ಚಾಮರಾಜನಗರ: ಕಾನೂನುಬಾಹಿರವಾಗಿ ಮುಖಂಡರೇ ಪಂಚಾಯಿತಿ ನಡೆಸಿ, ದಂಪತಿಗೆ ‘ವಿಚ್ಛೇದನ’ ಕೊಡಿಸುವ, ಅದಕ್ಕಾಗಿ ದಂಡ ವಸೂಲಿ ಮಾಡಿ, ಹಂಚಿಕೊಳ್ಳುವ ಪದ್ಧತಿ ಜಿಲ್ಲೆಯ ಗ್ರಾಮಗಳಲ್ಲಿ ವ್ಯಾಪಕವಾಗಿದೆ.
ಬಡತನ, ಅನಕ್ಷರತೆ, ಮೌಢ್ಯ ಹಾಗೂ ಬಿಗಿ ಸಾಮಾಜಿಕ ಕಟ್ಟುಪಾಡು ಗಳಿಂದ ನಲುಗುತ್ತಿರುವ ತಳ ಸಮುದಾಯ ಗಳಲ್ಲಿ ಈ ಪದ್ಧತಿ ಹೆಚ್ಚು ರೂಢಿಯಲ್ಲಿದ್ದು, ನೊಂದ ಹೆಣ್ಣುಮಕ್ಕಳ ಬದುಕು ಅತಂತ್ರವಾಗುತ್ತಿದೆ.
ಪೋಷಕರ ಒತ್ತಡದಿಂದ ಬಾಲ್ಯವಿವಾಹವಾದವರು, ಪರಸ್ಪರ ಹೊಂದಾಣಿಕೆಯ ಕೊರತೆ, ಅಕ್ರಮ ಪ್ರೇಮ, ಮಕ್ಕಳಾಗದಿರುವುದು ಸೇರಿ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಕಾನೂನು ಬಾಹಿರವಾಗಿ ದಾಂಪತ್ಯ ಮುರಿದುಕೊಳ್ಳುತ್ತಿದ್ದಾರೆ.
ಬಾಲ್ಯ ವಿವಾಹವಾದವರು ಪರಸ್ಪರ ದೂರವಾಗಲು ಬಯಸಿದರೆ, ವ್ಯಾಜ್ಯವನ್ನು ನ್ಯಾಯಾಲಯದ ಬದಲಿಗೆ ಸಮುದಾಯದ ಕುಲಸ್ಥರೇ ಬಗೆಹರಿಸುತ್ತಾರೆ. ಗಂಡು ವಿಚ್ಛೇದನ ಬಯಸಿದರೆ, ಆತನ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ದಂಡ ವಿಧಿಸಿ ಪತ್ನಿಯಿಂದ ಬಂಧಮುಕ್ತಗೊಳಿಸಲಾಗುತ್ತಿದೆ.
‘ಹೆಣ್ಣು ದೂರವಾಗಲು ಬಯಸಿದರೆ, ಪೋಷಕರು ಅಥವಾ ಆಕೆಯನ್ನು ಮತ್ತೆ ವಿವಾಹವಾಗಲು ಬಯಸಿದವರು ದಂಡ ತೆರಬೇಕು. ಅದರಲ್ಲಿ ಸಂತ್ರಸ್ತನಿಗೆ ನಿರ್ದಿಷ್ಟ ಪರಿಹಾರ ಸಂದಾಯವಾಗು ತ್ತದೆ. ಉಳಿದ ಹಣದಲ್ಲಿ ಸಮುದಾಯದ ಕುಲಸ್ಥರಿಗೂ ಪಾಲು ದೊರಕುತ್ತದೆ’ ಎನ್ನುತ್ತಾರೆ ಸಂತ್ರಸ್ತೆ.
‘ಕೆಲವೆಡೆ, ದಂಡದ ಹಣವನ್ನು ಊರಿನ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಿದರೆ, ಕೆಲವೆಡೆ, ಊರ ಮಂದಿಗೆ ಊಟ ಹಾಕಿಸಲಾಗುತ್ತದೆ. ನೊಂದವರ ಕಣ್ಣೀರಿಗೆ ‘ಬೆಲೆ’ಯೇ ಇಲ್ಲ. ಸಮುದಾಯದ ಮುಖಂಡರ ನಿರ್ಧಾರ ಪ್ರಶ್ನಿಸುವ, ಕಾನೂನು ನೆರವು ಪಡೆಯುವ ಧೈರ್ಯ ಯಾರಿಗೂ ಇರುವುದಿಲ್ಲ. ಹೆಣ್ಣಿನ ಜೀವನಕ್ಕೆ ಬೆಲೆ ಕಟ್ಟುವುದು ಸರಿಯೇ’ ಎಂದು ಪ್ರಶ್ನಿಸುತ್ತಾರೆ ಅವರು.
‘ಯಳಂದೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ನಗರದಿಂದ ದೂರವಿರುವ ಗ್ರಾಮ ಗಳಲ್ಲಂತೂ ಸಮಸ್ಯೆ ಗಂಭೀರವಾಗಿದೆ. ಸಾಮಾಜಿಕ ಬಹಿಷ್ಕಾರದ ಭಯದಿಂದ ಸಂತ್ರಸ್ತರು ಬಹಿರಂಗವಾಗಿ ನೋವು ಹೇಳಿಕೊಳ್ಳುತ್ತಿಲ್ಲ’ ಎಂದು ತಿಳಿಸಿದರು.
ಕಾರಣ: ‘ಋತುಮತಿಯಾದ ಕೂಡಲೇ ಮಗಳಿಗೆ ಮದುವೆ ಮಾಡಿ ಭಾರ ಇಳಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರೀತಿ–ಪ್ರೇಮದ ಬಲೆಗೆ ಬಿದ್ದು ಕುಟುಂಬದ ಮರ್ಯಾದೆ ಬೀದಿಗೆ ಬರುತ್ತದೆ ಎಂಬ ಆತಂಕ ತಳ ಸಮುದಾಯಗಳಲ್ಲಿ ಗಟ್ಟಿಯಾಗಿ ಬೇರೂರಿದೆ.
ಆಸ್ತಿ ಬೇರೆಯವರ ಪಾಲಾಗುತ್ತದೆಂಬ ಕಾರಣಕ್ಕೆ ಸಂಬಂಧಿಕರಲ್ಲೇ ವಿವಾಹ ಮಾಡುವ ಸಂಪ್ರದಾಯವೂ ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣ. ಬಾಲ್ಯವಿವಾಹ ಗಂಭೀರ ಅಪರಾಧವಾಗಿರುವುದರಿಂದ ಪ್ರಕರಣ ದಾಖಲಾಗುವ ಹಾಗೂ ಬಂಧನ ಭೀತಿಯಿಂದ ಸಂತ್ರಸ್ತರು ಕಾನೂನಿನ ನೆರವು ಪಡೆಯಲು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಬಾಲ್ಯ ವಿವಾಹ ವಿರೋಧಿ ವೇದಿಕೆಯ ಸಿದ್ದರಾಜು.
‘ಕಾನೂನೊಂದೇ ಪರಿಹಾರವಲ್ಲ’
‘ಬಾಲ್ಯವಿವಾಹ ವಿರೋಧಿ ವೇದಿಕೆಯು ಬಾಲ್ಯವಿವಾಹದ ದುಷ್ಪರಿಣಾಮ ಹಾಗೂ ಕಾನೂನುಗಳ ಬಗ್ಗೆ ಗ್ರಾಮಮಟ್ಟದಲ್ಲಿ ನಿರಂತರವಾಗಿ ಅರಿವು ಮೂಡಿಸುತ್ತಿದೆ. ಸಂತ್ರಸ್ತರ ನೋವನ್ನು ಆಲಿಸಿ ಸ್ಪಂದಿಸುತ್ತಿದೆ. ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸುವ ಬದಲು ಬಾಲ್ಯವಿವಾಹ ಹೆಚ್ಚು ನಡೆಯುತ್ತಿರುವ ಕಡೆಗಳಲ್ಲಿ ಅರಿವು ಮೂಡಿಸಬೇಕು. ಸ್ಥಳೀಯ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನಿಷ್ಟ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸಿದ್ದರಾಜು ಸಲಹೆ ನೀಡಿದರು.
‘ಅಧ್ಯಯನ –ಅರಿವು ಅಗತ್ಯ’
‘ಬಾಲ್ಯವಿವಾಹ ನಡೆದಿದ್ದರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲು ಅವಕಾಶವಿದೆ. ಕಾನೂನುಬಾಹಿರ ವಿಚ್ಚೇದನದಂತಹ ಕೆಟ್ಟ ಪದ್ಧತಿಯನ್ನು ನಿಲ್ಲಿಸಲು ತಳಮಟ್ಟದಲ್ಲಿ ಅಧ್ಯಯನ ನಡೆಸಬೇಕು’ ಎನ್ನುತ್ತಾರೆ ಮಕ್ಕಳ ಹಕ್ಕು ಗಳ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ಡಾ.ವಾಸುದೇವ ಶರ್ಮ ಎನ್.ವಿ.
‘ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಗ್ರಾಮಗಳು ಹಾಗೂ ಶಾಲೆಗಳಲ್ಲಿ ಅರಿವು ಮೂಡಿಸಬೇಕು. ಶಾಸಕರು, ಸಮುದಾಯದ ಮುಖಂ ಡರು, ಗ್ರಾಮಸ್ಥರ ಜತೆ ನಿರಂತರ ಸಭೆ ನಡೆಸಿ ಸಮಸ್ಯೆಯನ್ನು ಮನದಟ್ಟು ಮಾಡಿಸಬೇಕು’ ಎಂಬುದು ಅವರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.