ADVERTISEMENT

ಯಳಂದೂರು| ವರ್ಷಧಾರೆಗೆ ನಲುಗಿದ ಭತ್ತದ ಸಾಗುವಳಿ

ಯಳಂದೂರು: ಅಗರ ವ್ಯಾಪ್ತಿ ನಾಟಿ ಕಾರ್ಯ ಬೇಗ, ಕೆಸ್ತೂರು ಬೈಲು ನಿಧಾನ

ನಾ.ಮಂಜುನಾಥ ಸ್ವಾಮಿ
Published 19 ಸೆಪ್ಟೆಂಬರ್ 2022, 19:30 IST
Last Updated 19 ಸೆಪ್ಟೆಂಬರ್ 2022, 19:30 IST
ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಹೊರವಲಯದ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ತೊಡಗಿರುವ  ಮಹಿಳೆಯರು
ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಹೊರವಲಯದ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ತೊಡಗಿರುವ  ಮಹಿಳೆಯರು   

ಯಳಂದೂರು:ತಾಲ್ಲೂಕಿನಲ್ಲಿ ಭತ್ತದ ಸಸಿ ನಾಟಿ ಕಾರ್ಯ ನಿಧಾನವಾಗಿದೆ. ಬಿತ್ತನೆ ಪ್ರದೇಶ ಶೇ 65ರಷ್ಟು ಪೂರ್ಣಗೊಂಡಿದೆ. ಅಕಾಲಿಕ ಮಳೆ, ಅತಿಯಾದ ನೆರೆ ಹಾಗೂ ಹೆಚ್ಚಾದ ಉತ್ಪಾದನಾ ವೆಚ್ಚದಿಂದ ಅನ್ನದಾತರು ಕಂಗಾಲಾಗಿದ್ದಾರೆ. ಹಾಗಾಗಿ, ಈ ಬಾರಿ ಶೇ 35 ಭತ್ತದ ಇಳುವರಿ ಕುಸಿಯುವ ನಿರೀಕ್ಷೆ ಇದೆ.

ತಾಲ್ಲೂಕಿನ ಅಂದಾಜು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇ 30 ಭಾಗ ಭತ್ತ ನಾಟಿಗೆ ಮೀಸಲಾಗಿದೆ. ಈ ಬಾರಿ ಮಾಗಿ ಉಳುಮೆ ಹಂತದಲ್ಲಿ ನಿರೀಕ್ಷಿಸಿದ ಮಳೆ ಹಾಗೂ ಕಾಲುವೆ ನೀರು ಹರಿಯಲಿಲ್ಲ. ಮುಂಗಾರು ತಡವಾಗಿ ಪ್ರಾರಂಭಗೊಂಡರೂ, ನಿರೀಕ್ಷೆಗೂ ಮೀರಿದ ವರ್ಷಧಾರೆ ಆಯಿತು. ಇದರಿಂದ ಭೂಮಿ ಹದಗೊಳಿಸುವುದು ಹಾಗೂ ಬಿತ್ತನೆ ಪ್ರಕ್ರಿಯೆಗಳಿಗೆ ಹಿನ್ನಡೆಯಾಯಿತು. ನಿರಂತರ ಸುರಿದ ಮಳೆಗೆ ಕೃಷಿ ಚಟುವಟಿಕೆ ನಡೆಸಲೂ ಸಾಧ್ಯವಾಗಲಿಲ್ಲ. ಇದರಿಂದ ಬಿತ್ತನೆ ಕೆಲಸಗಳು ತಿಂಗಳ ಕಾಲ ಮುಂದೆ ಹೋಗಿದ್ದು. ಸೆಪ್ಟಂಬರ್ ಕಳೆಯುತ್ತಿದ್ದರೂ ನಾಟಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

‘ಕಬಿನಿ ಕಾಲುವೆಯಲ್ಲಿ ನೀರು ಹರಿದರೂ ಬಳಕೆ ಆಗಲಿಲ್ಲ. ಭೂಮಿ ಹದಗೊಳಿಸದ ಕಾರಣ ಭತ್ತದ ಬೆಳೆ ನಾಟಿ ಕಾರ್ಯ ವಿಳಂಬವಾಗಿದೆ. 15 ದಿನಗಳಿಂದ ಮಳೆ ವಿರಾಮ ನೀಡಿದ್ದು, ಸಾಗುವಳಿದಾರರು ನಾಟಿ ಕೆಲಸಕ್ಕೆ ಮುಂದಾಗಿದ್ದಾರೆ. ಕಸಬಾ ಮತ್ತು ಅಗರ ಹೋಬಳಿಗಳಲ್ಲಿ ಶೇ 90 ಭಾಗ ನಾಟಿ ಮುಗಿದಿದೆ. ಕೆಸ್ತೂರು ಸುತ್ತಮುತ್ತ ಭೂಮಿ ಹಸನುಗೊಳಿಸುವ ಕೆಲಸ ಆರಂಭವಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಮೃತೇಶ್ವರ ಮಾಹಿತಿ ನೀಡಿದರು.

ADVERTISEMENT

'ನಮ್ಮ ಗ್ರಾಮದಲ್ಲಿ ನಾಟಿ ಕಾರ್ಯ ಶೇ 50 ಮುಗಿದಿದೆ. ಇನ್ನೂ ಕೆಲವರು ಈಗ ನಾಟಿಗೆ ಮುಂದಾಗಿದ್ದಾರೆ. ಉತ್ತಮ ಮಳೆ ಸುರಿದಿದ್ದರಿಂದ ನೀರಿನ ಕೊರತೆ ಇಲ್ಲ. ಈಗಾಗಲೇ ನಾಟಿ ಮಾಡಿದ ಬೆಳೆ ಉತ್ತಮವಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಯಾವುದೇ ಹವಾಮಾನ ವೈಪರೀತ್ಯ ಹಾಗೂ ಕೀಟ ಬಾಧೆ ಕಾಡದಿದ್ದರೆ ಉತ್ತಮ ಫಸಲು ಕೈಸೇರಲಿದೆ' ಎಂದು ಗುಂಬಳ್ಳಿ ಗ್ರಾಮದ ಬಸವಣ್ಣ ಹೇಳಿದರು.

ಕೊಚ್ಚಿಹೋದ ಭತ್ತದ ಗದ್ದೆ

‘ಕೆರೆ, ಹೊಳೆ, ಮಳೆ ನೀರಿನ ಅಬ್ಬರಕ್ಕೆ ನಾಟಿ ಮಾಡಿದ್ದ ಗದ್ದೆ ಕೊಚ್ಚಿಹೋಯಿತು. ಬಿತ್ತನೆಗೆ ಹೂಡಿದ್ದ ಬಂಡವಾಳ ನೀರು ಪಾಲಾಯಿತು. ಹಾಗಾಗಿ, ಈ ವರ್ಷ ಅಕ್ಕಿಯನ್ನು ಹಣ ನೀಡಿ ಕೊಳ್ಳಬೇಕಾದ ಸ್ಥಿತಿ ಉದ್ಭವಿಸಿದೆ. ಕಳೆದ ವಾರವೂ ಕೆರೆ ಒಡ್ಡು ಒಡೆದು ಬೆಳೆ ಕೊಳೆಯುವ ಹಂತ ಮುಟ್ಟಿದೆ. ಕೆಲವೆಡೆ ಭತ್ತದ ಪೈರು ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದೆ’ ಎಂದು ಕೃಷಿಕ ಮಹಿಳೆ ಅಂಬಳೆ ಮಹದೇವಮ್ಮ ಅಲವತ್ತುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.