ADVERTISEMENT

ಚಾಮರಾಜನಗರ | ಪಲ್ಸ್ ಪೋಲಿಯೋ ನಾಳೆ: ಲಸಿಕೆ ಹಾಕಿಸಲು ಸಚಿವರ ಮನವಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 5:27 IST
Last Updated 2 ಮಾರ್ಚ್ 2024, 5:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಾದ್ಯಂತ ಭಾನುವಾರ (ಮಾರ್ಚ್ 3)  ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನವಜಾತ ಶಿಶುವಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಲಸಿಕೆ ಹಾಕಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮನವಿ ಮಾಡಿದ್ದಾರೆ.

ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಬೂತ್‍ಗಳಲ್ಲಿ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಬೂತ್ ಕಾರ್ಯಕ್ರಮ ನಂತರದ ಮೊದಲ ಎರಡು ದಿನಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಾಗೂ ಮೂರನೇ ಹಾಗೂ ನಾಲ್ಕನೇ ದಿನ ಪಟ್ಟಣ ಪ್ರದೇಶದಲ್ಲಿ ಮಾತ್ರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ. ಪಟ್ಟಣ ಪ್ರದೇಶದಲ್ಲಿ ಒಟ್ಟು 41,694 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 2,34,046 ಮನೆಗಳಿಗೆ ಭೇಟಿ ನೀಡಲಿದ್ದು, ಒಟ್ಟು ಮನೆಗಳ ಭೇಟಿ ಸಂಖ್ಯೆ 2,75,740 ಆಗಿದೆ.

ಜಿಲ್ಲೆಯಲ್ಲಿ ಒಟ್ಟು 612 ಪಲ್ಸ್ ಪೋಲಿಯೋ ಬೂತುಗಳನ್ನು ತೆರೆಯಲಾಗಿದೆ. ಇದರಲ್ಲಿ ನಗರ ಪ್ರದೇಶಗಳಲ್ಲಿ 93 ಬೂತ್‍ಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 519 ಬೂತ್‍ಗಳು ಕಾರ್ಯನಿರ್ವಹಿಸಲಿವೆ. ಚಾಮರಾಜನಗರ ತಾಲ್ಲೂಕಿನಲ್ಲಿ 189, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 156, ಕೊಳ್ಳೇಗಾಲದಲ್ಲಿ 90, ಹನೂರು ತಾಲ್ಲೂಕು 133 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 44 ಬೂತ್‍ಗಳನ್ನು ತೆರೆಯಲಾಗಿದೆ. ಒಟ್ಟು 22 ಟ್ರಾನ್ಸಿಟ್‌ ಹಾಗೂ 8 ಮೊಬೈಲ್ ತಂಡಗಳನ್ನು ರಚಿಸಲಾಗಿದೆ. ಮೇಲ್ವಿಚಾರಣೆಗಾಗಿ ಜಿಲ್ಲೆಯಾದ್ಯಂತ 128 ಮೇಲ್ವಿಚಾರಕರನ್ನು ಹಾಗೂ 2,448 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 65,835 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಅಂದಾಜು ಮಾಡಲಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 22,310, ಗುಂಡ್ಲುಪೇಟೆಯಲ್ಲಿ 13,216, ಕೊಳ್ಳೇಗಾಲದಲ್ಲಿ 10,856, ಹನೂರಿನಲ್ಲಿ 13,597 ಹಾಗೂ ಯಳಂದೂರು ತಾಲ್ಲೂಕಿನ 5,856 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಭಾರತದಲ್ಲಿ 1995 ರಿಂದಲೂ ಒಂದು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ನಡೆಸಲಾಗುತ್ತಿದೆ. ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಈ ಹಿಂದೆ ಎಷ್ಟೇ ಬಾರಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿದ್ದರೂ ಮಾರ್ಚ್ 3ರ ಭಾನುವಾರದಂದು ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು. ಎಲ್ಲ ತಂದೆ ತಾಯಿಯರು, ಪೋಷಕರು, ಚುನಾಯಿತ ಪ್ರತಿನಿಧಿಗಳು, ಧಾರ್ಮಿಕ ಮತ್ತು ಸಮುದಾಯದ ಮುಖಂಡರು, ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಯ ಪದಾಧಿಕಾರಿಗಳು, ತಮ್ಮ ಸಹಾಯ ಮತ್ತು ಸಹಕಾರ ನೀಡಿ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಸಚಿವ ಕೆ. ವೆಂಕಟೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಇಂದು ಜಾಥಾ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮವನ್ನು ಮಾ.2ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದ ಆವರಣದವರೆಗೆ ಹಮ್ಮಿಕೊಳ್ಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.