ಯಳಂದೂರು: ಈ ಬಾರಿ ಬಿಳಿಗಿರಿರಂಗನ ಬೆಟ್ಟದ ಅರಣ್ಯದಲ್ಲಿ ಚಳಿಗಾಲದಲ್ಲೂ ಬಿಸಿಲಿನದ್ದೆ ಹವಾ. ಹಸಿರು ಮತ್ತು ಹೂವಿನ ಚೆಲುವು ಮಾಸಿದ್ದು, ಹಿಂಗಾರು ಹವಾಮಾನ ಇನ್ನೂ ಕಾಲಿಟ್ಟಿಲ್ಲ. ಮಣ್ಣು, ಚಿಗುರು, ಹುಲ್ಲು ಆವರಿಸುತ್ತದ್ದ ಸ್ವಾತಿ ಮುತ್ತಿನ ಸಿಂಚನವಗಿಲ್ಲ. ಚಿತ್ತಾ ಮಳೆ ನಕ್ಷತ್ರಕ್ಕೂ ಮೊದಲೇ ಗುಯ್ ಗುಡುತ್ತಿದ್ದ ಚಿಟ್ಟೆ ಮೆರವಣಿಗೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ, ಹಸಿರು ಬರ ಪತಂಗಗಳ ವಲಸೆಗೆ ಹಿನ್ನಡೆಯಾಗಿದೆ.
ತಾಲ್ಲೂಕಿನಲ್ಲಿ ಸೆಪ್ಟೆಂಬರ್ ಆರಂಭದಲ್ಲಿ ಪಾತರಗಿತ್ತಿ ಸಂಕುಲ ಮನ ಸೆಳೆಯುತ್ತಿತ್ತು. ಹೊಲ, ಗದ್ದೆ, ಕೆರೆ, ಕಟ್ಟೆ, ಹೊಳೆ, ಕಾಲುವೆ, ಅಣೆಕಟ್ಟೆ, ನೀರಿನ ಝರಿಗಳ ಬಳಿ ಸಾವಿರಾರು ಸಂಖ್ಯೆಯ ಚಿಟ್ಟೆಗಳು ಕುಳಿತು ಮಣ್ಣಿನ ರಸ ಹೀರುತ್ತಿದ್ದವು. ಪಟ್ಟಣ ಪ್ರವೇಶ, ಹೊಳೆಯ ಸುತ್ತಮುತ್ತ ಚಿಟ್ಟೆ ಹಾರಾಟ ಕಣ್ಮನ ಸೆಳೆಯುತ್ತಿತ್ತು.
ಇಲ್ಲಿನ ಆವಾಸದಲ್ಲಿ ಇನ್ನೂರು ಬಗೆಯ ಪತಂಗಗಳನ್ನು ಗುರುತಿಸಲಾಗಿದ್ದು, ಚಿಟ್ಟೆ ವೈವಿಧ್ಯತೆಗೆ ಹೆಸರಾಗಿತ್ತು. ಬಣ್ಣದ ಚಿಟ್ಟೆಗಳ ಹಾರಾಟಕ್ಕೆ ಈ ಬಾರಿ ಬರ ಬಿಸಿಮುಟ್ಟಿಸಿದೆ.
‘ಚಿಟ್ಟೆಗಳು ವಂಶಾಭಿವೃದ್ಧಿ ಸಮಯದಲ್ಲಿ ವೈವಿಧ್ಯಮಯ ರೂಪ ರಾಶಿಗಳನ್ನು ಧರಿಸುತ್ತವೆ. ನಾಲ್ಕು ಹಂತದ ಮೊಟ್ಟೆ, ಲಾರ್ವ, ಪಿಫಾ, ಚಿಟ್ಟೆಯಾಗಿ ವಿಕಸಿಸುತ್ತದೆ. ಈ ಹಂತದಲ್ಲಿ ಆಹಾರ ಅರಸಿ ಸುರಕ್ಷಿತ ತಾಣಗಳಿಗೆ ತೆರಳುತ್ತವೆ. ಈ ಸಮಯದಲ್ಲಿ ಬಿಳಿಗಿರಿಬೆಟ್ಟದ ಕಾಡು ನೂರಾರು ಜಾತಿಯ ಚಿಟ್ಟೆಗಳನ್ನು ಆಕರ್ಷಿಸುತ್ತದೆ’ ಎಂದು ವನ್ಯಜೀವಿ ಛಾಯಗ್ರಾಹಕ ನವೀನ್ ಜಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂತಾನೋತ್ಪತಿ ಮತ್ತು ಪಾಲನೆಗೆ ಸೇರುವ ನೂರಾರು ತಳಿಯ ಚಿಟ್ಟೆ ತಮ್ಮ ಸೂಕ್ಷ್ಮ ಜೈವಿಕ ಪ್ರಕ್ರಿಯೆಗಳನ್ನು ಮುಗಿಸಿ ವಾಪಸ್ ತೆರಳುವ ಮೊದಲು ಹಲವಾರು ದಿನಗಳನ್ನುಇಲ್ಲಿನ ಪರಿಸರದಲ್ಲಿ ಕಳೆಯುತ್ತವೆ. ಆದರೆ, ಈ ಬಾರಿ ಹೆಚ್ಚಾದ ಬಿಸಿ ಹವೆ ಮತ್ತು ಬಿಸಿಲಿನ ಪ್ರಖರತೆ ಪತಂಗಗಳ ವಲಸೆಗೆ ಹಿನ್ನಡೆ ಉಂಟು ಮಾಡಿದೆ’ ಎಂದು ಹೇಳಿದರು.
ಹೂ ಗಿಡಗಳ ಇಳಿಕೆ:
ಡ್ರ್ಯಾಗನ್ ಫ್ಲೈ, ಅಟ್ಲಾಸ್ ಪತಂಗ, ಏರೋಪ್ಲೇನ್ ಚಿಟ್ಟೆ, ಸದರ್ನ್ ಬರ್ಡ್ ವಿಂಗ್, ಹಗಲಿನಲ್ಲಿ ಪರಿಸರದ ಬಣ್ಣವನ್ನು ತೊಟ್ಟು ಕುಳಿತ ಬಣ್ಣದ ಪತಂಗಗಳು ಗಮನ ಸೆಳೆಯುತ್ತಿತ್ತು. ವರ್ಷಧಾರೆ ಸಮಯ ಮತ್ತು ಮಳೆ ಮುಗಿದ ನಂತರದ ತಿಂಗಳಲ್ಲಿ ಇಂತಹ ದೃಶ್ಯ ಮನಮೋಹಕವಾಗಿರುತ್ತಿತ್ತು. ನಸುಕಿನಲ್ಲಿ ಮತ್ತು ಸಂಜೆಯ ಹೊತ್ತು ತೀರ ಚುರುಕಾಗಿ ಹಾರಾಡುತ್ತಿದ್ದವು. ಈ ವರ್ಷ ಮಳೆ ಋತು ನಿಂತಂತೆ ಭಾಸವಾಗುತ್ತಿದೆ. ಬರ ಮತ್ತು ಹೆಚ್ಚಾದ ತಾಪ ಹೂ ಗಿಡಗಳ ಸಂಖ್ಯೆಯನ್ನು ತಗ್ಗಿಸಿದೆ’ ಎಂದು ಮೂಲಿಕೆ ತಜ್ಞ ಬೊಮ್ಮಯ್ಯ ಅಭಿಪ್ರಾಯಪಟ್ಟರು.
ಹಿಂಗಾರಿನಲ್ಲಿ ಮೇಳೈಸುತ್ತಿದ್ದ ಪತಂಗಗಳು ಬಾರದ ಮಳೆ, ಹೆಚ್ಚಾದ ವಾತಾವರಣದ ಬಿಸಿ ಈ ಬಾರಿ ವಲಸೆ ಬಾರದ ಚಿಟ್ಟೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.