ಸಂತೇಮರಹಳ್ಳಿ: ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಆಶ್ರಯವಾಗಿರುವ ಕೆರೆ–ಕಟ್ಟೆಗಳು ಈ ಬಾರಿ ಬೇಸಿಗೆಗೆ ಮುನ್ನವೇ ಬತ್ತಿಹೋಗಿ, ಒಣಗಿರುವುದರಿಂದ ಜನರು ತ್ಯಾಜ್ಯ ಚೆಲ್ಲುವ ತಿಪ್ಪೆಗುಂಡಿಗಳಾಗಿ ಬದಲಾಗಿವೆ.
ಹೋಬಳಿ ವ್ಯಾಪ್ತಿಯ ಅನೇಕ ಕೆರೆಗಳಿಗೆ ಗ್ರಾಮಗಳು, ಪಟ್ಟಣ ಪ್ರದೇಶಗಳ ಅಂಗಡಿ ಮುಂಗಟ್ಟುಗಳಲ್ಲಿ ಸೃಷ್ಟಿಯಾಗುವ ಕಸಗಳನ್ನು ತಂದು ಸುರಿಯಲಾಗುತ್ತಿದೆ. ರಸ್ತೆಗಳ ಬದಿಗಳಲ್ಲಿರುವ ಕೆರೆಗಳ ಸ್ಥಿತಿಯಂತೂ ಶೋಚನೀಯವಾಗಿದೆ.
ಕಳೆದ ಮುಂಗಾರು, ಹಿಂಗಾರು ಅವಧಿಯಲ್ಲಿ ಮಳೆ ಕೊರತೆ ಉಂಟಾಗಿರುವುದರಿಂದ ಕೆರೆಕಟ್ಟೆಗಳು ತುಂಬಿರಲಿಲ್ಲ. ಹೀಗಾಗಿ, ಬಹುತೇಕ ಕೆರೆಗಳು ಬೇಸಿಗೆ ಆರಂಭಕ್ಕೂ ಮುನ್ನ ಒಣಗಿವೆ. ಇದನ್ನೇ ಬಂಡವಾಳ ಮಾಡಿಕೊಂಡವರು ಖಾಲಿ ಇರುವ ಕೆರೆಗಳಿಗೆ ತ್ಯಾಜ್ಯಗಳನ್ನು ತಂದು ಸುರಿಯಲು ಆರಂಭಿಸಿದ್ದಾರೆ. ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ನೋಡಿಯೂ ನೋಡದಂತೆ ತಿರುಗಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
‘ಸಂತೇಮರಹಳ್ಳಿ ಗ್ರಾಮಪಂಚಾಯಿತಿಗೆ ಸೇರಿದ ದೇಶವಳ್ಳಿ ಗ್ರಾಮದ ಕೆರೆಗೆ ತ್ಯಾಜ್ಯಗಳನ್ನು ಸುರಿಯಲಾಗಿದೆ. ಮಳೆ ಬಂದಾಗ ಕಸ ಮತ್ತೆ ಕೆರೆಗೆ ಸೇರಿ ನೀರು ಕಲುಷಿತವಾಗುತ್ತದೆ. ಇಲ್ಲಿಯೇ ಗ್ರಾಮಸ್ಥರು ಹಬ್ಬದ ಸಮಯಗಳಲ್ಲಿ ಪೂಜೆ ಮಾಡುತ್ತೇವೆ. ಗ್ರಾಮದ ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪಂಚಾಯಿತಿ ಕ್ರಮ ವಹಿಸಬೇಕು’ ಎಂದು ಗ್ರಾಮದ ಯಜಮಾನ ಮಂಟಯ್ಯ ಒತ್ತಾಯಿಸಿದರು.
ನಾಲೆಯನ್ನೂ ಸ್ವಚ್ಛಗೊಳಿಸಿ: ಹೋಬಳಿ ವ್ಯಾಪ್ತಿಯ ಬಹುತೇಕ ಕೆರೆಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಹೂಳು ತೆಗೆಯುವ ಅಥವಾ ಅಭಿವೃದ್ಧಿ ಪಡಿಸುವ ಕಾಮಗಾರಿ ಮುಗಿದಿದೆ. ಯಾವ ಕೆರೆಗಳಲ್ಲಿಯೂ ನೀರಿಲ್ಲ.
ಪ್ರತಿ ಬೇಸಿಗೆಯಲ್ಲಿ ನರೇಗಾ ಅಡಿ ಕೆರೆಯ ಹೂಳನ್ನು ಮಾತ್ರ ತೆಗೆಯಲಾಗುತ್ತಿದೆ. ಕೆರೆಗೆ ನೀರು ಹರಿದು ಬರುವ ಜಲ ನಾಲೆ, ಕಾಲುವೆಯನ್ನು ದುರಸ್ತಿ ಮಾಡುವುದಕ್ಕೆ ಪಂಚಾಯಿತಿಗಳು ಗಮನ ಹರಿಸುವುದಿಲ್ಲ ಎಂಬುದು ಗ್ರಾಮಸ್ಥರ ದೂರು.
ಮಳೆಗಾಲದಲ್ಲಿ ಕೆರೆಗೆ ನೀರು ಹರಿದು ಬರುವ ನಾಲೆಗಳನ್ನು ಗುರುತಿಸಿ ಕೆರೆಗಳಿಗೆ ಸರಿಯಾದ ದಾರಿ ತೋರಿಸಿ ನಾಲೆ ದುರಸ್ತಿಪಡಿಸಿದಾಗ ಬೇಸಿಗೆಯಲ್ಲಿಯೂ ಕೆರೆಗಳಲ್ಲಿ ನೀರು ಇರುತ್ತದೆ. ದಣಿದು ಬಂದ ಜಾನುವಾರುಗಳು, ಆಡು, ಕುರಿಗಳಿಗೆ ಇದರಿಂದ ಅನುಕೂಲವಾಗಲಿದೆ. ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳು, ಕೆರೆ ಹೂಳೆತ್ತುವುದಕ್ಕೆ ಮಾತ್ರ ಗಮನ ನೀಡದೆ, ಕೆರೆಗೆ ನೀರು ಹರಿಸುವ ಕಾಲುವೆ, ನಾಲೆಯನ್ನೂ ಸ್ವಚ್ಛಗೊಳಿಸಲು ಕ್ರಮ ವಹಿಸಬೇಕಾಗಿದೆ ’ ಎಂಬುದು ಬಹುತೇಕ ಗ್ರಾಮಸ್ಥರ ಒತ್ತಾಯ.
‘ಪ್ರತಿ ಗ್ರಾಮ ಸಭೆಗಳಲ್ಲಿ ಸಾರ್ವಜನಿಕ ಲೆಕ್ಕ ತಪಾಸಣೆಯಲ್ಲಿ ನರೇಗಾ ಯೋಜನಾಧಿಕಾರಿಗಳು ಕೆರೆಗಳ ಪರಿಸ್ಥಿತಿಗಳನ್ನು ಪರಿಗಣಿಸುವುದಿಲ್ಲ. ಇದು ಪ್ರತಿ ವರ್ಷವೂ ಮುಂದುವರಿಯುತ್ತದೆ. ಕೆರೆಗಳಿಗೆ ನೀರು ತುಂಬಿಸುವ ಮೂಲವನ್ನು ಹುಡುಕುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗಿದೆ. ಆದರೆ, ನಾಮ್‌ಕಾವಸ್ಥೆಗೆ ಭೇಟಿ ನೀಡಿ ಹೋಗುತ್ತಾರೆ’ ಎಂದು ತೆಳ್ಳನೂರಿನ ನಾಗೇಶ್ ದೂರಿದರು.
ಕೆರೆಗಳಲ್ಲಿ ತ್ಯಾಜ್ಯ ಸುರಿಯುವುದನ್ನು ತಪ್ಪಿಸುವಂತೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಕೃಷ್ಣಪ್ಪ ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಇಒ
ಕೆರೆಯ ಒಡಲು ಸೇರದ ನೀರು
ತೆಳ್ಳನೂರು ಬಾಣಹಳ್ಳಿ ಕಮರವಾಡಿ ಹೊಂಗನೂರು ಮಸಣಾಪುರ ಭಾಗಗಳಲ್ಲಿ ಕಬಿನಿ ಅಚ್ಚುಕಟ್ಟು ಪ್ರದೇಶಕ್ಕೆ ವ್ಯವಸಾಯಕ್ಕೆ ನೀರು ಬಿಡುವ ಸಮಯದಲ್ಲಿ ಸಣ್ಣಪುಟ್ಟ ಕೆರೆಗಳು ತುಂಬಿಕೊಳ್ಳುತ್ತವೆ. ಹಿಂದಿನ ವರ್ಷಗಳೆಲ್ಲ ಬೇಸಿಗೆಯಲ್ಲಿಯೂ ತುಂಬಿ ಜಾನುವಾರುಗಳು ಹಾಗೂ ಗ್ರಾಮಗಳ ಜನರಿಗೆ ಅನುಕೂಲವಾಗುತ್ತಿತ್ತು. ಈಚಿನ ದಿನಗಳಲ್ಲಿ ಈ ಕೆರೆಗಳಲ್ಲಿ ಹೂಳು ತೆಗೆಯುತ್ತಿಲ್ಲ. ಕಾಡು ಜಾತಿ ಗಿಡಗಳು ಹಾಗೂ ಜೊಂಡು ಬೆಳೆದು ನಿಂತಿದೆ. ಇದರಿಂದ ಕಬಿನಿ ನಾಲೆಯಲ್ಲಿ ಸರಾಗವಾಗಿ ಹರಿದು ಬಂದ ಮಳೆಯ ನೀರು ಕೆರೆಗಳ ಒಡಲು ಸೇರದೆ ರಸ್ತೆಯ ಪಾಲಾಗುತ್ತಿದೆ. ಕೆರೆಗಳ ನಿರ್ವಹಣೆ ಸಮರ್ಪಕವಾಗಿ ನಡೆಯದಿರುವುದರಿಂದ ತ್ಯಾಜ್ಯಗಳು ಕೆರೆಯ ಒಡಲಿಗೆ ಸೇರಿಕೊಳ್ಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.