ADVERTISEMENT

ಅಡುಗೆ ಅನಿಲ ದರ ಏರಿಕೆ: ಕೇಂದ್ರ ಸರ್ಕಾರದ ಅಣಕು ಶವಯಾತ್ರೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 12:55 IST
Last Updated 6 ಮಾರ್ಚ್ 2023, 12:55 IST
ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಚಾಮರಾಜನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಚಾಮರಾಜನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಿದರು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನದ ಮುಂಭಾದಲ್ಲಿ ಸೇರಿದ ಪ್ರತಿಭಟನಕಾರರು, ಖಾಲಿ ಸಿಲಿಂಡರ್‌ಗಳಿಗೆ ಹೂವು ಇಟ್ಟು, 420 ಕೇಂದ್ರ ಸರ್ಕಾರ ಎಂದು ಬರೆದು, ಸಿಲಿಂಡರ್‌ ಅನ್ನು ಶವದ ಮಾದರಿಯಲ್ಲಿ ಹೊತ್ತುಕೊಂಡು ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಡವರ ಪಾಲಿಗೆ ಕೇಂದ್ರ ಸರ್ಕಾರ ಸತ್ತು ಹೋಗಿದೆ ಎಂದು ಘೋಷಣೆ ಕೂಗಿದರು.

ADVERTISEMENT

ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ಕೇಂದ್ರ ಸರ್ಕಾರ ಜನರು ಪ್ರತಿನಿತ್ಯ ಬಳಸುವ ಅಡುಗೆ ಅನಿಲ ಬೆಲೆಯನ್ನು ಹೆಚ್ಚಳ ಮಾಡಿದೆ. ₹400 ಇದ್ದ ಬೆಲೆ ₹1200ಕ್ಕೆ ತಲುಪಿದೆ. ಅಗತ್ಯ ವಸ್ತುಗಳ ಮೇಲೆ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆಯನ್ನು ಹಿಂಡುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ಜನರು ಕೇಂದ್ರ ಸರ್ಕಾರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದನ್ನು ಸರ್ಕಾರ ಹುಸಿ ಗೊಳಿಸಿದೆ. ಅಡುಗೆ ಅನಿಲ, ಅಗತ್ಯ ವಸ್ತುಗಳು, ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ’ ಎಂದು ದೂರಿದರು.

ಕೇಂದ್ರ ಸರ್ಕಾರಕ್ಕೆ ಬಡಜನರ ಮೇಲೆ ಕಾಳಜಿ ಇದ್ದರೆ ಕೂಡಲೇ ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಬೇಕು ಇಲ್ಲದಿದ್ದರೆ. ಮುಂದಿನ ದಿನಗಳಲ್ಲಿ ಜನರು ಕೇಂದ್ರ ಸರ್ಕಾರಕ್ಕೆ ಜನತೆ ತಕ್ಕಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.

ಶಾ.ಮುರಳಿ, ಕಂಡಕ್ಟರ್ ಚಾ.ಸಿ.ಸೋಮನಾಯಕ, ನಿಜಧ್ವನಿಗೋವಿಂದರಾಜು, ಚಾ.ರಾ.ಕುಮಾರ್, ಚಾ.ಹ.ಶಿವರಾಜ್, ಗು.ಪುರುಷೋತ್ತಮ್, ಚಾ.ವೆಂ.ರಾಜ್‌ಗೋಪಾಲ್, ಪಣ್ಯದಹುಂಡಿ ರಾಜು, ಅರುಣ್ ಕುಮಾರ್ ಗೌಡ, ಲಿಂಗರಾಜು, ಸಿ.ಬಿ.ಶಂಕರ, ನಂಜುಂಡಸ್ವಾಮಿ, ತಾಂಡವಮೂರ್ತಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.