ಗುಂಡ್ಲುಪೇಟೆ (ಚಾಮರಾಜನಗರ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರದಲ್ಲಿ ಬುಧವಾರ (ಸೆ.20) ‘ಬಂಡೀಪುರ ಅರಣ್ಯ ಮುಂಚೂಣಿ ಸಿಬ್ಬಂದಿ ದಿನ' ಕಾರ್ಯಕ್ರಮದ ಆಯೋಜಿಸಿರುವುದರಿಂದ ಬುಧವಾರ ಬೆಳಿಗ್ಗೆ ಮತ್ತು ಸಂಜೆ ಸಫಾರಿ ಇರುವುದಿಲ್ಲ.
ಬಂಡೀಪುರ ಅರಣ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಂಚೂಣಿ ಸಿಬ್ಬಂದಿ ವರ್ಗದವರ ಸಾಧನೆ, ಅವರ ಕೆಲಸವನ್ನು ಸ್ಮರಿಸಿ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮುಂಚೂಣಿ ಸಿಬ್ಬಂದಿ ದಿನ ಆಯೋಜಿಸಲಾಗಿದೆ.
‘ಬೆಳಿಗ್ಗೆ 11:30ಕ್ಕೆ ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರದಲ್ಲಿ `ಬಂಡೀಪುರ ಅರಣ್ಯ ಮುಂಚೂಣಿ ಸಿಬ್ಬಂದಿ ದಿನ' ಎಂಬ ಕಾರ್ಯಕ್ರಮ ಆಚರಿಸಲು ಉದ್ದೇಶಿಸಲಾಗಿದೆ. ಶಾಸಕ ಎಚ್.ಎಂ.ಗಣೇಶಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಬಂಡೀಪುರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕಾಯಂ ಅಧಿಕಾರಿ ಹಾಗೂ ಸಿಬ್ಬಂದಿ ಕುಟುಂಬ ಸದಸ್ಯರೊಂದಿಗೆ ಆಗಮಿಸುವಂತೆ ಆಹ್ವಾನ ನೀಡಲಾಗಿದ್ದು, ವಿಶೇಷ ಸಾಧನೆ ಮಾಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಬಹುಮಾನ ವಿತರಣೆ, ಸನ್ಮಾನ ಹಾಗೂ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಬುಧವಾರ ಸಫಾರಿ ರದ್ದುಗೊಳಿಸಲಾಗಿದೆ’ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಪಿ.ರಮೇಶಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.