ಕೊಳ್ಳೇಗಾಲ: ಲೊಕ್ಕನಹಳ್ಳಿ ಹೋಬಳಿಯ 25 ನ್ಯಾಯಬೆಲೆ ಅಂಗಡಿಗಳಿಗೆ ಇನ್ನು ಮುಂದೆ ಕೊಳ್ಳೇಗಾಲ ವಿಭಾಗದ ಕರ್ನಾಟಕ ಆಹಾರ ನಿಗಮದಿಂದ (ಕೆಎಫ್‌ಸಿ) ಪಡಿತರ ಪದಾರ್ಥವನ್ನು ಪೂರೈಸಲಾಗುವುದು ಎಂದು ಆಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಆರ್. ರಾಚಪ್ಪ ಸೋಮವಾರ ಹೇಳಿದರು.
ಇದುವರೆಗೂ ಕೊಳ್ಳೇಗಾಲ ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿಯ (ಟಿಎಪಿಎಂಸಿ) ಮೂಲಕ ವಿತರಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸರಿಯಾಗಿ ಪರಿತರ ವಿತರಣೆಯಾಗುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಮುಂದೆ 25 ನ್ಯಾಯಬೆಲೆ ಅಂಗಡಿಗಳಿಗೆ ಕೆಎಫ್‌ಸಿ ಮೂಲಕವೇ ಅನ್ನಭಾಗ್ಯದ ಪಡಿತರ ವಿತರಣೆಯಾಗಲಿದೆ ಎಂದರು.
ಹಗರಣ ನಡೆದಿಲ್ಲ: ಗೋದಾಮಿಗೆ ಪಡಿತರ ಪೂರೈಕೆಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಈ ಬಗ್ಗೆ ತನಿಖೆಗೆ ನಡೆಸಲಾಗುವುದು. ಅವ್ಯವಹಾರದಲ್ಲಿ ಯಾರಾದರೂ ಭಾಗಿಯಾಗಿರುವುದು ದೃಢಪಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಚಪ್ಪ ತಿಳಿಸಿದರು.
ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ‘ಕೊಳ್ಳೇಗಾಲದ ಕೆಲವು ಕಡೆ ಪಡಿತರ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂದು ದೂರು ಬಂದಿತ್ತು. ಆಹಾರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆಗೆ ಹೋಗಿದ್ದಾಗ, ಗೋದಾಮಿಗೆ ಪಡಿತರ ಬಂದಿಲ್ಲ ಎಂದು ಕೆಲವರು ಹೇಳಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಅರಿವುದಕ್ಕಾಗಿ ತನಿಖೆ ನಡೆಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ತನಿಖೆಯ ಬಳಿಕ ಅವರು ವರದಿ ನೀಡಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.