ಯಳಂದೂರು: ಇದೀಗ ಚಿಟ್ಟೆಗಳ ಸಮಯ. ನಮ್ಮ ಸುತ್ತಲಿನ ಪರಿಸರದ ನಡುವೆ ಕಣ್ಣು ಹಾಯಿಸಿದೆಲ್ಲೆಡೆ ಒಂದಿಲ್ಲೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿರುತ್ತವೆ.ಬಣ್ಣಗಳು, ಚುರುಕುತನದಿಂದ ನೋಡುಗರ ಮನಸೆಳೆಯುವ ಚಿಟ್ಟೆಗಳು ಕಾನನದ ನಡುವೆ ಸ್ವಚ್ಛಂದವಾಗಿ ವಿಹರಿಸುವ ಕಾಲ ಇದು.
ವಿಶಾಖ ಮಳೆ ಆರಂಭವಾಗುತ್ತಲೇ ಇವುಗಳ ಚಟುವಟಿಕೆ ಇನ್ನಷ್ಟು ಬಿರುಸು ಪಡೆಯುತ್ತದೆ. ಚಳಿಯೂ ನಿಧಾನಕ್ಕೆ ಆವರಿಸುತ್ತಿದೆ. ಎಲ್ಲೆಡೆ ಹಚ್ಚ ಹಸಿರು ಕಂಗೊಳಿಸುತ್ತಿದೆ.ಈ ಸಂಧಿ ಕಾಲದಲ್ಲಿ ಕೋಶದಲ್ಲಿ ಬಂಧಿಯಾಗಿದ್ದ ಚಿಟ್ಟೆ–ಕೀಟಗಳು ಕಳಚಿಕೊಂಡು ಹೂ ಅರಸಿ ಸ್ವಚ್ಛಂದವಾಗಿ ವಿಹರಿಸಲು ಆರಂಭಿಸಿವೆ.
ತಾಲ್ಲೂಕಿನ ಕೆಸ್ತೂರು, ಯರಿಯೂರು ಕೆರೆ, ಕೃಷ್ಣಯ್ಯನ ಕಟ್ಟೆ ದಂಡೆಗಳಲ್ಲಿ ಈಗ ಅಡ್ಡಾಡಿದರೆ ಚಿಟ್ಟೆಗಳ ದಿಬ್ಬಣವನ್ನೇ ಕಾಣಬಹುದು. ಗಂಡು–ಹೆಣ್ಣುಗಳ ಒಲುಮೆಯಲ್ಲಿ ಗೆದ್ದ ಜೋಡಿಗಳು ಇಲ್ಲಿನ ನಿಸರ್ಗದಲ್ಲಿ ಮೊಟ್ಟೆ ಇಡಲು ಕುಳಿತಾಗ ಹತ್ತಿರದಿಂದ ವೀಕ್ಷಿಸಬಹುದು.
ಪರಿಸರ ಮಾಪಕ: ‘ಶುದ್ಧ ನೀರು ಹುಡುಕುತ್ತ ಅಲೆಯುವ ಬಹಳಷ್ಟು ಚಿಟ್ಟೆಗಳು ಪರಿಸರದ ಮಾಪಕಗಳಾಗಿ ಕೆಲಸ ಮಾಡುತ್ತವೆ. ಮಳೆ ಉತ್ತಮವಾಗಿ ಇದ್ದರೆ ಬೆಳೆ, ಬೇಲಿ, ಹೂ ಮತ್ತು ಹಸಿರು ವಿಸ್ತರಿಸಿದರೆ ಇವುಗಳ ಜೀವದಗಲ ವಿಸ್ತರಿಸುತ್ತದೆ. ಇತ್ತೀಚಿಗೆ ಕೃಷಿಗೆ ಸಿಂಪಡಿಸುವ ಕ್ರಿಮಿನಾಶಕ ಇವುಗಳ ಆವಾಸ ಕುಸಿಯಲು ಕಾರಣವಾಗಿದೆ’ ಎನ್ನುತ್ತಾರೆ ಸಂಶೋಧಕರು.
ಚಿಟ್ಟೆಗಳು ಮಕ್ಕಳಲ್ಲಿ ಖುಷಿ ಉಂಟುಮಾಡುವ ಜೀವಿಗಳಲ್ಲಿ ಒಂದು. ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ ಕಂಡ ಮಕ್ಕಳು ಲೋಕವನ್ನೇ ಮರೆಯುತ್ತಾರೆ. ಗ್ರಾಮೀಣ ಭಾಗದಲ್ಲಿ ಚೂಟಿ ಮಕ್ಕಳು ಚಿಟ್ಟೆಯ ಅದರಲ್ಲೂ ಏರೋಪ್ಲೇನ್ ಚಿಟ್ಟೆಯ ಬಾಲಕ್ಕೆ ದಾರ ಕಟ್ಟಿ ಆಟವಾಡುವುದನ್ನು ನೋಡುವುದೇ ಚೆಂದ.
ಕೆಲವು ಕೀಟಗಳು ತಮ್ಮಲ್ಲಿನ ವಿಶೇಷ ಸಾಮರ್ಥ್ಯದಿಂದ ಗಮನ ಸೆಳೆಯುತ್ತವೆ. ಏರೋಪ್ಲೇನ್ ಚಿಟ್ಟೆ ಅವುಗಳಲ್ಲೊಂದು.ಡ್ರ್ಯಾಗನ್ ಫ್ಲೈ ಕೀಟ ಸಮೂಹಕ್ಕೆ ಸೇರಿದ ಈ ಚಿಟ್ಟೆ, ಗಂಟೆಗೆ 80 ಕಿ.ಮೀ ವೇಗದಲ್ಲಿ ಹಾರುತ್ತದೆ!
‘ಜೇನು ಬಣ್ಣದ ದೇಹ, ಗಡುಸಾದ ಪಾರದರ್ಶಕ ರೆಕ್ಕೆ ಹೊಂದಿರುವ ಈ ಚಿಟ್ಟೆ, ದಿನದಲ್ಲಿ ಸೊಳ್ಳೆಗಳ ನೂರು ಮೊಟ್ಟೆಗಳನ್ನು ಭಕ್ಷಿಸುತ್ತದೆ. ಅಷ್ಟೇ ಅಲ್ಲದೇ, ಇದು ಕೆಲ ಜಲಚರ ಜೀವಿಗಳ ಆಹಾರದ ಮೂಲವೂ ಆಗಿದೆ’ ಎಂದು ಏಟ್ರೀ ವಿಜ್ಞಾನಿ ಡಾ.ಸಿದ್ದಪ್ಪ ಶೆಟ್ಟಿ ಹೇಳುತ್ತಾರೆ.
ಚಳಿಗಾಲದ ನಿರ್ಮಲ ಆಕಾಶ ಉದಯಿಸುತ್ತಲೇ ಭೂ ಮೇಲ್ಮೈಯಿಂದ ಕಾಣೆಯಾಗುವ ಏರೋಪ್ಲೇನ್ ಮತ್ತು ಪಾತರಗಿತ್ತಿ ಕುಟುಂಬಗಳನ್ನು ಮುಂಜಾನೆ ಮತ್ತು ಸಂಜೆಯ ಎಳೆ ಬಿಸಿಲಿನಲ್ಲಿ ಕಾಣಬಹುದು. ನವೆಂಬರ್ ಅಂತ್ಯದತನಕ ನಿಸರ್ಗದಲ್ಲಿ ಹಾರಾಡುವ ವರ್ಣ ವೈವಿಧ್ಯದ ಕೀಟ ಕೂಟದ ರೋಚಕತೆ ಕಾಣಲು ಕೆರೆದಂಡೆಗಳು ಸೂಕ್ತ ತಾಣ.
ಬಿಆರ್‌ಟಿ ವಿಶೇಷ
‘ಭಾರತದ ದೊಡ್ಡಗಾತ್ರದ ಚಿಟ್ಟೆ ಸದರ್ನ್ ಬರ್ಡ್‌ವಿಂಗ್ ಅನ್ನು ನಸುಕಿನಲ್ಲಿ ಪತ್ತೆ ಮಾಡಬಹುದು. ಮರಗಳ ಎತ್ತರಕ್ಕೆ ಹಾರಾಡುವ ಸಾಮರ್ಥ್ಯ ಹೊಂದಿರುವ ಇವು ಮಕರಂದ ಹೀರುವುದಕ್ಕಾಗಿ ಕೆಳಕ್ಕೆ ಧಾವಿಸುತ್ತವೆ. ಅಟ್ಲಾಸ್ ಪತಂಗ ಎಂದು ಕರೆಯುವ ಇನ್ನೊಂದು ಚಿಟ್ಟೆ ರೇಷ್ಮೆ ಸಂಕುಲದ ಸಮೀಪ ಸಂಬಂಧಿ. ಪರಿಸರದ ಬಣ್ಣವನ್ನೇ ಧರಿಸಿ ರೆಕ್ಕೆ ಅಗಲಿಸಿ ಕುಳಿತಿರುತ್ತದೆ. ಪತ್ತೆ ಹಚ್ಚುವುದು ಕಷ್ಟ. ಈ ಎರಡೂ ಚಿಟ್ಟೆಗಳನ್ನು ಪಶ್ಚಿಮಘಟ್ಟ, ಬಿಆರ್‌ಟಿ ಕಾಡುಗಳಲ್ಲಿ ಗುರುತಿಸಬಹುದು’ ಎಂದು ಸಸ್ಯ ಸಂಶೋಧಕ ರಾಮಾಚಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.