ಚಾಮರಾಜನಗರ: ಪತ್ರಿಕೆ ಮತ್ತು ನಾಟಕ ಇವೆರಡೂ ಸಾಮಾಜಿಕ ಜವಾಬ್ದಾರಿ ಹೊತ್ತ ಪ್ರಮುಖ ಮಾಧ್ಯಮಗಳು ಎಂದು ರೈತ ನಾಯಕಿ, ಅಮೃತಭೂಮಿಯ ವ್ಯವಸ್ಥಾಪಕ ಟ್ರಸ್ಟಿ ಚುಕ್ಕಿನಂಜುಂಡಸ್ವಾಮಿ ಬುಧವಾರ ಅಭಿಪ್ರಾಯಪಟ್ಟರು.
‘ಪ್ರಜಾವಾಣಿ’@75 ಹಾಗೂ ಶಾಂತಲಾ ಕಲಾವಿದರು ಸುವರ್ಣ ಸಂಭ್ರಮದ ಅಂಗವಾಗಿ ನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಬದುಕ ಮನ್ನಿಸು ಪ್ರಭುವೆ’ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
75 ಪೂರೈಸಿರುವ ‘ಪ್ರಜಾವಾಣಿ’ ಜೊತೆಗೆ ಶಾಂತಲಾ ಕಲಾವಿದರು ತಂಡ ಐವತ್ತು ವರ್ಷಗಳನ್ನು ಪೂರೈಸಿರುವುದು ತುಂಬಾ ಅರ್ಥಪೂರ್ಣ. ಶಾಂತಲಾ ಕಲಾವಿದರಿಗೆ ಕಲೆ ಎಂಬುದು ಶೋಕಿಯಲ್ಲ, ಇಂದಿನ ತಲೆಮಾರಿಗೂ ಜನಪರವಾಗಿ ಉಳಿಸಿಕೊಂಡು ಬಂದಿದೆ. ಜಿಲ್ಲೆಯಲ್ಲಿ ಅನ್ಯಾಯ, ಪ್ರಶ್ನೆ ಹಾಗೂ ಹೋರಾಟವನ್ನು ನಾಟಕದ ಮೂಲಕ ಅಭಿನಯಿಸಿಕೊಂಡು ಬಂದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ಸೂಚಿಸಿದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರ್ಭಯವಾಗಿ ಮುನ್ನಡೆದುಕೊಂಡಿರುವ ಪತ್ರಿಕೆ ಎಂದರೆ ಅದು ‘ಪ್ರಜಾವಾಣಿ’ ಮಾತ್ರ. ಇತರ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳಿಗೂ ಇದು ಮಾದರಿ. ಮಾಧ್ಯಮ ಜಗತ್ತು ಕಾರ್ಪೊರೇಟ್ ಕಪಿಮುಷ್ಟಿಯಲ್ಲಿರುವಾಗ ‘ಪ್ರಜಾವಾಣಿ’ ಸದೃಢವಾಗಿ ನಿಂತಿದೆ. ಇಂದಿನ ಡಿಜಿಟಲ್ ಯುಗದಲ್ಲೂ ಪತ್ರಿಕೆ ಶತಮಾನವನ್ನು ಪೂರೈಸುವಂತಾಗಲಿ’ ಎಂದು ಹಾರೈಸಿದರು.
‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಮಾತನಾಡಿ, ‘ಪತ್ರಿಕೆಯೊಂದು ವಿಶ್ವಾಸಾರ್ಹತೆ, ವೃತ್ತಿಪರತೆ ಉಳಿಸಿಕೊಂಡು ಬಂದರೆ ಮನೆಯ ಜನ, ಸದಸ್ಯನ ರೀತಿ ಸ್ವೀಕರಿಸುತ್ತಾರೆ. ‘ಪ್ರಜಾವಾಣಿ’ 75ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ ನಾವು ಜನರ ಬಳಿಗೆ ಹೋದಾಗ ಇದು ಅರ್ಥವಾಗುತ್ತಿದೆ. ಪತ್ರಿಕೆಯು ಸಂಕಷ್ಟ ಸಮೃದ್ಧಿಯ ಸಂದರ್ಭದಲ್ಲೂ ವೃತ್ತಿಪರತೆ ಹಾಗೂ ನೈತಿಕತೆ ಉಳಿಸಿಕೊಂಡು ಬಂದಿದೆ. ಜನರ ದನಿಗೆ ಅವರ ಅಭಿಪ್ರಾಯಗಳಿಗೆ ಮಹತ್ವ ಕೊಡುತ್ತಿದೆ’ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎಂ. ಚಿಂತಾಮಣಿ ಮಾತನಾಡಿ, ‘ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಕ್ಷೇತ್ರದಲ್ಲಿ ‘ಪ್ರಜಾವಾಣಿ’ ಪತ್ರಿಕೆ ವೃತ್ತಿಪರತೆಯನ್ನು ಉಳಿಸಿಕೊಂಡು ಬಂದಿದೆ. ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಪತ್ರಿಕೆ 100–200ವರ್ಷಗಳನ್ನೂ ಆಚರಿಸಲಿ’ ಎಂದು ಹಾರೈಸಿದರು.
‘ಸುದೀರ್ಘ ಜನಮನ್ನಣೆ; ‘ಪ್ರಜಾವಾಣಿ’ ಹೆಮ್ಮೆ’
ಸಾಹಿತಿ ಮಂಜು ಕೋಡಿಉಗನೆ ಮಾತನಾಡಿ, ‘ಏಳೂವರೆ ದಶಕಗಳಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಅವೆಲ್ಲವನ್ನೂ ನಿಭಾಯಿಸಿಕೊಂಡು ಬಂದಿರುವ ‘ಪ್ರಜಾವಾಣಿ’ ಇಷ್ಟು ಸುದೀರ್ಘವಾಗಿ ಜನ ಮನ್ನಣೆ ಗಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಪತ್ರಿಕೆಯ ಸಾಪ್ತಾಹಿಕ ಪುರವಣಿ ಸಾಹಿತ್ಯಾಸಕ್ತರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ’ ಎಂದು ಹೇಳಿದ ಅವರು, ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಭಾನುವಾರ ಬಂತೆಂದರೆ ಸಾಪ್ತಾಹಿಕ ಪುರವಣಿ ಓದಲು ಕನವರಿಸುತ್ತಿದ್ದ ಪ್ರಸಂಗವನ್ನು ನೆನಪಿಸಿಕೊಂಡರು.
‘ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಅಭಿನಯಿಸುವವನೇ ನಿಜವಾದ ಕಲಾವಿದ. ಕಲೆಯಲ್ಲಿಯೇ ಬದುಕು ಕಟ್ಟಿಕೊಂಡು ಅರ್ಥೈಸಿಕೊಳ್ಳಬೇಕು. ಮನರಂಜನೆಯಿಲ್ಲದೇ ಸಾಮಾಜಿಕ ಜವಾಬ್ದಾರಿಯಿಂದ ಶಾಂತಲಾ ಕಲಾವಿದರು ತಂಡ ನಾಟಕ ಅಭಿನಯಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ವಿಚಾರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.