ADVERTISEMENT

ಕೊಳ್ಳೇಗಾಲ | ಜನ–ಜಾನುವಾರಿಗೆ ಕಂಟಕವಾದ ಪ್ಲಾಸ್ಟಿಕ್‌: ಕ್ರಮಕ್ಕೆ ಆಗ್ರಹ

ನಿಷೇಧವಾದರೂ ಪ್ಲಾಸ್ಟಿಕ್ ಬಳಕೆ, ಮಾರಾಟಕ್ಕಿಲ್ಲ ಅಡ್ಡಿ: ನಗರದ ಸೌಂದರ್ಯ ಹಾಳು– ಕ್ರಮಕ್ಕೆ ಆಗ್ರಹ

ಅವಿನ್ ಪ್ರಕಾಶ್
Published 17 ಅಕ್ಟೋಬರ್ 2024, 7:10 IST
Last Updated 17 ಅಕ್ಟೋಬರ್ 2024, 7:10 IST
ಕೊಳ್ಳೇಗಾಲ ನಗರದಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ತರಕಾರಿ ಆಹಾರ ಪದಾರ್ಥ ಕೊಂಡೊಯ್ಯುತ್ತಿರುವ ಮಹಿಳೆ
ಕೊಳ್ಳೇಗಾಲ ನಗರದಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ತರಕಾರಿ ಆಹಾರ ಪದಾರ್ಥ ಕೊಂಡೊಯ್ಯುತ್ತಿರುವ ಮಹಿಳೆ   

ಕೊಳ್ಳೇಗಾಲ: ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ನಿಷೇಧವಾಗಿದ್ದರೂ ಮಾರಾಟ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯ ನಗರದ ತುಂಬೆಲ್ಲ ಆವರಿಸಿಕೊಂಡಿದ್ದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ.

ನಗರದ ಪ್ರತಿಯೊಂದು ಬಡಾವಣೆಗಳ ಸಣ್ಣ ಅಂಗಡಿಗಳು ಹಾಗೂ ಹೋಟೆಲ್‌ಗಳಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್ ಮಾರಾಟ ನಡೆಯುತ್ತಿದ್ದು ತಡೆಯುವ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಪರಿಣಾಮ ನಗರದ ತುಂಬೆಲ್ಲ ಪ್ಲಾಸ್ಟಿಕ್ ಹಾವಳಿ ಮಿತಿಮೀರಿದೆ.

ಜನ–ಜಾನುವಾರು ಹಾಗೂ ಪ್ರಕೃತಿಗೆ ಮಾರಾಕವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಪರಿಸರ ಇಲಾಖೆ 40 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ನಿಯಮ ಪಾಲಿಸದ ಮಾರಾಟಗಾರರು ಮತ್ತು ಉತ್ಪಾದಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.

ADVERTISEMENT

ಕಾನೂನು ಜಾರಿಯಾಗಿ ಹಲವು ವರ್ಷಗಳು ಕಳೆದರೂ ಮಾರುಕಟ್ಟೆ, ಚಿಲ್ಲರೆ ಅಂಗಡಿ, ಬೀದಿ ಬದಿ 40 ಮೈಕ್ರಾನ್‌ಗಿಂತಲೂ ಕಡಿಮೆಯ ಅತಿ ಕಳಪೆ ಪ್ಲಾಸ್ಟಿಕ್ ಮಾರಾಟ ಮಾಡಲಾಗುತ್ತಿದೆ. ಜನರು ಕೂಡ ಪ್ಲಾಸ್ಟಿಕ್‌ ಕವರ್‌ಗಳನ್ನು ವ್ಯಾಪಾರಿಗಳಿಂದ ಬಲವಂತವಾಗಿ ಪಡೆಯುತ್ತಿರುವುದರಿಂದ ಪ್ಲಾಸ್ಟಿಕ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಗರಸಭೆ ಅಧಿಕಾರಿಗಳು ಆರಂಭದಲ್ಲಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜನ ಜಾಗೃತಿ ಮೂಡಿಸಿದ್ದೆವು. ಅಲ್ಪ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣವೂ ಬಿದ್ದಿತ್ತು. ಇದೀಗ ಮತ್ತೆ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ನಗರಸಭೆ ಅಧಿಕಾರಿಗಳು ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಕಠಿಣ ಎಚ್ಚರಿಕೆ ಸಹಿತ ದುಬಾರಿ ದಂಡ ವಿಧಿಸಬೇಕು, ಸಾರ್ವಜನಿಕರಿಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ, ನಗರದ ಸ್ವಚ್ಛತೆಯ ಕುರಿತು ಅರಿವು ಮೂಡಿಸಬೇಕು ಎನ್ನುತ್ತಾರೆ ಪರಿಸರ ಪ್ರೇಮಿ ಸುಷ್ಮಾ.

ನಗರಸಭೆ ವೈಫಲ್ಯ: ನಗರಸಭೆ ಪ್ಲಾಸ್ಟಿಕ್ ಬಳಕೆ ತಡೆಯುವ ಬಗ್ಗೆ ಕಠಿಣ ಕ್ರಮ ಕೈಗೊಂಡಿಲ್ಲ. ನಗರದ ದೇವಾಂಗಪೇಟೆ, ತಾಲ್ಲೂಕು ಕಚೇರಿ ಮುಂಭಾಗ, ಬಸ್ ನಿಲ್ದಾಣದ ಸುತ್ತಮುತ್ತ, ಬಸ್ತಿಪುರ ರಸ್ತೆಯಲ್ಲಿ ಬೀದಿಬದಿ ಹೋಟೆಲ್‌ಗಳು ಸೇರಿದಂತೆ ದೊಡ್ಡ ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಅವ್ಯಾಹತವಾಗಿ ಪ್ಲಾಸ್ಟಿಕ್ ಬಳಕೆ ನಡೆಯುತ್ತಿದೆ.

ಇಡ್ಲಿ, ದೋಸೆ, ಪಲಾವ್‌, ಕಾಫಿ, ಟೀ, ಹಾಲು ಸೇರಿದಂತೆ ತೀರಾ ಬಿಸಿಯಾದ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಕಟ್ಟಿಕೊಡಲು ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಕವರ್ ಬಳಕೆ ಮಾಡುತ್ತಿದ್ದಾರೆ. ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡುತ್ತಿರುವುದು ಜನರ ಜೀವನದ ಜೊತೆ ಚೆಲ್ಲಾಟವಾಡಿದಂತಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಅವರು.

ಅಪಾಯಕಾರಿ ಪ್ಲಾಸ್ಟಿಕ್ ಜನರ ದೇಹ ಸೇರುತ್ತಿರುವುದು ಹಾಗೂ ನಗರದ ಸೌಂದರ್ಯ ಹಾಳುಗೆಡವುತ್ತಿರುವುದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಅರಿವಿದ್ದರೂ ಕ್ರಮ ಜರುಗಿಸದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನೆಪ ಮಾತ್ರಕ್ಕೆ ಕೆಲ ಅಂಗಡಿಗಳಲ್ಲಿ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಬಾರದು, ನಗರದಾದ್ಯಂತ ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್ ಹಾವಳಿ ಯನ್ನು ಬೇರುಮಟ್ಟದಲ್ಲಿ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿತ್ತಾರೆ ಮುಖಂಡ ಅಜಯ್.

ಜಾನುವಾರು ಜೀವಕ್ಕೆ ಕುತ್ತು: ನಗರದ ಎಲ್ಲೆಂದರರಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ನಿಂದ ಪ್ರಾಣಿಗಳ ಜೀವಕ್ಕೆ ಕುತ್ತು ಎದುರಾಗಿದೆ. ಪ್ಲಾಸ್ಟಿಕ್ ಕವರ್‌ನಲ್ಲಿ ಬಿಸಾಡುವ ಅಳಿದುಳಿದ ಆಹಾರ ತಿನ್ನುವಾಗ ಪೂರ್ತಿ ಪ್ಲಾಸ್ಟಿಕ್ ಜಾನುವಾರುಗಳ ಹೊಟ್ಟೆ ಸೇರುತ್ತಿದ್ದು ಪ್ರಾಣಕ್ಕೆ ಕಂಟಕವಾಗುತ್ತಿದೆ. ಬಿಡಾಡಿ ದನಗಳು ಅತಿಯಾಗಿ ಪ್ಲಾಸ್ಟಿಕ್ ಸೇವಿಸಿ ಜೀರ್ಣವಾಗದೆ ಉಸಿರಾಟದ ಸಮಸ್ಯೆ ಎದುರಾಗಿ ಸಾವನ್ನಪ್ಪುತ್ತಿವೆ. ಮನುಷ್ಯರು ಮಾಡುವ ತಪ್ಪಿಗೆ ಅಮಾಯಕ ಪ್ರಾಣಿಗಳು ಜೀವ ತೆರಬೇಕಾಗಿದ್ದು ನಗರಸಭೆ ಪ್ಲಾಸ್ಟಿಕ್ ನಿರ್ಮೂಲನೆಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಪರಿಸರ ಪ್ರೇಮಿ ಜುಹೇಬ್.

ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್ ಕಣ: ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಲೋಟದಲ್ಲಿ ಟೀ, ಕಾಫಿ, ಹಣ್ಣಿನ ರಸ ಸೇವನೆ ಹಾಗೂ ಕವರ್‌ನಲ್ಲಿ ಆಹಾರ ಸೇವಿಸುತ್ತಿರುವುದರಿಂದ ನಿಧಾನವಾಗಿ ದೇಹಕ್ಕೆ ಪ್ಲಾಸ್ಟಿಕ್ ಕಣಗಳು ಸೇರುತ್ತಿದ್ದು ಮಾರಣಾಂತಿಕ ಕಾಯಿಲೆಗಳನ್ನು ತಂದೊಡ್ಡುತ್ತಿವೆ. ಮೂತ್ರ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡ, ರಕ್ತನಾಳಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಪ್ಲಾಸ್ಟಿಕ್ ಸುಡುವುದರಿಂದಲೂ ಪೊಸ್‌ಜೀನ್, ಕ್ಲೋರಿನ್, ಗಂಧಕ, ಸಾರಜನಕಗಳಂತಹ ವಿಷ ಅನಿಲಗಳು ಮನುಷ್ಯನ ಶ್ವಾಸಕೋಶ ಸೇರಿ ಬಂಜೆತನ, ಕ್ಯಾನ್ಸರ್ ಹಾಗೂ ಗರ್ಭಾಶಯದೊಳಗೆ ಸಮಸ್ಯೆಗಳು ಎದುರಾಗುತ್ತಿವೆ ಎಂದು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜಶೇಖರ್ ಹೇಳುತ್ತಾರೆ.

ಹೋಟೆಲ್‌ಗಳಲ್ಲಿ ಆಹಾರ ಪಾರ್ಸೆಲ್ ಕೊಡುತ್ತಿರುವುದು
ನಗರದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಸಂಬಂಧ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಮುಂದೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿವುದು ಗುರಿಯಾಗಿದೆ
ರೇಖಾ ನಗರಸಭೆ ಅಧ್ಯಕ್ಷೆ
ಪ್ಲಾಸ್ಟಿಕ್ ಹಾವಳಿ ಮಿತಿಮೀರಿದ್ದು ರೋಗರುಜಿನಗಳು ಕಾಣಿಸಿಕೊಳ್ಳುತ್ತಿವೆ. ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಿದೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು
ಚಂದ್ರಮ್ಮ ಪರಿಸರ ಪ್ರೇಮಿ

‘ಪ್ಲಾಸ್ಟಿಕ್ ಮುಕ್ತ ಕೊಳ್ಳೇಗಾಲ’

ಕೊಳ್ಳೇಗಾಲ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಒಂದು ವಾರದಲ್ಲಿ ನಾಲ್ಕರಿಂದ ಐದು ತಂಡಗಳನ್ನು ರಚಿಸಿ ಎಲ್ಲಾ ಅಂಗಡಿಯ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುವುದು. ಮುಂದೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಹೇರಲಾಗುವುದು.

-ರಮೇಶ್ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.