ADVERTISEMENT

ಬಂಡೀಪುರ | ಅಕ್ರಮ ರೆಸಾರ್ಟ್‌, ಹೋಂಸ್ಟೇ ವಿರುದ್ಧ ಕ್ರಮಕ್ಕೆ ಶಿಫಾರಸು

ಸೂರ್ಯನಾರಾಯಣ ವಿ.
Published 23 ನವೆಂಬರ್ 2023, 5:26 IST
Last Updated 23 ನವೆಂಬರ್ 2023, 5:26 IST
<div class="paragraphs"><p>ಬಂಡೀಪುರ</p></div>

ಬಂಡೀಪುರ

   

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್, ಹೋಂ ಸ್ಟೇ, ಹೋಟೆಲ್‌ಗಳು ಸೇರಿದಂತೆ ವಾಣಿಜ್ಯ ಉದ್ದೇಶದ ಕಟ್ಟಡಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೇಳಿದೆ.  

ಆನೆ ಮತ್ತು ಹುಲಿ ಕಾರಿಡಾರ್‌ ಒಳಗೊಂಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ನಿರ್ಮಿಸಲಾಗಿರುವ ರೆಸಾರ್ಟ್‌, ಹೋಂ ಸ್ಟೇ, ಹೋಟೆಲ್‌ಗಳು ಹಾಗೂ ಇತರ ವಾಣಿಜ್ಯ ಉದ್ದೇಶದ ಕಟ್ಟಡಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ಅವರು ಎನ್‌ಟಿಸಿಎಗೆ ದೂರು ನೀಡಿದ್ದರು.

ADVERTISEMENT

ಇದರ ಆಧಾರದಲ್ಲಿ ಬಂಡೀಪುರಕ್ಕೆ ಭೇಟಿ ನೀಡಿ ಈ ಬಗ್ಗೆ ವರದಿ ನೀಡುವಂತೆ ಎನ್‌ಟಿಸಿಎಯು ಬೆಂಗಳೂರಿನಲ್ಲಿರುವ ತನ್ನ ಪ್ರಾದೇಶಿಕ ಕಚೇರಿಗೆ ಸೂಚಿಸಿತ್ತು. ಪ್ರಾಧಿಕಾರದ ಸಹಾಯಕ ಐಜಿಎಫ್‌ ಹರಿಣಿ ವೇಣುಗೋಪಾಲ್‌ ಅವರು ನ.1 ಹಾಗೂ 2ರಂದು ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ನ.17ರಂದು ಎನ್‌ಟಿಸಿಎ ಕೇಂದ್ರ ಕಚೇರಿಗೆ ವರದಿ ನೀಡಿದ್ದು, ಹಲವು ಶಿಫಾರಸುಗಳನ್ನು ಮಾಡಿದ್ದಾರೆ.

ಅನಧಿಕೃತ ಕಟ್ಟಡಗಳು ಕಂದಾಯ ಜಮೀನುಗಳಲ್ಲಿವೆ. ಹಾಗಾಗಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಕಂದಾಯ ಇಲಾಖೆ ಪಾತ್ರ ಹೆಚ್ಚಿದೆ.
ಪಿ.ರಮೇಶ್‌ಕುಮಾರ್‌, ಬಂಡೀಪುರ ಹುಲಿ ಯೋಜನೆ ನಿರ್ದೇಶಕ

ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯಗಳಲ್ಲೇ ರೆಸಾರ್ಟ್‌, ಹೋಂಸ್ಟೇ, ಹೋಟೆಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ.    

ವರದಿಯಲ್ಲೇನಿದೆ?

‘ಪರಿಸರ ಸೂಕ್ಷ್ಮ ವಲಯದಲ್ಲಿರುವ 13 ರೆಸಾರ್ಟ್‌/ಹೋಂ ಸ್ಟೇಗಳು ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಪಡೆದು ಕಾರ್ಯಾಚರಿಸುತ್ತಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯವನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸುವುದಕ್ಕೂ (2012ರ ಅ.4) ಮೊದಲೇ ಈ ರೆಸಾರ್ಟ್‌ಗಳು ಸ್ಥಾಪನೆಯಾಗಿವೆ’ ಎಂಬುದನ್ನು ಹರಿಣಿ ವರದಿಯಲ್ಲಿ ಹೇಳಿದ್ದಾರೆ.

ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಒಂಬತ್ತು ರೆಸಾರ್ಟ್‌ಗಳ ಮಾಲೀಕರಿಗೆ ನೋಟಿಸ್‌ ನೀಡಿ, ಅವುಗಳನ್ನು ಮುಚ್ಚಿಸಲಾಗಿದೆ ಎಂಬ ಸಂಗತಿಯನ್ನೂ ವರದಿಯಲ್ಲಿ ಉಲ್ಲೇಖಿಸಿರುವ ಅವರು, ಈ ಪೈಕಿ ಸಿದ್ದಯ್ಯನಪುರ ಗ್ರಾಮದಲ್ಲಿರುವ ಒಂದು ರೆಸಾರ್ಟ್‌ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ. 

ಇವುಗಳ ಜೊತೆಗೆ, ಇನ್ನೂ ಕೆಲವು ಅನಧಿಕೃತ ಹೋಂ ಸ್ಟೇಗಳು ಮತ್ತು ಅಕ್ರಮ ಕಟ್ಟಡಗಳು ಸೂಕ್ಷ್ಮ ವಲಯದಲ್ಲಿದ್ದು, ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಅವುಗಳ ಮಾಲೀಕರಿಗೆ ನೋಟಿಸ್‌ ನೀಡುವ ಜೊತೆಗೆ, ಕ್ರಮ ಕೈಗೊಳ್ಳುವುದಕ್ಕಾಗಿ ಕಂದಾಯ ಇಲಾಖೆ ಮತ್ತು ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರ ಗಮನಕ್ಕೂ ತಂದಿದ್ದಾರೆ. ಆದರೆ, ಕಂದಾಯ ಇಲಾಖೆ ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ಪರಿಸರ ಸೂಕ್ಷ್ಮ ವಲಯಕ್ಕಾಗಿ ಇನ್ನೂ ವಲಯ ಮಾಸ್ಟರ್ ಪ್ಲಾನ್‌ ತಯಾರಿಸಿಲ್ಲ. ಹುಲಿ ಯೋಜನೆ ನಿರ್ದೇಶಕರು ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಡೆಯದ ಸಮಿತಿ ಸಭೆ

ಮೈಸೂರಿನ ಪ್ರಾದೇಶಿಕ ಆಯುಕ್ತರ ನೇತೃತ್ವದ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯು ಒಂದು ವರ್ಷದಿಂದಲೂ ಸಭೆ ಸೇರದಿರುವ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 

‘ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ಹೊರಡಿಸಿದ ನಂತರ ಇಲ್ಲಿಯವರೆಗೆ ಮೇಲ್ವಿಚಾರಣಾ ಸಮಿತಿಯ 10 ಸಭೆಗಳು ನಡೆದಿವೆ. 2022ರ ಸೆ.16ರಂದು ಕೊನೆಯ ಸಭೆ ನಡೆದಿದೆ. ಸಮಿತಿ ಸಭೆ ನಡೆಸುವಂತೆ ಮನವಿ ಮಾಡಿ ಬಂಡೀಪುರ ನಿರ್ದೇಶಕರು ಈ ವರ್ಷದ ಜುಲೈ 24ರಂದು ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅಧ್ಯಕ್ಷರು ಇನ್ನೂ ಉತ್ತರಿಸಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.

ಶಿಫಾರಸಿನಲ್ಲೇನಿದೆ?

  • ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿ ಸೇರಿಸಿದಂತೆ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆಯದೆ ವಾಣಿಜ್ಯ ಉದ್ದೇಶದ ಕಟ್ಟಡಗಳು ರೆಸಾರ್ಟ್‌ ಅಥವಾ ಹೋಂ ಸ್ಟೇಗಳನ್ನು ನಿರ್ಮಿಸಿರುವುದು ಪರಿಸೂಕ್ಷ್ಮ ವಲಯ ಅಧಿಸೂಚನೆ ನಿಯಮಗಳ ಸ್ಪಷ್ಟ ಉಲ್ಲಂಘನೆ.

  • ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯು ಪ್ರತಿ ಪ್ರಕರಣವನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಸಂಬಂಧಿಸಿದ ಇಲಾಖೆಗಳಾದ ಕಂದಾಯ ಅರಣ್ಯ ಪರಿಸರ ಪ್ರವಾಸೋದ್ಯಮ ನಗರಾಭಿವೃದ್ಧಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. 

  • ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕರು ಸಮಿತಿಯ ಅಧ್ಯಕ್ಷ ಪ್ರಾದೇಶಿಕ ಆಯುಕ್ತರ ಬಳಿ ಸಭೆ ನಡೆಸುವಂತೆ ಕೋರಬೇಕು.

  • ಕಣಿಯನಪುರ ಆನೆ ಕಾರಿಡಾರ್‌ಗೆ ಹಾನಿ ಮಾಡುವ ಕಟ್ಟಡಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು.  ಈ ಸಂದರ್ಭದಲ್ಲಿ ಆನೆಗಳು ಮತ್ತು ಅವುಗಳ ಕಾರಿಡಾರ್‌ ರಕ್ಷಣೆ ಸಂಬಂಧ 2020ರ ಅ.14ರಂದು ಕರ್ನಾಟಕ ಹೈಕೋರ್ಟ್‌ ಹೊರಡಿಸಿರುವ ಆದೇಶ ಮತ್ತು ಮಾರ್ಗಸೂಚಿಗಳನ್ನೂ ಸಮಿತಿ ಪರಿಗಣಿಸಬೇಕು. 

  • ಮೊದಲೇ ಸ್ಥಾಪನೆಯಾಗಿರುವ ರೆಸಾರ್ಟ್‌ಗಳು ಕೂಡ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯ ಅನುಮತಿ ಇಲ್ಲದೆ ವಿಸ್ತರಣೆ ಮಾಡುವಂತಿಲ್ಲ. ಸಮಿತಿ ಇದನ್ನು ಪರಿಶೀಲಿಸಿ ನಿಯಮ ಉಲ್ಲಂಘನೆಯಾಗಿದ್ದು ಕಂಡರೆ ಅವುಗಳ ವಿರುದ್ಧವೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. 

  • ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ದೂರು ನೀಡುವ ಪ್ರಾಧಿಕಾರ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರು ಆಗಿರುವುದರಿಂದ ಮೈಸೂರು ಪ್ರಾದೇಶಿಕ ಆಯುಕ್ತರು ನಿಯಮ ಉಲ್ಲಂಘಿಸಿರುವವರ ವಿರುದ್ಧ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು.   

‘ವಿಷಾದನೀಯ ಗಂಭೀರ ಕ್ರಮ ಅಗತ್ಯ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೂರುದಾರ ಗಿರಿಧರ್‌ ಕುಲಕರ್ಣಿ ‘ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ತೆರವುಗೊಳಿಸಲೇಬೇಕು. ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಪ್ರಾದೇಶಿಕ ಆಯುಕ್ತರು ಇಲ್ಲಿಯವರೆಯೂ ಕ್ರಮ ಕೈಗೊಳ್ಳದಿರುವುದು ಅತ್ಯಂತ ವಿಷಾದನೀಯ. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ಬಂಡೀಪುರದ ಕುಂದುಕೆರೆ ವಲಯದಲ್ಲಿ ಕಣಿಯನಪುರ ಆನೆ ಕಾರಿಡಾರ್‌ ಇದ್ದು ಇಲ್ಲಿ ಆನೆಗಳ ಓಡಾಟ ಹೆಚ್ಚು. ಇದೇ ವ್ಯಾಪ್ತಿಯಲ್ಲಿ ರೆಸಾರ್ಟ್‌ ಹೋಂ ಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.