ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ನಗರದಲ್ಲಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಶುಕ್ರವಾರವೂ ಹೋರಾಟ ನಡೆಸಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟಿನ ಮುಂಭಾಗ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ ಅವರು ತಲೆ ಕೆಳಗೆ ಮಾಡಿ, ಕಾಲುಗಳನ್ನು ಮೇಲಕ್ಕೆ ಎತ್ತಿ ಚಳವಳಿ ನಡೆಸಿದರು. ಜೊತೆಯಲ್ಲಿದ್ದ ಪ್ರತಿಭಟನಕಾರರು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಶಾ.ಮುರಳಿ ಮಾತನಾಡಿ,‘ ಕಾವೇರಿ ನಿರ್ವಹಣಾ ನೀರು ಮಂಡಳಿ ರಚನೆಯಿಂದಾಗಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಮಳೆಯಾಗಿಲ್ಲ. ಜಲಾಶಯಗಳಲ್ಲಿ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕಾಗಿ ಕಾವೇರಿ ವಿಷಯದಲ್ಲಿ ಪದೇ ಪದೇ ಖ್ಯಾತೆ ತೆಗೆಯುತ್ತಿದೆ. ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಒತ್ತಾಯ ಮಾಡುತ್ತಿದೆ’ ಎಂದು ದೂರಿದರು.
ಕಾವೇರಿ ನಿರ್ವಹಣಾ ಮಂಡಳಿ ತಮಿಳುನಾಡಿನ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ. ಈ ನಿರ್ವಹಣಾ ಮಂಡಳಿಯು ಕರ್ನಾಟಕಕ್ಕೆ ಒಳ್ಳೆದು ಮಾಡಿಲ್ಲ. ತಮಿಳುನಾಡಿನ ಪರವಾಗಿಯೇ ಆದೇಶ ಹೊರಡಿಸುತ್ತಿದೆ. ಕರ್ನಾಟಕದಲ್ಲಿ ಕುಡಿಯುವ ನೀರಿಗೆ ತೊಂದರೆ ಇದ್ದರೂ ತಮಿಳುನಾಡು ಸರ್ಕಾರ 3ನೇ ಬೆಳೆಗೆ ನೀರು ಕೇಳುತ್ತಿದೆ. ಹೀಗೆ ನಿರಂತರವಾಗಿ ತಮಿಳುನಾಡಿಗೆ ನೀರು ಬಿಟ್ಟರೆ ಜಲಾಶಯಗಳು ಬರಿದಾಗಿ ರಾಜ್ಯದ ಜನತೆ ತುಂಬಾ ತೊಂದರೆ ಸಿಲುಕಲಿದ್ದಾರೆ’ ಎಂದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು, ನಾಲ್ವರು ಕೇಂದ್ರ ಸಚಿವರು ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಕಾವೇರಿ ನೀರು ಉಳಿಸಲು ಹೋರಾಟ ಮಾಡದಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.
ಹೋರಾಟಗಾರರಾದ ನಿಜಧ್ವನಿ ಗೋವಿಂದರಾಜು, ಮಹೇಶ್ ಗೌಡ, ಕಾರ್ ಬಸವರಾಜು, ಡ್ಯಾನ್ಸ್ ಬಸವರಾಜು, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಗಕ್ಷ ಚಾ.ರಾ.ಕುಮಾರ್, ಪಣ್ಯದಹುಂಡಿ ರಾಜು, ಲಿಂಗರಾಜು, ತಾಂಡವಮೂರ್ತಿ, ನಂಜುಂಡಸ್ವಾಮಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.