ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿರುವ ಸ್ಮಾಶಾನದ ಬಳಿ ಇರುವ ಐತಿಹಾಸಿಕ ರಾಮೇಶ್ವರ ದೇವಾಲಯ ಜೀರ್ಣಾವಸ್ಥೆ ತಲುಪಿ ಕಳೆಗುಂದಿದೆ.
14ನೇ ಶತಮಾನದಲ್ಲಿ ನಿರ್ಮಾಣವಾಗಿರುವ ರಾಮೇಶ್ವರ ದೇವಾಲಯಕ್ಕೆ 700 ವರ್ಷಗಳ ಇತಿಹಾಸವಿದೆ. ವಾಸ್ತು ಶೈಲಿಯನ್ನು ಗಮನಿಸಿದರೆ, ಚೋಳರ–ಹೊಯ್ಸಳರ ಕಾಲದಲ್ಲಿ ಈ ದೇವಾಲಯ ಬೆಳವಣಿಗೆ ಆಗಿದೆ ಎಂದು ಹೇಳುತ್ತಾರೆ ಸಂಶೋಧಕರು. ವಿಜಯನಗರ ರಾಜರ ಆಡಳಿತ ಕಾಲದಲ್ಲಿ ಈ ದೇವಾಲಯಕ್ಕೆ ದಾನ ನೀಡಿರುವ ಅಂಶ ಶಾಸನದಲ್ಲಿ ಉಲ್ಲೇಖವಾಗಿದೆ.ದೇವಾಲಯದ ಸೇವೆಗಾಗಿ ಅಥವಾ ನಿರ್ವಹಣೆಗಾಗಿ ಮಡಹಳ್ಳಿ ಗ್ರಾಮವನ್ನು ದಾನವಾಗಿ ನೀಡಲಾಗಿತ್ತು.ದೇವಸ್ಥಾನದ ತಳಭಾಗದಲ್ಲಿ ಶಾಸನ ಇದೆ. ಎಪಿಗ್ರಾಫಿಯಾ ಕರ್ನಾಟಿಕಾದಲ್ಲಿ ಈ ಶಾಸನದ ಉಲ್ಲೇಖವೂ ಇದೆ.
ಪ್ರಸ್ತುತ ದೇವಸ್ಥಾನದ ಗರ್ಭಗುಡಿಯಲ್ಲಿ ಶಿವಲಿಂಗ ಇಲ್ಲ. ಪೀಠ ಮಾತ್ರ ಇದೆ. ಇಲ್ಲಿನ ಶಿವಲಿಂಗವನ್ನು ಪಟ್ಟಣ ಒಳಗಡೆ ಇರುವ ಶಿವಾಲಯಲ್ಲಿ ಇಡಲಾಗಿದೆ ಎಂದು ಕೆಲವರು ಹೇಳುತ್ತಾರೆ.
ದೇವಾಲಯವು ಅಂತರಾಳ, ನವರಂಗವನ್ನು ಹೊಂದಿದೆ. ನವರಂಗದ ಕಂಬಗಳಲ್ಲಿ ಕೆತ್ತಲಾಗಿರುವ ನೃತ್ಯ ಮಾಡುತ್ತಿರುವ ಭಂಗಿಯ ಮಹಿಳೆಯರ ಶಿಲ್ಪಗಳು ಮನಮೋಹಕವಾಗಿವೆ. ಹಿಂದಿನ ಕಾಲದಲ್ಲಿ ಇಲ್ಲಿ ನೃತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದವು ಎಂಬ ಬಗ್ಗೆ ಶಾಸನದಲ್ಲಿ ಪ್ರಸ್ತಾಪವಿದೆ. ಇಲ್ಲಿ ಪ್ರದರ್ಶನ ನೀಡುತ್ತಿದ್ದ ನೃತ್ಯಗಾರ್ತಿಯರಿಗೆ 30 ಗದ್ಯಾಣವನ್ನು ನೀಡಲಾಗುತ್ತಿತ್ತಂತೆ.
ರಾಮೇಶ್ವರ ದೇವಾಲಯದ ಸುತ್ತಮುತ್ತ 8ರಿಂದ 9 ದೇವಾಲಯಗಳು ಇದ್ದವು. ವಿಷ್ಣು, ಶಿವ, ಶಕ್ತಿ ದೇವಾಲಯಗಳೂ ಇದ್ದವು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.
‘ಈ ದೇವಾಲಯದ ಪಕ್ಕದಲ್ಲಿ ಇರುವ ಪರವಾಸು, ಕಮಲವಲ್ಲಿ, ಸಪ್ತಮಾತ್ರಿಕೆ ದೇವಾಲಯಗಳ ಅಭಿವೃದ್ಧಿಗೆ ಹಿಂದೆ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಅನುದಾನ ನೀಡಿದ್ದರು. ಅವುಗಳ ಪುನರ್ ನಿರ್ಮಾಣ ಕಾರ್ಯ 80ರಷ್ಟು ಭಾಗ ಮುಗಿದಿದೆ’ ಎಂದು ಹೇಳುತ್ತಾರೆ ಸಂಶೋಧಕ ಡಾ. ಮಣಿಕಂಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಜೀರ್ಣಾವಸ್ಥೆಯಲ್ಲಿ ದೇವಾಲಯ: ಪೂಜಾ ಕೈಂಕರ್ಯಗಳು ನಡೆಯದೇ ಇರುವುದರಿಂದ ದೇವಾಲಯ ಜೀರ್ಣಾವಸ್ಥೆ ತಲುಪಿದೆ. ಸುತ್ತ ಮುತ್ತ ಹುಲ್ಲು, ಕಳೆ ಬೆಳೆದು ಪಾಳು ಬಿದ್ದಿದೆ. ಕುಡುಕರು, ಪುಂಡರು ತಮ್ಮ ಅನೈತಿಕ ಚಟುವಟಿಕೆಗಳಿಗೆ ಈ ಜಾಗವನ್ನು ಬಳಸುತ್ತಿದ್ದಾರೆ.
‘ಕಾಲ ಗರ್ಭದಲ್ಲಿ ಸವೆದು ಹೋಗುತ್ತಿರುವ ದೇವಾಲಯವನ್ನು ತುರ್ತಾಗಿ ರಕ್ಷಣೆ ಮಾಡಬೇಕಾದ ಅಗತ್ಯವಿದೆ.ಪುರಾತತ್ವ ಇಲಾಖೆ ಅಥವಾ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಈ ಬಗ್ಗೆ ಗಮನ ಹರಿಸಿ ದೇವಾಲಯದ ಸಂರಕ್ಷಣೆಗೆ ಮನಸ್ಸು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.