ಚಾಮರಾಜನಗರ: ಜಿಲ್ಲೆಯಲ್ಲಿ ಬಯಲು ಶೌಚ ಪದ್ಧತಿಯನ್ನು ನಿರ್ಮೂಲನೆ ಮಾಡುವ ಆಶಯದೊಂದಿಗೆ ನಿರ್ಮಾಣಗೊಂಡಿರುವ ಬಹುತೇಕ ಸಮುದಾಯ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಬಾಗಿಲು ಮುಚ್ಚಿವೆ. ಪರಿಣಾಮ, ‘ಬಯಲು ಬಹಿರ್ದೆಸೆ ಮುಕ್ತ ಚಾಮರಾಜನಗರ’ ಘೋಷಣೆ ಕಡತಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು, ವಾಸ್ತವವಾಗಿ ಜಾರಿಯಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರದಲ್ಲಿ ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗದವರಿಗೆ ಅನುಕೂಲವಾಗಲಿ ಹಾಗೂ ಹೆಚ್ಚು ಜನದಟ್ಟಣೆ ಹೊಂದಿರುವ ಸಾರ್ವಜನಿಕ ಸ್ಥಳಗಳಲ್ಲಿ ಜಲ ಹಾಗೂ ಮಲಬಾಧೆ ತೀರಿಸಿಕೊಳ್ಳಲು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅನುದಾನ ಬಳಸಿಕೊಂಡು 17 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಆದರೆ, ಹೆಚ್ಚಿನ ಶೌಚಾಲಯಗಳಿಗೆ ಅಗತ್ಯವಾಗಿ ಬೇಕಿರುವ ನೀರು ಹಾಗೂ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಯುಜಿಡಿ ಕಾಮಗಾರಿಯೂ ಮಾಡಲಾಗಿಲ್ಲ. ಹೆಸರಿಗೆ ಮಾತ್ರ ಸಮುದಾಯ ಶೌಚಾಲಯಗಳು ನಗರದ ತುಂಬೆಲ್ಲ ಕಾಣುತ್ತವೆ. ಕೆಲವು ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದರೆ, ಕೆಲವು ಶೌಚಾಲಯಗಳು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿವೆ. ಹೀಗಾಗಿ, ಸಾರ್ವಜನಿಕರು ಜಾಲಿಮುಳ್ಳಿನ ಪೊದೆಗಳ ಬದಿಯೋ, ನಿರ್ಜನ ಪ್ರದೇಶಗಳಲ್ಲೋ, ಚರಂಡಿಗಳಲ್ಲೋ ಶೌಚ ಮಾಡುವಂತಹ ದೃಶ್ಯಗಳು ಸರ್ವೇಸಾಮಾನ್ಯವಾಗಿವೆ. ಬಯಲು ಬಹಿರ್ದೆಸೆಯ ಕಾರಣದಿಂದ ಕೆಲವೆಡೆ ಗಬ್ಬು ನಾರುತ್ತಿದ್ದು, ಅನೈರ್ಮಲ್ಯ ಕಾಡುತ್ತಿದೆ.
ಎಲ್ಲೆಲ್ಲಿ ಸಮಸ್ಯೆ?: ಸಂತೇಮರಹಳ್ಳಿ ರಸ್ತೆ, ಉಪ್ಪಾರ ಬೀದಿ, ಗಾಳಿಪುರ ಮುಖ್ಯರಸ್ತೆ, ಕೋರ್ಟ್ ರಸ್ತೆ, ರಾಮಸಮುದ್ರದ ಕುಲುಮೆ ರಸ್ತೆ ಸಹಿತ ಹಲವು ಕಡೆಗಳಲ್ಲಿ ಶೌಚಾಲಯಗಳು ಕಾರ್ಯ ನಿರ್ವಹಿಸದೆ ಬೀಗ ಹಾಕಲಾಗಿದೆ. ಶೌಚಾಲಯದೊಳಗೆ ಕಾಲಿಡಲೂ ಸಾಧ್ಯವಾಗದಷ್ಟು ಹೊಲಸು ಮಾಡಲಾಗಿದೆ. ಗಿಡಗಂಟಿಗಳು ಬೆಳೆದು ವಿಷಜಂತುಗಳ ಆವಾಸ ಸ್ಥಾನವಾಗಿವೆ.
ಭದ್ರತೆ ಇಲ್ಲದೆ ಶೌಚಾಲಯದೊಳಗಿನ ಉಪಕರಣಗಳು ಹಾಳಾಗಿವೆ. ಹಲವೆಡೆ ಟೈಲ್ಸ್‌ಗಳು ಕಿತ್ತುಬಂದಿವೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿವೆ. ಕೆಲವು ಸಮುದಾಯ ಶೌಚಾಲಯಗಳನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ನಿರ್ಮಾಣ ಮಾಡಿರುವುದರಿಂದ ಶಾಲೆಗಳಿಂದಲೇ ನಿರ್ವಹಣೆ ಮಾಡಲಾಗುತ್ತಿದೆ.
ಎಲ್ಲೆಲ್ಲಿವೆ ಸಮುದಾಯ ಶೌಚಾಲಯ?: ಎಪಿಎಂಸಿ ಹಿಂಭಾಗ, ಮಹದೇಶ್ವರ ಬಡಾವಣೆಯ ಸರ್ಕಾರಿ ಶಾಲೆ ಪಕ್ಕ, ರಾಮಮಂದಿರ ಆವರಣದ ಒಳಗೆ, ಉಪ್ಪಾರ ಸಮುದಾಯ ಭವನ ಎದುರು, ಆದರ್ಶ ನಗರ ವಾಟರ್ ಟ್ಯಾಂಕ್ ಬಳಿ, ಸಂತೇಮರಹಳ್ಳಿ ರಸ್ತೆಯ ತ್ಯಾಜ್ಯ ಸಂಗ್ರಹಣಾ ಘಟಕದ ಬಳಿ, ಪುಟ್ಟಮ್ಮಣ್ಣಿ ಪಾರ್ಕ್ ಬಳಿ, ಆಚಾರಿ ಪುಟ್ಟಣ್ಣ ಮನೆಯ ಹತ್ತಿರ, ಕೊಂಡದ ಮಾಳ, ಸ್ಮಶಾನ ರಸ್ತೆಯ ಪಕ್ಕ ಜಾಲಹಳ್ಳಿಹುಂಡಿ, ಸ್ಮಶಾನದ ಮುಂಭಾಗ ಕುಲುಮೆ ರಸ್ತೆ, ತಿಬ್ಬಳ್ಳಿ ಕಟ್ಟೆ ರಸ್ತೆ ಸಮುದಾಯ ಭವನದ ಪಕ್ಕ, ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಬಳಿ, ಸುಬೇದಾರ್‌ಕಟ್ಟೆ ಬೀದಿ ರಾಮಸಮುದ್ರ, ಸುಂಕದ ಗೇಟ್ ಬಳಿ, ಚಿಕ್ಕಬೀದಿ, ರಾಮಸಮುದ್ರದಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆ ಹೊರತಾಗಿ ನಗರಸಭೆ ವ್ಯಾಪ್ತಿಯಲ್ಲಿ 25 ಸಾರ್ವಜನಿಕ ಶೌಚಾಲಯಗಳಿವೆ. ಇವುಗಳಲ್ಲಿ ಬಹುತೇಕ ಕಾರ್ಯ ನಿರ್ವಹಿಸುತ್ತಿದ್ದರೂ ಅನೈರ್ಮಲ್ಯ ಎದ್ದು ಕಾಣುತ್ತದೆ.
ಕೊಳ್ಳೇಗಾಲ ನಗರದಲ್ಲಿ 6 ಕಡೆ ಸಾರ್ವಜನಿಕ ಶೌಚಾಲಯಗಳಿದ್ದು, ಅನೈರ್ಮಲ್ಯ ಹೆಚ್ಚಾಗಿದೆ. ಸರಿಯಾಗಿ ನೀರು ಬರುವುದಿಲ್ಲ. ನಲ್ಲಿಗಳು ಕಿತ್ತು ಹಾಳಾಗಿವೆ. ನಿರ್ವಹಣೆ ಕೊರತೆಯಿಂದ ಗಬ್ಬು ನಾರುತ್ತಿದೆ. ದೊಡ್ಡ ನಾಯಕರ ಬೀದಿಯಿಂದ ಮುಳ್ಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಶೌಚಾಲಯ ನಿರ್ಮಿಸಿ ವರ್ಷ ಕಳೆದರೂ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಉದ್ಘಾಟನೆಯೂ ಮಾಡಿಲ್ಲ.
ಗುಂಡ್ಲುಪೇಟೆ ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಗೊಳಪಡುವ ಐದು ಶೌಚಾಲಯಗಳಿದ್ದು, ಎರಡು ಮಾತ್ರ ಸಾರ್ವಜನಿಕರ ಬಳಕೆ ಲಭ್ಯವಾಗುತ್ತಿದೆ. ಉಳಿದವು ನೀರಿನ ಸಮಸ್ಯೆ ಹಾಗೂ ಸ್ವಚ್ಛತೆ ಸಮಸ್ಯೆಯಿಂದ ಬೀಗ ಹಾಕಲಾಗಿದೆ. ತಾಲ್ಲೂಕು ಕಚೇರಿ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ ಸದಾ ಮುಚ್ಚಿರುವ ಕಾರಣ ದೂರದ ಗ್ರಾಮಗಳಿಂದ ಸರ್ಕಾರದ ಸೌಲಭ್ಯ ಪಡೆಯಲು ಬರುವ ನಾಗರಿಕರು ಶೌಚ ಮಾಡಲು ಪರದಾಡುವಂತಾಗಿದೆ. ಮೂತ್ರ ವಿಸರ್ಜನೆಗೆ ಬಯಲನ್ನೇ ಅವಲಂಬಿಸಬೇಕಾಗಿದೆ. ಕೆಇಬಿ ಬಳಿ ಶೌಚಾಲಯವಿದ್ದರೂ ಸಾರ್ವಜನಿಕರು ಬಳಕೆ ಮಾಡದೆ ಮುಚ್ಚಲಾಗಿದೆ.
ಹನೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯಗಳಿವೆ. ಇದರಲ್ಲಿ ಖಾಸಗಿ ಬಸ್ ನಿಲ್ದಾಣದ ಶೌಚಾಲಯ ನಿರ್ವಹಣೆ ಕೊರತೆ ಇದೆ. ನಿರ್ವಹಣೆ ಕೊರತೆಯಿಂದ ಶೌಚಾಲಯಕ್ಕೆ ಬಾಗಿಲು ಹಾಕುತ್ತಿದ್ದು, ಜನರಿಗೆ ಸಮಸ್ಯೆಯಾಗಿದೆ.
ಸಂತೇಮರಹಳ್ಳಿಯಲ್ಲಿ ಶೌಚಾಲಯ ಸಮರ್ಪಕವಾಗಿಲ್ಲ. ಚಿಕ್ಕ ಶೌಚಾಲಯವೇ ಸಾರ್ವಜನಿಕರಿಗೆ ಆಧಾರ. ಆಗಾಗ ನೀರಿನ ಸಮಸ್ಯೆ, ನಿರ್ವಹಣೆ ಕೊರತೆಯಿಂದ ಶೌಚಾಲಯ ಮುಚ್ಚಲಾಗುತ್ತದೆ.
ಯಳಂದೂರು ಪಟ್ಟಣದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಿದ್ದು, ತಾಲ್ಲೂಕು ಕಚೇರಿ ಮುಂಭಾಗ, ಅಂಬೇಡ್ಕರ್ ಕಾಲೊನಿ ಸುತ್ತಮುತ್ತಲ ಶೌಚಾಲಯ ಬಳಕೆಯಾಗುತ್ತಿಲ್ಲ ಎಂಬ ದೂರುಗಳಿವೆ.
ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ., ಮಲ್ಲೇಶ್ ಎಂ, ಬಿ.ಬಸವರಾಜು, ಮಹದೇವ್ ಹೆಗ್ಗವಾಡಿಪುರ, ನಾ. ಮಂಜುನಾಥಸ್ವಾಮಿ
ಸಾಂಕ್ರಾಮಿಕ ಕಾಯಿಲೆ ಭೀತಿ ಶೌಚಾಲಯ ಗಬ್ಬು ನಾರುತ್ತಿರುವುದರಿಂದ ಮೂಗು ಮುಚ್ಚಿಕೊಂಡು ಹೋಗಬೇಕು. ಡೆಂಗಿ ಮಲೇರಿಯಾ ಕಾಯಿಲೆಗಳು ಹೆಚ್ಚಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿ ಅನೈರ್ಮಲ್ಯ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದಾರೆ.
–ರುದ್ರೇಶ್ ಕೊಳ್ಳೇಗಾಲ
ನಿರ್ವಹಣೆ ಕೊರತೆ ಮೂತ್ರ ವಿಸರ್ಜನೆ ಮಾಡಬೇಕಾದರೆ ಮೂಗು ಮುಚ್ಚಿಕೊಂಡೇ ಮಾಡಬೇಕು. ನಗರಸಭೆ ಆಡಳಿತ ಶೌಚಾಲಯಗಳ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ.
–ಬಂಟ ಕೊಳ್ಳೇಗಾಲ ನಿವಾಸಿ
ಶೌಚಾಲಯಕ್ಕೆ ನೀರಿನ ಸಮಸ್ಯೆ ಗುಂಡ್ಲುಪೇಟೆ ತಾಲ್ಲೂಕು ಕಚೇರಿ ಬಳಿಯ ಶೌಚಾಲಯಕ್ಕೆ ನೀರಿನ ಸಮಸ್ಯೆಯಾಗಿದ್ದರಿಂದ ಮುಚ್ಚಲಾಗಿದೆ. ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾಗುವುದು.
–ವಸಂತಕುಮಾರಿ ಪುರಸಭೆ ಮುಖ್ಯಾಧಿಕಾರಿ
ಸಮುದಾಯ ಶೌಚಾಲಯಕ್ಕೆ ಬೀಗ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹಲವು ಮನೆಗಳಲ್ಲಿ ಶೌಚಾಲಯಗಳೇ ಇಲ್ಲ. ಅವರಿಗಾಗಿ ನಿರ್ಮಿಸಿರುವ ಸಮುದಾಯ ಶೌಚಾಲಯಗಳಿಗೂ ಬಾಗಿಲು ಹಾಕಿದರೆ ಬಯಲು ಬಹಿರ್ದೆಸೆ ಅನಿವಾರ್ಯವಾಗಲಿದೆ.
–ಸಂತೋಷ್ ಗುಂಡ್ಲುಪೇಟೆ
ಶೀಘ್ರ ದುರಸ್ತಿ ಚಾಮರಾಜನಗರದಲ್ಲಿ 19 ಸಮುದಾಯ ಶೌಚಾಲಯಗಳಿದ್ದು 7 ಶೌಚಾಲಯಗಳು ದುರಸ್ತಿಯಲ್ಲಿವೆ. ಶೌಚಾಲಯಗಳಿಗೆ ವಿದ್ಯುತ್ ನೀರು ಹಾಗೂ ಯುಜಿಡಿ ಸಂಪರ್ಕ ಕಲ್ಪಿಸಬೇಕಿದೆ. ಶೀಘ್ರ ದುರಸ್ತಿಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು.
–ಗಿರಿಜಾ ನಗರಸಭೆ ಪರಿಸರ ವಿಭಾಗದ ಎಂಜಿನಿಯರ್
ಕೆಲವೆಡೆ ಸಣ್ಣ ಸಮಸ್ಯೆ ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳಲ್ಲಿ ಶೌಚಾಲಯ ಸಾರ್ವಜನಿಕರಿಗೆ ಮುಕ್ತವಾಗಿದೆ. ಕೆಲವೆಡೆ ಸಣ್ಣ ತೊಂದರೆಗಳಿದ್ದು ಶೀಘ್ರ ನಿವಾರಿಸಲಾಗುವುದು.
–ಮಹೇಶ್ ಕುಮಾರ್ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಯಳಂದೂರು
ಅಂಕಿ–ಅಂಶ 25 ಚಾಮರಾಜನಗರದಲ್ಲಿರುವ ಸಾರ್ವಜನಿಕ ಶೌಚಾಲಯ 19 ಸ್ವಚ್ಛ ಭಾರತ ಮಿಷನ್‌ನಡಿ ನಿರ್ಮಿಸಿರುವ ಸಮುದಾಯ ಶೌಚಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.