ಹನೂರು: ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ರೈತರು, ರಸಗೊಬ್ಬರದ ಮೊರೆ ಹೊಗುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಬ್ಬ ರೈತ, ಸ್ವತಃ ಗೊಬ್ಬರ ತಯಾರಿಸಿ ಮಿಶ್ರ ಬೆಳೆ ಪದ್ಧತಿ ಅನುಸರಿಸುವ ಮೂಲಕ ಗಮನ ಸೆಳೆದಿದ್ದಾರೆ.
ತಾಲ್ಲೂಕಿನ ಬಸವನಗುಡಿ ಗ್ರಾಮದ ರಾಜೇಂದ್ರನ್ ಅವರು ಓದಿದ್ದು ಎಂಎಸ್‌ಸಿ. ಕೆಲವು ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಅವರು ಈಗ ಹನೂರಿನಲ್ಲಿರುವ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಚಾಲಕರಾಗಿದ್ದಾರೆ. ಅಲ್ಲದೇ ಬಸವನ ಗುಡಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆರೆದು ನೂರಾರು ಮಕ್ಕಳಿಗೆ ವಿದ್ಯಾದಾನ ಮಾಡುವುದರ ಜತೆಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.
ಇರುವ 15 ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ಏಲಕ್ಕಿ ಬಾಳೆ, ನಾಲ್ಕು ಎಕರೆಯಲ್ಲಿ ಅರಿಸಿನ ಹಾಗೂ ಮುಸುಕಿನ ಜೋಳ ಬೆಳೆದಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಮುಂಗಾರಿನಲ್ಲಿ ಬೆಳ್ಳುಳ್ಳಿ, ಆಲೂಗೆಡ್ಡೆ ಬೆಳೆದಿದ್ದ ರಾಜೇಂದ್ರನ್ ಅವರಿಗೆ ಆಲೂಗೆಡ್ಡೆಯಲ್ಲಿ ನಿರೀಕ್ಷಿತ ಲಾಭ ಸಿಕ್ಕಿಲ್ಲ. ಬೆಳ್ಳುಳ್ಳಿಯಲ್ಲಿ ಉತ್ತಮ ಇಳುವರಿ ಪಡೆದು ಲಾಭವನ್ನೂ ಗಳಿಸಿದ್ದಾರೆ. ಈಗ ಆ ಜಮೀನಿನಲ್ಲಿ ಬೇರೆ ಬೆಳೆಯಲು ಮುಂದಾಗಿದ್ದಾರೆ.
ಸಾವಯವ ಗೊಬ್ಬರ ತಯಾರಿಕೆ: ಕೃಷಿ ಜತೆಗೆ ಹಸುಗಳನ್ನು ಸಾಕುತ್ತಿರುವ ರಾಜೇಂದ್ರನ್, ಸೆಗಣಿ ಗೊಬ್ಬರವನ್ನು ಕೃಷಿಗೆ ಬಳಸುತ್ತಿದ್ದಾರೆ.
ಜಮೀನಿನಲ್ಲಿರುವ ತ್ಯಾಜ್ಯವನ್ನು ಬಳಸಿಕೊಂಡು ಗೊಬ್ಬರ ತಯಾರಿಸುತ್ತಿದ್ದಾರೆ. ಇದರ ಜತೆಗೆ ಗೋಬರ್ ಗ್ಯಾಸ್ ಕೂಡ ಉತ್ಪಾದಿಸುತ್ತಾರೆ. ಕುರಿ ಹಾಗೂ ಮೇಕೆ ಗೊಬ್ಬರವನ್ನೂ ಬೆಳೆಗಳಿಗೆ ಹಾಕುತ್ತಿದ್ದಾರೆ.
‘ನಾವು ಮಣ್ಣಿನಿಂದ ಲಾಭದ ನಿರೀಕ್ಷೆ ಮಾಡುತ್ತೇವೆ. ಅದೇ ರೀತಿ ಮಣ್ಣಿಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡಬೇಕಿರುವುದು ನಮ್ಮ ಜವಬ್ದಾರಿ’ ಎಂದು ಹೇಳುತ್ತಾರೆ ರಾಜೇಂದ್ರನ್.
ಕೈ ಹಿಡಿದ ಬಾಳೆ ಬೆಳೆ
ಮುಂಗಾರಿನಲ್ಲಿ ತರಕಾರಿ ಬೆಳೆದು ಲಾಭ ಕಂಡಿದ್ದ ಇವರು ಬಾಳೆ ಬೆಳೆಯಲ್ಲಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ. ಸದಾ ಶೀತದ ವಾತಾವರಣವಿರುವುದರಿಂದ ಈ ಭಾಗದಲ್ಲಿ ರೈತರು ಹೆಚ್ಚಾಗಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಹೂ ಕೋಸು ಎಲೆ ಕೋಸು ಬೀನ್ಸ್ ಕ್ಯಾರೆಟ್ ಬೆಳ್ಳುಳ್ಳಿ ಹಾಗೂ ಆಲೂಗೆಡ್ಡೆಯನ್ನು ಬೆಳೆಯುತ್ತಾರೆ. ಬೆಳೆದ ತರಕಾರಿಯನ್ನು ತಮಿಳುನಾಡಿಗೆ ಕಳುಹಿಸಿ ಉತ್ತಮ ಲಾಭವನ್ನು ಗಳಿಸಿದ್ದಾರೆ. ಈಗ ಮೂರು ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಫಸಲು ಕಟಾವಿಗೆ ಬಂದಿದೆ. ‘ಬಾಳೆಯನ್ನು ನೇರವಾಗಿ ಬೆಂಗಳೂರಿಗೆ ಮಾರಾಟ ಮಾಡುತ್ತೇವೆ. ಒಂದೊಂದು ದಿನ ಒಂದೊಂದು ಬೆಲೆಯಿರುತ್ತದೆ. ಈಗ ಪ್ರತಿ ಕೆಜಿಗೆ ₹45 ಇದೆ. ಕೆಲವು ಸಂದರ್ಭದಲ್ಲಿ ಅದು ₹35ಕ್ಕೆ ಇಳಿಯುವ ಸಾಧ್ಯತೆಯಿರುತ್ತದೆ. ಇದನ್ನು ಸರಿದೂಗಿಸಕೊಂಡು ನಾವು ಕೃಷಿ ಮಾಡಬೇಕಿದೆ’ ಎಂದು ರಾಜೇಂದ್ರನ್ ಹೇಳಿದರು. ‘ಬಿತ್ತನೆ ಮಾಡುವಾಗ ಇರುವ ಬೆಲೆ ಕಟಾವು ಮಾಡುವಾಗ ಇರುವುದಿಲ್ಲ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಸರ್ಕಾರವೇ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡುವ ವ್ಯವಸ್ಥೆಯ ಅಗತ್ಯವಿದೆ’ ಎನ್ನುವುದು ಅವರ ಅನುಭವದ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.