ಚಾಮರಾಜನಗರ: ನಗರದ ತರಕಾರಿ ಮಾರುಕಟ್ಟೆ ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದ್ದು, ನಗರಸಭೆಯ ನಿರ್ಲಕ್ಷ್ಯದಿಂದಾಗಿ ವ್ಯಾಪಾರಿಗಳೂ ಇಲ್ಲಿ ಮಳಿಗೆಗಳನ್ನು ತೆರೆದಿಲ್ಲ. ಇದರಿಂದಾಗಿ ನಗರಸಭೆಗೆ ಆದಾಯವೂ ನಷ್ಟವಾಗುತ್ತಿದೆ.
ನಗರದ ಹೃದಯಭಾಗದಲ್ಲಿರುವ ಈ ಮಾರುಕಟ್ಟೆಯಲ್ಲಿ 87 ಮಳಿಗೆಗಳಿವೆ. ಆದರೆ, ತರಕಾರಿ ಅಂಗಡಿಗಳಿರುವುದು 25 ಮಾತ್ರ. ಒಬ್ಬೊಬ್ಬ ವ್ಯಾಪಾರಿಯೇ ಎರಡು ಮೂರು ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ವ್ಯಾಪಾರಿಗಳು ಒಂದು ಮಳಿಗೆಗೆ ಬಾಡಿಗೆಯಾಗಿ ದಿನಕ್ಕೆ ₹ 15 ಅನ್ನು ನಗರಸಭೆಗೆ ನೀಡುತ್ತಿದ್ದಾರೆ.
ಮಾರುಕಟ್ಟೆ ಇರುವ ಜಾಗದಲ್ಲೇ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲು ನಗರಸಭೆ ಯೋಚನೆ ರೂಪಿಸಿದೆ. ಇದಕ್ಕಾಗಿ ಮಾರುಕಟ್ಟೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕಾಗಿದೆ. ಆದರೆ, ಜಾಗವನ್ನು ಇನ್ನೂ ನಿಗದಿಪಡಿಸಿಲ್ಲ. ತಾತ್ಕಾಲಿಕವಾಗಿ ಮಾರಮ್ಮನ ದೇವಸ್ಥಾನದ ಬಳಿಗೆ ಸ್ಥಳಾಂತರಿಸಲು ಕಳೆದ ವರ್ಷ ನಗರಸಭೆ ನಿರ್ಧರಿಸಿತ್ತು. ಸ್ಥಳವನ್ನೂ ಗುರುತಿಸಲಾಗಿತ್ತು. ಸ್ಥಳಾಂತರ ಆಗಿರಲಿಲ್ಲ. ಇದೇ ಕಾರಣಕ್ಕೆ ಹೊಸ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ.
ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಚನೆಯಲ್ಲಿರುವುದರಿಂದಲೋ ಏನೋ ನಗರಸಭೆ, ಮಾರುಕಟ್ಟೆಗೆ ಕನಿಷ್ಠ ಮೂಲಸೌಕರ್ಯ ಒದಗಿಸುವ ಮನಸ್ಸು ಮಾಡಿಲ್ಲ.
ಆದಾಯ ಖೋತಾ:ಮೊಟ್ಟೆ ಆಕಾರದ ಮಾರುಕಟ್ಟೆಯನ್ನು 2009ರಲ್ಲಿ ₹ 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. 87 ಮಳಿಗೆಗಳಲ್ಲಿ ಕೇವಲ 25 ಮಳಿಗೆಗಳು ಭರ್ತಿಯಾಗಿರುವುದರಿಂದ ನಗರಸಭೆಯ ಆದಾಯಕ್ಕೂ ಕುಂದುಂಟಾಗಿದೆ. ವ್ಯಾಪಾರಿಗಳು ಮಾರುಕಟ್ಟೆಯತ್ತ ಮುಖಮಾಡದೆ ತಳ್ಳುಗಾಡಿಗಳನ್ನು ಇಟ್ಟುಕೊಂಡು ಚಾಮರಾಜೇಶ್ವರ ದೇವಾಲಯದ ಹಿಂಭಾಗ, ನಗರಸಭಾ ಕಚೇರಿ ಎದುರು ಮತ್ತು ದೊಡ್ಡಂಗಡಿ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.
ಮೂಲಸೌಕರ್ಯ ಕೊರತೆ: ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ.ನೈರ್ಮಲ್ಯ ಹಾಗೂ ಭದ್ರತೆ ಇಲ್ಲದೆ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ದಿನ ಬಾಡಿಗೆ₹ 15 ವಸೂಲಿ ಮಾಡಲು ಮಾತ್ರ ಅಧಿಕಾರಿಗಳು ಬರುತ್ತಾರೆ. ಮೂಲಸೌಕರ್ಯ ಕಲ್ಪಿಸಲು ಮುಂದಾಗುತ್ತಿಲ್ಲ ಎಂಬುದು ವ್ಯಾಪಾರಿಗಳ ದೂರು.
ವಿದ್ಯುತ್ ಸಂಪರ್ಕ ಇಲ್ಲ: ಮಾರುಕಟ್ಟೆ ಮಧ್ಯ ಭಾಗದಲ್ಲಿಮಾತ್ರ ಒಂದು ವಿದ್ಯುತ್ಬಲ್ಪ್ ಹಾಕಲಾಗಿದೆ. ಉಳಿದಮಳಿಗೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಕೆಲವು ವ್ಯಾಪಾರಿಗಳುಯುಪಿಎಸ್ ಅಳವಡಿಸಿಕೊಂಡಿದ್ದಾರೆ.ಇದರಿಂದ ಎಲ್ಲ ಮಳಿಗೆದಾರರಿಗೆ ರಾತ್ರಿವ್ಯಾಪಾರ ಮಾಡುವುದು ಕಷ್ಟವಾಗಿದೆ. ಗ್ರಾಹಕರು ಕೂಡ ರಾತ್ರಿ ವೇಳೆ ಬರುವುದಕ್ಕೆ ಹಿಂಜರಿಯುತ್ತಾರೆ.
ಬೀದಿಬದಿವ್ಯಾಪಾರ: ಬೀದಿ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕುವುದಕ್ಕಾಗಿ ಮಾರುಕಟ್ಟೆ ನಿರ್ಮಿಸಲಾಗಿತ್ತು.ಆದರೀಗ ನಗರಸಭೆ ಮುಂಭಾಗ, ಜೆಎಸ್‌ಎಸ್ ಕಾಲೇಜು ಮುಂಭಾಗ ಹಾಗೂ ಹಳೇ ಮಾರುಕಟ್ಟೆಯಲ್ಲಿ ಮತ್ತೆ ಬೀದಿ ಬದಿ ತರಕಾರಿ ಮಾರಾಟ ಆರಂಭವಾಗಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.
‘ಪ್ರತಿ ನಗರಕ್ಕೆ ತರಕಾರಿ ಮಾರುಕಟ್ಟೆ ಇರಲೇಬೇಕು. ಎಲ್ಲ ವ್ಯಾಪಾರಿಗಳು ಒಂದೇ ಕಡೆ ಇರಬೇಕು. ಬೀದಿ ಬದಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತವಾಗಬೇಕು. ಎಲ್ಲ ಗ್ರಾಹಕರು ಈ ಮಾರುಕಟ್ಟೆಗೆ ಬಂದು ಖರೀದಿ ಮಾಡುವಂತಾಗಬೇಕು’ ಎನ್ನುವುದು ಎಲ್ಲ ವ್ಯಾಪಾರಿಗಳ ಒತ್ತಾಯ.
₹ 1 ಕೋಟಿ ವೆಚ್ಚದಲ್ಲಿ ನವೀಕರಣ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭಾ ಆಯುಕ್ತ ಎಂ.ರಾಜಣ್ಣ ಅವರು,‘ಈಗಿರುವ ತರಕಾರಿ ಮಾರುಕಟ್ಟೆಯನ್ನು ನಗರಸಭೆಯ ‘ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ ಯೋಜನೆ (ಐಡಿಎಸ್‌ಎಂಟಿ)’ ಅಡಿ₹ 1 ಕೋಟಿ ವೆಚ್ಚದಲ್ಲಿ ಆಧುನಿಕವಾಗಿ ನವೀಕರಣಗೊಳಿಸಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಇಲ್ಲಿಹೊಸ ವಾಣಿಜ್ಯ, ಮಾರುಕಟ್ಟೆ ಸಮುಚ್ಚಯ ನಿರ್ಮಾಣವಾಗಲಿದೆ. ಜಿಲ್ಲಾಡಳಿತದಿಂದ ಅನುಮತಿ ಬಂದ ನಂತರ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು’ ಎಂದು ಹೇಳಿದರು.
‘ಈಗಾಗಲೇ, ರಸ್ತೆ ಬದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಮನವರಿಕೆ ಮಾಡಲಾಗಿದೆ. ಸುಮಾರು 100 ಮಳಿಗೆ ಇರುವಂತಹ ಸುಸಜ್ಜಿತ ಆಧುನಿಕ ತರಕಾರಿ ಮಾರುಕಟ್ಟೆ ಇಲ್ಲಿ ಬರಲಿದೆ. ಬೇರೆ ಎಲ್ಲಿಯೂ ಜಾಗವಿಲ್ಲ. ಇದೇ ಜಾಗದಲ್ಲಿ ಮಾರುಕಟ್ಟೆ ನವೀಕರಣಗೊಳಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.
‘ಸುತ್ತಲೂ ಕಾಂಪೌಂಡ್, ಗ್ರಿಲ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲ ಮೂಲ ಸೌಕರ್ಯದೊಂದಿಗೆ ಮಾರುಕಟ್ಟೆಯನ್ನು ನವೀಕರಣಗೊಳಿಸಲಾಗುವುದು. ಬಳಿಕ ಎಲ್ಲ ವ್ಯಾಪಾರಿಗಳೊಂದಿಗೆ ಸಭೆ ಕರೆದು ಈಗಿರುವ ಪ್ರತಿದಿನ ಪಡೆಯುವ ಸುಂಕ₹ 15 ಅನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ವಿವರಿಸಿದರು.
ಮಾರುಕಟ್ಟೆಯೊಳಗೆ ನುಗ್ಗುವಹಂದಿ, ನಾಯಿಗಳು
‘ಮಾರುಕಟ್ಟೆಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. ನಾಲ್ಕೂ ದಿಕ್ಕುಗಳಲ್ಲಿಯೂ ಮುಕ್ತವಾಗಿ ಸಂಚರಿಸಬಹುದು.ಒಳಭಾಗದಲ್ಲಿ ಪ್ರತಿ ದಿನ ಸ್ವಚ್ಛತಾ ಕಾರ್ಯನಡೆಯುವುದಿಲ್ಲ. ಕಟ್ಟಡ ಹಿಂಭಾಗದ ಪ್ರದೇಶ ದುರ್ನಾತದಿಂದ ಕೂಡಿದೆ. ಮಳೆ ಬಿದ್ದರೆ ನೀರು ಸರಾಗವಾಗಿ ಹೋಗುವಂಥ ವ್ಯವಸ್ಥೆ ಕೂಡ ಇಲ್ಲ. ಕಟ್ಟಡಕ್ಕೆ ಗೇಟ್ ವ್ಯವಸ್ಥೆ ಇಲ್ಲ. ಹಂದಿಗಳು, ನಾಯಿಗಳು, ಜಾನುವಾರುಗಳು ನುಗ್ಗುತ್ತವೆ. ಯಾರೂ ಇಲ್ಲವಾದರೆ ಜಾನುವಾರುಗಳು ತರಕಾರಿಯನ್ನು ತಿನ್ನುತ್ತವೆ’ ಎಂದು ವ್ಯಾಪಾರಿಗಳು ಸಮಸ್ಯೆಗಳ ಸರಮಾಲೆಯನ್ನೇ ಮುಂದಿಡುತ್ತಾರೆ.
ಶೌಚಾಲಯ ಇಲ್ಲ: ಶೌಚಾಲಯ ಇಲ್ಲವಾದ್ದರಿಂದ ಮಾರುಕಟ್ಟೆ ಹಿಂಭಾಗವೇಬಯಲು ಶೌಚಾಲಯವಾಗಿದೆ. ಹೀಗಾಗಿ, ಅನೈರ್ಮಲ್ಯ ಉಂಟಾಗಿದ್ದುಸೊಳ್ಳೆಗಳ ಕಾಟ ವಿಪರೀತವಾಗಿದೆ.
ಅಭದ್ರತೆ: ‘ಮಳಿಗೆಗಳಿಗೆ ಭದ್ರತಾವ್ಯವಸ್ಥೆ ಇಲ್ಲ. ರಾತ್ರಿ ವೇಳೆ ತರಕಾರಿಯನ್ನು ಇಟ್ಟು ಹೋಗಲು ಸಾಧ್ಯವಾಗದಂಥ ಪರಿಸ್ಥಿತಿ ಇದೆ. ಚಾವಣಿ ಇಲ್ಲವಾದ್ದರಿಂದನಾವುಪ್ಲಾಸ್ಟಿಕ್ ಶೀಟ್ ಕಟ್ಟಿಕೊಂಡಿದ್ದೇವೆ. ರಾತ್ರಿ ವೇಳೆ ತರಕಾರಿಯನ್ನು ಗುಡ್ಡೆ ಹಾಕಿ ಇಟ್ಟು ಭಯದಲ್ಲೇ ಮನೆಗೆ ಹೋಗುತ್ತೇವೆ. ಪ್ರತಿ ದಿನ ಬಾಡಿಗೆ ವಸೂಲಿ ಮಾಡುವ ನಗರಸಭೆ ಆಡಳಿತ, ಮಾರುಕಟ್ಟೆ ಕಟ್ಟಡಕ್ಕೆ ಸೂಕ್ತ ಭದ್ರತೆ, ವ್ಯವಸ್ಥೆ ಕಲ್ಪಿಸಲು ನಿರ್ಲಕ್ಷ್ಯ ವಹಿಸಿದೆ’ ಎಂದು ವ್ಯಾಪಾರಿಸುರೇಶ್ ಆರೋಪಿಸಿದರು.
ವ್ಯಾಪಾರಿಗಳು, ಗ್ರಾಹಕರು ಏನಂತಾರೆ?
ನವೀಕರಣಗೊಳಿಸಿ
ಮೂಲಸೌಕರ್ಯ ಕಲ್ಪಿಸಿದರೆ ಎಲ್ಲರೂ ಹೆಚ್ಚುವರಿ ಬಾಡಿಗೆ ನೀಡಲು ಸಿದ್ಧರಿದ್ದೇವೆ. ಈಗಿರುವ ಕಟ್ಟಡವನ್ನು ನವೀಕರಣಗೊಳಿಸಬೇಕು. ಎಲ್ಲ ಮಳಿಗೆಗಳು ಭರ್ತಿಯಾಗಬೇಕು. ಇದರಿಂದ ನಗರಸಭೆಗೆ ಹೆಚ್ಚಿನ ಆದಾಯ ಬರುತ್ತದೆ. ಆಯುಕ್ತರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮೂಲಸೌಕರ್ಯ ಕಲ್ಪಿಸಲು ಹಾಗೂ ಸ್ವಚ್ಛತೆ ಕಾಪಾಡಲು ಮುಂದಾಗಬೇಕು
– ಸುರೇಶ್, ತರಕಾರಿ ಮಾರಾಟಗಾರ
*
ಅಧಿಕಾರಿಗಳು ಮನಸ್ಸು ಮಾಡಬೇಕು
ಈಗ ಜನಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲ. ಆಯುಕ್ತರು ಮನಸ್ಸು ಮಾಡಿದರೆ ಸುಸಜ್ಜಿತ ಮಾರುಕಟ್ಟೆ ಮಾಡಲು ಅವಕಾಶವಿದೆ. ಸ್ಥಳೀಯ ಆಡಳಿತ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಮನಸ್ಸು ಮಾಡಬೇಕು. ಇದರಿಂದ ನಗರಸಭೆಗೆ ಉತ್ತಮ ಆದಾಯವೂ ಬರಲಿದೆ
– ವರದರಾಜು, ಗ್ರಾಹಕ
*
ಪರ್ಯಾಯ ವ್ಯವಸ್ಥೆ ಕಲ್ಪಿಸಿ ನವೀಕರಣ ಮಾಡಲಿ
ನವೀಕರಣಗೊಳಿಸಲು ಮುಂದಾದರೆ ಇಲ್ಲಿನ ಕಾಯಂ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಬಳಿಕ ನವೀಕರಣಕ್ಕೆ ಮುಂದಾಗಬೇಕು. ಕಿರಿದಾದ ಮಳಿಗೆಯನ್ನು ಅಗಲ ಮಾಡಬೇಕು. ಎಲ್ಲ ವ್ಯಾಪಾರಿಗಳು ಒಂದೇ ಕಡೆ ವ್ಯಾಪಾರ ನಡೆಸುವಂತೆ ಮಾಡಲು ಕ್ರಮ ವಹಿಸಬೇಕು
– ಭಾಗ್ಯಮ್ಮ, ವ್ಯಾಪಾರಿ ಹಾಗೂ ನಗರಸಭೆ ಸದಸ್ಯೆ
*
ಮೂಲಸೌಕರ್ಯಕ್ಕೆ ಒತ್ತು ನೀಡಬೇಕು
ಮಹಿಳೆಯರು, ವೃದ್ಧ ವ್ಯಾಪಾರಿಗಳಿರುವ ತರಕಾರಿ ಮಳಿಗೆಗೆ ಮೊದಲು ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕಿದೆ. ಮಳೆ, ಬಿಸಿಲಿಗೆ ತರಕಾರಿ ಸೊಪ‍್ಪುಗಳು ಹಾಳಾಗಬಾರದು. ಸುಸಜ್ಜಿತ ಕಟ್ಟಡ ನಿರ್ಮಿಸುವ ಜೊತೆಗೆ ಶೌಚಾಲಯ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು
– ನೀಲಮ್ಮ, ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.