ADVERTISEMENT

ಚಾಮರಾಜನಗರ: ಹೊಸ ವರ್ಷ ಸ್ವಾಗತಕ್ಕೆ ಜನ ಸಜ್ಜು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 5:26 IST
Last Updated 31 ಡಿಸೆಂಬರ್ 2023, 5:26 IST
ಹೊಸ ವರ್ಷಾಚರಣೆ ಅಂಗವಾಗಿ ಚಾಮರಾಜನಗರದ ಕರಿನಂಜನಪುರ ರಸ್ತೆಯಲ್ಲಿರುವ ನಿಜಗುಣ ರೆಸಾರ್ಟ್‌ ಆವರಣವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ
ಹೊಸ ವರ್ಷಾಚರಣೆ ಅಂಗವಾಗಿ ಚಾಮರಾಜನಗರದ ಕರಿನಂಜನಪುರ ರಸ್ತೆಯಲ್ಲಿರುವ ನಿಜಗುಣ ರೆಸಾರ್ಟ್‌ ಆವರಣವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ   

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಹೊಸ ವರ್ಷ 2024 ಅನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆದಿದೆ.

ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿರುವ ರೆಸಾರ್ಟ್‌, ಹೋಂ ಸ್ಟೇಗಳಲ್ಲಿ, ನಗರ ಪ್ರದೇಶಗಳಲ್ಲಿರುವ ದೊಡ್ಡ ಹೋಟೆಲ್‌ಗಳು, ರೆಸಾರ್ಟ್‌ಗಳಲ್ಲೂ ಪಾರ್ಟಿ ಆಯೋಜನೆಯಾಗಿದ್ದು, ಪ್ರವಾಸಿಗರು ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ.

ಕಾಡಂಚಿನ ಪ್ರದೇಶಗಳಲ್ಲಿರುವ ರೆಸಾರ್ಟ್‌, ಹೋಂ ಸ್ಟೇಲ್‌ಗಳಿಗೆ ಅರಣ್ಯ ಇಲಾಖೆ ಹಲವು ಸೂಚನೆಗಳನ್ನು ನೀಡಿದೆ. ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗುವಂತಹ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ತಿಳಿಸಿದೆ.

ADVERTISEMENT

ಬಂಡೀಪುರದಲ್ಲಿ ಅರಣ್ಯ ಇಲಾಖೆ ತನ್ನ ವಸತಿ ಗೃಹಗಳನ್ನು ಬಾಡಿಗೆಗೆ ನೀಡಿಲ್ಲ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಕೆ.ಗುಡಿಯಲ್ಲಿರುವ ಅತಿಥಿಗೃಹವನ್ನೂ ಅರಣ್ಯ ಇಲಾಖೆ ನೀಡಿಲ್ಲ. ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ಗಳು ಕಾರ್ಯಾಚರಿಸಲಿದ್ದು, ಹೆಚ್ಚು ಗೌಜು ಗದ್ದಲಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದ ವ್ಯಾಪ್ತಿಯ ಕಾಡಂಚಿನಲ್ಲಿ ಬರುವ ಎರಡು ಐಷಾರಾಮಿ ರೆಸಾರ್ಟ್ ಸೇರಿದಂತೆ ಮೇಲುಕಾಮನಹಳ್ಳಿಯಲ್ಲಿರುವ ವಸತಿ ಗೃಹಗಳು ಹಾಗೂ ಮಂಗಲ ಗ್ರಾಮ ಪಂಚಾಯತಿಯ ಅನೇಕ  ಹೋಂ ಸ್ಟೇಗಳಲ್ಲಿ  ಸಂಭ್ರಮಾಚರಣೆಗೆ ಸಿದ್ಧತೆಗಳನ್ನು ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ನಿಯಮ ನಡುವೆಯೂ ಮಾಡಿಕೊಂಡಿದ್ದಾರೆ.

ಕಾಡಂಚಿನಲ್ಲಿ ಬರುವ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಸಂಭ್ರಮಾಚರಣೆ ನೆಪದಲ್ಲಿ ಡಿಜೆ ಸೌಂಡ್ಸ್, ವಿದ್ಯುತ್ ದೀಪಾಲಂಕಾರ ಮತ್ತು ಗದ್ದಲ ಮಾಡಬಾರದು ಎಂಬ ನಿಯಮಗಳನ್ನು ರೂಪಿಸಿದೆ.

‘ಸಂಭ್ರಮಾಚರಣೆ ನೆಪದಲ್ಲಿ ಜನರಿಗೆ ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ಮಾಡಿದರೆ ಅಂತಹವರ ವಿರುದ್ಧ ಕ್ರಮವಹಿಸಲಾಗುತ್ತದೆ. ನಿಗಾ ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ತಿಳಿಸಿದರು.

‘ಈಗಾಗಲೇ ಎಲ್ಲ ಕೊಠಡಿಗಳನ್ನು ಪ್ರವಾಸಿಗರು ಕಾಯ್ದಿರಿಸಿದ್ದಾರೆ. ರಾತ್ರಿ 12ರ ಸಮಯದಲ್ಲಿ ಕೇಕ್‌ ಕತ್ತರಿಸಲಾಗುತ್ತದೆ. ಉಳಿದಂತೆ ಡಿಜೆ, ಡ್ಯಾನ್ಸ್ ಸದ್ದು ಗದ್ದಲ ವಿರುವುದಿಲ್ಲ. ಅದಕ್ಕೆ ಅವಕಾಶವು ಇಲ್ಲ’ ಎಂದು ಖಾಸಗಿ ರೆಸಾರ್ಟ್ ಒಂದರ ವ್ಯವಸ್ಥಾಪಕ ಮಹದೇವ್‌ ಹೇಳಿದರು.

‘ಹಿಂದೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ರೆಸಾರ್ಟ್ ಗಳಲ್ಲಿ ದೊಡ್ಡದಾಗಿ ಆಚರಣೆ ಮಾಡುತ್ತಿದ್ದರು. ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ರೂಪಿಸಿರುವುದರಿಂದ ಎಲ್ಲಾ ಕಾರ್ಯಕ್ರಮಗಳು ಸ್ಥಗಿತಗೊಂಡವು’ ಎಂದು ತಿಳಿಸಿದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ.

ಜನ ಸಂದಣಿ ನಿರೀಕ್ಷೆ
ಶನಿವಾರ ಜಿಲ್ಲೆಯ ದೇವಾಲಯಗಳು ಪ್ರವಾಸಿ ತಾಣಗಳಲ್ಲಿ ಹೆಚ್ಚು ಜನ ಸಂದಣಿ ಇರಲಿಲ್ಲ. ಆದರೆ ವರ್ಷದ ಕೊನೆಯ ದಿನವಾದ ಭಾನುವಾರ ದೇವಾಲಯಗಳು ಪ್ರವಾಸಿ ತಾಣಗಳಲ್ಲಿ ಹೆಚ್ಚು ಜನರು ಬರುವ ನಿರೀಕ್ಷೆ ಇದೆ.  ಹೊಸ ವರ್ಷದ ಮೊದಲ ದಿನ ಮಹದೇಶ್ವರ ಸ್ವಾಮಿಯ ದರ್ಶನ ಪಡೆಯಲು ಪ್ರತಿ ವರ್ಷ ಮಹದೇಶ್ವರ ಬೆಟ್ಟಕ್ಕೆ ವರ್ಷದ ಕೊನೆಯ ದಿನ ಭಾರಿ ಸಂಖ್ಯೆಯಲ್ಲಿ ಬರುತ್ತಾರೆ. ಬಿಳಿಗಿರಿರಂಗನಬೆಟ್ಟ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಬಂಡೀಪುರ ಕೆ.ಗುಡಿ ಸಫಾರಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.