ಚಾಮರಾಜನಗರ: ನಗರದ ಕೋವಿಡ್ ಆಸ್ಪತ್ರೆಗೆ ಸಕಾಲದಲ್ಲಿ ಆಮ್ಲಜನಕ ದೊರಕದೆ ಮೃತಪಟ್ಟವರ ಕುಟುಂಬಸ್ಥರು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ನೀಡಿದ್ದ ಭರವಸೆಯೇ ಅದಕ್ಕೆ ಕಾರಣ.
‘ಅಧಿಕಾರಕ್ಕೆ ಬಂದರೆ, ಸರ್ಕಾರಿ ಉದ್ಯೋಗ ನೀಡಲಾಗುವುದು’ ಎಂದು ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಭರವಸೆಯಂತೆ ನಮಗೆ ಸರ್ಕಾರಿ ಉದ್ಯೋಗ ಹಾಗೂ ಪರಿಹಾರ ನೀಡಬೇಕು’ ಎಂಬುದು ಸಂತ್ರಸ್ತ ಕುಟುಂಬದವರ ಆಗ್ರಹ.
2021ರ ಮೇ 2ರಂದು ಮೈಸೂರಿನಿಂದ ಸಕಾಲಕ್ಕೆ ಆಸ್ಪತ್ರೆಗೆ ಆಮ್ಲಜನಕ ಪೂರೈಕೆಯಾಗದೆ ವೆಂಟಿಲೇಟರ್ ಹಾಗೂ ತೀವ್ರ ನಿಗಾ ಘಟಕದಲ್ಲಿದ್ದ 24 ಸೋಂಕಿತರು ಮೃತಪಟ್ಟಿದ್ದರು. ಅಂದು ರಾತ್ರಿ 10.30ಕ್ಕೆ ಆಮ್ಲಜನಕ ಖಾಲಿಯಾಗಿತ್ತು. ಆಮ್ಲಜನಕ ಪೂರೈಕೆಯಾದಾಗ ರಾತ್ರಿ 2.30 ಆಗಿತ್ತು.
ಆಮ್ಲಜನಕದ ಕೊರತೆಯಿಂದಾದ ಆರೋಗ್ಯ ಸಮಸ್ಯೆಗಳಿಂದ ನಂತರವೂ ಕೆಲವು ಸೋಂಕಿತರು ಪ್ರಾಣ ಕಳೆದುಕೊಂಡಿದ್ದರು. ‘24 ಗಂಟೆಗಳ ಅವಧಿಯಲ್ಲಿ 36 ಮಂದಿ ಕೊನೆಯುಸಿರೆಳೆದಿದ್ದಾರೆ’ ಎಂದು ಹೇಳಲಾಗಿತ್ತು. ಅಂದಿನ ಸರ್ಕಾರ, ‘ಕೇವಲ ಮೂವರು ಮೃತಪಟ್ಟಿದ್ದಾರೆ’ ಎಂದಿತ್ತು.
ಸರ್ಕಾರವು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಘೋಷಿಸಿರಲಿಲ್ಲ. ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ತನಿಖಾ ವರದಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಹೈಕೋರ್ಟ್ ಸೂಚನೆಯಂತೆ, ಮೃತಪಟ್ಟವರಲ್ಲಿ 13 ಮಂದಿಯ ಕುಟುಂಬಕ್ಕೆ ತಲಾ ₹5 ಲಕ್ಷ ಹಾಗೂ ಉಳಿದ 11 ಮಂದಿಯ ಕುಟುಂಬಗಳಿಗೆ ತಲಾ ₹2 ಲಕ್ಷ ತಾತ್ಕಾಲಿಕ ಪರಿಹಾರ ಘೋಷಿಸಲಾಗಿತ್ತು.
₹1 ಲಕ್ಷ ಪರಿಹಾರ: ‘ಸರ್ಕಾರದ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದ್ದು, ಕುಟುಂಬಗಳಿಗೆ ಸಾಂತ್ವನ ಹೇಳಿ ಕನಿಷ್ಠ ಪರಿಹಾರವನ್ನೂ ಸರ್ಕಾರ ಕೊಟ್ಟಿಲ್ಲ’ ಎಂದು ಆರೋಪಿಸಿದ್ದ ಕಾಂಗ್ರೆಸ್, ಮೃತಪಟ್ಟಿದ್ದ 36 ಮಂದಿಯ ಕುಟುಂಬದವರಿಗೆ ತಲಾ ₹1 ಲಕ್ಷ ಪರಿಹಾರ ನೀಡಿತ್ತು.
ರಾಹುಲ್ ಭರವಸೆ: ಕಳೆದ ವರ್ಷದ ಅಕ್ಟೋಬರ್ 1ರಂದು ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮೃತಪಟ್ಟ 24 ಮಂದಿಯ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿದ್ದರು. ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ, ಎಲ್ಲರಿಗೂ ಸರ್ಕಾರಿ ಕೆಲಸ ಕೊಡಿಸಲಾಗುವುದು‘ ಎಂದು ಭರವಸೆ ನೀಡಿದ್ದರು.
ಡಿಕೆಶಿ ವಾಗ್ದಾನ: ಈ ವರ್ಷದ ಜನವರಿ 26ರಂದು ಜಿಲ್ಲೆಗೆ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ಬಂದಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಆಮ್ಲಜನಕ ಕೊರತೆಯಿಂದ ಮೃತಪಟ್ಟ 36 ಮಂದಿಯ ಕುಟುಂಬಕ್ಕೆ ಪರಿಹಾರ ನೀಡುವ, ಸಾಂತ್ವನ ಹೇಳುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಕಾಂಗ್ರೆಸ್ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ನಾವು ಗೆದ್ದರೆ 36 ಮಂದಿಯ ಕುಟುಂಬದ ಸದಸ್ಯರಿಗೆ ಸಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ನೀಡುತ್ತೇವೆ’ ಎಂದು ವಾಗ್ದಾನ ನೀಡಿದ್ದರು.
ಜಿಲ್ಲೆಯಿಂದ ನಿಯೋಗವೊಂದನ್ನು ಕರೆದೊಯ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆಯುತ್ತೇವೆ.
- ಪಿ. ಮರಿಸ್ವಾಮಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಜೀವನ ಕಷ್ಟವಾಗಿದೆ. ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಖರ್ಚಿಗೆ ಹಣವಿಲ್ಲ. ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಳ್ಳಬೇಕು.
- ಸಿದ್ದರಾಜಮ್ಮ ಮುಡಿಗುಂಡ (ಮೃತ ಜಯ ಶಂಕರ್ ಪತ್ನಿ)
ಮನೆಯವರು ನಿಧನರಾದ ಮೇಲೆ ಜೀವನ ಕಷ್ಟವಾಗಿದೆ. ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರಿ ಕೆಲಸ ಸಿಕ್ಕಿದರೆ ತುಂಬಾ ಅನುಕೂಲವಾಗುತ್ತದೆ.
- ಸವಿತಾ ಲಕ್ಕೂರು (ಮೃತ ಗುರುಪ್ರಸಾದ್ ಪತ್ನಿ)
ಯಾರ ವಿರುದ್ಧವೂ ಕ್ರಮವಿಲ್ಲ ದುರ್ಘಟನೆ ನಡೆದು ಎರಡು ವರ್ಷಗಳಾದರೂ ಸರ್ಕಾರ ಇದುವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ ಜಿಲ್ಲಾಡಳಿತ ಮತ್ತು ಆಸ್ಪತ್ರೆ ಆಡಳಿತದ ವಿರುದ್ಧ ಬೆಟ್ಟು ಮಾಡಿತ್ತು. ಸರ್ಕಾರ ನೇಮಿಸಿದ್ದ ಏಕ ಸದಸ್ಯ ತನಿಖಾ ಆಯೋಗದ ವರದಿ ಇನ್ನೂ ಬಹಿರಂಗವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.