ಕೊಳ್ಳೇಗಾಲ: ಕೆರೆ ಕಾಲುವೆ ಜಾಗ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕು ಗುಂಡಾಲ್ ಜಲಾಶಯದ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದಿಂದ ಕಾವೇರಿ ನೀರಾವರಿ ಇಲಾಖೆಯ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ಕಚೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನಾಕಾರರು ಅಧಿಕಾರಿಗಳ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಶರಥ, ‘ಗುಂಡಾಲ್ ಜಲಾಶಯ, ಕೊಂಗಳಕೆರೆ, ಚಿಕ್ಕರಂಗನಾಥ ಕೆರೆ ಒತ್ತುವರಿಯನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡುವವರೆಗೆ ಅನಿರ್ದಿಷ್ಟಾವಧಿ ಕಾಲ ಧರಣಿ ನಡೆಸುತ್ತೇವೆ. ನಾವು ಅನೇಕ ಬಾರಿ ಮನವಿ ಕೊಟ್ಟರು ಯಾವ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ದೂರಿದರು.
‘ಕಳೆದ ಹತ್ತು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದೆವು. ಆದರೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ 15 ದಿನ ಕಳೆದರೂ ಸಹ ಇದುವರೆಗೂ ಯಾವ ಕೆಲಸವೂ ಮಾಡಿಲ್ಲ. ನಗರಕ್ಕೆ ಮುಖ್ಯ ಕಾರ್ಯ ಪಾಲಕ ಎಂಜಿನಿಯರ್ ಕೊಳ್ಳೇಗಾಲಕ್ಕೆ ಆಗಮಿಸಿದರು ಸಹ ಯಾವ ಕೆರೆಯನ್ನು ವೀಕ್ಷಣೆ ಮಾಡಲಿಲ್ಲ. ರೈತರು ಕೆರೆ ವೀಕ್ಷಣೆ ಮಾಡಿ ಎಂದು ಕೇಳಿದರು ಉದ್ಧಟತನ ತೋರಿಸಿದರು. ಈ ಹಿನ್ನೆಲೆಯಲ್ಲಿ ಕೆರೆ ಒತ್ತುವರಿ ಸೇರಿದಂತೆ ಅನೇಕ ಸಮಸ್ಯೆ ಈಡೇರುವವರೆಗೂ ಸತ್ಯಾಗ್ರಹ ಕೈ ಬಿಡುವುದಿಲ್ಲ’ ಎಂದರು.
‘ಚಿಕ್ಕರಂಗನಾಥ ಕೆರೆಯಲ್ಲಿ ಮಾಜಿ ಸಚಿವ ನಾಗಪ್ಪರವರ ಕಟ್ಟಡ, ಕೊಂಗಳೆಗೆರೆಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಅಚ್ಗಾಲ್ ಲಾಡ್ಜ್ ಕಟ್ಟಡ, ಗುಂಡಾಲ್ ಜಲಾಶಯದಿಂದ ಮಾಜಿ ಶಾಸಕ ನರೇಂದ್ರರವರು ತಮ್ಮ ಜಮೀನಿಗೆ ನೀರು ಹೋಗಲು ಅಕ್ರಮವಾಗಿ ಕಾಲುವೆ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಕಬಿನಿ ಪ್ರಭಾರ ಇಇ ರಮೇಶ್ ಭೇಟಿ ನೀಡಿ, ನನಗೆ ಕಾಲಾವಕಾಶ ನೀಡಿ. ಸರ್ವೇ ಮಾಡಿಸಿ ಒತ್ತುವರಿಯನ್ನು ತೆರವು ಮಾಡಿಸುವುದಾಗಿ ತಿಳಿಸಿದರು. ಇದಕ್ಕೆ ರೈತರು ಸ್ಪಂದಿಸಲಿಲ್ಲ.
ತಾಲ್ಲೂಕು ಗುಂಡಾಲ್ ಜಲಾಶಯದ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಹಿತ್ತಲದೊಡ್ಡಿ ನಾಗರಾಜು, ಬಸವರಾಜು, ನಾಗರಾಜು, ರಾಜಣ್ಣ, ಮಲ್ಲಪ್ಪ ಗೌಡ, ಪಶುಪತಿ, ಮರಿಸ್ವಾಮಿ, ಸೋಮಣ್ಣ, ಮಧುವನಹಳ್ಳಿ ಬಸವರಾಜು, ಷಣ್ಮುಗಸ್ವಾಮಿ, ಮೋಳೆ ನಟರಾಜು, ವಕೀಲ ಅರಸಶೆಟ್ರು, ಚಾಮರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.