ADVERTISEMENT

ಸೇತುವೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 14:28 IST
Last Updated 19 ಡಿಸೆಂಬರ್ 2023, 14:28 IST
ಚಾಮರಾಜನಗರ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇತುವೆಯಲ್ಲಿ ಧರಣಿ ಕುಳಿತು ವಾಹನಗಳ ಸಂಚಾರ ತಡೆದರು
ಚಾಮರಾಜನಗರ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇತುವೆಯಲ್ಲಿ ಧರಣಿ ಕುಳಿತು ವಾಹನಗಳ ಸಂಚಾರ ತಡೆದರು   

ಚಾಮರಾಜನಗರ:  ನಗರದ ನಂಜನಗೂಡು ರಸ್ತೆಯಲ್ಲಿರುವ ಸೇತುವೆ ಅಭಿವೃದ್ಧಿ ಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಂಜನಗೂಡು ರಸ್ತೆಯಲ್ಲಿರುವ ರಿಂಗ್‌ ರೋಡ್‌ ಬಳಿಯ ಶಿಥಿಲ ಸೇತುವೆ ಬಳಿ ಧರಣಿ ಕುಳಿತು ವಾಹನ ಸಂಚಾರ ತಡೆದ ಪ್ರತಿಭಟನಕಾರರು ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ವೇದಿಕೆ ಅಧ್ಯಕ್ಷ ಸುರೇಶ್ ವಾಜಪೇಯಿ ಮಾತನಾಡಿ,  ‘ಚಾಮರಾಜನಗರ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಅಭಿವೃದ್ಧಿ ಮಾಡಿದ್ದರೂ ಈ ಸೇತುವೆಯನ್ನು ಅಭಿವೃದ್ಧಿ ಪಡಿಸಿಲ್ಲ. ತುಂಬಾ ಕಿರಿದಾಗಿದ್ದು, ತಡೆಗೋಡೆ ಈಗಾಗಲೇ ಮುರಿದು ಹೋಗಿವೆ’ ಎಂದು ದೂರಿದರು. 

ADVERTISEMENT

‘ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ಕೆಲವು ತಿಂಗಳ ಹಿಂದೆ ರಾತ್ರಿ ಹೊತ್ತು ಕೆಎಸ್‌ಆರ್‌ಟಸಿ ಬಸ್‌ ಕೆಳಗಡೆ ಬಿದ್ದು ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಸೇತುವೆ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಸ್ಥಳೀಯ ಶಾಸಕರು ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ. ಸೇತುವೆ ಅಭಿವೃದ್ಧಿ ಮಾಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡುವಾಗ ಕಪ್ಪುಬಾವುಟ ಪ್ರದರ್ಶಿಸಲಾಗುವುದು. ಶಾಸಕ ಸಿ.ಪುಟ್ಟರಂಗಶೆಟ್ಟಿಯವರು ಕ್ರಮ ಕೈಗೊಳ್ಳದಿದ್ದರೆ ಚಾಮರಾಜನಗರ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಸಿದರು.

ವೇದಿಕೆ ಟೌನ್ ಅಧ್ಯಕ್ಷ ಆಟೊ ಮಂಜುನಾಥ್, ಬಂಗಾರನಾಯಕ, ಯಶವಂತ್, ಆಟೊ ಸೋಮೇಶ, ಮಾರ್ಕೇಟ್ ರಘು, ಸುನಿಲ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.