ಯಳಂದೂರು: ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಸಂದಾಯವಾಗುವ ನರೇಗಾ ವೇತನ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಹಾಗೂ ಒಎಪಿ ಪಿಂಚಣಿ ಹಣವನ್ನು ಬ್ಯಾಂಕ್ ಸಿಬ್ಬಂದಿ ಸಾಲದ ಹಣಕ್ಕೆ ಜಮಾ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಮುಖಂಡರು ಎಸ್‌ಬಿಐ ಬ್ಯಾಂಕ್ ಶಾಖೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ‘ಬಹಳಷ್ಟು ಮಹಿಳೆಯರು, ಕಾರ್ಮಿಕರು ಮತ್ತು ಅನಕ್ಷರಸ್ಥರು ಬ್ಯಾಂಕ್‌ಗಳಲ್ಲಿ ಖಾತೆ ಆರಂಭಿಸಿದ್ದಾರೆ. ನೇರ ಕಾರ್ಯಾಚರಣೆ ಮೂಲಕ ಸರ್ಕಾರದ ಯೋಜನೆಗಳ ಆರ್ಥಿಕ ನೆರವು ಖಾತೆದಾರರಿಗೆ ಪೂರೈಕೆಯಾಗುತ್ತದೆ. ಆದರೆ, ಠೇವಣಿದಾರರ ಖಾತೆ ಸೇರುವ ಹಣವನ್ನು ಸಾಲದ ಕಂತಿಗೆ ಜಮಾ ಮಾಡಲಾಗುತ್ತದೆ. ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳಕ್ಕೆ ಲೀಡ್ ಬ್ಯಾಂಕ್ ಮುಖ್ಯಸ್ಥರನ್ನು ಕರೆಯಿಸಬೇಕು. ಹಣವನ್ನುಖಾತೆಗಳಿಗೆ ವಾಪಸ್ ಹಾಕಬೇಕು’ ಎಂದು ಆಗ್ರಹಿಸಿದರು.
ಗ್ರಾಹಕರು ಬ್ಯಾಂಕ್‌ಗೆ ಬಂದಾಗ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ಮಾತನಾಡಿಸುವುದಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಪರಿತಪಿಸುವಂತಾಗಿದೆ. ಸರಿಯಾದ ಸಮಯಕ್ಕೆ ನೌಕರರು ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ, ವ್ಯವಸ್ಥಾಪಕರು ಗ್ರಾಹಕರ ಹಣವನ್ನು ಯಾವುದೇ ಕಾರಣಕ್ಕೂ ‘ಹೋಲ್ಡ್’ ಮಾಡಬಾರದು. ಕಂಪ್ಯೂಟರ್‌ಗಳಲ್ಲಿ ಇಂತಹ ತಂತ್ರಾಂಶಗಳನ್ನು ಬಳಸಬಾರದು ಎಂದು ಅವರು ಒತ್ತಾಯಿಸಿದರು.
ಎಸ್‌ಬಿಐ ವ್ಯವಸ್ಥಾಪಕಿ ಸೌಮ್ಯ ಮಾತನಾಡಿ, ಪಿಎಂ ಕಿಸಾನ್ ಹಣ ‘ಅನ್ ಹೋಲ್ಡ್’ ಮಾಡಿ ರೈತರು ಮತ್ತು ಗ್ರಾಹಕರಿಗೆ ನೆರವಾಗುವ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಪ್ರಮುಖರಾದ ಸಿದ್ದಲಿಂಗಸ್ವಾಮಿ, ಸ್ವಾಮಿಗೌಡ, ರಾಜಣ್ಣ, ಬಸವಣ್ಣ, ಚೇತನ್, ಮರಿಸ್ವಾಮಪ್ಪ, ನಾಗೇಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.