ADVERTISEMENT

ಮಹದೇಶ್ವರ ಬೆಟ್ಟ: ಸಂಕ್ರಾಂತಿ ಇಲ್ಲಿ ಗೋವುಗಳ ಹಬ್ಬ!

ಜಿ ಪ್ರದೀಪ್ ಕುಮಾರ್
Published 14 ಜನವರಿ 2024, 7:22 IST
Last Updated 14 ಜನವರಿ 2024, 7:22 IST
ಸಂಕ್ರಾಂತಿ ಸಮಯದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಗೋವುಗಳನ್ನು ಸಿಂಗರಿಸಿ ಪೂಜಿಸಲಾಗುತ್ತದೆ
ಸಂಕ್ರಾಂತಿ ಸಮಯದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಗೋವುಗಳನ್ನು ಸಿಂಗರಿಸಿ ಪೂಜಿಸಲಾಗುತ್ತದೆ   

ಮಹದೇಶ್ವರ ಬೆಟ್ಟ: ಸುಗ್ಗಿ ಹಬ್ಬ ಸಂಕ್ರಾಂತಿ ಮನುಷ್ಯರಿಗಷ್ಟೇ ಮೀಸಲಲ್ಲ. ಆಕಳುಗಳಿಗೂ ಇದು ಸಂಭ್ರಮದ ಹಬ್ಬ.

ಬೆಟ್ಟ ವ್ಯಾಪ್ತಿಯ ಗಡಿಗ್ರಾಮಗಳಲ್ಲಿ ಈಗಲೂ ಹಳೆಯ ಪದ್ಧತಿಯಂತೆ ಜಾನುವಾರು ಕೇಂದ್ರಿತವಾಗಿ ಸಂಕ್ರಾಂತಿ ಆಚರಿಸಲಾಗುತ್ತಿದೆ. ಅವರಿಗೆ ಇದು ಗೋವುಗಳ ಹಬ್ಬ. ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಗುಡ್ಡಗಾಡು, ಕಾಡಂಚಿನ ಪ್ರದೇಶದ ಜನರು ಉಳಿದೆಲ್ಲ ಹಬ್ಬಗಳಿಗಿಂತ ಸಂಕ್ರಾಂತಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. 

ಇಲ್ಲಿ ಹಬ್ಬದ ಸಂಭ್ರಮ ಹತ್ತು ದಿನಗಳ ಹಿಂದೆಯೇ ಆರಂಭವಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿಯಲು ಶುರುಮಾಡುತ್ತಾರೆ. ಮಾಂಸಾಹಾರ ಸೇವನೆ ಮಾಡುವವರು ವರ್ಷಾರಂಭದಿಂದಲೇ ಮಾಂಸಾಹಾರ ಸೇವನೆ ತ್ಯಜಿಸುತ್ತಾರೆ. 

ADVERTISEMENT

ನಾಲ್ಕು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಮೊದಲನೇ ದಿನ ಕಾಪು ಕಟ್ಟು ಹಬ್ಬ. ಮೊದಲ ದಿನ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಐದು ರೀತಿಯ ಸೊಪ್ಪುಗಳನ್ನು ( ಅಣ್ಣೆ ಸೊಪ್ಪು, ಉತ್ತರಾಣಿ ಸೊಪ್ಪು, ಆವರಿಕೆ (ತಂಗಡಿ) ಸೊಪ್ಪು, ತುಂಬೆ ಹೂ, ಬಿಳಿಹುಂಡಿ ಹೂ) ಕಟ್ಟು ಕಟ್ಟಿ ಬಾಗಿಲಿನ ಮುಂಭಾಗ, ರಾಗಿ ಹುಲ್ಲಿನ ಮೆದೆ, ದನದ ಕೊಟ್ಟಿಗೆ ಇನ್ನಿತರ ಕಡೆಗಳಲ್ಲಿ ಹಾಕಲಾಗುತ್ತದೆ. ನಂತರ ರಾಗಿ ಮೆದೆಗೆ ಪೂಜೆ ಮಾಡುತ್ತಾರೆ.

ಎರಡನೇ ದಿನ ತುಂಬಿದ ಹಬ್ಬ. ಮಕರ ಸಂಕ್ರಾಂತಿ ದಿನ ಇದನ್ನು ಆಚರಿಸಲಾಗುತ್ತದೆ. ಅಂದು ಬೆಳಗಿನಿಂದಲೇ ಉಪವಾಸವಿದ್ದು, ಮನೆಯಲ್ಲಿ ಪೂಜೆ ನೆರವೇರಿಸಿ ಬಗೆ ಬಗೆಯ ಭಕ್ಷ್ಯಗಳನ್ನು ಸಿದ್ಧ ಮಾಡಿ ಪೂರ್ವಜರಿಗೆ ಎಡೆ ಇಟ್ಟು, ಹೊಸ ಬಟ್ಟೆಗಳನ್ನು ಸಮರ್ಪಿಸಿ ನಂತರ ಮನೆಯವರು ಆಹಾರ ಸೇವಿಸುತ್ತಾರೆ.

ಹಬ್ಬದ ಮೂರನೇ ದಿನ ಗೋವುಗಳಿಗೆ ಮೀಸಲು. ‌ಗೋವುಗಳನ್ನು ಸಾಕಿರುವವರು ಹಾಗೂ ರೈತರು ಈ ದಿನ ಬೆಳಿಗ್ಗೆಯೇ ಗೋವುಗಳನ್ನು ತೊಳೆದು ಶೃಂಗಾರ ಮಾಡಿ ವಿಶೇಷ ಪೂಜೆ ಮಾಡುತ್ತಾರೆ. ಹಬ್ಬದ ಅಡುಗೆ ಸಿದ್ಧಪಡಿಸಿ ಮೊದಲು ಹಸುವಿಗೆ ನೀಡಿ, ಕೊಟ್ಟಿಗೆಯಿಂದ ಹೊರ ಹೋಗುವ ದಾರಿಯಲ್ಲಿ ಒನಕೆಯನ್ನು ಇಟ್ಟು ಗೋವುಗಳನ್ನು ದಾಟಿಸಿ ಮೇಯಲು ಬಿಡುತ್ತಾರೆ. ನಂತರ ಸಂಜೆಯವರೆಗೆ ಕಾದು ಗೋವುಗಳು ಬರುವಂತಹ ಸಮಯದಲ್ಲಿ ಹಾದಿ ಮಧ್ಯೆ ಬೆಂಕಿ ಹಾಕಿ ಕಿಚ್ಚು ಹಾಯಿಸಿ ಗೋವುಗಳನ್ನು ಬರಮಾಡಿಕೊಳ್ಳುತ್ತಾರೆ.

ನಾಲ್ಕನೇ ದಿನ ಈ ದಿನ ‘ಮನುಷ್ಯರ ಹಬ್ಬ’ ಎಂದು ಆಚರಿಸಲಾಗುತ್ತದೆ. ಈ ದಿನ ತಮಗೆ ಇಷ್ಟವಾದ (ಮಾಂಸ ಆಹಾರ ಸೇವಿಸುವವರು) ಮಾಂಸಾಹಾರವನ್ನು ಸೇವಿಸುವುದರ ಮೂಲಕ ಹಾಗೂ ಸಸ್ಯಾಹಾರಿಗಳು ಖಾರ ಖಾದ್ಯಗಳನ್ನು ಸೇವಿಸುವುರ ಮೂಲಕ ಹಬ್ಬಕ್ಕೆ ಮಂಗಳ ಹಾಡುತ್ತಾರೆ. 

‘ಗೋವಿನ ಹಬ್ಬವೇ ವಿಶೇಷ’
ನಾಲ್ಕು ದಿನ ಹಬ್ಬ ಆಚರಿಸಿದರೂ ಮೂರನೇ ದಿನದ ಆಚರಣೆಯೇ ವಿಶೇಷ.  ‘ಸಂಕ್ರಾಂತಿ ಹಬ್ಬದಲ್ಲಿ ನಾವು ಗೋವುಗಳಿಗೆ ವಿಶೇಷ ಪ್ರಾತಿನಿಧ್ಯ ನೀಡುತ್ತೇವೆ. ನಾಲ್ಕೂ ದಿನಗಳಲ್ಲಿ ಗೋವುಗಳ ಹಬ್ಬವೇ ನಮಗೆ ವಿಶೇಷ. ಹಬ್ಬದ ವೇಳೆಗೆ ನಾವು ಬೆಳೆದ ಬೆಳೆಗಳನ್ನು ಕೊಯ್ಲು ಮಾಡಿ ಒಕ್ಕಣೆ ಮಾಡಿರುತ್ತೇವೆ. ವರ್ಷ ಪೂರ್ತಿ ನಮಗಾಗಿ ದುಡಿಯುವ ಗೋವುಗಳಿಗೆ ಈ ಸಂದರ್ಭದಲ್ಲಿ ಜಳಕ ಮಾಡಿಸಿ ವಿವಿಧ ಹೂ ಗಳಿಂದ ಸಿಂಗರಿಸಿ ಅವುಗಳಿಗೆ ಸಿಹಿ ಖಾದ್ಯಗಳನ್ನು ನೀಡಿ (ಕಬ್ಬು ಸಿಹಿ ಪೊಂಗಲ್ ಬೆಲ್ಲ ಇನ್ನಿತರ) ತೃಪ್ತಿಯಾಗುವಷ್ಟು ತಿನ್ನಿಸುತ್ತೇವೆ’ ಎಂದು ಅರಬಗೆರೆ ಗ್ರಾಮದ ರೈತ ಮುನಿಮಾರ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.