ADVERTISEMENT

ಯಳಂದೂರು: ಉದ್ದು ಬೆಳೆಗೆ ಹೇನು, ನಂಜಾಣು ಬಾಧೆ

ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆ; ಇಳುವರಿ ಕುಸಿಯುವ ಆತಂಕ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 5:48 IST
Last Updated 13 ಜೂನ್ 2024, 5:48 IST
ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ-ದುಗ್ಗಹಟ್ಟಿ ಹೊರವಲಯದಲ್ಲಿ ಬೆಳೆದ ಉದ್ದಿನ ಫಸಲು
ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ-ದುಗ್ಗಹಟ್ಟಿ ಹೊರವಲಯದಲ್ಲಿ ಬೆಳೆದ ಉದ್ದಿನ ಫಸಲು   

ಯಳಂದೂರು: ರೈತರಿಗೆ ಮುಂಗಾರು ಪೂರ್ವ  ಮಳೆಗೆ ದ್ವಿದಳಧಾನ್ಯ ಫಸಲು ಅನ್ನದಾತರಲ್ಲಿ ಕೊಂಚ ಭರವಸೆ ಮೂಡಿಸಿದೆ. ಆದರೆ, ಕಾಯಿ ಕಟ್ಟುವ ಹಂತದಲ್ಲಿ ಹೇನು ಮತ್ತು ನಂಜಾಣು ಪೀಡೆ ಕಾಡಿದೆ. ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿದೆ.

ತಾಲ್ಲೂಕಿನಲ್ಲಿ ಉದ್ದು 540 ಹೆಕ್ಟೇರ್, ಅಲಸಂದೆ 150 ಹಾಗೂ ಹೆಸರು 380 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಂದು ವಾರದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಮೋಡ ಮುಸುಕಿದ ವಾತಾವರಣ ಮತ್ತು ಚಳಿಗಾಳಿ ಬೀಸುತ್ತಿದ್ದು, ದ್ವಿದಳಧಾನ್ಯ ಫಸಲಿಗೆ ಕೀಟ ಬಾಧೆ ಲಕ್ಷಣ ಕಂಡುಬಂದಿದೆ.

‘ಹಿಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯ ಬಿತ್ತನೆ ಮಾಡಿದ್ದ ಬೇಸಾಯಗಾರರು ಕಟಾವು ಮಾಡುತ್ತಿದ್ದಾರೆ. ಮೇನಲ್ಲಿ ನಾಟಿ ಮಾಡಿದ ತಾಕುಗಳಲ್ಲಿ ಬೆಳೆ ಹೂ ಅರಳುವ ಹಂತದಲ್ಲಿದೆ. ಕೆಲವು ಭಾಗಗಳಲ್ಲಿ ಕಾಯಿ ಕಟ್ಟಿದೆ. ಈ ಹಂತದಲ್ಲಿ ಬೆಳೆಗೆ ಹೇನು ಮತ್ತು ಎಲೆ ಮುದುರು ಮಾರು ಕಂಡುಬಂದರೆ, ಕೆಲವೆಡೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ’ ಎಂದು ಕೃಷಿಕ ದುಗ್ಗಹಟ್ಟಿ ನಂಜಶೆಟ್ಟಿ ಹೇಳಿದರು.

ADVERTISEMENT

ಬೆಳೆ ವಿಮೆ ಮಾಡಿಸಿ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ವಿಮೆ ಮಾಡಿಸಲು ಕೃಷಿ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಹೋಬಳಿ ಮಟ್ಟದಲ್ಲಿ ಮಳೆ ಅಶ್ರಿತ ಉದ್ದು 1 ಎಕರೆಗೆ ₹133 ಹಾಗೂ ಹೆಸರು ₹135 ಪಾವತಿಸಲು ಜುಲೈ 1 ಕೊನೆಯ ದಿನ  ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ  ತಿಳಿಸಿದ್ದಾರೆ. ನೀರಾವರಿ ಮೆಕ್ಕೆಜೋಳ 1 ಎಕರೆಗೆ ₹ 261 ಮತ್ತು ಮಳೆ ಅಶ್ರಿತ ಮುಸುಕಿನಜೋಳ 1 ಎಕರೆಗೆ ₹229  ಜುಲೈ 15 ರೊಳಗೆ ಪಾವತಿಸಬಹುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಾವರಿ ಭತ್ತ ಎಕರೆಗೆ ₹377, ರಾಗಿ 1 ಎಕರೆಗೆ ₹205 ಮತ್ತು ಮಳೆ ಅಶ್ರಿತ ರಾಗಿ 1 ಎಕರೆಗೆ ₹172 ಮೊತ್ತವನ್ನು ಜುಲೈ 31 ರೊಳಗೆ ಪಾವತಿಸಬಹುದು. ಬೆಳೆ ವಿಮೆ ನೋಂದಣಿಗೆ ಗುರುತಿನ ಚೀಟಿ ಸಂಖ್ಯೆ (ಎಫ್ಐಡಿ) ಕಡ್ಡಾಯವಾಗಿದೆ ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಯಿ ಕಚ್ಚುವ ಹಂತದಲ್ಲಿ ದ್ವಿದಳಧಾನ್ಯ ಬೆಳೆ

‘ಕೃಷಿ ಅಧಿಕಾರಿ ಸಲಹೆ ಲಭ್ಯ’

ಕಾಯಿ ಕಟ್ಟುವ ಹಂತದಲ್ಲಿ ಉದ್ದು. ಹೆಸರು ಅವರೆ ಬೆಳೆಗೆ ನುಸಿ ಮತ್ತು ಹೇನು ಬಾಧೆ ಕಾಡಲಿದೆ. ರೈತರು ರೋಗ ತಡೆಯಲು ಬಾಧಿತ ಗಿಡದ ಭಾಗವನ್ನು ಕೃಷಿ ತಜ್ಞರಿಗೆ ತೋರಿಸಿ ಔಷಧೋಪಚಾರ ಮಾಡಬೇಕು.   ತುಂತುರು ಮಳೆ ಸುರಿಯುವ ನಿರೀಕ್ಷೆ ಇದ್ದು ಬೆಳೆ ಸಂರಕ್ಷಣೆಗೆ ಮುಂದಾಗಬೇಕು. ಜೂ 12 ರಿಂದ 17ರ ತನಕ ತಾಲ್ಲೂಕಿನಲ್ಲಿ ಅಲ್ಲಲ್ಲಿ ತುಂತುರು ಮಳೆಯಿಂದ ಹಗುರ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಮಾನ ಇಲಾಖೆ ಸೂಚಿಸಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.