ADVERTISEMENT

ಗುಂಡ್ಲುಪೇಟೆ | ಧಾರಾಕಾರ ಮಳೆ: ಕೊಳೆಯುತ್ತಿದೆ ಬೆಳೆ

ವರುಣನ ಆರ್ಭಟಕ್ಕೆ ತುಂಬಿದ ಗುಂಡ್ಲುಪೇಟೆ ತಾಲ್ಲೂಕಿನ ಕೆರೆಗಳು

ಮಲ್ಲೇಶ ಎಂ.
Published 17 ಅಕ್ಟೋಬರ್ 2024, 7:05 IST
Last Updated 17 ಅಕ್ಟೋಬರ್ 2024, 7:05 IST
ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಂಗಳ ಹಿರೀಕೆರೆ ತುಂಬಿ ಕೋಡಿ ಬಿದ್ದಿದೆ
ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಂಗಳ ಹಿರೀಕೆರೆ ತುಂಬಿ ಕೋಡಿ ಬಿದ್ದಿದೆ   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಕೆರೆಗಳು ತುಂಬಿ ಹರಿಯುತ್ತಿದ್ದು, ರೈತರ ಜಮೀನುಗಳು ಜಲಾವೃತಗೊಂಡಿವೆ. ಈ ವರ್ಷ ವಾಡಿಕೆಗಿಂತಲೂ ಹೆಚ್ಚು ಮಳೆಯಾಗುತ್ತಿರುವುದು ಒಂದೆಡೆ ಖುಷಿ ತಂದರೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಕೊಳೆಯುವ ಹಂತ ತಲುಪುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಈಗಾಗಲೇ ಆಲೂಗಡ್ಡೆ, ಸೂರ್ಯಕಾಂತಿ ಸೇರಿದಂತೆ ಹಲವು ತರಕಾರಿ ಬೆಳೆಗಳು ಕಟಾವು ಹಂತಕ್ಕೆ ಬಂದಿದ್ದು ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಭಾರಿ ಮಳೆಯಿಂದ ಆಲೂಗಡ್ಡೆ ಕೀಳಲಾಗದೆ ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ತಾಲ್ಲೂಕಿನಲ್ಲಿ 1,200 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದ್ದು ಹಂಗಳ ಹೋಬಳಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ.

ಹಂಗಳ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಬೇರಂಬಾಡಿ ಸುತ್ತಮುತ್ತ ಎರಡು ದಿನಗಳಿಂದ ಎಡೆಬಿಡದೆ ಸುರಿದ ಮಳೆಗೆ ಬಂಡೀಪುರ ಅಭಯಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯಲ್ಲಿರುವ ಹಂಗಳ ಹಿರೀಕೆರೆ ತುಂಬಿ ಕೋಡಿಬಿದ್ದಿದೆ. ಇದರೊಂದಿಗೆ ಮಲ್ಲಯ್ಯನಪುರ ಕೆರೆ, ಬೇರಂಬಾಡಿ ಕೆಂಪುಸಾಗರ, ಬಸವಾಪುರ ಸಮೀಪದ ಸೆತ್ತೆಕಟ್ಟೆಯೂ ಕೋಡಿ ಬಿದ್ದು ಝರಿಯಂತೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ.

ADVERTISEMENT

ಕೆರೆಯ ನೀರು ಗುಂಡ್ಲುಪೇಟೆ ದೊಡ್ಡಕೆರೆಗೆ ಬಂದು ಸೇರುತ್ತಿದ್ದು, ಹಂಗಳ ದೊಡ್ಡಕೆರೆ, ಬರಗಿ, ಮುಂಟೀಪುರ ಕೆರೆಯೂ ಕೂಡ ತುಂಬುವ ಹಂತಕ್ಕೆ ತಲುಪಿದ್ದು, ರಾಘವಾಪುರ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.

ಹೊನ್ನಶೆಟ್ಟರ ಹುಂಡಿ ಕೆರೆ ಏರಿ ಒಡೆಯುವ ಭೀತಿ: ಮಳೆ ಆರ್ಭಟಕ್ಕೆ ತಾಲ್ಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಕೆರೆ ತುಂಬಿ ಏರಿ ಮೇಲೆ ನೀರು ಹರಿಯುತ್ತಿದೆ. ನೀರಿನ ಪ್ರಮಾಣ ಹೆಚ್ಚುತ್ತಲ್ಲೇ ಇದ್ದು ಕೆರೆಗಳು ಒಡೆಯುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ಕೆರೆಗಳ ಕೋಡಿ ಒಡೆದರೆ ರೈತರು ಬೆಳೆದ ನೂರಾರು ಎಕರೆ ಫಸಲು ನಾಶವಾಗಲಿದೆ. ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಬೇಕು ಎಂದು ಗ್ರಾಮದ ವೆಂಕಟೇಶ್ ಸೇರಿ ಹಲವರು ಒತ್ತಾಯಿಸಿದ್ದಾರೆ.

ಸೇತುವೆ ನಿರ್ಮಾಣಕ್ಕೆ ಒತ್ತಾಯ: ತಾಲ್ಲೂಕಿನ ಕೂತನೂರು ಕೆರೆ ಕೋಡಿ ಬಿದ್ದರೆ ಮಲ್ಲಯ್ಯನಪುರ ಗ್ರಾಮದಿಂದ ಜಮೀನಿಗೆ ಸಂರ್ಪಕ ಕಲ್ಪಿಸುವ ರಸ್ತೆಯು ಮುಳುಗಡೆಯಾಗಲಿದೆ. ಈ ಕಾರಣ ಸೇತುವೆ ನಿರ್ಮಾಣ ಮಾಡಬೇಕೆಂದು ನಿವಾಸಿಗರು ಹಾಗೂ ರೈತರು ಒತ್ತಾಯಿಸಿದ್ದಾರೆ. ಮಲ್ಲಯ್ಯನಪುರ ಗ್ರಾಮದಿಂದ ಪುತ್ತನಪುರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆಯ ಜಮೀನುಗಳಲ್ಲಿ 200ಕ್ಕೂ ಅಧಿಕ ರೈತರು ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ.

ಕೂತನೂರು ಕೆರೆ ತುಂಬಿ ಕೋಡಿ ಬಿದ್ದ ಸಂದರ್ಭದಲ್ಲಿ ಮಲ್ಲಯ್ಯನಪುರದಿಂದ ಜಮೀನಿನ ಮನೆಗಳಿಗೆ ಓಡಾಡುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಶಾಸಕ ಎಚ್.ಎಂ.ಗಣೇಶಪ್ರಸಾದ್ ಕೂಡಲೇ ಕ್ರಮವಹಿಸಿ ರಸ್ತೆಗೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರಾದ ಮಲ್ಲಯ್ಯನಪುರ ರಾಮು ಮನವಿ ಮಾಡಿದ್ದಾರೆ.

ಕೂತನೂರು ಕೆರೆ ಕೋಡಿ ಬಿದ್ದು ಮಲ್ಲಯ್ಯನಪುರ ಗ್ರಾಮದಿಂದ ಜಮೀನಿಗೆ ಸಂರ್ಪಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ
ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಳ
ನಿರಂತರ ಮಳೆಯಿಂದ ಕೆರೆಗಳು ತುಂಬುತ್ತಿರುವ ಕಾರಣ ಬತ್ತಿದ್ದ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು ಕೃಷಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಕೊಳವೆ ಬಾವಿಗಳು ಮರುಪೂರಣಗೊಂಡಿದ್ದು ಅಧಿಕವಾಗಿ ನೀರು ಬರತೊಡಗಿರುವುದು ಒಂದೆಡೆ ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.