ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್‌ಟಿ) ಕೆರೆದಿಂಬ ಪೋಡಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ತೆರೆದಿದ್ದ ವಸತಿಯುತ ವಿಶೇಷ ತರಬೇತಿ (ಆರ್‌ಎಸ್‌ಟಿ) ಶಾಲೆಯು ಅನುದಾನ ಸ್ಥಗಿತಗೊಂಡಿರುವ ಕಾರಣಕ್ಕೆ ಮುಚ್ಚಿದ್ದು, ಇಲ್ಲಿ ಶಿಕ್ಷಣ ಪಡೆಯುತ್ತಿದ್ದ ಸೋಲಿಗ ಸಮುದಾಯದ 22 ಮಕ್ಕಳು ಕಲಿಕೆಯನ್ನು ನಿಲ್ಲಿಸಿದ್ದಾರೆ.
ಬಿಳಿಗಿರಿರಂಗನಬೆಟ್ಟದಿಂದ 16 ಕಿಲೋ ಮೀಟರ್ ದೂರದಲ್ಲಿ ದಟ್ಟ ಅರಣ್ಯ ಪ್ರದೇಶದಲ್ಲಿರುವ ಕೆರೆದಿಂಬ ಮತ್ತು ಗೊಂಬೆಗಲ್ಲು ಪ್ರದೇಶದ ಸೋಲಿಗ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಈ ಶಾಲೆಯನ್ನು 2010ರಲ್ಲಿ ತೆರೆಯಲಾಗಿತ್ತು. ಹನೂರು ಶೈಕ್ಷಣಿಕ ವಲಯದ ವ್ಯಾಪ್ತಿಯಲ್ಲಿ ಈ ಶಾಲೆ ಬಂದರೂ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿಜಿಕೆಕೆ ಶಾಲೆಗೆ ಇದರ ನಿರ್ವಹಣೆ ಮತ್ತು ಅಗತ್ಯ ಮಾರ್ಗದರ್ಶನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು.
1ರಿಂದ 4ನೇ ತರಗತಿವರೆಗೆ ಇಲ್ಲಿ ಬೋಧನೆ ಮಾಡಲಾಗುತ್ತಿತ್ತು. ಒಬ್ಬ ತಾತ್ಕಾಲಿಕ ಶಿಕ್ಷಕ ಹಾಗೂ ಒಬ್ಬರು ಅಡುಗೆ ಸಹಾಯಕರು ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿ ತಿಂಗಳು ಶಿಕ್ಷಕರ ವೇತನ,ಪಡಿತರ ಮತ್ತು ಲೇಖನ ಸಾಮಗ್ರಿ ಕೊಳ್ಳಲು ಅಗತ್ಯ ಅನುದಾನ ನೀಡುತ್ತಿತ್ತು. ಎರಡು ವರ್ಷಗಳಿಂದ ಇಲಾಖೆ ಅನುದಾನ ನೀಡುವುದನ್ನು ನಿಲ್ಲಿಸಿದೆ. ಹಾಗಾಗಿ ಶಾಲೆಯನ್ನು ಮುಚ್ಚಲಾಗಿದೆ.
‘ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದರೆ 16 ಕಿಲೋ ಮೀಟರ್ ದೂರದ ಬಿಳಿಗಿರಿರಂಗನಬೆಟ್ಟಕ್ಕೆ ತೆರಳಬೇಕು. ಚಿಕ್ಕಮಕ್ಕಳು ಕಾಡಿನ ನಡುವೆ ಓಡಾಡಲು ಸಾಧ್ಯವಿಲ್ಲ. ಹಾಗಾಗಿ, ಮುಚ್ಚಿರುವ ಶಾಲೆಯನ್ನು ಮತ್ತೆ ತೆರೆಯಲು ಶಿಕ್ಷಣ ಇಲಾಖೆ ಮುಂದಾಗಬೇಕು’ ಎಂದು ಗೊಂಬೆಕಲ್ಲಿನ ಶಿಕಾರಿ ಮಾದೇಗೌಡ ಆಗ್ರಹಿಸಿದರು.
‘ಇಲ್ಲಿ ಕಲಿಯುತ್ತಿದ್ದ ಚಿಣ್ಣರು ಈಗ ಶಾಲೆ ಇಲ್ಲದೆ ಕಾಡು ಸುತ್ತುತ್ತಿದ್ದಾರೆ. ಮಕ್ಕಳನ್ನು ನಿಭಾಯಿಸುವುದೇ ಕಷ್ಟವಾಗಿದೆ. 4ನೇ ತರಗತಿಗಿಂತ ಮೇಲಿನ ಮಕ್ಕಳನ್ನು ಮಾತ್ರ ಹಾಸ್ಟೆಲ್‌ನಲ್ಲಿ ಬಿಟ್ಟಿದ್ದೇವೆ. ಅದಕ್ಕಿಂತ ಚಿಕ್ಕ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುವುದಾದರೂ ಹೇಗೆ? ಅವರಿಗೆ ಕನಿಷ್ಠ ಅವರ ಕೆಲಸಗಳನ್ನು ಮಾಡುವುದಕ್ಕೆ ತಿಳಿಯಬೇಡವೇ’ ಎಂದು ಕೆರೆದಿಂಬ ಪೋಡಿನ ಯಜಮಾನ್ ಮಾದೇಗೌಡ ಅಳಲು ತೋಡಿಕೊಂಡರು.
ಕಾರಣ ಏನು?: ಸೋಲಿಗ ಸಮುದಾಯದ ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿಜಿಕೆಕೆ ಶಾಲೆಗೆ ಅನುದಾನ ನೀಡಲಾಗುತ್ತಿದೆ. ಎಲ್ಲರೂ ಅಲ್ಲಿಗೆ ಬಂದು ಶಿಕ್ಷಣ ಪಡೆಯಲಿ. ಪ್ರತ್ಯೇಕ ಅನುದಾನ ನೀಡುವುದು ಬೇಡ ಎಂಬುದು ಇಲಾಖೆಯ ನಿಲುವು ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿಭಟನೆ ನಡೆಸುವ ಎಚ್ಚರಿಕೆ
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಅವರು,‘ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಜಿಲ್ಲಾ ಪಂಚಾಯಿತಿಯ ಹಿಂದಿನ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಶಾಲೆ ಮುಚ್ಚಿರುವುದರಿಂದ ಸೋಲಿಗ ಮಕ್ಕಳು ಶೈಕ್ಷಣಿಕ ಹಕ್ಕಿನಿಂದ ವಂಚಿತರಾಗಿ ಕಲಿಕೆ ಮೊಟುಕುಗೊಳ್ಳುವ ಹಂತ ಮುಟ್ಟಿದೆ. ಈ ಬಗ್ಗೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು. ಸಂಘದ ವತಿಯಿಂದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.