೆ ನಿವಾರಿಸಿದ್ದು, ಹೊಸ ಪುಸ್ತಕಗಳು ಸಿಗದಿದ್ದರೂ, ಹಳೆ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.
ಇಡೀ ದಿನ ತರಗತಿಗೆ ಬೇಡಿಕೆ
ನಮ್ಮಲ್ಲಿ ಪ್ರೌಢಶಾಲೆ ವಿಭಾಗದಲ್ಲಿ ವಿದ್ಯಾರ್ಥಿಗಳ ಹಾಜರಿ ಶೇ 80ರಷ್ಟಿದೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೇ 70ರಷ್ಟಿದೆ. ಮಕ್ಕಳು ಖುಷಿಯಿಂದಲೇ ತರಗತಿಗೆ ಹಾಜರಾಗುತ್ತಿದ್ದಾರೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1.20ರವರೆಗೆ ತರಗತಿಗಳು ನಡೆಯುತ್ತಿವೆ. ಇಡೀ ದಿನ ತರಗತಿಗಳನ್ನು ನಡೆಸುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಒತ್ತಡ ಬರುತ್ತಿದೆ. ನಮ್ಮ ತಾಲ್ಲೂಕಿಗೆ ಹೊಸ ಪಠ್ಯಪುಸ್ತಕಗಳು ಶೇ ಬರಲು ಆರಂಭಿಸಿದ್ದು, ಶೇ 30ರಷ್ಟು ಮಕ್ಕಳಿಗೆ ವಿತರಿಸಿದ್ದೇವೆ. ಪುಸ್ತಕ ಬ್ಯಾಂಕ್‌ನಲ್ಲಿ ಹಳೆದ ಪಠ್ಯಪುಸ್ತಕಗಳು ಲಭ್ಯವಿದ್ದುದರಿಂದ, ಅವುಗಳನ್ನೇ ಮಕ್ಕಳಿಗೆ ವಿತರಿಸಲಾಗಿದೆ
– ಲಕ್ಷ್ಮಿಪತಿ, ಬಿಇಒ, ಚಾಮರಾಜನಗರ
ಕಲಿಕೆಗೆ ಒತ್ತಾಸೆ
ಆರಂಭದಲ್ಲಿ ಶಾಲೆಗೆ ದಾಖಲಾದ ಮಕ್ಕಳಿಗೆ ಬುಕ್ ಬ್ಯಾಂಕ್ ಸೌಲಭ್ಯದಿಂದ ತರಗತಿಯ ಪಠ್ಯ ಪುಸ್ತಕ ನೀಡಲಾಗುತ್ತಿತ್ತು. ಸೆಪ್ಟೆಂಬರ್ ಮೊದಲ ವಾರದಿಂದ ಹೊಸ ಪಠ್ಯ ಪುಸ್ತಗಳನ್ನುಇಲಾಖೆ ಪೂರೈಸುತ್ತಿದ್ದು, ಶೇ 70 ವಿದ್ಯಾರ್ಥಿಗಳು ಪಡೆದಿದ್ದಾರೆ. 2021-22ನೇ
ಸಾಲಿನಲ್ಲಿ 1 ರಿಂದ 10ನೇ ತರಗತಿಯ 9,565 ಮಕ್ಕಳು ದಾಖಲಾಗಿದ್ದು, ಸದ್ಯ 6 ರಿಂದ 10ನೇ ತರಗತಿಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇದೆ. ಕೋವಿಡ್ ಮಾಣದಂಡಗಳ ಪಾಲನೆ ಕಡ್ಡಾಯಗೊಳಿಸಲಾಗಿದೆ. ಶಾಲಾ ಅವಧಿಯಲ್ಲಿ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳನ್ನುಗುರುತಿಸಿ, ಕಲಿಕೆಯಲ್ಲಿ ಹಿಂದುಳಿಯದಂತೆ ಪರ್ಯಾಯ ವ್ಯವಸ್ಥೆಗೂ ಅವಕಾಶ ಕಲ್ಪಿಸಲಾಗಿದೆ
– ವಿ.ತಿರುಮಲಾಚಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಯಳಂದೂರು
ಪಠ್ಯಪುಸ್ತಕದ ಕೊರತೆ ಇಲ್ಲ
ಪ್ರತಿಯೊಂದು ಶಾಲೆಯಯೂ ಕೋವಿಡ್ ನಿಯಮ ಪಾಲನೆ ಮಾಡುವುದು ಕಡ್ಡಾಯ. ನಿಯಮ ಪಾಲನೆ ಮಾಡದ ಶಾಲೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ. ಪ್ರತಿ ನಿತ್ಯವೂ ಕಡ್ಡಾಯವಾಗಿ ಮಕ್ಕಳಿಗೆ ತರಗತಿಯಲ್ಲಿ ಕೋವಿಡ್ ಜಾಗೃತಿಯನ್ನು ಮೂಡಿಸಲಾಗುತ್ತದೆ. ಎಲ್ಲ ಶಿಕ್ಷಕರೂ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಪಠ್ಯ ಪುಸ್ತಕದ ಕೊರತೆ ಇಲ್ಲ. ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗಿಂತಲೂ ಚೆನ್ನಾಗಿ ಭೌತಿಕ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಎಲ್ಲ ಶಾಲೆಗಳಿಗೂ ಎರಡು ದಿನಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ
– ಚಂದ್ರ ಪಾಟೀಲ್,ಕ್ಷೇತ್ರ ಶಿಕ್ಷಣಾಧಿಕಾರಿ, ಕೊಳ್ಳೇಗಾಲ
ಲವಲವಿಕೆ ತುಂಬಿದೆ
ಮಕ್ಕಳು ಶಾಲೆಯಿಂದ ಮಧ್ಯಾಹನಕ್ಕೆ ಮನೆಗೆ ಬರುತ್ತಾರೆ. ನಂತರ ಶಾಲಾ ಅವಧಿಯ ಪಠ್ಯ ಪೂರಕ ಚಟುವಟಿಕೆ,
ಅಭ್ಯಾಸಗಳತ್ತ ತೊಡಗುತ್ತಾರೆ. ಇದರಿಂದರಿಂದಾಗಿ ಸದಾ ಮೊಬೈಲ್‌ನಲ್ಲಿ ಮುಳುಗಿದ್ದ ಮಕ್ಕಳಲ್ಲಿ ಈಗ ಲವಲವಿಕೆ ತುಂಬಿದೆ
–ಶಾಂತಿ, ಕೆಸ್ತೂರು ಗ್ರಾಮ, ಯಳಂದೂರು ತಾಲ್ಲೂಕು
ಪರಿಣಾಮಕಾರಿ ಕಲಿಕೆ ಸಾಧ್ಯ
ಕೋವಿಡ್ ಕಾರಣದಿಂದ ಅನೇಕ ಮಕ್ಕಳು ಶಾಲೆ, ತರಗತಿಗಳನ್ನು ಮರೆತೇ ಹೋಗಿದ್ದರು. ಈಗ ಶಾಲೆ ಪ್ರಾರಂಭವಾದ ಬಳಿಕ ಮಕ್ಕಳು ಕಲಿಕೆಯ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಶಾಲೆ ಪ್ರಾರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ಭೌತಿಕ ತರಗತಿಗಳಲ್ಲಿ ಪರಿಣಾಮಕಾರಿ ಕಲಕೆ ಸಾಧ್ಯ
–ಪರಶಿವ, ಕೊಳ್ಳೇಗಾಲ
ಟಿವಿ, ಮೊಬೈಲ್ ದೂರ
ಕೋವಿಡ್ ಲಾಕ್‌ಡೌನ್‌ನಿಂದಾಗಿ ಮಗಳು ಮನೆಯಲ್ಲೇ ಇದ್ದು, ಚಲನಶೀಲತೆ ಕಳೆದುಕೊಂಡಿದ್ದಳು. ಶಾಲೆ ಆರಂಭವಾದಾಗಿನಿಂದ ಆಕೆಯ ದೈನಂದಿನ ಶೈಲಿಬದಲಾಗಿದ್ದು, ತರಗತಿ, ಪಠ್ಯ, ಆಟೋಟ ಮತ್ತು ಓದು ಬರಹದತ್ತ ಮನಸ್ಸುಕೇಂದ್ರೀಕರಿಸುತ್ತಾರೆ. ಅಷ್ಟೇ ಅಲ್ಲ. ದೂರದರ್ಶನ ಮತ್ತು ಮೊಬೈಲ್ ಗೀಳಿನಿಂದ ಹೊರಬರುತ್ತಿದ್ದಾಳೆ
–ಲಕ್ಷ್ಮಿ, ಯರಿಯೂರು, ಯಳಂದೂರು ತಾಲ್ಲೂಕು
ಭಯ ಇದೆ, ಶಿಕ್ಷಣವೂ ಮುಖ್ಯ
ಹಲವು ತಿಂಗಳುಗಳ ಬಳಿಕ ಶಾಲೆಗಳು ಆರಂಭವಾಗಿವೆ. ಮಕ್ಕಳು ಆಲ್ ಲೈನ್ ತರಗತಿಯಲ್ಲಿ ಕಲಿತದ್ದು ಅಷ್ಟೇನು ಪರಿಣಾಮಕಾರಿಯಾಗಿಲ್ಲ. ಈಗ ಭೌತಿಕ ತರಗತಿಗಳು ಆರಂಭವಾಗಿವೆ. ಕೋವಿಡ್‌ನಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಕಾಡುತ್ತಿದೆ. ಆದರೆ ಮಕ್ಕಳ ಶಿಕ್ಷಣಕ್ಕೂ ನಾವು ಪ್ರಾಮುಖ್ಯ ಕೊಡಬೇಕಿದೆ. ಶಿಕ್ಷಣ ಇಲಾಖೆಯೂ ಈ ಬಗ್ಗೆ ನಿಗಾ ವಹಿಸಬೇಕು
– ಮಾದಲಾಂಬಿಕ, ಪೋಷಕರು, ಎಲ್ಲೇಮಾಳ ಹನೂರು ತಾಲ್ಲೂಕು
ಸಾರಿಗೆ ವ್ಯವಸ್ಥೆಯ ಸಮಸ್ಯೆ
ಶಾಲೆಗಳು ಆರಂಭವಾಗಿರುವುದು ಸಂತಸದ ವಿಚಾರ. ಆದರೆ, ಹನೂರು ಭಾಗದಲ್ಲಿ ಬಹುತೇಕ ಶಾಲೆಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಾಮಾಪುರದಿಂದ ಮಿಣ್ಯಂವರೆಗೆ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಬಸ್ ವ್ಯವವಸ್ಥೆಯೇ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರು ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಲು ಸಮಸ್ಯೆಯಾಗಿದೆ
– ಬಸವಣ್ಣ, ಮಿಣ್ಯಂ, ಹನೂರು ತಾಲ್ಲೂಕು
ವಿದ್ಯಾರ್ಥಿಗಳ ಅನಿಸಿಕೆ...
ಶಾಲೆಯಲ್ಲಿ ಕೋವಿಡ್ ಮಾನದಂಡಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಪ್ರತಿದಿನ ನಡೆಸಲಾಗುತ್ತಿದೆ. ಆರೋಗ್ಯವನ್ನು ವಿಚಾರಿಸಿದ ನಂತರಷ್ಟೇ ತರಗತಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಎಲ್ಲ ಮಕ್ಕಳಿಗೂ ಪಠ್ಯಪುಸ್ತಕಗಳು ಸಿಕ್ಕಿದ್ದು, ಸಹಪಾಠಿಗಳು ಶಾಲೆಯತ್ತ ಬರುತ್ತಿದ್ದಾರೆ
–ಸ್ನೇಹ ಬಿ., 8ನೇ ತರಗತಿ, ಬನ್ನಿಸಾರಿಗೆ, ಯಳಂದೂರು ತಾಲ್ಲೂಕು
ಒಂದೂವರೆ ವರ್ಷದಿಂದ ತರಗತಿಗಳು ನಡೆಯದೇ ಬೇಸರವಾಗಿತ್ತು. ಮನೆಯಲ್ಲೇ ಪಾಠ ಕೇಳುವುದು ಕಷ್ಟವಾಗಿತ್ತು. ಇದರಿಂದ ತಂದೆ-ತಾಯಿಗೂ ಬೇಜಾರಾಗಿತ್ತು. ಈಗ ಶಾಲೆ ಆರಂಭವಾಗಿರುವುದು ಖುಷಿಯಾಗಿದೆ. ಶಿಕ್ಷಕರಿಂದ ಪಾಠ ಕೇಳಲು ಆಸೆ ಹೆಚ್ಚಾಗಿದೆ. ಕಲಿಯಲು ಆಸಕ್ತಿ ಉಂಟಾಗಿದೆ. ಶಾಲೆ ಆರಂಭವಾದಾಗ ಶಿಕ್ಷಕರು ಬಹಳ ಸಂತೋಷದಿಂದ ನಮ್ಮನ್ನು ಸ್ವಾಗತಿಸಿದರು
–ಎಚ್.ಎಸ್.ಮಹೇಶ್ ಕುಮಾರ್, 8ನೇ ತರಗತಿ ಸರ್ಕಾರಿ ಪ್ರೌಢಶಾಲೆ ಸಂತೇಮರಹಳ್ಳಿ
ಶಾಲಾ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಶೌಚಾಲಯ ಸ್ವಚ್ಛತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ. ಪ್ರತಿ ಕೊಠಡಿಗೂ ಸ್ಯಾನಿಟೈಸ್ ಮಾಡಿಸುತ್ತಿದ್ದಾರೆ ಅಂತರ ಕಾಪಾಡಿಕೊಂಡು ಕಲಿಕೆಯಲ್ಲಿ ತೊಡಗಿದ್ದೇವೆ. ಶಾಲೆಗೆ ಕಾಂಪೌಂಡ್ಅಗತ್ಯವಿದ್ದು, ಸಾರ್ವಜನಿಕರ ಅನಗತ್ಯ ಓಡಾಟವನ್ನು ತಪ್ಪಿಸಬೇಕಾಗಿದೆ
–ಅಪೂರ್ವ 10ನೇ ತರಗತಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಯಳಂದೂರು ಪಟ್ಟಣ
ಶಾಲೆ ಆರಂಭವಾಗಿರುವುದರಿಂದ ತುಂಬಾ ಖುಷಿ ಆಗಿದೆ. ಸ್ನೇಹಿತರ ಒಡನಾಟ, ಶಿಕ್ಷಕರು ಪಾಠ ಇಲ್ಲದೇ ಬೇಸರವಾಗಿತ್ತು. ತರಗತಿ ಆರಂಭವಾಗುತ್ತಿದ್ದಂತೆ ಶಿಕ್ಷಕರ ಪಾಠಗಳನ್ನು ನೇರವಾಗಿ ನೋಡುವ ಭಾಗ್ಯ ಲಭಿಸಿದೆ. ಸ್ನೇಹಿತರೊಂದಿಗೆ ವಿಚಾರ ವಿನಿಯಮಕ್ಕೆ ಅವಕಾಶ ಸಿಕ್ಕಿದೆ. ಕೋವಿಡ್ ಮುನ್ನೆಚ್ಚರಿಕೆ ವಹಿಸಲು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇನೆ
–ಎಚ್.ಎಸ್.ಮಹದೇವ ಪ್ರಸಾದ್. ಸರ್ಕಾರಿ ಪ್ರೌಢಶಾಲೆ, ಸಂತೇಮರಹಳ್ಳಿ
ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಗಿದೆ. ಪ್ರತಿ ಕೊಠಡಿಯಲ್ಲಿ 20 ಮಕ್ಕಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ
-ನಾರಾಯಣಸ್ವಾಮಿ, ಶಿಕ್ಷಕ, ಜೆಎಸ್ಎಸ್ ಪ್ರೌಢಶಾಲೆ, ಗೌಡಹಳ್ಳಿ
ಶೇ 70 ಮಕ್ಕಳು ಬರುತ್ತಿದ್ದಾರೆ. ಎಲ್ಲರೂ ಚೆನ್ನಾಗಿ ಸಹಕರಿಸುತ್ತಿದ್ದಾರೆ. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಕೂರಿಸುತ್ತಿದ್ದೇವೆ
-ಅನಿತಾ, ಶಿಕ್ಷಕಿ, ಕರ್ನಾಟಕ ಪಬ್ಲಿಕ್ ಶಾಲೆ ಹಂಗಳ, ಗುಂಡ್ಲುಪೇಟೆ ತಾಲ್ಲೂಕು
ನಮ್ಮ ಶಾಲೆಗೆ ಶೇ 100ರಷ್ಟು ಮಕ್ಕಳು ಹಾಜರಾಗುತ್ತಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ಮಕ್ಕಳು ವೈಯಕ್ತಿಕ ಸ್ವಚ್ಚತೆಗೆ ಒತ್ತು ನೀಡುತ್ತಿದ್ದಾರೆ
-ಮಹದೇಶ್ವರ ಸ್ವಾಮಿ, ಮುಖ್ಯಶಿಕ್ಷಕ, ಹೊಂಗಹಳ್ಳಿ ಗುಂಡ್ಲುಪೇಟೆ
37,842 –ಹಿರಿಯ ಪ್ರಾಥಮಿಕ ಶಾಲೆಗಳಲ್ಲಿರುವ (6ರಿಂದ 8ನೇ ತರಗತಿ) ಇರುವ ಮಕ್ಕಳು
19,803–ಬಾಲಕರು; 18,838–ಬಾಲಕಿಯರ ಸಂಖ್ಯೆ
25,062 –ಪ್ರೌಢಶಾಲೆಗಳಲ್ಲಿರುವ (9ನೇ ಮತ್ತು 10ನೇ ತರಗತಿ) ವಿದ್ಯಾರ್ಥಿಗಳು
12,704–ಹುಡುಗರು; 12,358–ಹುಡುಗಿಯರು
ನಿರ್ವಹಣೆ: ಸೂರ್ಯನಾರಾಯಣ ವಿ.,
ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್‌ಪ್ರಕಾಶ್ ವಿ., ಮಹದೇವ್ ಹೆಗ್ಗವಾಡಿಪುರ, ಬಿ.ಬಸವರಾಜು, ಮಲ್ಲೇಶ ಎಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.