ಪ್ರಜಾವಾಣಿ ವಾರ್ತೆ
ಚಾಮರಾಜನಗರ: ಇ-ಶ್ರಮ್ ಕಾರ್ಡ್ ಹೊಂದಿ ಬಿಪಿಎಲ್ ಕಾರ್ಡ್‌ನಿಂದ ವಂಚಿತರಾಗಿದ್ದ ಗಿರಿಜನ ಸಮುದಾಯಕ್ಕೆ ಸೇರಿದ ಕಾರ್ಮಿಕ ಬೂದಿಪಡಗದ ರುದ್ರೇಗೌಡರಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ದಿನವೇ ಆಹಾರ ಇಲಾಖೆಯ ಉಪ ನಿರ್ದೇಶಕ ಯೋಗಾನಂದ ಬಿಪಿಎಲ್ ಕಾರ್ಡ್ ವಿತರಿಸಿದರು.
ನಗರದ ತಾಲ್ಲೂಕು ಆಡಳಿತ ಕಚೇರಿಯಲ್ಲಿರುವ ಆಹಾರ ಶಾಖೆಯಲ್ಲಿ ಇ-ಶ್ರಮ್ ನೋಂದಾಯಿತರಿಗೆ ಪಡಿತರ ಕಾರ್ಡ್ ನೀಡುವ ಶಿಬಿರದಲ್ಲಿ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಇ-ಶ್ರಮ್ ಕಾರ್ಡು ಹೊಂದಿರುವ ಅರ್ಹ ಕಾರ್ಮಿಕರು ಪಡಿತರ ಕಾರ್ಡ್‌ಗಳಿಂದ ವಂಚಿತರಾಗಿದ್ದು ಅವರಿಗೆ ಬಿಪಿಎಲ್ ಕಾರ್ಡ್ ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೂರು ದಿನಗಳ ಶಿಬಿರ ಆಯೋಜನೆ ವಿತರಣೆ ಮಾಡಲಾಗುತ್ತಿದೆ.
ಇ- ಶ್ರಮ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಆಯಾ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಮೂಲಕ ಮೊಬೈಲ್ ಫೋನ್ ಕರೆ ಮಾಡಿಸಿ, ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಸೂಚನೆ ಕೊಡಿಸಲಾಗುತ್ತಿದೆ ಎಂದರು.
ರಂಗಸಂದ್ರದ ಕಾರ್ಮಿಕ ರುದ್ರೇಗೌಡರ ಪತ್ನಿ ಮಹದೇವಮ್ಮ ಅವರಿಗೂ ಅರ್ಜಿ ಸಲ್ಲಿಸಿದ ಕೆಲವೇ ತಾಸುಗಳಲ್ಲಿ ಪರಿಶೀಲನೆ ನಡೆಸಿ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಅರ್ಹರಿಗೆ ಆಯಾ ತಾಲ್ಲೂಕು ಆಹಾರ ಇಲಾಖೆಯ ಅಧಿಕಾರಿಗಳು ವಿತರಣೆ ಮಾಡಲಿದ್ದಾರೆ. ಈಗಾಗಲೇ ಶೇ 80ರಷ್ಟು ಗುರಿ ಸಾಧಿಸಿದ್ದು ನಾನಾ ಕಾರಣಗಳಿಂದ ವಲಸೆ ಹೋಗಿರುವ ಕಾರ್ಮಿಕರನ್ನು ಪತ್ತೆ ಹಚ್ಚಿ ವಿತರಿಸಲಾಗುವುದು ಎಂದರು.
ಈ ಸಂದರ್ಭ ಆಹಾರ ಇಲಾಖೆ ನಿರೀಕ್ಷಕ ದಿನಕರ್, ಕಾರ್ಮಿಕ ಇಲಾಖೆಯ ನಾಗೇಶ ಎಂ, ಶ್ರೀಧರ್, ಮಧುಸೂಧನ್, ಕಾರ್ತಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.