ADVERTISEMENT

ಚಾಮರಾಜನಗರ: ಹೆಲ್ಮೆಟ್ ಹಾಕದವರಿಗೆ ಅಪಘಾತದ ವಿಡಿಯೊ ನೋಡುವ ಶಿಕ್ಷೆ!

ಸವಾರರಿಗೆ ದಂಡ ಹಾಕುವ ಬದಲು ಹೊಸ ಹೆಲ್ಮೆಟ್‌ ಹಾಕಿಸಿದ ಎಸ್‌ಪಿ ಡಾ.ಬಿ.ಟಿ.ಕವಿತಾ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 6:32 IST
Last Updated 13 ಆಗಸ್ಟ್ 2024, 6:32 IST
ಹೆಲ್ಮೆಟ್ ಹಾಕದೆ ನಗರದ ಪಚ್ಚಪ್ಪ ಸರ್ಕಲ್‌ನಲ್ಲಿ ಸಿಕ್ಕಿಬಿದ್ದ ಸವಾರರಿಗೆ ಅಪಘಾತದ ವಿಡಿಯೋಗಳನ್ನು ತೋರಿಸುತ್ತಿರುವ ಎಸ್‌ಪಿ ಡಾ.ಬಿ.ಟಿ.ಕವಿತಾ
ಹೆಲ್ಮೆಟ್ ಹಾಕದೆ ನಗರದ ಪಚ್ಚಪ್ಪ ಸರ್ಕಲ್‌ನಲ್ಲಿ ಸಿಕ್ಕಿಬಿದ್ದ ಸವಾರರಿಗೆ ಅಪಘಾತದ ವಿಡಿಯೋಗಳನ್ನು ತೋರಿಸುತ್ತಿರುವ ಎಸ್‌ಪಿ ಡಾ.ಬಿ.ಟಿ.ಕವಿತಾ   

ಚಾಮರಾಜನಗರ: ಹೆಲ್ಮೆಟ್‌ ಇಲ್ಲದೆ ವಾಹನ ಚಲಾಯಿಸುವವರನ್ನು ಹಿಡಿದು ಪೊಲೀಸರು ದಂಡ ಹಾಕುವುದು ಸರ್ವೆ ಸಾಮಾನ್ಯ. ಆದರೆ, ಚಾಮರಾಜನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತ್ರ ಹೆಲ್ಮೆಟ್‌ ಹಾಕದ ಸವಾರರಿಗೆ ದಂಡ ವಿಧಿಸಲಿಲ್ಲ; ಬದಲಿಗೆ ಹೆಲ್ಮೆಟ್‌ ಹಾಕಿಸಿದರು !

ಸೋಮವಾರ ನಗರದ ಪಚ್ಚಪ್ಪ ಸರ್ಕಲ್‌ನಲ್ಲಿ ಸ್ವತಃ ಒಂದು ತಾಸು ಕಾರ್ಯಾಚರಣೆ ನಡೆಸಿದ ಎಸ್‌ಪಿ ಹೆಲ್ಮೆಟ್ ಇಲ್ಲದೆ ವಾಹನ ಓಡಿಸುತ್ತಿದ್ದವರನ್ನೆಲ್ಲ ತಡೆದು ಒಂದೆಡೆ ನಿಲ್ಲಿಸಿದರು. ಸಿಕ್ಕಿಬಿದ್ದವರು ದಂಡ ಕಟ್ಟುವ ಯೋಚನೆಯಲ್ಲಿ ಮುಳುಗಿದ್ದಾಗಲೇ ಮೊಬೈಲ್ ತೆಗೆದು ಅವರೆಲ್ಲರಿಗೂ ವಿಡಿಯೊಗಳನ್ನು ತೋರಿಸಲು ಶುರುಮಾಡಿದರು.

ಏನಿತ್ತು ವಿಡಿಯೋದಲ್ಲಿ: ವಿಡಿಯೋದಲ್ಲಿ ಕಳೆದ ತಿಂಗಳು ಚಾಮರಾಜನಗರದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದ ಕಾರಣಕ್ಕೆ ಸಾವನ್ನಪ್ಪಿದವರ ಭೀಕರ ದೃಶ್ಯಾವಳಿಗಳಿದ್ದವು. ವಿಡಿಯೊಗಳನ್ನು ನೋಡಿದ ಬೈಕ್‌ ಸವಾರರು ಮುಂದೆ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವ ವಾಗ್ದಾನ ಮಾಡಿದರು.

ADVERTISEMENT

ಈ ಸಂದರ್ಭ ಹೆಲ್ಮೆಟ್ ಧರಿಸುವುದರ ಮಹತ್ವವನ್ನು ತಿಳಿಸಿದ ಎಸ್‌ಪಿ ‘ಹೆಲ್ಮೆಟ್‌ ಸದಾ ಸವರಾರರ ತಲೆ ಮೇಲಿರಬೇಕು, ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಮೇಲೆ ಇರಿಸಿಕೊಳ್ಳಬಾರದು ಎಂದು ತಿಳಿವಳಿಕೆ ನೀಡಿ, ಮೊದಲ ಬಾರಿ ನಿಯಮ ಉಲ್ಲಂಘನೆ ಕಾರಣಕ್ಕೆ ದಂಡ ಕಟ್ಟುವ ಅವಶ್ಯಕತೆ ಇಲ್ಲ. ಆದರೆ, ಹೆಲ್ಮೆಟ್ ಧರಿಸಿಯೇ ವಾಹನ ಬಿಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ಅದರಂತೆ ಕೆಲವರು ಪೇಟೆಗೆ ತೆರಳಿ ದಂಡಕಟ್ಟಬೇಕಾಗಿದ್ದ ಹಣದಲ್ಲಿ ಹೊಸದಾಗಿ ಹೆಲ್ಮೆಟ್‌ಗಳನ್ನು ಖರೀದಿಸಿದರೆ, ಕೆಲವರು ಮನೆಗೆ ಹೋಗಿ ಹಳೆಯ ಹೆಲ್ಮೆಟ್‌ಗಳನ್ನು ತಂದು ವಾಹನಗಳನ್ನು ಬಿಡಿಸಿಕೊಂಡುಹೋದರು.

ಹೆಲ್ಮೆಟ್ ಹಾಕದೆ 15 ಮಂದಿ ಸಾವು!

ಕಳೆದ ಒಂದು ತಿಂಗಳಲ್ಲಿ ಚಾಮರಾಜನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 22 ಮಂದಿ ಬೈಕ್ ಸಾವಾರರು ಧಾರುಣವಾಗಿ ಮೃತಪಟ್ಟಿದ್ದಾರೆ. ಅವರಲ್ಲಿ 15 ಜನರ ಸಾವು ಹೆಲ್ಮೆಟ್ ಧರಿಸದ ಕಾರಣಕ್ಕೆ ಸಂಭವಿಸಿದೆ. ಸಣ್ಣ ನಿರ್ಲಕ್ಷ್ಯಕ್ಕೆ ಮನೆಗೆ ಆಧಾರಸ್ತಂಭವಾಗಿದ್ದವರು ಬಲಿಯಾದರೆ ಇಡೀ ಕುಟುಂಬವೇ ಬೀದಿಗೆ ಬೀಳುತ್ತದೆ. ಈ ನಿಟ್ಟಿನಲ್ಲಿ ಸಾವಿನ ಪ್ರಮಾಣ ತಡೆಗೆ ಹೆಲ್ಮೆಟ್‌ ಮಹತ್ವದ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಸಂಚಾರ ನಿಯಮಗಳ ಉಲ್ಲಂಘನೆ ತಡೆಗೆ ದಂಡವೇ ಅಸ್ತ್ರವಲ್ಲ; ಜನರ ಮನಸ್ಥಿತಿ ಬದಲಾದರೆ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಕಡಿಮೆ ಮಾಡಬಹುದು. –ಡಾ.ಬಿ.ಟಿ.ಕವಿತಾ ಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.