ADVERTISEMENT

ಬಿಆರ್‌ಟಿ: ಬಿದಿರು ಭತ್ತ ಸಂರಕ್ಷಣೆಗೆ ಅರಣ್ಯ ಅಧಿಕಾರಿಗಳಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:29 IST
Last Updated 5 ಮಾರ್ಚ್ 2021, 15:29 IST
ಡಿ.ಎಸ್.ದೊರೆಸ್ವಾಮಿ
ಡಿ.ಎಸ್.ದೊರೆಸ್ವಾಮಿ   

ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿದಿರುಗಳು ಹೂ ಬಿಟ್ಟು, ಭತ್ತ ಬರುತ್ತಿದ್ದು ಇವುಗಳನ್ನು ಸಂಗ್ರಹಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿ ಡಿ.ಎಸ್‌.ದೊರೆಸ್ವಾಮಿ ಅವರು ಮನವಿ ಮಾಡಿದ್ದಾರೆ.

ಈ ಸಂಬಂಧ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

‌‘ಸಂರಕ್ಷಿತ ಪ್ರದೇಶದ ಪುಣಜನೂರು, ಬೂದಿಪಡಗ, ಬೇಡಗುಳಿ, ನಲ್ಲೂರು ಹಾಗೂ ಬಿಳಿರಂಗನಬೆಟ್ಟದ ವ್ಯಾಪ್ತಿಯ ಅರಣ್ಯದಲ್ಲಿ ಹರಿಯುತ್ತಿರುವ ನದಿ, ತೊರೆಗಳ ಪಕ್ಕದಲ್ಲಿ ಬಿದಿರು ಮೆಳೆಗಳು ಭಾರಿ ಪ್ರಮಾಣದಲ್ಲಿವೆ. ಆನೆಗಳಿಗೆ ಇವು ಉತ್ತಮವಾದ ಆಹಾರವಾಗುತ್ತಿತ್ತು. ಆದರೆ, ಈಗ ಬಹುತೇಕ ಎಲ್ಲ ಕಡೆಗಳಲ್ಲಿ ಬಿದಿರು ಹೂಬಿಟ್ಟು, ಭತ್ತ ಬರಲು ಆರಂಭವಾಗಿದ್ದು ಒಣಗುತ್ತಿವೆ. ಹಲವರು ಈ ಬಿದಿರು ಭತ್ತವನ್ನು ಸಂಗ್ರಹಿಸಿ ಹೊರಗಡೆ ಮಾರಾಟ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ‌

ADVERTISEMENT

‘ಅರಣ್ಯ ಇಲಾಖೆ ಇದಕ್ಕೆ ಅವಕಾಶ ಕೊಡಬಾರದು. ಬಿದಿರು ಭತ್ತವನ್ನು ಇಲಾಖೆಯೇ ಸಂಗ್ರಹಿಸಿ ನರ್ಸರಿಯಲ್ಲಿಟ್ಟು ಅದನ್ನು ಸಸಿ ಮಾಡಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಚಿತವಾಗಿ ನೀಡಲು ಕ್ರಮ ವಹಿಸಬೇಕು. ಇದರಿಂದ ಬಿದಿರು ಬೆಳೆಯಲು ಸಹಾಯ ಮಾಡಿದಂತಾಗುತ್ತದೆ’ ಎಂದು ಅವರು ಸಲಹೆ ನೀಡಿದ್ದಾರೆ.

‘ಮಳೆಗಾಲದ ಅವಧಿಯಲ್ಲಿ ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಬಿದಿರು ಭತ್ತವನ್ನು ಬಿತ್ತನೆ ಮಾಡಲೂ ಕ್ರಮ ವಹಿಸಬೇಕು. ಇದಕ್ಕೆ ಆಗುವ ಹಣಕಾಸಿನ ವೆಚ್ಚವನ್ನು ಪರಿಸರ ಅಭಿವೃದ್ಧಿ ಸಮಿತಿಯಿಂದ ಭರಿಸಬಹುದು’ ಎಂದು ಪುಣಜನೂರು ಗ್ರಾಮದ ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ದೊರೆಸ್ವಾಮಿ ಅವರು ಮನವಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.