ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌ ಕಾನೂನು ನೆರವು, ಲೋಕ ಅದಲಾತ್‌ ಸೌಲಭ್ಯ ಬಳಸಿಕೊಳ್ಳಿ...

ಸಂವಿಧಾನ ದಿನಾಚರಣೆ: ‘ಪ್ರಜಾವಾಣಿ’ ಇನ್‌ ಕಾರ್ಯಕ್ರಮ: ಜಿಲ್ಲೆಯ ವಿವಿಧ ಕಡೆಗಳಿಂದ ಕರೆ ಮಾಡಿದ ಓದುಗರು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 16:15 IST
Last Updated 25 ನವೆಂಬರ್ 2022, 16:15 IST
‘ಪ್ರಜಾವಾಣಿ ಪೋನ್‌ ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್‌.ಭಾರತಿ ಮಾತನಾಡಿದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ ಇದ್ದರು
‘ಪ್ರಜಾವಾಣಿ ಪೋನ್‌ ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್‌.ಭಾರತಿ ಮಾತನಾಡಿದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ ಇದ್ದರು   

ಚಾಮರಾಜನಗರ: ‘ಆರ್ಥಿಕವಾಗಿ ದುರ್ಬಲರಾಗಿರುವವರು, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ತಮಗೆ ಬರಬೇಕಾದ ನ್ಯಾಯಸಮ್ಮತ ಆಸ್ತಿಗಾಗಿ ಕಾನೂನು ಹೋರಾಟ ಮಾಡಬಹುದು. ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕಾನೂನು ನೆರವು ಲಭ್ಯವಿದೆ. ಎರಡೂ ಪಕ್ಷಗಾರರು ಬಯಸಿದರೆ ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಬಹುದು. ಇದರಿಂದ ಹಣ, ಸಮಯ ಉಳಿತಾಯವಾಗುತ್ತದೆ...’

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಅವರು ನೀಡಿದ ಸಲಹೆಗಳಿವು.

ಸಂವಿಧಾನ ದಿನಾಚರಣೆ ಅಂಗವಾಗಿ ‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ‘ಫೋನ್‌ ಇನ್‌ ಕಾರ್ಯಕ್ರಮ’ದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಕರೆ ಮಾಡಿದ್ದ ಓದುಗರು ಪ್ರಾಧಿಕಾರದ ಕಾರ್ಯವ್ಯಾಪ್ತಿ, ಲೋಕ ಅದಾಲತ್‌, ತಾವು ಎದುರಿಸುತ್ತಿರುವ ಕಾನೂನು ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಂಡರು. ಚೆನ್ನೈ, ದೆಹಲಿಯಿಂದ ಕರೆಗಳು ಬಂದಿದ್ದು ವಿಶೇಷ.

ADVERTISEMENT

ಕೋರ್ಟ್‌ನಲ್ಲೇ ತೀರ್ಮಾನವಾಗಬೇಕು: ಚೆನ್ನೈನಲ್ಲಿ ಉದ್ಯೋಗಿಯಾಗಿರುವ, ಹನೂರು ತಾಲ್ಲೂಕಿನ ಎಲ್ಲೆಮಾಳದವರಾದ ಚಂದ್ರಪ್ಪ ಕರೆ ಮಾಡಿ, ತಂದೆಯಿಂದ ನನಗೆ ಬಂದ ಜಮೀನು ಒತ್ತುವರಿಯಾಗಿದೆ. ಎರಡು ಬಾರಿ ಹದ್ದುಬಸ್ತು ಮಾಡಿದ್ದೆ. ತಹಶೀಲ್ದಾರ್‌, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಅವರಿಗೆ ಗಮನಕ್ಕೆ ತಂದಿದ್ದೆ. ತಹಶೀಲ್ದಾರ್‌ ಅವರು ಸಿವಿಲ್‌ ನ್ಯಾಯಾಲಯದಲ್ಲಿ ತೀರ್ಮಾನ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಒತ್ತುವರಿ ಮಾಡಿಕೊಂಡವರು ನ್ಯಾಯಾಲಯಕ್ಕೆ ಹೋಗಿ ನಮ್ಮ ಜಮೀನನ್ನು ಸೇರಿಸಿ ಹಸ್ತುಬದ್ದು ಮಾಡಿಕೊಂಡಿದ್ದಾರೆ. ಇದನ್ನು ಹೇಗೆ ಪರಿಹರಿಸಬಹುದು’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿ.ಎಸ್‌.ಭಾರತಿ ಅವರು, ‘ವಕೀಲರ ಮೂಲಕ ತಕರಾರು ಅರ್ಜಿ ಸಲ್ಲಿಸಿ, ನಡೆದಿರುವ ಬೆಳವಣಿಗೆಗಳನ್ನು ನ್ಯಾಯಾಲಯದ ಗಮನಕ್ಕೆ ತನ್ನಿ. ಒತ್ತುವರಿ ತೆರವುಗೊಳಿಸುವ ಸಂಬಂಧ ಇನ್ನೊಂದು ದೂರು ದಾಖಲಿಸಿ’ ಎಂದರು.

‘ಗ್ರಾಮದಲ್ಲಿ ನ್ಯಾಯ ಸೇರಿಸಿದ್ದೆ. ಏನೂ ಪ್ರಯೋಜನ ಆಗಲಿಲ್ಲ’ ಎಂದು ಚಂದ್ರಪ್ಪ ಹೇಳಿದಾಗ, ‘ಊರಿನ ಮುಖಂಡರು ಮಾಡಿದ ತೀರ್ಮಾನ ಊರ್ಜಿತವಲ್ಲ, ನ್ಯಾಯಾಲಯದಲ್ಲೇ ಇದು ತೀರ್ಮಾನವಾಗಬೇಕು’ ಎಂದರು.

ಕೊಳ್ಳೇಗಾಲದಿಂದ ಕರೆ ಮಾಡಿದ್ದ ಚಂದ್ರಮ್ಮ, ‘ನಮ್ಮ ತಂದೆಯವರು 10 ಎಕರೆ ಜಮೀನಿನ್ನು ಆರು ಗಂಡು ಮಕ್ಕಳಿಗೆ ಭಾಗ ಮಾಡಿಕೊಟ್ಟಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಭಾಗ ಕೊಟ್ಟಿಲ್ಲ. ನಮಗೆ ತಂದೆಯ ಪಾಲು ಸಿಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಶ್ರೀಧರ ಎಂ. ಅವರು ಪ್ರತಿಕ್ರಿಯಿಸಿ, ‘2004ರ ಡಿಸೆಂಬರ್‌ 20ಕ್ಕೂ ಮೊದಲೇ ಆಸ್ತಿ ಭಾಗವಾಗಿದ್ದರೆ, ಹೆಣ್ಣುಮಕ್ಕಳು ಆಸ್ತಿಯ ಸಮಪಾಲು ಕೇಳಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದರು.

ಭಾರತಿ ಅವರು ಮಾತನಾಡಿ, ‘ಸದರಿ ದಿನಾಂಕಕ್ಕಿಂತ ಮೊದಲೇ ಪಾಲಾಗಿದ್ದರೆ ಮತ್ತುಪಿತ್ರಾರ್ಜಿತ ಆಸ್ತಿಯಾದರೆ ಪಾಲು ಕೇಳಬಹುದು. ಆದರೆ ಸಮನಾಗಿ ಸಿಗಲಾರದು. ಕಡಿಮೆ ಬರಬಹುದು. ಮಾಹಿತಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿಯನ್ನು ಭೇಟಿ ಮಾಡಿ’ ಎಂದು ಸಲಹೆ ನೀಡಿದರು.

ರಸ್ತೆ ದುರಸ್ತಿ ಮಾಡಿಸಿ: ಚಾಮರಾಜನಗರ ತಾಲ್ಲೂಕಿನ ಸಿಂಗನಪುರದಿಂದ ಕರೆ ಮಾಡಿದ್ದ ಎಚ್‌.ಎಂ.ನಾಗರಾಜು ಅವರು, ‘ಮಂಗಲ ಹೊಸೂರಿನಿಂದ ಕೊಳ್ಳೇಗಾಲ ತಾಲ್ಲೂಕಿ ಕಣ್ಣೇಗಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅರ್ಧ ಕಿ.ಮೀನಷ್ಟು ರಸ್ತೆ 30 ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ಜಿಲ್ಲಾ ಪಂಚಾಯಿತಿಯವರು, ಲೋಕೋಪಯೋಗಿ ಇಲಾಖೆಯವರು ಇದು ತಮಗೆ ಸೇರಿದ್ದಲ್ಲ ಎಂದು ಹೇಳುತ್ತಿದ್ದಾರೆತಾವು ಮಧ್ಯಪ್ರವೇಶಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

‘ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿಸಿದವರ ಗಮನಕ್ಕೆ ತಂದು ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು’ ಎಂದು ಭಾರತಿ ಹೇಳಿದರು.

ಒತ್ತುವರಿ ತೆರವುಗೊಳಿಸಿ: ತಾಲ್ಲೂಕಿನ ಹರದನಹಳ್ಳಿಯಿಂದ ಕರೆ ಮಾಡಿದ್ದ ಮಂಜುನಾಥ್‌, ‘ಕಂದಕ ಇರುವ ಜಾಗ ಒತ್ತುವರಿಯಾಗಿರುವುದರಿಂದ ನೀರು ಸರಾಗವಾಗಿ ಹರಿಯದೆ ಮಳೆಗಾಲದಲ್ಲಿ ಗ್ರಾಮ ಪಂಚಾಯಿತಿ ಕಚೇರಿ, ಅಂಚೆ ಕಚೇರಿ, ಎಸ್‌ಬಿಐ ಬ್ಯಾಂಕ್‌ ಜಲಾವೃತವಾಗಿ ಜನರಿಗೆ ತೀವ್ರ ತೊಂದರೆಯಾಗಿದೆ. ಜಮೀನು ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

‘ಗ್ರಾಮದಲ್ಲಿ ಮದ್ಯದ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕೇರಳ ಲಾಟರಿ ಮಾರಾಟವೂ ಜಾಸ್ತಿಯಾಗಿದೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಗ್ರಾಮದ ಕಲ್ಯಾಣಿಯನ್ನು ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯ ಪಂಚಾಯಿತಿ ಸಹಕಾರ ನೀಡುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಬ್ಬರೂ ನ್ಯಾಯಾಧೀಶರು, ‘ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಅವರ ಗಮನಕ್ಕೆ ಈ ವಿಚಾರವನ್ನು ಗಮನಕ್ಕೆ ತಂದು ಒತ್ತುವರಿ ತೆರವಿಗೆ ಕ್ರಮ ವಹಿಸಲಾಗುವುದು. ಮದ್ಯ, ಕೇರಳ ಲಾಟರಿಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸೂಚಿಸಲಾಗುವುದು’ ಎಂದರು.

ಧೈರ್ಯದಿಂದ ಹೋರಾಡಿ: ಚಾಮರಾಜನಗರದಿಂದ ಕರೆ ಮಾಡಿದ್ದ ಪುಷ್ಪಾ, ‘ನಮ್ಮ ತಾತ 1987ನೇ ಇಸವಿಯಲ್ಲಿ ಜಮೀನು ಖರೀದಿ ಮಾಡಿದ್ದರು. ತಾತನಿಗೆ ಜಮೀನು ಕೊಟ್ಟಿರುವವರು ತಮ್ಮ ಪತ್ನಿಗೆ ಆ ಜಾಗವನ್ನು ಉಯಿಲು ಮಾಡಿದ್ದರು ಎಂಬ ಕಾರಣಕ್ಕೆ 2013ರಲ್ಲಿ ಜಮೀನನ್ನು ಬೇರೆಯವರು ನೋಡಿಕೊಳ್ಳುತ್ತಿದ್ದಾರೆ. ಆ ಜಾಗವನ್ನು ವಾಪಸ್‌ ಪಡೆಯುವುದು ಹೇಗೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಭಾರತಿ ಅವರು, ‘ನಿಮ್ಮ ತಾತ ಜಮೀನು ಖರೀದಿ ಮಾಡಿದ್ದರೆ, ಮಾರಾಟ ಮಾಡಿದ ವ್ಯಕ್ತಿ ಬರೆದ ಉಯಿಲು ಊರ್ಜಿತವಾಗುವುದಿಲ್ಲ. ನೀವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು. ನಿಮ್ಮ ಬಳಿ ದಾಖಲೆಗಳಿದ್ದರೆ ನೀವು ಧೈರ್ಯವಾಗಿ ಹೋರಾಡಿ. ಹೆಣ್ಣುಮಕ್ಕಳು ಎಂಬ ಹಿಂಜರಿಕೆ ಬೇಡ’ ಎಂದು ಸಲಹೆ ನೀಡಿದರು.

ಗೌರವ ಧನ ಕೊಡಿಸಿ: ಕೋವಿಡ್‌ ಸಮಯದಲ್ಲಿ ಕೌಶಲ್ಯಭಿವೃದ್ಧಿ ಇಲಾಖೆ ಹಾಗೂ ಭರಣಿ ಫೌಂಡೇಷನ್‌ ಸಹಯೋಗದಲ್ಲಿಜನರಲ್‌ ಡ್ಯೂಟ್‌ ಅಸಿಸ್ಟೆಂಟ್‌ ತರಬೇತಿ ಪಡೆದು ಕೋವಿಡ್‌ ಸೇನಾನಿಗಳಾಗಿ ಕಾರ್ಯನಿರ್ವಹಿಸಿ ಈಗ ಕೆಲಸದಿಂದ ಬಿಡುಗಡೆಯಾಗಿರುವ ರಂಗವಾಣಿ, ಶಿವಕುಮಾರಸ್ವಾಮಿ ಹಾಗೂ ಚಿನ್ನಸ್ವಾಮಿ ಅವರು ಕರೆ ಮಾಡಿ, ‘ಮಾಡಿದ ಕೆಲಸಕ್ಕೆ ಗೌರವ ಧನ ಬಂದಿಲ್ಲ. ಕೆಲಸ ಕೊಡಿಸುವ ಭರವಸೆಯನ್ನೂ ಕೊಟ್ಟಿದ್ದರು. ಈಗ ನೇಮಕಾತಿಯೂ ಮಾಡಿಕೊಳ್ಳುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಬಿ.ಎಸ್‌.ಭಾರತಿ ಅವರು ಪ್ರತಿಕ್ರಿಯಿಸಿ, ಅದು ತಾತ್ಕಾಲಿಕ ನೇಮಕಾತಿ ಆಗಿರುವುದರಿಂದ ಕೆಲಸ ಕೊಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ನೀವು ಮಾಡಿದ ಕೆಲಸಕ್ಕೆ ಗೌರವಧನ ಸಿಗಲೇಬೇಕು. ಅದನ್ನು ಕೊಡಿಸಲು ಶೀಘ್ರವಾಗಿ ಕ್ರಮವಹಿಸಲಾಗುವುದು’ ಎಂದರು.

ಕೊಳ್ಳೇಗಾಲದಿಂದ ಕರೆ ಮಾಡಿದ್ದ ರಘು ಹಾಗೂ ಸುಭಾಷ್‌ ಅವರು ಲೋಕ ಅದಾಲತ್‌ ಹಾಗೂ ಪ್ರಾಧಿಕಾರದಲ್ಲಿ ಲಭ್ಯವಿರುವ ಕಾನೂನು ನೆರವಿನ ಬಗ್ಗೆ ಮಾಹಿತಿ ಪಡೆದರು.

ಪ್ರಶ್ನೋತ್ತರ

* ಹರದನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಇರುವ ಸರ್ಕಾರಿ ದೊಡ್ಡಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಈಗ ಅದಕ್ಕೆ ಇ–ಸ್ವತ್ತು ಮಾಡಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಈ ಭೂಮಿಯನ್ನು ಉಳಿಸಲು ಮಾರ್ಗದರ್ಶನ ನೀಡಬೇಕು

–ಗಿರೀಶ್‌, ಹರದನಗಳ್ಳಿ ಚಾಮರಾಜನಗರ ತಾಲ್ಲೂಕು

-ಶ್ರೀಧರ ಎಂ.: ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪ್ರಾಧಿಕಾರದ ಕಚೇರಿಗೆ ಸಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು

* ವಿಜಯಪುರದಲ್ಲಿ ಮನೆ ಕಟ್ಟಿಕೊಂಡಿದ್ದೇನೆ ಸರ್ವೆ ನಂಬರ್‌ನಲ್ಲಿ 30/ಪ ಎಂಬ ಬದಲಿಗೆ 30/ಪಿ ಆಗಿದೆ ತಿದ್ದುಪಡಿ ಮಾಡಲು ಭೂಮಾಪನ ಇಲಾಖೆಗೆ ಕಚೇರಿಗೆ ಅಲೆದಾಡುತ್ತಿದ್ದೇನೆ. ಪ್ರತಿ ಬಾರಿಯೂ ವಾರ ಬಿಟ್ಟು ಬನ್ನಿ ಎಂದು ಹೇಳುತ್ತಿದ್ದಾರೆ. ನಾನು ದೆಹಲಿಯಲ್ಲಿದ್ದು, ಓಡಾಡುವುದಕ್ಕೆ ಕಷ್ಟವಾಗುತ್ತಿದೆ.

–ಸಾಬು ದರ್ಗಾ, ನವದೆಹಲಿ

ಶ್ರೀಧರ ಎಂ: ನೀವು ನೇರವಾಗಿ ನಿಮ್ಮ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ತೆರಳಿ ದೂರು ನೀಡಬೇಕು. ನಮ್ಮ ಪ್ರಾಧಿಕಾರಕ್ಕೆ ಅರ್ಜಿ ಕಳುಹಿಸಿದರೆ ಅಲ್ಲಿಗೆ ಅದನ್ನು ಕಳುಹಿಸುತ್ತೇವೆ.

* ಚಿಕ್ಕಮಗಳೂರಿನಲ್ಲಿ ನಿವೇಶನ ಇದೆ. ಅದನ್ನು ಪಕ್ಕದವರು ನಕಲಿ ಸಹಿ ಹಾಕಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ನಿವೇಶನ ವಾಪಸ್‌ ಪಡೆಯಲು ಏನು ಮಾಡಬೇಕು?

–ರಾಜೇಂದ್ರ, ಸೋಮವಾರಪೇಟೆ, ಚಾಮರಾಜನಗರ

ಬಿ.ಎಸ್‌.ಭಾರತಿ: ಚಿಕ್ಕಮಗಳೂರಿನ ನ್ಯಾಯಾಲಯದಲ್ಲೇ ಮೊಕದ್ದಮೆ ಹೂಡಬೇಕು. ಆರ್ಥಿಕವಾಗಿ ಶಕ್ತರಲ್ಲದಿದ್ದರೆ ಅಲ್ಲಿನ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿದರೆ, ಕಾನೂನು ನೆರವು ಸಿಗುತ್ತದೆ.

* ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೋಲಿಗ ಸಮುದಾಯದವರಿಗೂ ಕೆಲಸ ಕೊಡುವಂತೆ ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ಹಲವು ಬಾರಿ ಮನವಿ ಮಾಡಿದ್ದರೂ, ನೇಮಕಾತಿಗೆ ಪರಿಗಣಿಸಿಲ್ಲ. ನಮಗೆ ಕೆಲಸ ಕೊಡಿಸಲು ಕ್ರಮ ವಹಿಸಿ

–ಮಾದೇಶ, ಮಹದೇಶ್ವರ ಬೆಟ್ಟ

ಬಿ.ಎಸ್‌.ಭಾರತಿ: ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳನ್ನು ವಿಚಾರಿಸಲಾಗುವುದು. ನೇಮಕಾತಿ ಸಂದರ್ಭದಲ್ಲಿ ಅವಕಾಶ ಇದ್ದರೆ ಉದ್ಯೋಗ ನೀಡುವಂತೆ ಸಲಹೆಯನ್ನೂ ನೀಡುತ್ತೇವೆ.

* ನಾದಿನಿಯ ಸ್ನೇಹಿತೆ ಹಾಗೂ ಅವರ ಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ನಂತರ ನಾವೆಲ್ಲ ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಮನವೊಲಿಸಿದ್ದೇವೆ. ಅವರು ಒಂದಾಗಿ ಬಾಳಲು ಒಪ್ಪಿದ್ದಾರೆ. ವಿಚ್ಛೇದನ ರದ್ದುಪಡಿಸುವುದು ಹೇಗೆ?

–ಚರಣ್‌, ಕೊಳ್ಳೇಗಾಲ

ಬಿ.ಎಸ್‌.ಭಾರತಿ: ವಕೀಲರ ಮೂಲಕ ನ್ಯಾಯಾಲಯದ ವಿಚ್ಛೇದನ ಅರ್ಜಿ ವಾಪಸ್‌ ಪಡೆಯಲು ತಿಳಿಸಿ.

* ನನ್ನ ಹೆಸರಿನಲ್ಲಿರುವ ನಿವೇಶನಕ್ಕೆ ಹೋಗಲು ಸಂಬಂಧಿಕರಾದ ಅಕ್ಕಪಕ್ಕದ ನಿವೇಶನ ಮಾಲೀಕರು ಬಿಡುತ್ತಿಲ್ಲ. ನಿವೇಶನದಲ್ಲಿ ಮನೆ ಕಟ್ಟ ಬೇಕೆಂದಿದ್ದೇನೆ. ದಾರಿ ತೋರಿಸಿ

–ನಾಗೇಶ ನಾಯಕ, ಮೂಕನಪಾಳ್ಯ, ಚಾಮರಾಜನಗರ ತಾಲ್ಲೂಕು

ಬಿ.ಎಸ್‌.ಭಾರತಿ: ಕಾನೂನು ಪ್ರಕಾರ ದಾರಿ ನೀಡಬೇಕು. ಈ ಸಂಬಂಧ ವಕೀಲರ ಮೂಲಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ. ನಿಮ್ಮ ದಾರಿಯ ಹಕ್ಕನ್ನು ಪಡೆಯಬಹುದು.

* ನನ್ನ ತಂಗಿಯ ಪತಿ ಉಜ್ಜೀವನ್‌ ಬ್ಯಾಂಕ್‌ನಲ್ಲಿ 24 ಲಕ್ಷ ಸಾಲ ಮಾಡಿ ಉದ್ಯಮ ಆರಂಭಿಸಿದ್ದರು. ₹2 ಲಕ್ಷ ಸಾಲ ಪಾವತಿಸಿದ್ದಾರೆ. ಅನಾರೋಗ್ಯದಿಂದ ಭಾವ ಮೃತಪಟ್ಟರು. ವಿಮೆ ಮಾಡಿಸಿದ್ದರೂ, ಕ್ಲೇಮು ಮಾಡುವುದಕ್ಕೆ ಬ್ಯಾಂಕ್‌ ಒಪ್ಪುತ್ತಿಲ್ಲ. ಸಾಲ ಕಟ್ಟಿ ಎಂದು ಕಿರುಕುಳ ನೀಡುತ್ತಿದ್ದಾರೆ.

–ರೇಖಾ, ಚಾಮರಾಜನಗರ

ಶ್ರೀಧರ ಎಂ: ಸಾಲ ಪಡೆದಿರುವುದು, ವಿಮೆಗೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡು ಪ್ರಾಧಿಕಾರದ ಕಚೇರಿಗೆ ಸಲ್ಲಿಸಿ, ದಾಖಲೆ ಪರಿಶೀಲಿಸಿದ ಬಳಿಕ ಮುಂದಿನ ಕಾನೂನುಕ್ರಮ ತೆಗೆದುಕೊಳ್ಳಲಾಗುವುದು.

ಉಚಿತ ಕಾನೂನು ಸಲಹೆಗೆ ಯಾರು ಅರ್ಹರು?

ಎಸ್‌ಸಿ, ಎಸ್‌ಟಿಗೆ ಸೇರಿದವರು,ಮಾನಸಿಕ ಅಥವಾ ಬೇರೆ ಯಾವುದೇ ನ್ಯೂನತೆ ಹೊಂದಿದವರು, ಮಹಿಳೆ ಮತ್ತು ಮಕ್ಕಳು ಹಾಗೂ ಕಾರ್ಖಾನೆಯ ಕಾರ್ಮಿಕರು,ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗರಿಗೆ ತುತ್ತಾದವರು,ದೈಹಿಕ ವ್ಯಾಪಾರ ಮತ್ತು ಜೀತಕ್ಕೊಳಗಾದವರು,ರಕ್ಷಣಾ ಗೃಹ, ಮನೋರೋಗಿಗಳ ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿರುವವರು,ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರು,ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲ ವರ್ಗದ, ಜಾತಿಯ ಜನರು.

ಉಚಿತ ಕಾನೂನು ಸಲಹೆ: ಸಹಾಯವಾಣಿಗಳು

15100:ದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ

1800-425-90900: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ

08226-226022: ಚಾಮರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ

08220-240229:ಯಳಂದೂರು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ

08224-256788:ಕೊಳ್ಳೇಗಾಲ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ

08229-223279: ಗುಂಡ್ಲುಪೇಟೆ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ

ನಿರ್ವಹಣೆ: ಸೂರ್ಯನಾರಾಯಣ ವಿ.,ಚಿತ್ರ: ಸಿ.ಆರ್‌.ವೆಂಕಟರಾಮು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.