ADVERTISEMENT

ಚಾಮರಾಜನಗರ: ಕಾಂತರಾಜ ವರದಿ ಜಾರಿವರೆಗೆ ನಿರಂತರ ಹೋರಾಟದ ಎಚ್ಚರಿಕೆ

ಕಾಂತರಾಜ ವರದಿ ಅಂಗೀಕಾರಕ್ಕೆ ಆಗ್ರಹಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 16:10 IST
Last Updated 5 ಡಿಸೆಂಬರ್ 2023, 16:10 IST
ಕಾಂತರಾಜ ವರದಿಯನ್ನು ಈ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸುವಂತೆ ಆಗ್ರಹಿಸಿ ಜಿಲ್ಲಾ ಹಿಂದುಳಿದವರ್ಗಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಚಾಮರಾಜನಗರದಲ್ಲಿ ಮಂಗಳವಾರ ರ‍್ಯಾಲಿ ನಡೆಸಿದರು
ಕಾಂತರಾಜ ವರದಿಯನ್ನು ಈ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸುವಂತೆ ಆಗ್ರಹಿಸಿ ಜಿಲ್ಲಾ ಹಿಂದುಳಿದವರ್ಗಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಚಾಮರಾಜನಗರದಲ್ಲಿ ಮಂಗಳವಾರ ರ‍್ಯಾಲಿ ನಡೆಸಿದರು   

ಚಾಮರಾಜನಗರ: ಕಾಂತರಾಜ ಅವರು ನೀಡಿರುವ ಜಾತಿ ಗಣತಿ ವರದಿಯನ್ನು ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಹಿಂದಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಸಮುದಾಯದವರು ಮಂಗಳವಾರ ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು. 

ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆಗೆ ರ‍್ಯಾಲಿ ನಡೆಸಿದರು. 

ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲಿ ಧರಣಿ ಕುಳಿತ ಪ್ರತಿಭಟನಕಾರರು, ವರದಿ ಅಂಗೀಕಾರಿಸುವಂತೆ ಘೋಷಣೆಗಳನ್ನು ಕೂಗಿದರು. 

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಮಂಗಲ ಶಿವಕುಮಾರ್‌, ‘ಹಿಂದುಳಿದ ವರ್ಗಗಳ ಜನರು ತಲತಲಾಂತರ ಶೋಷಣೆ, ನಿರ್ಲಕ್ಷ್ಯ, ಅಪಮಾನ, ದೌರ್ಜನ್ಯಗಳನ್ನು ಅನುಭವಿಸುತ್ತಾ ಬರುತ್ತಿದ್ದು, ಇಂದಿಗೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಹಿಂದುಳಿದ ವರ್ಗಗಳ ಸ್ಥಿತಿಗತಿ ಅರಿಯಲು ಆಯೋಗಗಳನ್ನು ರಚಿಸಿದ್ದರೂ, ಅವುಗಳ ವರದಿಗಳನ್ನು ಸಮರ್ಪಕವಾಗಿ ಜಾರಿ ಮಾಡಲು ಆಗಿಲ್ಲ’ ಎಂದರು. 

‘ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ಶಿಕ್ಷಣ ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ಎಲ್.ಜೆ.ಹಾವನೂರು ವರದಿ, ವೆಂಕಟಸ್ವಾಮಿ ವರದಿ, ಚನ್ನಪ್ಪರೆಡ್ಡಿ ವರದಿಗಳ ಶಿಫಾರಸನ್ನು ಅನುಷ್ಠಾನಕ್ಕೆ ತರಲು ಸರ್ಕಾರಗಳು ವಿಫಲವಾಗಿವೆ’ ಎಂದು ದೂರಿದರು. 

‘ಹಿಂದುಳಿದ ವರ್ಗಗಳ ಆಶಾಕಿರಣವಾಗಿ ದೇವರಾಜ ಅರಸ್ ಅವರು ಅನೇಕ ಅಡೆತಡೆ ಬಂದರೂ ಕೆಲವು ಮಾರ್ಪಾಡಿನೊಂದಿಗೆ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ದಿಟ್ಟನಿರ್ಧಾರ ಕೈಗೊಂಡರು. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ, 2015ರಲ್ಲಿ ಕಾಂತರಾಜ ನೇತೃತ್ವದ ಆಯೋಗವನ್ನು ರಚಿಸಿದ್ದರು. ಆಯೋಗಕ್ಕೆ ₹178 ಕೋಟಿ ಅನುದಾನ ನೀಡಿ ರಾಜ್ಯದಾದ್ಯಂತ ಇರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ದಿಟ್ಟ ನಿರ್ಧಾರ ಕೈಗೊಂಡರು. ಮತ್ತೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರು ಯಾವುದೇ ಅಡೆತಡೆ ಬಂದರೂ ಕಾಂತರಾಜ ವರದಿಯನ್ನು ಚಳಗಾಲದ ಅಧಿವೇಶನದಲ್ಲಿ ಸ್ವೀಕರಿಸಿ ಜಾರಿಗಳಿಸಬೇಕು’ ಎಂದರು. 

‘ಜಿಲ್ಲೆಯ ನಾಲ್ಕೂ ಶಾಸಕರು ಚಳಿಗಾಲ ಅಧಿವೇಶನದಲ್ಲಿ ಕಾಂತರಾಜ ವರದಿ ಅಂಗೀಕಾರಕ್ಕೆ ಜಾರಿಗೆ ಒತ್ತಾಯಿಸಿ ತಮಗೆ ಮತ ನೀಡಿರುವ ಹಿಂದುವಳಿದ ಎಲ್ಲ ಸಮುದಾಮಗಳಿಗೆ ಬೆಂಬಲವಾಗಿ ನಿಲ್ಲಬೇಕು’ ಎಂದು ಒತ್ತಾಯಿಸಿದರು.

ಸರ್ಕಾರವು ಈ ವರದಿಯನ್ನು ಅಂಗೀಕರಿಸಿ, ಜಾರಿ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಶಿವಕುಮಾರ್ ಎಚ್ಚರಿಸಿದರು. 

ಜಿಲ್ಲಾಧಿಕಾರಿಯವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದರು. ಪ್ರತಿಭಟನಕಾರರು ಹೆಚ್ಚುವರಿ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.  

ವಿವಿಧ ಸಮುದಾಯಗಳ ಮುಖಂಡರು ಮಾತನಾಡಿದರು. ಹನೂರಿನ ಜಿ.ಎಚ್‌.ವೆಂಕಟೇಶ್, ಜೆ.ಶಿವಮೂರ್ತಿ, ನಟರಾಜೇಗೌಡ, ಸವಿತಾ ಸಮಾಜದ ವೆಂಕಟರಾಮು, ಚಿನ್ನಸ್ವಾಮಿ, ಬಸವಣ್ಣ, ರಂಗಸ್ವಾಮಿ, ಗಾಣಿಗ ಸಮಾಜದ ಬೆಳ್ಳಶೆಟ್ಟಿ, ಲಕ್ಷ್ಮಣ, ಜಯರಾಂ, ಅಂಕಶೆಟ್ಟಿ, ಮಹದೇವಶೆಟ್ಟಿ, 24 ಮನೆ ತೆಲಗು ಶೆಟ್ಟರ್‌, ಬೇಡಗಂಪಣ ಜನಾಂಗ ಪುಟ್ಟಣ್ಣ, ಮುರುಗೇಶ್, ಮಹೇಶ, ಪ್ರಗೇಶ್, ಬೆಳ್ಳಲುಗೌಂಡರ್, ವಿಜಯಕುಮಾರ್, ಜಗದೀಶ್, ದೇವಾಂಗ ಸಮಾಜದ ಮಧುಚಂದ್ರ, ನಂದೀಶ್ ವಿಶ್ವಕರ್ಮ, ಗೋಪಾಲಕೃಷ್ಣ, ಉಪ್ಪಾರ ಸಮುದಾದ ಕೋಡಿಮೋಳೆ ಮಹದೇವಶೆಟ್ಟಿ, ನಾಗರಾಜು, ಚಿನ್ನಸ್ವಾಮಿ, ಮಹೇಶ, ಬಂಗಾರು, ಪ್ರಕಾಶ್‌ಶೆಟ್ಟಿ, ಮಹದೇವಶೆಟ್ಟಿ ಬ್ಯಾಡಮೂಡ್ಲು ದೊಡ್ಡಶೆಟ್ಟಿ ಇತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.