ADVERTISEMENT

ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸುಂದರ್‌ ನೇಮಕ

ಪಕ್ಷ ಸಂಘಟನೆಯೇ ಗುರಿ, ಎಲ್ಲರ ಸಹಕಾರ ಇದೆ – ಹೊಸ ಅಧ್ಯಕ್ಷರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 15:37 IST
Last Updated 28 ಜನವರಿ 2020, 15:37 IST
ಆರ್‌.ಸುಂದರ್‌
ಆರ್‌.ಸುಂದರ್‌   

ಚಾಮರಾಜನಗರ: ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆರ್‌.ಸುಂದರ್‌ ಅವರನ್ನು ನೇಮಕ ಮಾಡಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಮಂಗಳವಾರ 12 ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನು ನೇಮಕಮಾಡಿದ್ದು, ಅದರಲ್ಲಿ ಚಾಮರಾಜನಗರವೂ ಒಂದು.

ಆರ್‌.ಸುಂದರ್‌ ಅವರು 28 ವರ್ಷಗಳಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು, 2007–2010ರ ವರೆಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಎರಡು ಬಾರಿ ರಾಜ್ಯ ಬಿಜೆಪಿಯ ಪರಿಶಿಷ್ಟ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಟೌನ್‌ ಅಧ್ಯಕ್ಷರಾಗಿ, ಮೂರು ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸುಂದರ್‌ ಅವರು ಚಾಮರಾಜನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು.

ADVERTISEMENT

ಐದು ಹೆಸರುಗಳು: ಜಿಲ್ಲೆಯ ನೂತನ ಅಧ್ಯಕ್ಷರ ಹುದ್ದೆಗೆ ಐದು ಹೆಸರುಗಳು ಕೇಳಿ ಬಂದಿದ್ದವು. ಸುಂದರ್‌ ಅವರಲ್ಲದೆ, ನಾಗಶ್ರೀ ಪ್ರತಾಪ್‌, ವೃಷಭೇಂದ್ರ, ನಿಜಗುಣ ರಾಜು ಮತ್ತು ಡಾ.ಬಾಬು ಅವರು ಕೂಡ ಪ್ರಯತ್ನಿಸಿದ್ದರು. ಐವರ ಹೆಸರುಗಳನ್ನು ವರಿಷ್ಠರಿಗೆ ಕಳುಹಿಸಲಾಗಿತ್ತು. ವರಿಷ್ಠರು ಎಲ್ಲರೊಂದಿಗೂ ಮಾತನಾಡಿ ಅಭಿಪ್ರಾಯ ಪಡೆದು, ಅಂತಿಮವಾಗಿ ಸುಂದರ್‌ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸುವ ಉದ್ದೇಶದಿಂದ ಈ ನೇಮಕ ಮಾಡಲಾಗಿದೆ. ಪಕ್ಷದಲ್ಲಿ ಸುಂದರ್‌ ಹಿರಿಯರು. ಸಂಘಟನೆಯ ಅನುಭವವೂ ಹೆಚ್ಚಿದೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ಇದೆ. ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ’ ಎಂದು ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ಸ್ಥಾನಗಳನ್ನು ಗೆಲ್ಲುವ ಗುರಿ’
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸುಂದರ್‌ ಅವರು, ‘ಆಯ್ಕೆಯಾಗುವ ನಿರೀಕ್ಷೆ ಇತ್ತು. ಇನ್ನೂ ನಾಲ್ವರು ಇದ್ದುದರಿಂದ, ಯಾರೇ ಆಯ್ಕೆಯಾದರೂ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂಬ ನಿಲುವು ತೆಗೆದುಕೊಂಡಿದ್ದೆ. ಯಾರೇ ಆಗಿದ್ದರೂ ಸಂತೋಷವೇ. ನನಗೆ ಅವಕಾಶ ಸಿಕ್ಕಿದೆ. ಉಳಿದವರೂ ಬಂದು ಅಭಿನಂದಿಸಿದ್ದಾರೆ’ ಎಂದು ಹೇಳಿದರು.

‘ಪಕ್ಷ ಸಂಘಟನೆಯೇ ನಮ್ಮ ಪ್ರಮುಖ ಗುರಿ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಉಳಿದ ಕ್ಷೇತ್ರಗಳಲ್ಲೂ ಗೆಲ್ಲಬೇಕು. ಜಿಲ್ಲಾ ಪಂಚಾಯಿತಿಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ತಾಲ್ಲೂಕು ಪಂಚಾಯಿತಿಗಳಲ್ಲೂ ನಮಗೆ ಬಹುಮತ ಬರಬೇಕು. ಚಾಮರಾಜನಗರ ನಗರಭೆಯಲ್ಲಿ ಆಡಳಿತ ಹಿಡಿಯಬೇಕು. ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.