ಚಾಮರಾಜನಗರ: ಹಿಂದೂ ಧಾರ್ಮಿಕ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷ ಅರ್ಥಾತ್ ಹೊಸ ಸಂವತ್ಸರವನ್ನು (ಕ್ರೋಧನಾಮ) ಆಚರಿಸಲು ಜಿಲ್ಲೆಯಾದ್ಯಂತ ಹಿಂದೂಗಳು ಸಜ್ಜಾಗಿದ್ದಾರೆ.
ಬೇವು ಬೆಲ್ಲದ ಹಬ್ಬ ‘ಯುಗಾದಿ’ ಮಂಗಳವಾರ ನಡೆಯಲಿದ್ದು, ಸಂಭ್ರಮ ಸಡಗರದಿಂದ ಆಚರಿಸಲು ಜನರು ಸೋಮವಾರ ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ಬಟ್ಟೆ ಬರೆಗಳನ್ನು ಖರೀದಿಸುವುದರಲ್ಲಿ ನಿರತರಾದರು.
ಬಿಸಿಲಿನ ತಾಪ ತೀವ್ರವಾಗಿದ್ದರಿಂದ ಮಧ್ಯಾಹ್ನದ ಹೊತ್ತು ನಗರ ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟ ಹೆಚ್ಚಿರಲಿಲ್ಲ. ಸಂಜೆ ನಾಲ್ಕು ಗಂಟೆಯ ಬಳಿಕ ಜನ ಸಂದಣಿ ಕಂಡು ಬಂತು. ಮಹಿಳೆಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಹಬ್ಬದ ಖರೀದಿಯಲ್ಲಿ ತೊಡಗಿದರು.
ಹೂವು, ಹಣ್ಣು, ಅರಿಸಿನ, ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿಗಾಗಿ ಅಂಗಡಿಗಳಿಗೆ ಮುಗಿಬಿದ್ದರು. ಹಬ್ಬದ ದಿನ ಹೊಸ ಬಟ್ಟೆ ಧರಿಸಿ ಸಂಭ್ರಮಿಸುವ ರೂಢಿ ಚಾಲ್ತಿಯಲ್ಲಿದೆ. ಹಾಗಾಗಿ, ಜವಳಿ ಅಂಗಡಿಗಳಲ್ಲಿ ಹೆಚ್ಚು ಗ್ರಾಹಕರು ಕಂಡು ಬಂದರು.
ಹೂವು ದುಬಾರಿ: ಯುಗಾದಿ ಕಾರಣಕ್ಕೆ ಪೂಜಾ ಕೈಂಕರ್ಯಗಳಿಗೆ ಹೂವುಗಳ ಅಗತ್ಯ ಇರುವುದರಿಂದ, ಮಾರುಕಟ್ಟೆಯಲ್ಲಿ ಸೋಮವಾರ ಹೂವಿನ ಬೆಲೆ ದುಬಾರಿಯಾಗಿತ್ತು.
ನಗರದ ಚೆನ್ನಿಪುರದ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಎಲ್ಲ ಹೂವುಗಳ ಧಾರಣೆ ಗಗನಮುಖಿಯಾಗಿತ್ತು.
ಕನಕಾಂಬರ ಹೂವು ಕೆಜಿಗೆ ₹1200ರವೆರೆಗೆ ಇತ್ತು. ಕಾಕಡ, ಮಲ್ಲಿಗೆ ಹೂವುಗಳಿಗೂ ಬೇಡಿಕೆ ಇದ್ದು, ಕೆಜಿಗೆ ಕ್ರಮವಾಗಿ ₹1000, ₹600 ಇದೆ. ಮರ್ಲೆ ಮೊಗ್ಗುಗಳಿಗೆ ವ್ಯಾಪಾರಿಗಳು ₹800 ಹೇಳುತ್ತಿದ್ದಾರೆ.
‘ಬೇಡಿಕೆ ಕಡಿಮೆ ಇದ್ದ ಸೇವಂತಿಗೆಗೆ ₹300ರಿಂದ ₹400 ಇದೆ. ಚೆಂಡುಹೂವಿಗೂ ₹100 ಇದೆ. ಸುಗಂಧರಾಜ ಕೆಜಿಗೆ ₹300ಕ್ಕೆ ಮಾರಾಟವಾಗುತ್ತಿದೆ. ಬಟನ್ ಗುಲಾಬಿ ಹೂವುಗಳಿಗೂ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆ ₹300ರವರೆಗೆ ಇದೆ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಬ್ಬದ ಅಂಗವಾಗಿ ಬೇಡಿಕೆ ಹೆಚ್ಚಾಗಿದೆ. ಮಂಗಳವಾರವೂ ಬೇಡಿಕೆ ಇರಲಿದೆ. ನಂತರ ಬೇಡಿಕೆ ಮತ್ತು ಬೆಲೆಯೂ ಇಳಿಯಲಿದೆ’ ಎಂದು ಅವರು ಮಾಹಿತಿ ನೀಡಿದರು.
ಹಣ್ಣುಗಳ ಬೆಲೆ ಸ್ಥಿರ: ಯುಗಾದಿ ಹಬ್ಬದ ಪ್ರಭಾವ ಹಣ್ಣುಗಳ ಮಾರುಕಟ್ಟೆ ಮೇಲೆ ಆಗಿಲ್ಲ. ಎಲ್ಲ ಹಣ್ಣುಗಳ ಬೆಲೆ ಸ್ಥಿರವಾಗಿದೆ. ಹಬ್ಬದಲ್ಲಿ ದೇವರ ನೈವೇದ್ಯಕ್ಕೆ ಹೆಚ್ಚು ಬಳಸುವ ಏಲಕ್ಕಿ ಬಾಳೆ ಹಣ್ಣಿನ ಧಾರಣೆ ಸ್ಥಿರವಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹60 ಇದೆ.
ಉಳಿದಂತೆ, ಸೇಬಿನ ದುಬಾರಿ ಬೆಲೆ (₹180) ಈ ವಾರವೂ ಮುಂದುವರಿದಿದೆ. ದಾಳಿಂಬೆಗೆ ₹140 ಇದೆ. ಕಿತ್ತಳೆಗೆ ₹100, ಮೂಸಂಬಿಗೆ ₹80 ಹೇಳುತ್ತಿದ್ದಾರೆ. ಪಚ್ಚೆ ಬಾಳೆಗೆ ಕೆಜಿಗೆ ₹40 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.