ಮಹದೇಶ್ವರ ಬೆಟ್ಟ: ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ ಇರುವ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯು 32 ಗ್ರಾಮಗಳನ್ನು ಹೊಂದಿರುವ ದೊಡ್ಡ ಪಂಚಾಯಿತಿಯಾಗಿದ್ದರೂ ಇಲ್ಲಿಯ ಜನರು ತುರ್ತು ಆರೋಗ್ಯ ಸೇವೆ ಪಡೆದುಕೊಳ್ಳಲು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹದೇಶ್ವರ ಬೆಟ್ಟದ ವ್ಯಾಪ್ತಿಗೊಳಪಡುವ ಬಹುತೇಕ ಗ್ರಾಮಗಳು ಕುಗ್ರಾಮಗಳಾಗಿದ್ದು ಇಲ್ಲಿನ ಜನರಿಗೆ ಆರೋಗ್ಯ ಹದಗೆಟ್ಟು ತುರ್ತಾಗಿ ಆಸ್ಪತ್ರೆಗಳಿಗೆ ಸಾಗಿಸಬೇಕಾದರೆ ‘ಮಲೆ ಮಹದೇಶ್ವರನೇ ಕಾಪಾಡಬೇಕು’ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರಣ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಆರೋಗ್ಯ ಕೇಂದ್ರಕ್ಕೆ ಸರ್ಕಾರದಿಂದ ಒಂದು 108 ಆಂಬುಲೆನ್ಸ್ ವಾಹನ ಮಂಜೂರಾಗಿದ್ದರೂ ಈ ಭಾಗದ ರೋಗಿಗಳಿಗೆ ಸೇವೆ ದೊರೆಯುತ್ತಿಲ್ಲ. ನಿಯೋಜಿತ ಸ್ಥಳದಲ್ಲಿ ತುರ್ತು ಆರೋಗ್ಯ ಸೇವೆ ನೀಡಬೇಕಾಗಿರುವ ಆಂಬುಲೆನ್ಸ್ ಮಹದೇಶ್ವರ ಬೆಟ್ಟದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕೊಳ್ಳೇಗಾಲದಲ್ಲಿ ಸೇವೆ ನೀಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಹದೇಶ್ವರ ಬೆಟ್ಟದಿಂದ ಸುಮಾರು 10 ರಿಂದ 15 ಕಿ.ಮೀ ದೂರದಲ್ಲಿ ಹಲವು ಕಾಡಂಚಿನ ಗ್ರಾಮಗಳಿದ್ದು ಈ ಭಾಗದಲ್ಲಿರುವ ಜನರಿಗೆ ಅನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಕರೆತರಲು 108 ವಾಹನ ಸೇವೆ ಸಿಗುವುದಿಲ್ಲ. ದುಬಾರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ರೋಗಿಗಳನ್ನು ಚಿಕಿತ್ಸೆಗೆ ಕರೆತರಬೇಕು. ಹಣ ಇಲ್ಲದವರು, ಬೈಕ್ ಅಥವಾ ತೊಟ್ಟಿಲು ಕಟ್ಟಿ ಅನಾರೋಗ್ಯ ಪೀಡಿತರನ್ನು ಹೊತ್ತು ತರಬೇಕು.
ಹಾವು ಕಚ್ಚಿದಾಗ, ಹೃದಯಾಘಾತಕ್ಕೆ ತುತ್ತಾದಾಗ, ಅಪಘಾತಗಳು ಸಂಭವಿಸಿದಾಗ ಅಥವಾ ಇತರೆ ಅವಘಡಗಳು ನಡೆದಾಗ ಸಕಾಲಕ್ಕೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸರ್ಕಾರದ 108 ಆಂಬುಲೆನ್ಸ್ ಸೇವೆ ಸಿಗದೆ ಸಾವು–ನೋವುಗಳು ಸಂಭವಿಸುತ್ತಲೇ ಇವೆ. ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸವಾಗಿರುವ ಸಾವಿರಾರು ಮಂದಿ ಆರೋಗ್ಯ ಸೇವೆಯಿಂದ ವಂಚಿತರಾಗಬೇಕಾಗಿದೆ.
ದೂರದ ಹಳ್ಳಿಗಳಿಂದ ಹಣ ಕೊಟ್ಟು ಖಾಸಗಿ ವಾಹನಗಳಲ್ಲಿ ರೋಗಿಗಳನ್ನು ಕರೆತಂದರೂ ಚಿಕಿತ್ಸೆ ಸಿಗುವ ಖಚಿತತೆ ಇಲ್ಲ. ಹೆಚ್ಚಿನ ಚಿಕಿತ್ಸೆಗೆ ದೂರದ ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಕೊಂಡೊಯ್ಯಬೇಕು. ಕಡು ಬಡವರಿಗೆ ತುರ್ತು ವಾಹನ ಸೇವೆಗಳು ಕೈಗೆಟುಕದೆ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ ಎಂದು ಗ್ರಾಮಸ್ಥರು ದೂರುತ್ತಾರೆ.
ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಗೆ ನಿಯೋಜನೆಗೊಂಡಿರುವ ಆಂಬುಲೆನ್ಸ್ ಬೆಟ್ಟದಲ್ಲಿ ಮಾತ್ರ ತುರ್ತು ಆರೋಗ್ಯ ಸೇವೆ ನೀಡಬೇಕು ಎಂದು ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಇರುವ ಒಂದು ವಾಹನ ಬೇರೆ ಆರೋಗ್ಯ ಕೇಂದ್ರದಲ್ಲಿ ಸೇವೆಗೆ ಬಳಕೆಯಾಗುತ್ತಿರುವುದು ಈ ಭಾಗದ ರೋಗಿಗಳಿಗೆ ಅನ್ಯಾಯ ಮಾಡಿದಂತಾಗಿದೆ. ಮಲೆ ಮಹದೇಶ್ವರ ಬೆಟ್ಟದ ಆರೋಗ್ಯ ಕೇಂದ್ರಕ್ಕೆ ನೀಡಿರುವ ಆಂಬುಲೆನ್ಸ್ ಕೂಡ 108 ಸೇವೆಯಡಿ ನೀಡಿರುವುದಿಲ್ಲ. ಖಾಸಗಿಯಾಗಿ ನಿಯೋಜಿಸಲಾಗಿದೆ ಎಂದು ದೂರುತ್ತಾರೆ ಶಿವು, ರಮೆಶ್, ಹಾಗೂ ಮಹದೇವಸ್ವಾಮಿ.
ಮಹದೇಶ್ವರ ಬೆಟ್ಟ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತುರ್ತು ಅವಘಡಗಳು ಸಂಭವಿಸಿದರೆ ಖಾಸಗಿ ವಾಹನಗಳಲ್ಲಿ ತಮಿಳುನಾಡಿನ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯಬೇಕಿದೆ. ಮಲೆ ಮಹದೇಶ್ವರ ಬೆಟ್ಟ ರಾಜ್ಯದ ಭಾಗವಾಗಿದ್ದರೂ ನೆರೆಯ ತಮಿಳುನಾಡು ರಾಜ್ಯದ ಆರೋಗ್ಯ ಸೇವೆಯ ಮೇಲೆ ಅವಲಂಬಿತವಾಗಿರುವುದು ದುರಂತ ಹಾಗೂ ನಾಚಿಕೆಗೇಡು. ಕರ್ನಾಟಕ ಸರ್ಕಾರದ ಆರೋಗ್ಯ ಸೇವೆ ಇಂದಿಗೂ ಈ ಭಾಗದ ಜನತೆಗೆ ಕನಸಾಗಿಯೇ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ತುರ್ತು ಆಂಬುಲೆನ್ಸ್ ಸೇವೆ ಸಿಗದ ಬಡವರಿಗೆ ಸಮಸ್ಯೆಯಾಗಿದೆ. 108 ಆಂಬುಲೆನ್ಸ್ ಸೇವೆಯನ್ನು ಪುನರಾರಂಭಿಸಬೇಕು. ಇಲ್ಲವಾದರೆ ಮುಂದೆ ತೀವ್ರ ಹೋರಾಟ ಮಾಡಬೇಕಾಗುತ್ತದೆ.–ಶಿವರುದ್ರ ಸ್ಥಳೀಯರು
ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಖಾಸಗಿ ಸಂಸ್ಥೆಯೊಂದು ನಿರ್ವಹಣೆ ಮಾಡುತ್ತಿದೆ. ಇದರ ಕಾರ್ಯ ನಿರ್ವಹಣೆ ಜಿಲ್ಲಾ ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿ ಇಲ್ಲ. ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಸ್ಥೆಯ ಪ್ರತಿನಿಧಿಗಳನ್ನು ಸಂಪರ್ಕಿಸಿದಾಗ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಸೇವೆ ಕೋರಿ ಅತ್ಯಂತ ಕಡಿಮೆ ಕರೆಗಳು ಬರುವುದರಿಂದ ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಿಯೋಜಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ನಿಯೋಜಿತ ಜಾಗವನ್ನು ಬಿಟ್ಟು ಬೇರೆಡೆ ಸೇವೆ ನೀಡುತ್ತಿರುವ ಬಗ್ಗೆ ಲಿಖಿತವಾಗಿ ಉತ್ತರ ನೀಡುವಂತೆ ಸಂಸ್ಥೆಗೆ ಸೂಚನೆ ನೀಡಲಾಗಿದೆ. –ಡಾ.ಚಿದಂಬರ ಡಿಎಚ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.