ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಬಿಳಿಗಿರಿರಂಗನಬೆಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೆಸಾರ್ಟ್ ಮತ್ತು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ ಎಂಬುದು ಉಪವಿಭಾಗಾಧಿಕಾರಿಯವರ ವರದಿಯಿಂದಲೂ ದೃಢಪಟ್ಟಿದೆ.
‘ಪ್ರಜಾವಾಣಿ’ಯ ನವೆಂಬರ್ 10ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ಬಿಆರ್‌ಟಿ: ಅಕ್ರಮ ರೆಸಾರ್ಟ್’ ವಿಶೇಷ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ ಅವರ ಸೂಚನೆಯಂತೆ ಉಪವಿಭಾಗಾಧಿಕಾರಿ ನ.11ರಂದು ಬಿಳಿಗಿರಿ ರಂಗನಬೆಟ್ಟದಲ್ಲಿರುವ ಎಂಟು ರೆಸಾರ್ಟ್, ಹೋಂ ಸ್ಟೇಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನ.29ರಂದು ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದರು.
ವರದಿಯಲ್ಲಿನ ವಿವರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಕರ್ನಾಟಕ ಭೂಕಂದಾಯ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿರುವುದರ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿಯವರು ಆರು ರೆಸಾರ್ಟ್, ಹೋಂ ಸ್ಟೇಗಳ ಐವರು ಮಾಲೀಕರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.
ಎಂಟು ಹೋಂಸ್ಟೇಗಳಿಗೆ ಭೇಟಿ
ಉಪವಿಭಾಗಾಧಿಕಾರಿ ಮಹೇಶ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬಿಳಿಗಿರಿರಂಗನಬೆ ಟ್ಟದಲ್ಲಿರುವ ಗೋರುಕನ, ರಜತಾದ್ರಿ, ಆಕಾಶ್, ಗಿರಿದರ್ಶಿನಿ, ಶ್ವೇತಗಿರಿ, ನಿಸರ್ಗ ಹಿಲ್ಸ್ ಟಾಪ್ ಹಾಗೂ ಇನ್ನೆರಡು ಹೋಂ ಸ್ಟೇಗಳಿಗೆ ಭೇಟಿ ನೀಡಿದ್ದರು.
ವರದಿಯಲ್ಲಿ ಏನಿದೆ?
ಗೋರುಕನ: ವಿಜಿಕೆಕೆಯ ಗೌರವ ಕಾರ್ಯದರ್ಶಿ ಡಾ.ಎಚ್.ಸುದರ್ಶನ್ ಮಾಲೀಕತ್ವದ ಗೋರುಕನ ರೆಸಾರ್ಟ್ ಸರ್ವೆ ನಂಬರ್ 4/68ರಲ್ಲಿ ಎಂಟು ಎಕರೆಯಲ್ಲಿ ಹರಡಿದೆ. ಪರಿಸರ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರ ತೆರೆಯುವ ಉದ್ದೇಶಕ್ಕೆ 2009ರ ಸೆ.16 ಮತ್ತು ಡಿ.8ರಂದು ಭೂಪರಿವರ್ತನೆ ಮಾಡಲಾಗಿದೆ. 2019ರ ಡಿ.27ರಂದು ಜಿಲ್ಲಾಧಿಕಾರಿಯವರು ಭೂಪರಿವರ್ತನೆ ರದ್ದು ಮಾಡಿದ್ದಾರೆ. ಡಾ.ಎಚ್.ಸುದರ್ಶನ್ ಅವರು ಜಿಲ್ಲಾಧಿಕಾರಿ ಆದೇಶದ ವಿರುದ್ಧ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಅಲ್ಲಿ ಆಯುರ್ವೇದಿಕ್ ಚಟುವಟಿಕೆಗಳು ನಡೆಯುತ್ತಿದ್ದು, ಕೊಠಡಿಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ.
ರಜತಾದ್ರಿ: ರಮೇಶ್ ಬಾಬು ಮಾಲೀಕತ್ವದ ಈ ಹೋಂಸ್ಟೇ ಸ.ನಂ 4/50ರ 0.06 ಗುಂಟೆ ಜಮೀನನ್ನು ಹೋಟೆಲ್ ಮತ್ತು ವಸತಿ ಗೃಹ ನಿರ್ಮಾಣ ಉದ್ದೇಶಕ್ಕಾಗಿ 2004ರ ಫೆ.26ರಂದು ಭೂ ಪರಿವರ್ತನೆ ಮಾಡಲಾಗಿದೆ. ಆದರೆ, ಹೋಟೆಲ್, ವಸತಿಗೃಹದ ಬದಲು ಎಂಟು ಕೊಠಡಿಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ.
ಉಪವಿಭಾಗಾಧಿಕಾರಿಯವರು ವರದಿ ನೀಡಿದ್ದಾರೆ. ಕಾನೂನು ಯಾರೇ ಉಲ್ಲಂಘಿಸಿದ್ದರೂ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು.ಸಿ.ಟಿ.ಶಿಲ್ಪಾ ನಾಗ್, ಜಿಲ್ಲಾಧಿಕಾರಿ
ಆಕಾಶ್: ಡಾ.ಎಚ್.ಸುದರ್ಶನ್ ಅವರ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರಕ್ಕಾಗಿ ಸರ್ವೆ ನಂ 4/2ರಲ್ಲಿ 2 ಎಕರೆ ಜಮೀನನ್ನು 1995ರ ಅ.30ರಂದು ಮಂಜೂರು ಮಾಡಲಾಗಿದೆ. ಭೂಪರಿವರ್ತನೆಯಾಗಿಲ್ಲ. ಆದರೆ, ಪರಿವರ್ತನಾ ಶುಲ್ಕ ಪಾವತಿಸಿರುವುದಾಗಿ ಮಾಲೀಕರು ತಿಳಿಸಿದ್ದಾರೆ. ಈ ಜಮೀನಿನಲ್ಲಿರುವ 13 ಕೊಠಡಿಗಳ ಕಟ್ಟಡವನ್ನು ಐಪಿಎಚ್ ಎಂಬ ಸಂಸ್ಥೆಗೆ ಬಾಡಿಗೆಗೆ ನೀಡಲಾಗಿದೆ.
ಗಿರಿದರ್ಶಿನಿ: ಸ.ನಂ 4/47ರಲ್ಲಿ 0.20 ಜಮೀನಿನಲ್ಲಿ ಈ ಹೋಂ ಸ್ಟೇ ಇದೆ. ಎಸ್.ಜಿ.ಶಂಕರ ನಾರಾಯಣರಾವ್ ಅವರು ಇದರ ಮಾಲೀಕರು. ವಾಸದ ಮನೆ, ದನದಕೊಟ್ಟಿ, ಹುಳು ಸಾಕಣೆ ಮನೆ ಕಟ್ಟಿಸುವ ಉದ್ದೇಶಕ್ಕಾಗಿ 1991ರ ಏಪ್ರಿಲ್ 3ರಂದು ಭೂ ಪರಿವರ್ತನೆ ಮಾಡಲಾಗಿದೆ. ಈ ಜಾಗದಲ್ಲಿ ಹೋಟೆಲ್ ಕಾರ್ಯಾಚರಿಸುತ್ತಿದೆ. ಮತ್ತು ಎಂಟು ಕೊಠಡಿಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ. ಅನಧಿಕೃತವಾಗಿ ಹೋಂ ಸ್ಟೇ ನಡೆಸುತ್ತಿರುವ ಬಗ್ಗೆ ತಿಳಿವಳಿಕೆ ನೋಟಿಸ್ ನೀಡಿ ಈ ಹಿಂದೆ ಬೀಗ ಮುದ್ರೆ ಹಾಕಲಾಗಿತ್ತು. ನಂತರ ಯಾವುದೇ ಅನಧಿಕೃತ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಕೆ ನೀಡಿ ಪ್ರಮಾಣಪತ್ರ ಪಡೆದು, 2021ರಲ್ಲಿ ಅಂದಿನ ಜಿಲ್ಲಾಧಿಕಾರಿಯವರ ಸೂಚನೆಯಂತೆ ಬೀಗ ಮುದ್ರೆ ತೆರವುಗೊಳಿಸಲಾಗಿತ್ತು.
ಮಾಲೀಕರು ಈ ವರ್ಷದ ಆಗಸ್ಟ್ 18ರಂದು ಹೋಟೆಲ್ ಮತ್ತು ವಸತಿ ಗೃಹ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ.
ಶ್ವೇತಗಿರಿ: ಎಸ್.ಜಿ.ಶಂಕರ ನಾರಾಯಣರಾವ್ ಮಾಲೀಕತ್ವದ ಸ.ನಂ 4.47ರಲ್ಲಿ 0.20 ಗುಂಟೆ ಕೃಷಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಿ ಎಂಟು ಕೊಠಡಿಗಳನ್ನು ಬಾಡಿಗೆಗೆ ನೀಡಲಾಗಿದೆ. ಭೂ ಪರಿವರ್ತನೆಯಾಗಿಲ್ಲ. ಈ ಹಿಂದೆ ಈ ಕೊಠಡಿಗಳಿಗೂ ಬೀಗ ಮುದ್ರೆ ಹಾಕಲಾಗಿತ್ತು. 2021ರಲ್ಲಿ ಅಂದಿನ ಜಿಲ್ಲಾಧಿಕಾರಿಯವರ ಸೂಚನೆಯಂತೆ ಅನಧಿಕೃತ ಚಟುವಟಿಕೆ ನಡೆಸದಂತೆ ಮುಚ್ಚಳಿಕೆ ಬರೆಸಿಕೊಂಡು ಬೀಗ ಮುದ್ರೆ ತೆರೆಯಲಾಗಿತ್ತು.
ನಿಸರ್ಗ ಹಿಲ್ಸ್ ಟಾಪ್: ಮಂಜುನಾಥ್ ಬಿನ್ ಮಾಲೀಕತ್ವದ 17/1ಬಿ 60x40 ಅಳತೆಯ ನಿವೇಶನದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಈ ಹಿಂದೆ ಅನಧಿಕೃತವಾಗಿ ಹೋಂ ಸ್ಟೇ ನಡೆಸಲಾಗುತ್ತಿತ್ತು. ಸದ್ಯ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿಲ್ಲ.
ಈ ಹಿಂದೆ ಎರಡು ಕೊಠಡಿಗಳಿಗೆ ಬೀಗ ಜಡಿಯಲಾಗಿತ್ತು. 2021ರ ಜೂನ್ 21ರಂದು ಅಂದಿನ ಜಿಲ್ಲಾಧಿಕಾರಿಯವರು ಮಾಲೀಕರಿಗೆ ಸೂಕ್ತ ಅನುಮತಿ ಮತ್ತು ಪರವಾನಗಿ ಪಡೆಯುವಂತೆ ಸೂಚಿಸಿದ್ದರು. ಅವರ ಸೂಚನೆಯ ಮೇರೆಗೆ ಕೊಠಡಿಗಳಿಗೆ ಹಾಕಿದ್ದ ಬೀಗವನ್ನೂ ತೆರೆಯಲಾಗಿತ್ತು.
ನಾಗಮಣಿ ಎಂಬುವವರು ಸ.ನಂ 4/45ಪಿ ರಲ್ಲಿ 4 ಎಕರೆ ಜಮೀನು ಹೊಂದಿದ್ದು, ಭೂ ಪರಿವರ್ತನೆ ಮಾಡದೆ ಎರಡು ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಈ ಹಿಂದೆ ಈ ಕೊಠಡಿಗಳಿಗೂ ಬೀಗಮುದ್ರೆ ಹಾಕಲಾಗಿತ್ತು. ನಂತರ ಮಾಲೀಕರ ಕೋರಿಕೆಯಂತೆ, ಕೊಠಡಿಗಳಲ್ಲಿ ವ್ಯವಸಾಯದ ಸಾಮಗ್ರಿಗಳನ್ನು ಇರಿಸಲು ಮತ್ತು ಕೂಲಿ ಕಾರ್ಮಿಕರು ತಂಗುವುದಕ್ಕಾಗಿ 2020ರ ನವೆಂಬರ್‌ನಲ್ಲಿ ಅಂದಿನ ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಬೀಗ ತೆರವುಗೊಳಿಸಲಾಗಿತ್ತು.
ಸ.ನಂ 4/28–29ರಲ್ಲಿ 2.11 ಎಕರೆ ಜಮೀನಿನಲ್ಲಿ ಬಿ.ರಂಗಣ್ಣ ಎಂಬುವವರು ಎರಡು ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಜಮೀನಿನ ಭೂಪರಿವರ್ತನೆಯಾಗಿಲ್ಲ. ಈ ಹಿಂದೆ ಅನಧಿಕೃತವಾಗಿ ಹೋಂ ಸ್ಟೇ ನಡೆಸುತ್ತಿರುವುದಕ್ಕೆ ತಿಳಿವಳಿಕೆ ನೋಟಿಸ್ ನೀಡಿ ಭೀಗಮುದ್ರೆ ಹಾಕಲಾಗಿತ್ತು. ನಂತರ ಮಾಲೀಕರ ಕೋರಿಕೆ ಮೇರೆಗೆ 2021ರ ಸೆ.3ರಂದು ಅಂದಿನ ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಅನಧಿಕೃತಕವಾಗಿ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ನೋಟರಿ ಪ್ರಮಾಣಪತ್ರ ಪಡೆದು ಬೀಗ ಮುದ್ರೆ
ತೆರವುಗೊಳಿಸಲಾಗಿದೆ.
ಉಪವಿಭಾಗಾಧಿಕಾರಿಯವರು ವರದಿ ನೀಡಿದ್ದಾರೆ. ಕಾನೂನು ಯಾರೇ ಉಲ್ಲಂಘಿಸಿದ್ದರೂ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು
‘ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು’
ಅನಧಿಕೃತವಾಗಿ ರೆಸಾರ್ಟ್ ಹೋಂ ಸ್ಟೇ ನಡೆಸುತ್ತಿರುವವರು ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವುದು ಮತ್ತು ಆನೆಗಳ ಆವಾಸ ಸ್ಥಾನದಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ನಿರ್ಮಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಹೇಳಿವೆ. ಹಾಗಾಗಿ ಮಾಲೀಕರ ವಿರುದ್ಧ ಜಿಲ್ಲಾಡಳಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು’ ಎಂದು ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ನ್ಯಾಯಾಧೀಕರಣದಲ್ಲಿರುವ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.