ADVERTISEMENT

ಯಳಂದೂರು: ಕಾಫಿ ಬೆಳೆಗೆ ವರವಾದ ತುಂತುರು ಮಳೆ

ಹೆಚ್ಚಿನ ಮಳೆ ನಿರೀಕ್ಷೆಯಲ್ಲಿ ಬೆಟ್ಟದ ಕೃಷಿಕರು

ಎನ್.ಮಂಜುನಾಥಸ್ವಾಮಿ
Published 25 ಅಕ್ಟೋಬರ್ 2024, 7:54 IST
Last Updated 25 ಅಕ್ಟೋಬರ್ 2024, 7:54 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ಕಾಫಿ ಗಿಡಗಳಲ್ಲಿ ಕಾಯಿ ಕಚ್ಚಿರುವ ದೃಶ್ಯ   
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ಕಾಫಿ ಗಿಡಗಳಲ್ಲಿ ಕಾಯಿ ಕಚ್ಚಿರುವ ದೃಶ್ಯ       

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ ಮಳೆ ಮುಂದುವರಿದಿದ್ದು ಕಾಫಿ ಮತ್ತು ಮೆಣಸು ಕೃಷಿಕರಲ್ಲಿ ಮಂದಹಾಸ ಮೂಡಿಸಿದೆ. ಹಿಂಗಾರು ಮತ್ತಷ್ಟು ಚುರುಕಾದರೆ ವಾಣಿಜ್ಯ ಬೆಳೆಗಳು ಚೇತರಿಕೆ ಕಾಣಲಿವೆ. ಉತ್ತಮ ಇಳುವರಿ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂಬ ಆಶಾಭಾವದಲ್ಲಿದ್ದಾರೆ ಸಾಗುವಳಿದಾರರು.

ಬಿಆರ್‌ಟಿ ಸುತ್ತಮುತ್ತ 3 ವರ್ಷಗಳಿಂದ ಮುಂಗಾರು ಮಳೆಯ ಕೊರತೆ ಕಾಡುತ್ತಿರುವ ಪರಿಣಾಮ ಕಾಫಿ ಉತ್ಪಾದನೆ ಕುಸಿಯುತ್ತಿದೆ. ಸುಮಾರು 750 ಎಕರೆ ಪ್ರದೇಶದಲ್ಲಿ 700ಕ್ಕೂ ಹೆಚ್ಚಿನ ಸೋಲಿಗ ಕುಟುಂಬಗಳು ಇಲ್ಲಿ ಕಾಫಿ ಬೆಳೆಯುತ್ತಿದ್ದು, ಬಿಳಿಗಿರಿಬೆಟ್ಟದ ಸುತ್ತಮುತ್ತಲಿನ 16 ಹಾಡಿಗಳ 550ಕ್ಕೂ ಹೆಚ್ಚಿನ ರೈತರು ಕಾಫಿ ತೋಟಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಇವರೆಲ್ಲರೂ ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದಾರೆ.

ಬೆಟ್ಟದ ಸುತ್ತಮುತ್ತ ಅ.24ಕ್ಕೆ ಕೊನೆಗೊಂಡಂತೆ 300 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಮಳೆಯಾಗಿದೆ. ಭೂಮಿಯೂ ತಂಪಾಗಿದೆ. ಆದರೆ, ಮುಂಗಾರು ನಿರೀಕ್ಷೆಯಷ್ಟು ಸುರಿಯದ ಪರಿಣಾಮ ಜಲಮೂಲಗಳು ತುಂಬಿಲ್ಲ. ಡಿಸೆಂಬರ್ ಅಂತ್ಯದವರೆಗೂ ಮಳೆ ಮುಂದುವರಿದರೆ ಕೆರೆಕಟ್ಟೆಗಳು  ತುಂಬಿಕೊಳ್ಳುತ್ತವೆ ಎನ್ನುತ್ತಾರೆ ಮಳೆ ಮಾಪನದ ಮಾಹಿತಿ ಸಂಗ್ರಹಿಸುವ ವಿಜಿಕೆಕೆ ರುಕ್ಮಾಂಗದ.

ADVERTISEMENT

ಕಾಯಿಕಚ್ಚಿದ ಕಾಫಿ: ಏಪ್ರಿಲ್‌ನಲ್ಲಿ ಸಣ್ಣ ಮಳೆ ಸುರಿದು ಕಾಫಿ ಹೂ ಅರಳಿಸಿತ್ತು. ನಂತರ ಕಾಯಿ ಕಚ್ಚುವ ಹಂತದಲ್ಲಿ ಮಳೆ ಸುರಿಯಲಿಲ್ಲ. 2 ತಿಂಗಳ ನಂತರ ಮಳೆ ಮುಂದುವರಿದಿದ್ದು ಕಾಫಿ ಗಿಡದಲ್ಲಿ ಕಾಯಿಗಳು ಕಚ್ಚಿವೆ. ಮೆಣಸು ಬಳ್ಳಿ ಚೇತರಿಸಿಕೊಂಡಿದೆ. ಒಣಗುತ್ತಿದ್ದ ಹಣ್ಣಿನ ಗಿಡಗಳಲ್ಲೂ ಚಿಗುರಿವೆ. ಮಳೆ ಮುಂದುವರಿದರೆ ಈ ವರ್ಷ ವಾಣಿಜ್ಯ ಬೆಳೆಗಳ ಉತ್ಪಾದನೆ ಹೆಚ್ಚಾಗಬಹುದು ಎನ್ನುತ್ತಾರೆ ಬಿಳಿಗಿರಿಬೆಟ್ಟದ ಕಾಫಿ ಬೆಳೆಗಾರ ಸೋಮಣ್ಣ.

ಯಾವುದಾದರೂ ಒಂದು ತಿಂಗಳಲ್ಲಿ ಹೆಚ್ಚು ಮಳೆ ಸುರಿದರೆ ಬೆಳೆಗಳಿಗೆ ಪ್ರಯೋಜನ ಇಲ್ಲ. ಕಾಲಕಾಲಕ್ಕೆ ಉತ್ತಮ ಪ್ರಮಾನದ ಮಳೆ ಆಗಬೇಕು. ಭೂಮಿಯಲ್ಲಿ ತೇವಾಂಶ ಇರಬೇಕು, ಹವಾಮಾನ ವೈಪರೀತ್ಯ, ಮಳೆ ಋತುವಿನ ಅಸಮತೋಲನ ಉಂಟಾದರೆ ಇಳುವರಿ ಕುಸಿಯಲಿದೆ ಎನ್ನುತ್ತಾರೆ ಬೆಳೆಗಾರರು.

ಕೆರೆಗಳಲ್ಲಿ ಅರ್ಧ ನೀರು ತುಂಬಿದೆ. ಆಣೆಕಟ್ಟೆಗಳಲ್ಲಿ ನೀರಿನ ಏರಿಕೆ ಆಗಿಲ್ಲ. ಸಣ್ಣಪುಟ್ಟ ಕೆರೆಗಳು ಕೂಡ ಕೋಡಿ ಬಿದ್ದಿಲ್ಲ. ವರ್ಷಪೂರ್ತಿ ಕಾಡಿನ ಪರಿಸರಲ್ಲಿ ಜಲ ವೈಭವ ಕಾಣಲು ಕನಿಷ್ಠ 250 ಸೆಂ.ಮೀ ಮಳೆಯ ಅಗತ್ಯ ಇದೆ. ಇದರಿಂದ ಕಾಡು ಪ್ರಾಣಿಗಳಿಗೆ ಸಮೃದ್ಧ ನೀರು ದೊರೆಯಲಿದೆ, ವಾತಾವರಣವೂ ತಂಪಾಗಿರಲಿದೆ. ಕಾಡು ಉತ್ಪನ್ನಗಳ ಇಳುವರಿಯೂ ಕೈ ಸೇರಲಿದೆ ಎನ್ನುತ್ತಾರೆ ರೈತ ಬೊಮ್ಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.