ADVERTISEMENT

ಚಾಮರಾಜನಗರ | ನರೇಗಾ: ₹9.60 ಕೋಟಿ ಬಾಕಿ, ಕಾರ್ಮಿಕರಿಗೆ ಸಂಕಷ್ಟ ‘ಖಾತ್ರಿ’

ಸೂರ್ಯನಾರಾಯಣ ವಿ.
Published 6 ನವೆಂಬರ್ 2023, 7:38 IST
Last Updated 6 ನವೆಂಬರ್ 2023, 7:38 IST
ಹನೂರು ತಾಲ್ಲೂಕಿನ ಗೋಪಿನಾಥಂನಲ್ಲಿ ನರೇಗಾ ಅಡಿಯಲ್ಲಿ ಕೆರೆ ಅಭಿವೃದ್ಧಿ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು
ಹನೂರು ತಾಲ್ಲೂಕಿನ ಗೋಪಿನಾಥಂನಲ್ಲಿ ನರೇಗಾ ಅಡಿಯಲ್ಲಿ ಕೆರೆ ಅಭಿವೃದ್ಧಿ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು   

ಚಾಮರಾಜನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ) ಕೂಲಿ ಕಾರ್ಮಿಕರಿಗೆ ಎರಡೂವರೆ ತಿಂಗಳುಗಳಿಂದ ಕೂಲಿ ಹಣ ಪಾವತಿಯಾಗಿಲ್ಲ. ಬರದಿಂದ ತತ್ತರಿಸಿರುವ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಈಗ ಖಾತ್ರಿ ಹಣವೂ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಜಿಲ್ಲೆಯ ಐದೂ ತಾಲ್ಲೂಕುಗಳ ವ್ಯಾಪ್ತಿಯ ಕಾರ್ಮಿಕರಿಗೆ ₹9.60 ಕೋಟಿಯಷ್ಟು ಕೂಲಿ ಪಾವತಿಗೆ ಬಾಕಿ ಇದೆ. 

ಆಗಸ್ಟ್‌ 20ರ ನಂತರ ಜಿಲ್ಲಾ ಪಂಚಾಯಿತಿ ಕೂಲಿ ಕೊಟ್ಟಿಲ್ಲ. ನಿಯಮದ ಪ್ರಕಾರ, ಕೆಲಸ ಮಾಡಿದ 15 ದಿನಗಳೊಳಗೆ ಕೂಲಿ ಹಣ ಕಾರ್ಮಿಕರ ಖಾತೆಗೆ ಜಮೆ ಆಗಬೇಕು.

ADVERTISEMENT

ಚಾಮರಾಜನಗರ ತಾಲ್ಲೂಕಿನಲ್ಲಿ ₹3.15 ಕೋಟಿ, ಹನೂರು ತಾಲ್ಲೂಕಿನಲ್ಲಿ ₹2.81 ಕೋಟಿ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ₹1.94 ಕೋಟಿ, ಕೊಳ್ಳೇಗಾಲದಲ್ಲಿ ₹84.30 ಲಕ್ಷ, ಯಳಂದೂರು ತಾಲ್ಲೂಕಿನಲ್ಲಿ ₹83.92 ಲಕ್ಷ ಹಣ ಪಾವತಿಗೆ ಬಾಕಿ ಇದೆ.  

ಕೇಂದ್ರ ಸರ್ಕಾರದಿಂದ ಅನುದಾನ ಬಾರದೇ ಇರುವುದರಿಂದ, ಕೂಲಿ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು. 

ಎರಡೂವರೆ ತಿಂಗಳುಗಳಿಂದ ಕೂಲಿ ನೀಡದೇ ಇರುವುದರಿಂದ, ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಬಂದವರಿಂದಲೂ ಕೆಲಸ ಮಾಡಿಸಲಾಗದ ಸ್ಥಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿದ್ದಾರೆ. 

ಬರ ಪರಿಸ್ಥಿತಿ ಇರುವುದರಿಂದ ಹೊರಗಡೆ ಕೂಲಿ ಸಿಗದಿರುವ ಸಾಧ್ಯತೆ ಇರುವುದರಿಂದ ನರೇಗಾ ಯೋಜನೆ ಅಡಿಯಲ್ಲಿ ವರ್ಷಕ್ಕೆ 100 ದಿನಗಳ ಬದಲಾಗಿ 150 ದಿನ ಕೂಲಿ ನೀಡಬೇಕು ಎಂದು ಸರ್ಕಾರ ಹೇಳಿದೆ. ಅದಿನ್ನೂ ಜಾರಿಗೆ ಬಂದಿಲ್ಲ.

ಮಾಡಿದ ಕೆಲಸದ ಕೂಲಿ ಸಿಗದಿರುವುದರಿಂದ ಖರ್ಚಿಗೂ ಹಣ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಕಾರ್ಮಿಕರು. 

ಸದ್ಯ, ನರೇಗಾ ಅಡಿಯಲ್ಲಿ ಕಾರ್ಮಿಕರಿಗೆ ಪ್ರತಿ ದಿನ ₹316 ಕೂಲಿ ನೀಡಲಾಗುತ್ತಿದೆ. ಅಂದಾಜು 12 ಸಾವಿರ ಕಾರ್ಮಿಕರಿಗೆ ಕೂಲಿ ಪಾವತಿಯಾಗಬೇಕಿದೆ. 

25 ಲಕ್ಷ ಮಾನವ ದಿನದ ಗುರಿ: 2023–24ನೇ ಸಾಲಿನಲ್ಲಿ ಖಾತ್ರಿ ಯೋಜನೆಯಲ್ಲಿ 25 ಲಕ್ಷ ಮಾನವ ದಿನಗಳ ಗುರಿಯನ್ನು ನೀಡಲಾಗಿದೆ. ಅಕ್ಟೋಬರ್‌ ಅಂತ್ಯದ ವೇಳೆಗೆ 18.90 ಲಕ್ಷ ಮಾನವ ದಿನಗಳಷ್ಟು ಕೆಲಸ ಆಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸೂಚಿಸಿತ್ತು. ಜಿಲ್ಲೆಯಲ್ಲಿ 14,10,171 ಮಾನವ ದಿನ ಸೃಷ್ಟಿಯಾಗಿದೆ. ನಿಗದಿತ ಗುರಿ ಶೇ 78ರಷ್ಟಿದ್ದರೆ, ಶೇ 74.61ರಷ್ಟು ಸಾಧನೆಯಾಗಿದೆ. 

ಈವರೆಗೆ ₹44.99 ಕೋಟಿಯಷ್ಟು ಕೂಲಿ ನೀಡಲಾಗಿದೆ. ₹27.06 ಕೋಟಿ ಸಲಕರಣೆಗಳಿಗೆ ವೆಚ್ಚಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬೇಗ ಪಾವತಿಸಿ

‘ಒಬ್ಬೊಬ್ಬರಿಗೆ ₹3,000, ₹5,000 ಹೀಗೆ ದೊಡ್ಡ ಮೊತ್ತದ ಹಣ ಬರಬೇಕು. ಎರಡು ತಿಂಗಳುಗಳಿಂದ ಕಾಯುತ್ತಿದ್ದೇವೆ. ಖಾತ್ರಿ ಕೆಲಸ ಇದೆ ಎಂದು ಬೇರೆ ಕೂಲಿಗೆ ನಾವು ಹೋಗಿಲ್ಲ. ಕೂಲಿ ಮಾಡಿದರಷ್ಟೆ ನಮ್ಮ ಜೀವನ ಸಾಗವುದು. ಮಾಡಿದ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಸಂಬಳ ಕೊಡದಿದ್ದರೆ, ದಿನಸಿ ತರುವುದಕ್ಕೂ ಕಷ್ಟವಾಗುತ್ತದೆ’ ಎಂಬುದು ಕಾರ್ಮಿಕರ ಅಳಲು. 

‘ಬರಗಾಲ ಇರುವುದರಿಂದ ಸ್ಥಳೀಯವಾಗಿ ಹೆಚ್ಚು ಕೆಲಸವೂ ಸಿಗುತ್ತಿಲ್ಲ. ಹೀಗೆ ಆದರೆ, ಕೆಲಸ ಅರಸಿ ನಗರ, ಪಟ್ಟಣಗಳಿಗೆ ವಲಸೆ ಹೋಗಬೇಕಾಗಿ ಬರಬಹುದು’ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ಅವರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿಳಂಬ ಮಾಡದೆ, ಬಾಕಿ ಕೂಲಿಯನ್ನು ಶೀಘ್ರವಾಗಿ ಖಾತೆಗೆ ಜಮೆ ಮಾಡಬೇಕು ಎಂಬುದು ಅವರ ಆಗ್ರಹ.

ಈ ತಿಂಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.  

ಜನರು ನರೇಗಾ ಕಾರ್ಮಿಕರು ಏನಂತಾರೆ?

ಕೂಲಿ ಮಾಡಿಯೇ ಜೀವನ ನಡೆಸುತ್ತಿದ್ದೇವೆ. ನರೇಗಾದಲ್ಲಿ ಕೆಲಸ ಮಾಡಿದರೆ ಸಂಬಳ ಸರಿಯಾಗಿ ಸಿಗುವುದಿಲ್ಲ. ಇಂತಹ ಉತ್ತಮವಾದ ಯೋಜನೆ ಇದ್ದರೂ ಕೂಲಿ ಸಿಗದಿದ್ದರೆ ಬಡವರಿಗೆ ಯಾವುದೇ ಪ್ರಯೋಜನ ಇಲ್ಲ. ಕೆಲವು ಪಂಚಾಯಿತಿಗಳಲ್ಲಿ ಒಡಿಒಗಳು ಖಾತೆಗೆ ಹಣ ಹಾಕುವುದಿಲ್ಲ. –ಶಿವಮ್ಮ ತೇರಂಬಳ್ಳಿ ಕೊಳ್ಳೇಗಾಲ

ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕಾಲ ಕಾಲಕ್ಕೆ ಸರಿಯಾಗಿ ಹಣ ಪಾವತಿಯಾಗುವುದಿಲ್ಲ. ನಿರಂತರವಾಗಿ ಉದ್ಯೋಗ ನೀಡುವಲ್ಲಿ ಯೋಜನೆ ನಿರ್ವಾಹಕರು ವಿಫಲರಾಗಿದ್ದಾರೆ. –ನಾಗರಾಜು ಕೆಸ್ತೂರು ಯಳಂದೂರು ತಾಲ್ಲೂಕು

ಪ್ರತಿ ವಾರ ನರೇಗಾ ಕೂಲಿ ಹಣ ಬರುತ್ತಿತ್ತು. ಕಾರ್ಮಿಕರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಈಚೆಗೆ ಸರಿಯಾಗಿ ಕೆಲಸ ಮತ್ತು ಕೂಲಿ ಸಿಗುತ್ತಿಲ್ಲ. ಇದರಿಂದ ಬಹಳಷ್ಟು ಕಾರ್ಮಿಕರು ಕೆಲಸ ಅರಸಿ ಬೇರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಹಾರ ಮತ್ತಿತರ ಪದಾರ್ಥಗಳನ್ನು ಕೊಳ್ಳಲು ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ –ಸಿದ್ದೇಗೌಡ ಬಿಳಿಗಿರಿ ರಂಗನ ಬೆಟ್ಟ ಯಳಂದೂರು ತಾಲೂಕು

ಗ್ರಾಮೀಣ ಉದ್ಯೋಗ ಖಾತರಿ ಹೆಸರಿನಲ್ಲಿ ಗ್ರಾಮಪಂಚಾಯಿತಿಯವರು ಕೆರೆ ಕೆಲಸ ಮಾಡಿಸಿಕೊಂಡು ಮೂರುವರೆ ತಿಂಗಳು ಕಳೆದಿದೆ. ಇಂದಿಗೂ ನಮ್ಮ ಖಾತೆಗೆ ಹಣ ಬಂದಿಲ್ಲ. ಹಿಂದಿನ ಹಣ ಬಾರದೇ ಮುಂದಿನ ಕೆಲಸಕ್ಕೂ ಕರೆಯುತ್ತಿಲ್ಲ. ಮಳೆ ಬೆಳೆ ಇಲ್ಲದೇ ಹೊರಗಡೆ ಕೆಲಸವು ಸಿಗುತ್ತಿಲ್ಲ. –ಪುಟ್ಟರಾಜು ಹೆಗ್ಗವಾಡಿಪುರ ಚಾಮರಾಜನಗರ ತಾಲ್ಲೂಕು

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಜನರು ಗುಳೆ ಹೋಗುವುದನ್ನು ಬಿಟ್ಟು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡಿದ್ದಾರೆ. ಆದರೆ ಕೂಲಿ ಕೆಲಸ ಮಾಡಿ ಮೂರು ತಿಂಗಳಾದರೂ ಕೂಲಿ ಹಣ ಬಂದಿಲ್ಲ. ಹಣ ಬರದಿದ್ದರೆ ಜನರು ಮತ್ತೆ ಗುಳೆ ಹೋಗುವ ಸಂಭವವಿದೆ. – ರಾಜು ಪೊನ್ನಾಚಿ ಹನೂರು ಗ್ರಾಮ

ಕೂಲಿ ಕೆಲಸ ಮಾಡಿ ಎರಡು ತಿಂಗಳಾಗಿದೆ. ಇದುವರೆಗೆ ಹಣ ಬಂದಿಲ್ಲ. ನಾವು ಬೇರೆ ಕೆಲಸ ಬಿಟ್ಟು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನಮಗೆ ನಾವು ಮಾಡಿರುವ ಕೂಲಿ ಕೆಲಸದ ಹಣ ಕೊಡಿಸಿಕೊಡಬೇಕು. – ಸುರೇಶ್ ಕಕ್ಕೆಹೊಲ ಹನೂರು ತಾಲ್ಲೂಕು

‘ಕೇಂದ್ರದಿಂದ ಅನುದಾನ ಬರಬೇಕಿದೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್‌ ಪ್ರಕಾಶ್‌ ಮೀನಾ ಅವರು ‘ನರೇಗಾ ಅಡಿಯಲ್ಲಿ ಈ ಬಾರಿ ಜಿಲ್ಲೆಗೆ 25 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. 1410171 ಮಾನವ ದಿನಗಳಷ್ಟು ಕೆಲಸ ಆಗಿದೆ. ಆಗಸ್ಟ್‌ ಮೂರನೇ ವಾರದಿಂದ ಕಾರ್ಮಿಕರಿಗೆ ಪಾವತಿಯಾಗಿಲ್ಲ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಅನುದಾನ ಬಿಡುಗಡೆ ಮಾಡಬೇಕಾಗಿದೆ. ರಾಜ್ಯ ಮಟ್ಟದಲ್ಲೇ ಈ ಸಮಸ್ಯೆ ಇದೆ. ಇತ್ತೀಚೆಗೆ ನರೇಗಾ ಆಯುಕ್ತರು ಎಲ್ಲರೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದು ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಹಣ ಬಂದ ತಕ್ಷಣ ಎಲ್ಲ ಕಾರ್ಮಿಕರಿಗೂ ಕೂಲಿ ಪಾವತಿಸಲಾಗುವುದು. ಈ ತಿಂಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ’ ಎಂದು ಹೇಳಿದರು.

ಅಭಿಪ್ರಾಯ ಸಂಗ್ರಹ: ಮಹದೇವ್‌ ಹೆಗ್ಗವಾಡಿಪುರ, ಬಿ.ಬಸವರಾಜು, ಅವಿನ್‌ಪ್ರಕಾಶ್‌, ನಾ.ಮಂಜುನಾಥಸ್ವಾಮಿ

ಕೊಳ್ಳೇಗಾಲ ತಾಲ್ಲೂಕಿನ ತೆಳ್ಳನೂರಿನಲ್ಲಿ ನರೇಗಾ ಕೆಲಸದಲ್ಲಿ ತೊಡಗಿರುವ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.