ADVERTISEMENT

ಅರಣ್ಯ ಇಲಾಖೆಯ ಸಿಬ್ಬಂದಿಗೂ ಇರಲಿ ಕ್ಯಾಂಟೀನ್‌: ಸೌಲಭ್ಯಕ್ಕೆ ಸಿಬ್ಬಂದಿ ಆಗ್ರಹ

ಸೂರ್ಯನಾರಾಯಣ ವಿ.
Published 5 ಡಿಸೆಂಬರ್ 2023, 6:15 IST
Last Updated 5 ಡಿಸೆಂಬರ್ 2023, 6:15 IST
ಅರಣ್ಯ ಇಲಾಖೆ ಲಾಂಛನ
ಅರಣ್ಯ ಇಲಾಖೆ ಲಾಂಛನ   

ಚಾಮರಾಜನಗರ: ಸೇನೆ ಮತ್ತು ಪೊಲೀಸ್‌ ಕ್ಯಾಂಟೀನ್‌ ಮಾದರಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೂ ಕ್ಯಾಂಟೀನ್‌ ಸೌಲಭ್ಯ ಕಲ್ಪಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿದ್ದು, ಇನ್ನೂ ನಿರ್ಧಾರ ಕೈಗೊಂಡಿಲ್ಲ. 

ಹೊಸ ಕ್ಯಾಂಟೀನ್‌ ಆರಂಭಿಸಲು ಹೆಚ್ಚು ಅನುದಾನದ ಅವಶ್ಯಕತೆ ಇರುವುದರಿಂದ ತಮಿಳುನಾಡಿನ ಮಾದರಿಯಲ್ಲಿ ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯವನ್ನು ಸಿಬ್ಬಂದಿಗೂ ವಿಸ್ತರಿಸುವ ಯೋಜನೆಯನ್ನು ಅರಣ್ಯ ಇಲಾಖೆ ಹೊಂದಿದೆ. ಸುಮಾರು 8 ಸಾವಿರ ಅಧಿಕಾರಿ–ಸಿಬ್ಬಂದಿ ಸೌಲಭ್ಯದ ನಿರೀಕ್ಷೆಯಲ್ಲಿದ್ದಾರೆ. ‌

‘ಅರಣ್ಯ ಸಿಬ್ಬಂದಿಗೂ ಕ್ಯಾಂಟೀನ್‌ ಸೌಲಭ್ಯ ಆರಂಭಿಸಬೇಕು’ ಎಂದು ಕೋರಿ ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ಅವರು 2022ರ ಮೇ 9ರಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. 

ADVERTISEMENT

ಅದಕ್ಕೆ ಸ್ಪಂದಿಸಿದ್ದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಸಂರಕ್ಷಣಾಧಿಕಾರಿಯು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಮತ್ತು ಮುಖ್ಯ ವನ್ಯಜೀವಿ ವಾರ್ಡನ್‌ಗೆ ಪತ್ರ ಬರೆದಿದ್ದರು‌. ನಂತರ, ಪೊಲೀಸರಿಗೆ ಸಿಗುತ್ತಿರುವ ಕ್ಯಾಂಟೀನ್‌ ಸೌಲಭ್ಯ ಹಾಗೂ ಸಂಬಂಧಿಸಿದ ಆದೇಶಗಳನ್ನು ಪಡೆದು ಸಲ್ಲಿಸುವಂತೆ ಪಿಸಿಸಿಎಫ್‌ ಕಚೇರಿಯು ಸೂಚಿಸಿತ್ತು. 

ಈ ಮಧ್ಯೆ, ಗಿರಿಧರ್‌ ಕುಲಕರ್ಣಿ ಅವರು, ಸೆಪ್ಟೆಂಬರ್‌ 5ರಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೂ ಪತ್ರ ಬರೆದಿದ್ದರು. ಅದೇ ದಿನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಚಿವರ ಆಪ್ತ ಕಾರ್ಯದರ್ಶಿ ಇ–ಮೇಲ್‌ ಮಾಡಿದ್ದು, ಕ್ಯಾಂಟೀನ್‌ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡು, ವರದಿ ನೀಡುವಂತೆ ಸಚಿವರು ಸೂಚಿಸಿದ್ದಾರೆ ಎಂದಿದ್ದರು. ಬಳಿಕ ಯಾವುದೇ ಬೆಳವಣಿಗೆ ನಡೆದಿಲ್ಲ. 

ಏನು ಲಾಭ?: ಸೇನೆ, ಪೊಲೀಸ್‌ ಕ್ಯಾಂಟೀನ್‌ಗಳಲ್ಲಿ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಗೃಹೋಪಯೋಗಿ, ದಿನಬಳಕೆಯ ವಸ್ತುಗಳು ಸಿಗುತ್ತವೆ. ಮಾರುಕಟ್ಟೆ ಬೆಲೆಗಿಂತ ಕ್ಯಾಂಟೀನ್‌ನಲ್ಲಿ ದರ ಕಡಿಮೆ ಇರುತ್ತದೆ.

‘ಇದೊಂದು ಉತ್ತಮ ಪ್ರಸ್ತಾವ. ಕೆಳಹಂತದ ಸಿಬ್ಬಂದಿಗೆ ಸಾಕಷ್ಟು ಅನುಕೂಲವಾಗಲಿದೆ. ಜಿಲ್ಲಾ ಮಟ್ಟದ ಜೊತೆಗೆ ತಾಲ್ಲೂಕು ಮಟ್ಟದಲ್ಲೂ ಕ್ಯಾಂಟೀನ್‌ಗಳನ್ನು ಸ್ಥಾಪಿಸಬೇಕು. ಕಡಿಮೆ ದರದಲ್ಲಿ ದಿನ ಬಳಕೆಯ ವಸ್ತುಗಳು ಸಿಕ್ಕಿದರೆ ಆರ್ಥಿಕ ಹೊರೆ ಕಡಿಮೆಯಾಗಲಿದೆ’ ಎಂದು ಉಪ ವಲಯ ಅರಣ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ನಮ್ಮ ಸಿಬ್ಬಂದಿಗೂ ಕ್ಯಾಂಟೀನ್‌ ಸೌಲಭ್ಯ ಕಲ್ಪಿಸುವ ಪ್ರಸ್ತಾವ ಇಲಾಖೆಯಲ್ಲಿದೆ. ಸರ್ಕಾರಕ್ಕೆ ಕಳುಹಿಸಿದ್ದೇವೆ
ಬ್ರಿಜೇಶ್‌ ಕುಮಾರ್ ದೀಕ್ಷಿತ್‌ ಪಿಸಿಸಿಎಫ್‌ ಮತ್ತು ಅರಣ್ಯ ಪಡೆ ಮುಖ್ಯಸ್ಥ
ಕ್ಯಾಂಟೀನ್‌ ಸೌಲಭ್ಯದಿಂದ ಇಲಾಖೆಯ ಸಾವಿರಾರು ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಸರ್ಕಾರ ಶೀಘ್ರ ಅನುಷ್ಠಾನಗೊಳಿಸಬೇಕು
ಗಿರಿಧರ್‌ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ
ಏನಿದು ತಮಿಳುನಾಡು ಮಾದರಿ?
ತಮಿಳುನಾಡಿನಲ್ಲಿ ಪೊಲೀಸ್‌ ಇಲಾಖೆಯಲ್ಲಿರುವ ಕ್ಯಾಂಟೀನ್‌ ಸೌಲಭ್ಯವನ್ನೇ ಅರಣ್ಯ ಇಲಾಖೆಯ ಸಿಬ್ಬಂದಿಗೂ ವಿಸ್ತರಿಸಲಾಗಿದೆ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪೊಲೀಸ್‌ ಕ್ಯಾಂಟೀನ್‌ಗೆ ತೆರಳಿ ತಮಗೆ ಬೇಕಾದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದರಿಂದ ಅಲ್ಲಿನ ಸಾವಿರಾರು ಸಿಬ್ಬಂದಿಗೆ ಅನುಕೂಲವಾಗುತ್ತಿದೆ.  ‘ಕ್ಯಾಂಟೀನ್‌ ಸೌಲಭ್ಯ ನೀಡಿದರೆ ಇಲಾಖೆಯ ಮುಂಚೂಣಿ ಸಿಬ್ಬಂದಿಯ ನೈತಿಕ ಸ್ಥೈರ್ಯ ಹೆಚ್ಚುತ್ತದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಬಲ್ಲುದು. ಮುಂಚೂಣಿ ಸಿಬ್ಬಂದಿಯ ಶ್ರೇಯೋಭಿವೃದ್ಧಿಗೆ ಇಲಾಖೆ ಬದ್ಧವಾಗಿದೆ ಎಂಬ ಸಂದೇಶವೂ ರವಾನೆಯಾಗುತ್ತದೆ’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ಪ್ರತಿಪಾದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.