ADVERTISEMENT

ಚಾಮರಾಜನಗರ | ಅಕ್ರಮ ರೆಸಾರ್ಟ್‌, ಹೋಂಸ್ಟೇ ವಿರುದ್ಧ ಕ್ರಮ ಜರುಗಿಸಿ

ಅರಣ್ಯ ಇಲಾಖೆಗೆ ಮತ್ತೊಮ್ಮೆ ಎನ್‌ಟಿಸಿಎ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಮೇ 2023, 10:16 IST
Last Updated 12 ಮೇ 2023, 10:16 IST

ಚಾಮರಾಜನಗರ: ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ರೆಸಾರ್ಟ್‌, ಹೋಂಸ್ಟೇಗಳು, ಲಾಡ್ಜ್‌ಗಳು ಮತ್ತು ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಗೆ ಸೂಚಿಸಿದೆ. 

ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ನೀಡಿರುವ ದೂರಿನ ಆಧಾರದಲ್ಲಿ, ಎನ್‌ಟಿಸಿಎಯ ಸಹಾಯಕ ಐಜಿಎಫ್‌ (ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಫಾರೆಸ್ಟ್ಸ್‌) ಡಾ.ಅಭಿಷೇಕ್‌ ಕುಮಾರ್‌ ಗುರುವಾರ ರಾಜ್ಯ ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಗೆ ಪತ್ರ ಬರೆದಿದ್ದಾರೆ. 

ಬಿಆರ್‌ಟಿಯ ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್‌, ಹೋಂಸ್ಟೇಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದು, ಇದರಿಂದ ಅರಣ್ಯ ಸಂರಕ್ಷಣೆಗೆ ತೊಡಕಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಗಿರಿಧರ ಕುಲಕರ್ಣಿ ಎನ್‌ಟಿಸಿಎಗೆ ಕಳೆದ ವರ್ಷ ದೂರು ನೀಡಿದ್ದರು. 

ADVERTISEMENT

ಇದರ ಆಧಾರದಲ್ಲಿ ಎನ್‌ಟಿಸಿಎನ ಪ್ರಧಾನ ಕಚೇರಿಯು ಬೆಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಗೆ, ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸಿ ವಸ್ತುಸ್ಥಿತಿ ವರದಿ ನೀಡುವಂತೆ ಸೂಚಿಸಿತ್ತು. 

ಅದರಂತೆ ಸಹಾಯಕ ಐಜಿಎಫ್‌ ಹರಿಣಿ ವೇಣುಗೋಪಾಲ್‌ 2022ರ ನವೆಂಬರ್‌ 7ರಿಂದ 9ರವರೆಗೆ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ನಿರ್ದೇಶಕಿ ಹಾಗೂ ಡಿಸಿಎಫ್‌ ದೀಪ್‌ ಜೆ.ಕಾಂಟ್ರಾಕ್ಟರ್‌ ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಬೆಟ್ಟದಲ್ಲಿರುವ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಭೇಟಿ ನೀಡಿ ಪ್ರಾಧಿಕಾರದ ಕೇಂದ್ರ ಕಚೇರಿಗೆ ನ.28ರಂದು ವರದಿ ಸಲ್ಲಿಸಿದ್ದರು. 

ಆ ವರದಿಯ ಶಿಫಾರಸಿನ ಆಧಾರದಲ್ಲಿ ಅಕ್ರಮ ರೆಸಾರ್ಟ್‌, ಹೋಂಸ್ಟೇ, ಲಾಡ್ಜ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಗೆ ಸೂಚಿಸಬೇಕು ಎಂದು ಗಿರಿಧರ ಕುಲಕರ್ಣಿ ಎನ್‌ಟಿಸಿಎಯ ಸದಸ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು. 

ಅದರ, ಆಧಾರದಲ್ಲಿ ಎನ್‌ಟಿಸಿಎ ಈಗ ಪತ್ರ ಬರೆದಿದ್ದು ‘ಎನ್‌ಟಿಸಿಎಯ ವರದಿಯಲ್ಲಿರುವ ಶಿಫಾರಸಿನಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದೆ. 

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್‌) ಅವರು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು, ಅಕ್ರಮ ರೆಸಾರ್ಟ್, ಹೋಂಸ್ಟೇಗಳ ತೆರವಿಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.