ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಿಸುವಲ್ಲಿ ಉದಾಸೀನ ಧೋರಣೆ ಅನುಸರಿಸುತ್ತಾ ಬಂದಿದ್ದ ನಗರಸಭೆ ಆಡಳಿತ ಈಗ ಎಚ್ಚೆತ್ತುಕೊಂಡಿದೆ. ಮೂಲದಲ್ಲೇ ಹಸಿ ಕಸ, ಒಣಕಸ ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಂಡಿದೆ. ಆದರೆ, ಇನ್ನೂ ಪೂರ್ಣ ಪ್ರಮಾಣದಲ್ಲಿ ಮೂಲದಲ್ಲೇ ಕಸ ಬೇರ್ಪಡಿಸುವಿಕೆ ಆಗುತ್ತಿಲ್ಲ. ಜೊತೆಗೆ ನಗರದಲ್ಲಿ ಪ್ಲಾಸ್ಟಿಕ್ ಹಾವಳಿಯೂ ಹೆಚ್ಚುತ್ತಿದೆ.‘ನಮ್ಮ ನಗರ ನಮ್ಮ ಧ್ವನಿ’ ಅಂಕಣ ಈ ವಿಷಯದ ಬಗ್ಗೆ ಬೆಳಕು ಚೆಲ್ಲಿದೆ.
ಚಾಮರಾಜನಗರ: ತ್ಯಾಜ್ಯ ಸಂಗ್ರಹಣೆ ಹಾಗೂ ಅದರ ವೈಜ್ಞಾನಿಕ ವಿಲೇವಾರಿ ವಿಚಾರದಲ್ಲಿ ಇದುವರೆಗೂ ನಿರ್ಲಕ್ಷ್ಯ ತೋರುತ್ತಾ ಬಂದಿದ್ದ ನಗರಸಭೆ ಆಡಳಿತ ಕೊನೆಗೂ ಎಚ್ಚೆತ್ತುಕೊಂಡಿದೆ. ಆದರೆ, ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಜೊತೆಗೆ, ಹೆಚ್ಚುತ್ತಿರುವ ಪ್ಲಾಸ್ಟಿಕ್ ಹಾವಳಿಗೆ ಕಡಿವಾಣ ಹಾಕುವುದರಲ್ಲೂ ಎಡವುತ್ತಿದೆ.
ಮೂಲದಲ್ಲೇ ಹಸಿ ಕಸ, ಒಣಕಸವನ್ನು ಕಡ್ಡಾಯವಾಗಿ ಬೇರ್ಪಡಿಸಬೇಕು ಎಂಬ ನಿಯಮ ಬಂದು ವರ್ಷಗಳು ಕಳೆದರೂ ನಗರದಲ್ಲಿ ಅದು ಅನುಷ್ಠಾನ ಆಗಿರಲಿಲ್ಲ. ಅದು ಕೇವಲ ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾಗಿತ್ತು. ಜನರು ಕೂಡ ಪಾಲಿಸುತ್ತಿರಲಿಲ್ಲ. ಕಸ ಸಂಗ್ರಹಿಸುವ ಸಿಬ್ಬಂದಿ ಕೂಡ ನಿಯಮ ಪಾಲನೆ ಬಗ್ಗೆ ಗಮನ ಹರಿಸಿರಲಿಲ್ಲ.
ಆದರೆ, ತಿಂಗಳಿನಿಂದೀಚೆಗೆ ನಗರಸಭೆ ಮನೆ ಮನೆಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಮತ್ತಷ್ಟು ವ್ಯವಸ್ಥಿತ ಗೊಳಿಸಿದೆ. ತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆಗೂ ಗಮನ ನೀಡುತ್ತಿದೆ. ಮೂಲದಲ್ಲೇ ಕಸ ಬೇರ್ಪಡಿಸುವಿಕೆಯನ್ನು ಕಡ್ಡಾಯಗೊಳಿಸಿದೆ.ವಾಹನಗಳ ಮೂಲಕ ಮನೆ ಮನೆಗೆ ತೆರಳಿ ಕಡ್ಡಾಯವಾಗಿ ಬೇರ್ಪಡಿಸಿದ ಕಸವನ್ನು ಸಂಗ್ರಹಿಸುತ್ತಿದೆ. ನಿವಾಸಿಗಳು ಕೂಡ ಹೊಸ ವ್ಯವಸ್ಥೆಗೆ ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಕಸವನ್ನು ಬೇರ್ಪಡಿಸದವರಿಗೆ ಸಿಬ್ಬಂದಿ ತಿಳಿ ಹೇಳುತ್ತಿದ್ದಾರೆ. ಆದರೆ, ಶೇ 60ರಷ್ಟು ಮಂದಿ ಮಾತ್ರ ಮೂಲದಲ್ಲೇ ಕಸವನ್ನು ಪ್ರತ್ಯೇಕಿಸುತ್ತಿದ್ದಾರೆ. ಉಳಿದವರು ಮಿಶ್ರವಾದ ಕಸವನ್ನೇ ಕೊಡುತ್ತಿದ್ದಾರೆ.
ಸದ್ಯ ನಗರದಲ್ಲಿರುವ 31 ವಾರ್ಡ್‌ಗಳ ಪೈಕಿ 20 ವಾರ್ಡ್‌ಗಳಲ್ಲಿ ಹೊಸ ನಿಯಮ ಕಟ್ಟು ನಿಟ್ಟಾಗಿ ಜಾರಿಗೆ ಬಂದಿದೆ. ನಗರಸಭೆಯ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಪ್ರತಿದಿನ 34 ಟನ್ ಕಸ ಉತ್ಪಾದನೆಯಾಗುತ್ತದೆ. ಇದರಲ್ಲಿ 16ಟನ್‌ಗಳಷ್ಟು ಹಸಿ ಕಸ, 12 ಟನ್ ಒಣಕಸ ಹಾಗೂ ಉಳಿದವು ಇತರೆ ಕಸ.ಇದುವರೆಗೂ ಒಣಕಸ, ಹಸಿ ಕಸವನ್ನು ಒಟ್ಟಿಗೇ ಸಂಗ್ರಹಿಸಲಾಗುತ್ತಿತ್ತು. ಇದರಿಂದಾಗಿ ಘನ ತ್ಯಾಜ್ಯ ನಿರ್ವಹಣೆ ನಗರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಸದ್ಯ 121 ಮಂದಿ ಪೌರಕಾರ್ಮಿಕರು ಪ್ರತಿ ದಿನ ಕಸ ಸಂಗ್ರಹಣೆಯಲ್ಲಿ ತೊಡಗುತ್ತಿದ್ದಾರೆ. 16 ವಾಹನಗಳು, 3 ಟ್ರಾಕ್ಟರ್‌ಗಳನ್ನೂ ಬಳಸಲಾಗುತ್ತಿದೆ. ಕಸದ ಸಂಗ್ರಹ, ಸಾಗಣೆ, ಸಂಸ್ಕರಣೆ, ಮರುಬಳಕೆ, ವಿಲೇವಾರಿ ಹಾಗೂತ್ಯಾಜ್ಯ ವಸ್ತುಗಳ ನಿರ್ವಹಣೆಗಳನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಹಸಿರುದಳ ಎಂಬ ಸ್ವಯಂ ಸೇವಾ ಸಂಸ್ಥೆಗಳ ನೆರವನ್ನೂ ಪಡೆಯುತ್ತಿದೆ.
ಮೂರು ಘಟಕಗಳು: ತ್ಯಾಜ್ಯ ನಿರ್ವಹಣೆಗೆಂದೇ ನಗರ ವ್ಯಾಪ್ತಿಯಲ್ಲಿ ಮೂರು ಘಟಕಗಳನ್ನು ತೆರೆಯಲಾಗಿದೆ.ಕರಿನಂಜನಪುರ ರಸ್ತೆ ನಿಜಗುಣ ರೆಸಿಡೆನ್ಸಿ ಹತ್ತಿರ ಒಣತ್ಯಾಜ್ಯ ಸಂಗ್ರಹಣಾಕೇಂದ್ರಹಾಗೂ ಸಂತೇಮರಹಳ್ಳಿ ರಸ್ತೆಯ ಅಂಚೆ ಕಚೇರಿ ಹತ್ತಿರ ಹಸಿತ್ಯಾಜ್ಯ ಸಂಗ್ರಹಣಾ ಕೇಂದ್ರ ಹಾಗೂ ಸೋಮವಾರಪೇಟೆ ಬಳಿ 25 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ಸಂಗ್ರಹ ಘಟಕ ತೆರೆಯಲಾಗಿದೆ.
ಹಸಿಕಸದಿಂದ ಕಾಂಪೋಸ್ಟ್ ತಯಾರಿಸಲಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳು, ಕಾಗದ, ಪುಸ್ತಕಗಳು ಸೇರಿದಂತೆ ಇನ್ನಿತರೆ ಒಣಕಸಗಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ. ಉಳಿದ ತ್ಯಾಜ್ಯವನ್ನು ಮಾತ್ರ ಡಂಪಿಂಗ್ ಯಾರ್ಡ್‌ನಲ್ಲಿ ಹಾಕಲಾಗುತ್ತಿದೆ.
‘ಹೊಸ ವ್ಯವಸ್ಥೆಗೆ ಜನರು ಹೊಂದಿಕೊಳ್ಳುತ್ತಿದ್ದಾರೆ. ಶೇ 60ರಷ್ಟು ಮಂದಿ ಮೂಲದಲ್ಲೇ ಕಸ ಬೇರ್ಪಡಿಸಿ ಕೊಡುತ್ತಿದ್ದಾರೆ. ಕೆಲವರು ಇನ್ನೂ ಮಾಡುತ್ತಿಲ್ಲ.ಜನರು ಕಸ ಬೇರ್ಪಡಿಸಿ ಕೊಡದಿದ್ದರೆ, ಪೌರ ಕಾರ್ಮಿಕರೇ ಹಸಿ ಕಸ, ಒಣಕಸ ಎಂದು ಬೇರ್ಪಡಿಸಿ ವಾಹನಗಳಿಗೆ ಹಾಕುತ್ತಾರೆ. ಕ್ರಮೇಣ ಅವರು ಕೂಡ ಮಾಡಬಹುದು’ ಎಂದು ಕಸ ಸಂಗ್ರಹಣೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ತ್ಯಾಜ್ಯ ನಿರ್ವಹಣೆಯಲ್ಲಿನೂತನಆವಿಷ್ಕಾರಗಳು, ಮಾದರಿಗಳನ್ನು ಬಳಸಿಕೊಳ್ಳಲಾಗುತ್ತಿದೆ.ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಇದನ್ನು ವಿವಿಧರೀತಿಯಲ್ಲಿಉಪಯೋಗಿಸುವ ಬಗ್ಗೆ ಈಗಾಗಲೇ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಗೊಬ್ಬರ ತಯಾರಿಕೆ, ಪ್ಲಾಸ್ಟಿಕ್‌ಗಳ ಮರು ಬಳಕೆ ಹಾಗೂ ಅದೇ ಪ್ಲಾಸ್ಟಿಕ್‌ಗಳನ್ನು ಒಟ್ಟಾಗಿ ಗಟ್ಟಿಗೊಳಿಸಿ ಸಿಮೆಂಟ್ ಕಾರ್ಖಾನೆಗಳಿಗೆ ನೀಡಲಾಗುತ್ತಿದೆ’ ಎಂದುತೆ ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಎಸ್. ಶರವಣ ‘ಪ್ರಜಾವಾಣಿ’ಗೆ ತಿಳಿಸಿದರು.
ಸಿಬ್ಬಂದಿ ಕೊರತೆ: ‘ಕಸ ವಿಲೇವಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಲು ನಮಗೆ ಇನ್ನೂ 20 ಮಂದಿ ಕಾರ್ಮಿಕರ ಅಗತ್ಯವಿದೆ. 6 ವಾಹನಗಳು ಹಾಗೂ ಒಂದುಟ್ರ್ಯಾಕ್ಟರ್, ಜೆಸಿಬಿ ಅವಶ್ಯಕತೆ ಇದೆ’ ಎಂದರು.
ಹೋಟೆಲ್, ಕಲ್ಯಾಣಮಂಟಪ, ಚಿತ್ರಮಂದಿರ, ಅಂಗಡಿ ಮುಂಗಟ್ಟುಗಳಲ್ಲಿ ಕಸ ಬೇರ್ಪಡಿಸುವಿಕೆ ಸರಿಯಾಗಿ ಆಗುತ್ತಿಲ್ಲ. ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಶಾಲಾ– ಕಾಲೇಜುಗಳಲ್ಲಿ ಅರಿವು: ಸ್ವಚ್ಛತೆ, ಕಸ ವಿಲೇವಾರಿ ಕುರಿತು ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸರ್ಕಾರದ ಆದೇಶದನ್ವಯ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರು.
ಮೂಲದಲ್ಲೇ ಬೇರ್ಪಡಿಸುವುದು ಕಡ್ಡಾಯ
ಮನೆಯಲ್ಲೇ ಹಸಿ– ಒಣ ಕಸವಾಗಿ ಬೇರ್ಪಡಿಸಸುವುದು ಕಡ್ಡಾಯ. ಆದರೆ, ಅನೇಕ ಮಂದಿ ಬೇರ್ಪಡಿಸದೇ ಹಾಗೆಯೇ ಆಟೊಗಳಿಗೆ ಹಾಕುತ್ತಾರೆ. ಇದರಿಂದ ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸುವ ಕೆಲಸಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಜನರು ಈ ಬಗ್ಗೆ ಅರಿವು ಪಡೆದುಕೊಳ್ಳಬೇಕಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.
‘ಕಸ ಹಾಕಲು ದೊಡ್ಡ ಡಬ್ಬಗಳನ್ನು ಇರಿಸಿದ್ದರೂ ಬಡಾವಣೆಗಳ ಅನೇಕನಿವಾಸಿಗಳು ಅದರ ಪಕ್ಕದಲ್ಲೇ ಕಸ ಎಸೆದು ಹೋಗುತ್ತಾರೆ. ಇದರಲ್ಲಿಪ್ಲಾಸ್ಟಿಕ್ ಕೂಡ ಇರುತ್ತದೆ. ಕಟ್ಟಡಗಳನ್ನು ಕೆಡವಿದಾಗ ಅದನ್ನು ತೆರವುಗೊಳಿಸಲು ವಿಳಂಬವಾದರೆ ಅಲ್ಲಿಯೇ ಕಸ ಹಾಕುತ್ತಾರೆ. ಖಾಲಿ ನಿವೇಶಗಳಿಗೂ ಎಸೆದು ಹೋಗುತ್ತಾರೆ. ಜನರಲ್ಲಿ ಅರಿವಿನ ಕೊರತೆ ಇದೆ’ ಎಂದು ಶರವಣ ಹೇಳಿದರು.
ಆಗಸ್ಟ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ
‘ಖಾಲಿ ನಿವೇಶನದಲ್ಲಿ ಗಿಡಗಳು ಬೆಳೆದಿದ್ದರೆ ನಗರಸಭೆಯಿಂದ ಸ್ವಚ್ಛಗೊಳಿಸಿ ‘ಈನಿವೇಶನ ನಗರಸಭೆ ಆಸ್ತಿ’ ಎಂದು ಫಲಕ ಅಳವಡಿಸಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡುವಂತ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದುನಗರಸಭೆ ಆಯುಕ್ತ ಎಂ.ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಕಸ ಹಾಕಿದರೆ ದಂಡ: ಖಾಲಿ ನಿವೇಶನ ಸೇರಿದಂತೆ ಹೊರಗಡೆ ಕಸ ಹಾಕಿದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುತ್ತೇವೆ.₹ 100ರಿಂದ₹ 1,000 ವರೆಗೂ ದಂಡ ವಿಧಿಸಲಾಗುವುದು. ಕಸ ಚೆಲ್ಲದಂತೆ ಎಚ್ಚರಿಕೆ ನೀಡುವಂತ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಿಯಂತ್ರಣಕ್ಕೆ ಬಾರದ ಪ್ಲಾಸ್ಟಿಕ್
ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧವಿದ್ದರೂ ನಗರದಲ್ಲಿ ಪ್ಲಾಸ್ಟಿಕ್‌ಗೆ ಕಡಿವಾಣ ಬಿದ್ದಿಲ್ಲ. ನಗರಸಭೆ ಅಧಿಕಾರಿಗಳು ಅಪರೂಪಕ್ಕೊಮ್ಮೆ ಅಂಗಡಿಗಳಿಗೆ ತೆರಳಿ ಪರಿಶೀಲನೆ ಕೈಗೊಂಡು ಕೆಲವು ಮಾಲೀಕರಿಗೆ ದಂಡ ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಜನರಲ್ಲೂ ಪ್ಲಾಸ್ಟಿಕ್ ಬಳಸಬಾರದು ಎಂಬ ಅರಿವು ಮೂಡುತ್ತಿಲ್ಲ.
ಪ್ಲಾಸ್ಟಿಕ್ ಸೇರಿದಂತೆ ಇತರ ಕಸಗಳ ರಾಶಿಗೆ ಬೆಂಕಿ ಹಚ್ಚುವ ಪರಿಪಾಠವೂ ನಗರದಲ್ಲಿ ಹೆಚ್ಚಾಗಿದೆ. ಜನರು ಹಚ್ಚುತ್ತಾರೆ, ಪೌರಕಾರ್ಮಿಕರೂ ಬೆಂಕಿ ಹಾಕುತ್ತಾರೆ. ಬೆಂಕಿ ಹಾಕಿದಾಗ ಬರುವ ಹೊಗೆಯು ಪರಿಸರ ಮಾಲಿನ್ಯ ಉಂಟು ಮಾಡುವುದರ ಜೊತೆಗೆ ಮನುಷ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕಸಕ್ಕೆ ಬೆಂಕಿ ಹಚ್ಚುವುದು ಅಪರಾಧ ಎಂಬ ನಿಯಮ ಕಾಗದದ ಮೇಲಿನ ಬರಹವಾಗಿಯಷ್ಟೇ ಉಳಿದಿದೆ.
ಜನ ಏನಂತಾರೆ?
ಕಸ ತೆಗೆದುಕೊಂಡು ಹೋಗಲು ಪೌರಕಾರ್ಮಿಕರು ನಿತ್ಯವೂ ಬರುತ್ತಾರೆ. ಆದರೆ, ಅನೇಕ ಜನರು ಮಾರಿಗುಡಿಗೆ ಹೊಂದಿಕೊಂಡಂತಿರುವ ಜಾಗದಲ್ಲೇ ಕಸ ಎಸೆಯುತ್ತಾರೆ. ಈ ಬಗ್ಗೆ ಅವರೇ ಅರಿವು ಪಡೆದುಕೊಳ್ಳಬೇಕು. ಇಲ್ಲಿ ಸಂಗ್ರಹವಾಗಿರುವ ಕಸವನ್ನು ವಿಲೇವಾರಿ ಮಾಡಲು ನಗರಸಭೆ ಕ್ರಮ ಕೈಗೊಳ್ಳಬೇಕು
–ಸುನಂದ ಸ್ವಾಮಿ, ಭುಜಂಗೇಶ್ವರ ಬಡಾವಣೆ ನಿವಾಸಿ
*
ನಿರ್ಮಾಣ ಹಂತದ ಕಟ್ಟಡ ಅಥವಾ ಕೆಡವಲು ಇರುವಂತಹ ಕಟ್ಟಡಗಳ ಮಾಹಿತಿ ನಗರಸಭೆಗೆ ಇರಬೇಕು. ಕೆಡವಿದ ನಂತರ ಇಂತಿಷ್ಟೇ ದಿನಗಳಲ್ಲಿ ಮಣ್ಣನ್ನು ತೆರವುಗೊಳಿಸಲು ಮುಂದಾಗದಿದ್ದರೆ ದಂಡ ವಿಧಿಸಬೇಕು. ಇಲ್ಲವಾದರೆ, ಅದೇ ಜಾಗದಲ್ಲಿ ಕಸದ ರಾಶಿಯನ್ನೇ ನಿವಾಸಿಗಳು ನಿರ್ಮಿಸುತ್ತಾರೆ.
-ಸಿ.ಎಸ್.ಸುರೇಶ್ ನಾಯಕ, ಶಂಕರಪುರ ಬಡಾವಣೆ
*
ಬಡಾವಣೆಗಳ ರಸ್ತೆ ಬದಿಯಲ್ಲೇ ಕಸ ಎಸೆದು ಬೆಂಕಿ ಹಚ್ಚುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಬೆಂಕಿ ಹಚ್ಚುವುದರಿಂದ ಅಪಾಯವೇ ಹೆಚ್ಚು. ಪರಿಸರ ಹದಗೆಡುವ ಜೊತೆಗೆ ಬೆಂಕಿ ಕಿಡಿ ಅಕ್ಕಪಕ್ಕದ ಮನೆಗಳಿಗೆ ಆವರಿಸಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
–ಕೆ.ವೆಂಕಟರಾಜು, ಭ್ರಮರಾಂಬ ಬಡಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.