ADVERTISEMENT

ಖಾಸಗಿ ಕನ್ನಡ ಶಾಲೆಗಳನ್ನು ಅನುದಾನದ ವ್ಯಾಪ್ತಿಗೆ ತರಲು ಆಗ್ರಹ

ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ನೌಕರರ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:26 IST
Last Updated 19 ಸೆಪ್ಟೆಂಬರ್ 2020, 12:26 IST
ವಿವಿಧ ಫಲಕಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು
ವಿವಿಧ ಫಲಕಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು   

ಚಾಮರಾಜನಗರ: 1995ರ ನಂತರ ಆರಂಭವಾಗಿರುವ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಭವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಧರಣಿ ಕುಳಿತರು. ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 1986ರವರೆಗೂ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುತ್ತಾ ಬಂದಿತ್ತು. ನಂತರ ಅದು ನಿಂತು ಹೋಗಿತ್ತು. ಆನಂತರ 2006ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಶಿಕ್ಷಣ ಸಚಿವ ಬಸವರಾಜಹೊರಟ್ಟಿ ಅವರ ಕೋರಿಕೆಯಂತೆ 1986ರಿಂದ 1993ರವರೆಗೆ ಅನುದಾನ ನೀಡಿದರು. 2008ರ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಇರುವ ಸಂದರ್ಭದಲ್ಲಿ 1993ರಿಂದ 1995ರವರೆಗೆ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಅನುದಾನ ನೀಡಲಾಗಿತ್ತು. 2008ರ ನಂತರದ ಸರ್ಕಾರಗಳು 1995ರ ಆರಂಭವಾದ ಖಾಸಗಿ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸದೇ ಇರುವುದು ಕನ್ನಡ ಭಾಷೆಗೆ ಮಾಡಿದ ಅವಮಾನ’ ಎಂದು ಒಕ್ಕೂಟವು ಮನವಿಯಲ್ಲಿ ತಿಳಿಸಿದೆ.

ADVERTISEMENT

‘ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಬಡ ಮಕ್ಕಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು 23 ವರ್ಷಗಳಿಂದ ಕನಿಷ್ಠ ಸಂಬಳಕ್ಕೆ ಕರ್ಯವ್ಯ ನಿರ್ವಹಿಸುತ್ತಿದ್ದು, ಅವರ ಬದುಕು ಡೋಲಾಯಮಾನವಾಗಿದೆ. ಈ ಶಾಲೆಗಳು ಉಳಿಯಬೇಕು ಎಂಬ ಕಾರಣಕ್ಕೆ ಶಿಕ್ಷಕರು ತಮ್ಮ ಕನಿಷ್ಠ ಸಂಬಳದಲ್ಲಿ ಮಕ್ಕಳಿಗೆ ಸಿಗಬೇಕಾದ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್‌ ಇನ್ನಿತರ ಸೌಲಭ್ಯಗಳನ್ನು ಕೊಡಿಸುತ್ತಿದ್ದಾರೆ. ಇದರಿಂದ ಶಿಕ್ಷಕರ ಬದುಕು ತುಂಬಾ ಶೋಚನೀಯವಾಗಿದೆ’ ಎಂದು ಪ್ರತಿಭಟನಕಾರರು ಹೇಳಿದರು.

‘ಖಾಸಗಿ ಕನ್ನಡ ಶಾಲೆಗಳಿಗೆ ಸರ್ಕಾರ ಅನುದಾನ ನೀಡಬೇಕು. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಕೋವಿಡ್-19ರ ಸಂಬಂಧ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿತ್ತು.

ನೌಕರರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಜಾರ್ಜ್‌ಡಿಸೋಜಾ, ರಾಜ್ಯ ಉಪಾಧ್ಯಕ್ಷ ಗೋಪಾಲಶೆಟ್ಟಿ, ಸಂಘಟನಾ ಕಾರ್ಯದರ್ಶಿ ಚಿನ್ನಸ್ವಾಮಿ, ಖಜಾಂಚಿ ರಾಯಪ್ಪ ಜಿಲ್ಲಾ ಉಪಾಧ್ಯಕ್ಷ ಕುಳಂರೈಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಶೋಭಾ, ಸವಿತ, ರೀನಾ, ಚೈತ್ರ, ನಿರುಪಮ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಆರ್.ಕುಮಾರ್, ಮುತ್ತುರಾಜ್, ಸಿದ್ಧಾರ್ಥ, ಮಂಜು, ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.