ಚಾಮರಾಜನಗರ: ನಗರದಲ್ಲಿ ಹಾದು ಹೋಗುವ ಪ್ರಮುಖ ರಸ್ತೆಗಳಲ್ಲೇ ಬೀದಿದೀಪಗಳಿಲ್ಲ. ಡೀವಿಯೇಷನ್ ರಸ್ತೆ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆಗಳು ಅಭಿವೃದ್ಧಿಗೊಂಡು ವರ್ಷಗಳು ಸಂದರೂ, ಬೀದಿದೀಪಗಳನ್ನು ಇನ್ನೂ ಅಳವಡಿಸಲಾಗಿಲ್ಲ. ಹಾಗಾಗಿ, ರಾತ್ರಿ ಹೊತ್ತಿನಲ್ಲಿ ಜಿಲ್ಲಾಕೇಂದ್ರದ ಹೃದಯಭಾಗವೇ ಕತ್ತಲು ಕೇಂದ್ರವಾಗುತ್ತದೆ.
ಇದಲ್ಲದೇ ಐತಿಹಾಸಿಕ ಚಾಮರಾಜೇಶ್ವರ ದೇವಾಲಯದ ಸುತ್ತಲಿನ ರಸ್ತೆಗಳಲ್ಲಿ ಪಾರಂಪರಿಕ ಶೈಲಿಯ ಬೀದಿದೀಪಗಳನ್ನು ಹಾಕುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದರೂ ಆ ಪ್ರದೇಶಕ್ಕೆ ಪಾರಂಪರಿಕ ದೀಪಗಳ ಬೆಳಕಿನ ಭಾಗ್ಯ ಇನ್ನೂ ಸಿಕ್ಕಿಲ್ಲ.
ನೆರೆಯ ಕೇರಳ, ತಮಿಳುನಾಡು ರಾಜ್ಯಗಳಿಗೆ ಹೋಗಬೇಕಾದ ವಾಹನಗಳು ನಗರದಲ್ಲಿ ಹಾದು ಹೋಗಬೇಕಾಗಿದೆ. ನಿತ್ಯವೂ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ರಾತ್ರಿ ಸಂಚರಿಸುವ ವಾಹನಗಳು ಕಡಿಮೆ ಏನಲ್ಲ.
ಇವುಗಳ ಜೊತೆಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ‍್ರವಾಸಿಗರೂ ವಾಹನ ಗಳಲ್ಲಿ ಸಂಚರಿಸುತ್ತಾರೆ. ರಾತ್ರಿ ಹೊತ್ತು ರಸ್ತೆಯಲ್ಲಿ ಬೆಳಕು ಇಲ್ಲದೆ ಪರಿತಪಿಸಬೇಕಾದ ಸನ್ನಿವೇಶಗಳೂ ಸೃಷ್ಟಿಯಾಗುತ್ತಿವೆ.
ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿ ಕಂಡಿರುವ ಬಿ.ರಾಚಯ್ಯ ಜೋಡಿರಸ್ತೆಯ ಉದ್ದಕ್ಕೂ ವಿಭಜಕಗಳ ಮೇಲೆ ಬೀದಿದೀಪದ ಕಂಬಗಳನ್ನು ಅಳವಡಿಸಿ ಎರಡು ತಿಂಗಳೇ ಕಳೆಯಿತು.
ಮೂರು ಕಿ.ಮೀ ಉದ್ದದ ರಸ್ತೆಗೆ ಎರಡು ದಿನದಲ್ಲಿ ಕಂಬಗಳನ್ನು ಅಳವಡಿಸಲಾಗಿತ್ತು. ಆದರೆ, ಅದೇ ವೇಗದಲ್ಲಿ ಬಲ್ಬ್‌ಗಳನ್ನು ಹಾಕಿಲ್ಲ. ಡೀವಿಯೇಷನ್ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ) ಕಂಬಗಳನ್ನೂ ಹಾಕಿಲ್ಲ. ಪ್ರಮುಖ ವೃತ್ತಗಳಲ್ಲಿರುವ ಹೈಮಾಸ್ಟ್ ದೀಪಗಳೇ ರಾತ್ರಿ ಹೊತ್ತು ಬೆಳಕಿನ ಮೂಲ.ಸಂತೇಮರಹಳ್ಳಿ ವೃತ್ತದಿಂದ ನಂಜನಗೂಡು ಮಾರ್ಗದ ನಡುವೆಯೂ ಬೀದಿದೀಪಗಳ ಅವಶ್ಯಕತೆ ಇದೆ. ಇದಕ್ಕೆ ನಗರಸಭೆ ಏನೂ ಸಿದ್ಧತೆ ಮಾಡಿದ ಹಾಗಿಲ್ಲ.
ವ್ಯವಹಾರದ ಕೇಂದ್ರಸ್ಥಾನ: ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ವೃತ್ತಗಳರಸ್ತೆಗಳಲ್ಲಿ ಪ್ರಮುಖ ಅಂಗಡಿ ಮುಂಗಟ್ಟುಗಳಿವೆ. ಇದು ವಾಣಿಜ್ಯ, ವಹಿವಾಟಿನ ವ್ಯವಹಾರಿಕ ಕೇಂದ್ರವೂ ಹೌದು.
ಸಂಜೆ ವೇಳೆಇಡೀ ಹೆದ್ದಾರಿ ಕತ್ತಲಲ್ಲಿ ಮುಳುಗಿರುತ್ತದೆ. ಭಾರಿ ವಾಹನಗಳು, ಬಸ್‌ಗಳು ಸೇರಿ ಇತರ ವಾಹನಗಳು ಕತ್ತಲೆ ಯಲ್ಲಿ ವೇಗ ವಾಗಿ ಸಂಚ ರಿಸುತ್ತವೆ. ಇದರಿಂದ ಪಾದಚಾರಿ ಗಳು ಆತಂಕದಲ್ಲಿ ಸಾಗುವಂತಾಗಿದೆ. ಅಂಗಡಿಗಳ ಬೆಳಕಿನಲ್ಲೇ ಸಾಗಬೇಕಾದ ಅನಿವಾರ್ಯತೆ ಅವರದು.
ನಗರವಾಸಿಗಳ ಪರದಾಟ: ಅನೇಕ ನಗರ ನಿವಾಸಿ ಗಳಿಗೆಮೈಸೂರು, ಬೆಂಗಳೂರಿನಿಂದ ಬಂದು ಬಸ್ ನಿಲ್ದಾಣದಿಂದ ರಾತ್ರಿ ಸಮಯದಲ್ಲಿತಮ್ಮ ಮನೆಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಕತ್ತಲಲ್ಲೇ ಸಂಚರಿಸುವ ದುರ್ದೈವ ಎದುರಾಗಿದೆ. ಪ್ರಮುಖ ರಸ್ತೆಗಳಲ್ಲಿ ಬೀದಿದೀಪಇಲ್ಲ. ಇದೇಮಾರ್ಗದಲ್ಲಿ ಕಳ್ಳರ ಹಾವಳಿ ಇದೆ. ಬೀದಿನಾಯಿಗಳು ಹಾವಳಿಯಿಂದಲೂ ಸವಾರರು, ನಿವಾಸಿಗಳಿಗೆ ಸಮಸ್ಯೆ ಎದುರಿಸುತ್ತಿದ್ದಾರೆ.
‘ಕೇಂದ್ರ ಭೂ ಸಾರಿಗೆ ಮಂತ್ರಾಲಯ 2016–17 ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯಡಿ ₹ 36 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇದು ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರೆಗೆ 60 ಅಡಿಗಳಷ್ಟು ಅಗಲವಿದ್ದ ರಸ್ತೆಯನ್ನು 100 ಅಡಿಗಳವರೆಗೆ ವಿಸ್ತರಣೆ ಮಾಡಲು ಬಳಸಲಾಯಿತು. ಇಲ್ಲಿ ಉತ್ತಮ ರಸ್ತೆಯಾಗಿದೆ. ನಮಗೆಬೀದಿದೀಪದ ಅಗತ್ಯವಿದೆ’ ಎಂದು ಹೇಳುತ್ತಾರೆ ಸ್ಥಳೀಯರು.
ಅಭಿವೃದ್ಧಿಗೊಳಿಸಿರುವ ರಸ್ತೆಗಳಿಗೆ ಬೀದಿದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಕಳೆದ ವರ್ಷದ ಜುಲೈನಲ್ಲಿ ಹಿಂದಿನ ಸಂಸದ ಆರ್.ಧ್ರುವನಾರಾಯಣ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಪುರಸ್ಕೃತ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ವರ್ಷ ಸಂದರೂ ಇನ್ನೂ ಕ್ರಮ ಕೈಗೊಂಡಿಲ್ಲ.
‘ರಸ್ತೆ ವಿಸ್ತರಣೆ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವಿದ್ಯುತ್ ದೀಪ ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿದೆ. ವಿದ್ಯುತ್ ದೀಪ ಅಳವಡಿಕೆ ಜವಾಬ್ದಾರಿ ಅವರಿಗೆ ಸೇರಿದ್ದು’ ಎಂದು ನಗರಸಭೆ ಆಯುಕ್ತ ಎನ್. ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
₹1.90 ಕೋಟಿ ಯೋಜನೆ ವಿಳಂಬ
ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ರಥದ ಬೀದಿಗಳಲ್ಲಿಪಾರಂಪರಿಕ ಶೈಲಿಯ ಕಂಬ ಅಳವಡಿಕೆ ಕಾರ್ಯವನ್ನು ನಗರಸಭೆ ಆರಂಭಿಸಿ ಏಳೆಂಟು ತಿಂಗಳು ಕಳೆದಿದೆ. ಈವರೆಗೂ ಬೀದಿಗಳಲ್ಲಿ ಪರಂಪರೆಯ ದೀಪಗಳು ಬೆಳಕು ಚೆಲ್ಲಿಲ್ಲ.
ಚಾಮರಾಜೇಶ್ವರಸ್ವಾಮಿ ರಥ ಸಾಗುವ ಮಾರ್ಗ, ಗುರುನಂಜಶೆಟ್ಟರ ಛತ್ರ ಮಾರ್ಗವಾಗಿ ವೀರಭದ್ರಸ್ವಾಮಿ ದೇವಸ್ಥಾನ, ಪಟ್ಟಣ ಪೊಲೀಸ್ ಠಾಣೆ, ಭುವನೇಶ್ವರಿ ವೃತ್ತದವರೆಗೆ ಹಳೆಯವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, 72 ಪಾರಂಪರಿಕ ದೀಪಗಳ ಅಳವಡಿಕೆ ಕಾರ್ಯ ನಡೆದಿದೆ. ಕಂಬಗಳನ್ನು ಅಳವಡಿಸಲಾಗಿದೆ.
‘ನೆಲದಡಿಯಲ್ಲಿ ವಿದ್ಯುತ್ ತಂತಿ ಅಳವಡಿಸುವುದು, ಗ್ರಿಲ್ ಅಳವಡಿಕೆ ಸೇರಿದಂತೆ ಇಡೀ ಯೋಜನೆ ಅನುಷ್ಠಾನಕ್ಕೆ ₹ 1.90 ಕೋಟಿ ವೆಚ್ಚವಾಗಲಿದೆ. ಸೆಸ್ಕ್‌ನಿಂದ ಅನುಮತಿ ದೊರೆತ ತಕ್ಷಣ ದೀಪ ಅಳವಡಿಕೆ ಕಾರ್ಯ ನಡೆಯಲಿದೆ’ ಎಂದು ಆಯುಕ್ತ ರಾಜಣ್ಣ ಹೇಳಿದರು.
‘ಒಂದೆರಡು ಪಾರಂಪರಿಕ ದೀಪ ಕಂಬಗಳನ್ನು ಅಳವಡಿಸಬೇಕಾಗಿದೆ. ಸೆಸ್ಕ್‌ನಿಂದ ಅನುಮತಿ ಸಿಕ್ಕಿದ ನಂತರ ಉಳಿದ ಕೆಲಸವನ್ನೂ ಆರಂಭಿಸಿ ದಸರಾ ವೇಳೆಗೆ ಪಾರಂಪರಿಕ ದೀಪ ಬೆಳಗಿಸುವ ಚಿಂತನೆ ಇದೆ’ಎಂದು ಎಇಇ ಸತ್ಯಮೂರ್ತಿ ‘ಪ್ರಜಾವಾಣಿ’ಗೆ ಹೇಳಿದರು.
ಅಪಘಾತ ಸ್ಥಳದಲ್ಲಿ ಸೂಚನಾ ಫಲಕ ಅಗತ್ಯ
ರಾತ್ರಿ ಹೊತ್ತು ಬೆಳಕು ಸರಿ ಇಲ್ಲದೆ ಇರುವುದರಿಂದ ಹಲವು ಕಡೆಗಳಲ್ಲಿ ಸೂಚನಾ ಫಲಕಗಳೂ ಸರಿಯಾಗಿ ಗೋಚರಿಸುವುದಿಲ್ಲ.
‘ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಕೇಂದ್ರ ಸ್ಥಾನದ ತಿರುವುಗಳಲ್ಲಿಅಪಘಾತ ಸ್ಥಳಗಳನ್ನು ಗುರುತಿಸಬೇಕು.ಅಲ್ಲಲ್ಲಿ ಬ್ಯಾರಿಕೇಡ್ ಇಟ್ಟು ರೇಡಿಯಂ ಸ್ಟಿಕ್ಕರ್‌ಗಳನ್ನು ಅಂಟಿಸಿದರೆ ಬೀದಿಯ ವಿದ್ಯುತ್ ದೀಪ ಇಲ್ಲದಿದ್ದರೂ ವಾಹನದ ಬೆಳಕು ಸ್ಟಿಕ್ಕರ್ ಮೇಲೆ ಬಿದ್ದಾಗ ವಾಹನ ಸವಾರರಿಗೆ ಗೊತ್ತಾಗುತ್ತದೆ. ಇದರಿಂದ ಪಾಸಚಾರಿಗಳಿಗೂ ವಾಹನ ಸವಾರರಿಗೂ ಅನುಕೂಲವಾಗಲಿದೆ’ ಎಂದು ಹೇಳುತ್ತಾರೆ ನಗರ ವಾಸಿಗಳು.
**
ಜನರು ಏನಂತಾರೆ?
ಮಹಿಳೆಯರಿಗೆ ತೊಂದರೆ
ಪ್ರತಿನಿತ್ಯ ಮಹಿಳೆಯರು ಸಂಜೆಯ ಹೊತ್ತು ಸಮೀಪದ ಬೀದಿಗಳಿಗೆ ತರಕಾರಿ ಹಾಗೂ ಗೃಹಬಳಕೆ ವಸ್ತುಗಳ ಖರೀದಿಗೆ ಹೊಗಬೇಕಾಗುತ್ತದೆ. ಇದೇ ವೇಳೆ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ ಇಲ್ಲದಿದ್ದರೆ ತೊಂದರೆಗಳು ಎದುರಾಗುತ್ತವೆ. ಕಳ್ಳಕಾಕರ, ಬೀದಿನಾಯಿಗಳ ಹಾವಳಿ ಇರುತ್ತದೆ. ಬೀದಿದೀಪವಿದ್ದರೆ ಇವೆಲ್ಲ ಸಮಸ್ಯೆಗಳಿಂದ ಪಾರಾಗಬಹುದು.
–ಪಾರ್ವತಿ, ಗೃಹಿಣಿ
**
ಪ್ರಯಾಣ ಕಷ್ಟ
ಸಂಜೆ ಸಮಯದಲ್ಲಿ ದೂರದ ಊರುಗಳಿಗೆ ಬಸ್ ಸೌಲಭ್ಯ ಇರುವುದಿಲ್ಲ. ಆಗ ಆಟೊನಲ್ಲಿ ಹೋಗಬೇಕಾಗುತ್ತದೆ. ಒಮ್ಮೊಮ್ಮೆ ಎದುರು ಬರುವ ವಾಹನದ ಬೆಳಕು ನಮಗೆ ಬಿದ್ದಾಗ ರಸ್ತೆ ಕಾಣುವುದಿಲ್ಲ. ನಗರದ ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲಿ ಬೀದಿದೀಪಗಳಿದ್ದರೆ ಇಂತಹ ಸಂದರ್ಭದಲ್ಲಿ ನಮಗೆ ಅನುಕೂಲವಾಗುತ್ತದೆ
–ಪ್ರವೀಣ್, ಆಟೊ ಚಾಲಕ, ಆಲೂರು ಗ್ರಾಮ
**
ಬೀದಿ ದೀಪ ಬೇಕೇಬೇಕು
ಕೆಲಸ ಮುಗಿಸಿ ತಡರಾತ್ರಿ ಹೊರಡುವ ವೇಳೆ ರಸ್ತೆಗಳಲ್ಲಿ ಬೀದಿನಾಯಿಗಳು ಅಡ್ಡಾದಿಡ್ಡಿ ಬಂದು ವಾಹನಕ್ಕೆ ನುಗ್ಗುತ್ತವೆ. ವಾಹನದ ಬೆಳಕು ನೇರವಾಗಿ ಬೀಳುತ್ತದೆ. ಇದರಿಂದ ಅಕ್ಕಪಕ್ಕದಿಂದ ಏನು ಬರುತ್ತವೆ ಎನ್ನುವುದು ತಿಳಿಯುವುದಿಲ್ಲ. ಬೀದಿದೀಪ ಇದ್ದರೆ ಅವುಗಳಿಂದ ಪಾರಾಗಬಹುದು. ಬೀದಿದೀಪಗಳಿಲ್ಲದಿದ್ದರೆ ರಾತ್ರಿ ಸಂಚಾರ ಬಹಳ ಕಷ್ಟ
–ಮಲ್ಲೇಶ್, ವಾಹನ ಸವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.