ಚಾಮರಾಜನಗರ: ಜಿಲ್ಲೆಯ ಗ್ರಾಮಾಂತರ ಪ್ರದೇಶ, ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಸ್ತೆಗಳು ಗುಂಡಿ ಬಿದ್ದಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ. ಕೆಲವು ಕಡೆಗಳಲ್ಲಿ ರಸ್ತೆಯೊಳಗೆ ಗುಂಡಿಗಳಿವೆಯೋ ಅಥವಾ ಗುಂಡಿಯೊಳಗೇ ರಸ್ತೆಗಳು ಇವೆಯೋ ಎಂಬ ಸಂಶಯ ಮೂಡುವಷ್ಟು ರಸ್ತೆಗಳು ಹಾಳಾಗಿವೆ. ರಾತ್ರಿಯ ಹೊತ್ತು ಸವಾರರಿಗೆ ಗುಂಡಿಗಳು ಕಾಣದೆ ಅಪಘಾತಗಳು ಹೆಚ್ಚಾಗುತ್ತಿದ್ದು ಜೀವಹಾನಿ ಸಂಭವಿಸುತ್ತಿದೆ.
ಜಿಲ್ಲೆಯಲ್ಲಿ 664 ಕಿ.ಮೀ ರಾಜ್ಯ ಹೆದ್ದಾರಿ, 926 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳು, 195 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿವೆ. ರಾಷ್ಟ್ರೀಯ ಹೆದ್ದಾರಿಗಳು ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತವೆ. ರಾಜ್ಯದ ದಕ್ಷಿಣ ಭಾಗದ ಕೊನೆಯ ಜಿಲ್ಲೆಯಾಗಿರುವ, ಭೂಭಾಗಕ್ಕಿಂತ ಅರಣ್ಯ ಭಾಗವೇ ಹೆಚ್ಚಾಗಿರುವ, ಅಭಿವೃದ್ಧಿಯಲ್ಲೂ ಹಿಂದುಳಿದಿರುವ ಚಾಮರಾಜನಗರ ಜಿಲ್ಲೆಯಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ.
ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ರಸ್ತೆಗಳು ತೀರಾ ಹದಗೆಟ್ಟಿವೆ. ನಗರಸಭೆಯ 31 ವಾರ್ಡ್‌ಗಳಲ್ಲೂ ರಸ್ತೆಗಳು ಗುಂಡಿಬಿದ್ದಿವೆ. ನಗರದೊಳಗೆ ಮುಖ್ಯ ರಸ್ತೆಗಳ ಹೊರತಾಗಿ ಸಂಪರ್ಕ ರಸ್ತೆಗಳು ಡಾಂಬಾರು ಮುಖ ಕಂಡಿಲ್ಲ. ಕಚ್ಚಾ ರಸ್ತೆಗಳಲ್ಲೇ ಇಂದಿಗೂ ನಗರದ ಜನ ಸಂಚರಿಸುತ್ತಿದ್ದಾರೆ. ಅನಧಿಕೃತ ಬಡಾವಣೆಗಳಲ್ಲಂತೂ ಕಚ್ಚಾರಸ್ತೆಗಳೂ ಇಲ್ಲ. ವರ್ಷಗಳಿಂದ ಜನರು, ವಾಹನಗಳು ಓಡಾಡುವ ಕಾಲುದಾರಿಗಳು ಮುಖ್ಯ ರಸ್ತೆಗಳಾಗಿ ಮಾರ್ಪಾಡಾಗಿವೆ. ಗುಂಡಿಬಿದ್ದ ರಸ್ತೆಗಳಲ್ಲಿ ಸಾರ್ವಜನಿಕರು ನಿತ್ಯ ಪ್ರಯಾಸದಿಂದ ಸಂಚರಿಸಬೇಕಾಗಿದೆ.
ಚಾಮರಾಜನಗರದ ಸಂತೆಮರಹಳ್ಳಿ ಸರ್ಕಲ್‌ನಿಂದ ಕೊಳ್ಳೆಗಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ತುಂಬಿದೆ. ಅದೇರೀತಿ ನಗರದಿಂದ ಗುಂಡ್ಲುಪೇಟೆ ಹಾಗೂ ಸತ್ಯಮಂಗಲಕ್ಕೆ ಸಂಪರ್ಕಿಸುವ ರಸ್ತೆಯೂ ಹಾಳಾಗಿದೆ. ಮುಖ್ಯವಾಗಿ ಪ್ರಮುಖ ಸರ್ಕಲ್‌ಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ರಾಮಸಮುದ್ರ, ಭೀಮಸಮುದ್ರ, ಭಗೀರಥ ನಗರ, ಹೌಸಿಂಗ್ ಬೋರ್ಡ್ ಕಾಲೊನಿ, ಗಾಳಿಪುರ, ಸೋಮವಾರ ಪೇಟೆ, ಬುದ್ಧನಗರ, ಪ್ರಶಾಂತ್ ನಗರದಲ್ಲಿ ರಸ್ತೆಗಳು ತೀರಾ ಹಾಳಾಗಿವೆ.
ಹೆದ್ದಾರಿಗಳು ಅಧ್ವಾನ: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಕೊಳ್ಳೆಗಾಲದಿಂದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾಳಾಗಿದ್ದು ಇದೀಗ ಗುಂಡಿಮುಚ್ಚುವ ಕೆಲಸಗಳು ಆರಂಭವಾಗಿವೆ. ಆದರೆ, ಗ್ರಾಮೀಣ ಭಾಗದ ರಸ್ತೆಗಳು ತೀರಾ ಹದಗೆಟ್ಟಿದೆ. ಈ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಬಂಡೀಪುರದಿಂದ ಎಲಚೆಟ್ಟಿ ಗ್ರಾಮದವರೆಗೆ ಸುಮಾರು 10 ಕಿ.ಮೀ ರಸ್ತೆ ಗುಂಡಿಗಳಿಂದ ತುಂಬಿದೆ.
ಇಪ್ಪತ್ತು ವರ್ಷಗಳ ಹಿಂದೆ ರಸ್ತೆ ನಿರ್ಮಾಣ ಮಾಡಲಾಗಿದ್ದು, ಬಳಿಕ ರಸ್ತೆ ನಿರ್ವಹಣೆ ಗೋಜಿಗೆ ಹೋಗಿಲ್ಲ, ಕಾಡಂಚಿನ ಗ್ರಾಮಗಳಿಂದ ಜನರು ಹಾಗೂ ವಿದ್ಯಾರ್ಥಿಗಳು 25 ಕಿ.ಮೀ ಗುಂಡಿಬಿದ್ದ ರಸ್ತೆಯಲ್ಲಿ ಸಂಚರಿಸಿ ಗುಂಡ್ಲುಪೇಟೆ ಪಟ್ಟಣ ತಲುಪಬೇಕು. ರಸ್ತೆಗಳು ಹಾಳಾಗಿರುವುದರಿಂದ ತುರ್ತು ಸಂದರ್ಭದಲ್ಲಿ ಗಿರಿಜನರ ಹಾಡಿಗಳಿಗೆ ಆಟೊ, ಕಾರು ಸಹಿತ ಬಾಡಿಗೆ ವಾಹನಗಳು ಬರುವುದಿಲ್ಲ.
ಪ್ರವಾಸಿಗರಿಗೆ ಕಿರಿಕಿರಿ: ಕೊಳ್ಳೇಗಾಲ ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳು, ರಾಜ್ಯ ಹೆದ್ದಾರಿ ಹಾಗೂ ನಗರ ಪ್ರದೇಶದ ರಸ್ತೆಗಳು ಅಧ್ವಾನದಿಂದ ಕೂಡಿವೆ. ಪ್ರತಿನಿತ್ಯ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಇರುವ ಹಳ್ಳಗಳಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಪ್ರಯಾಸದಿಂದ ಸಂಚರಿಸುತ್ತಿವೆ.
ಗ್ರಾಮೀಣ ಭಾಗಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ನೆರೆ ರಾಜ್ಯ ತಮಿಳುನಾಡಿಗೆ ಸಂಪರ್ಕಿಸುವ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಿಂದ ಒಡೆಯರ ಪಾಳ್ಯ ಗ್ರಾಮದ ರಸ್ತೆ ಹಳ್ಳಗಳಿಂದ ಕೂಡಿದ್ದು ಉಭಯ ರಾಜ್ಯಗಳ ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ. ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತಕ್ಕೆ ಹೋಗುವ ರಸ್ತೆಯಲ್ಲಿ ಒಂದು ಅಡಿಗೂ ಆಳವಾದ ಗುಂಡಿಗಳಿವೆ.
ಭರಚುಕ್ಕಿ ಜಲಪಾತ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ದು ಇಲ್ಲಿನ ಗುಂಡಿಗಳನ್ನು ನೋಡಿ ಹೌಹಾರುತ್ತಿದ್ದಾರೆ. ಜಲಪಾತದ ಸೌಂದರ್ಯ ಸವಿಯುವ ಬದಲಾಗಿ ಇಲ್ಲಿನ ಗುಂಡಿಬಿದ್ದ ರಸ್ತೆಗಳಿಗೆ ಹಿಡಿ ಶಾಪ ಹಾಕುವುದೇ ಹೆಚ್ಚಾಗಿದೆ. ರಸ್ತೆ ದುರಸ್ತಿಯ ಬಗ್ಗೆ ಸ್ಥಳೀಯ ಶಾಸಕರು, ಜಿಲ್ಲೆಯ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಗುಣಮಟ್ಟದ ರಸ್ತೆಗಳು ಪೂರಕ ಎನ್ನುತ್ತಾರೆ ಶಿವನಸಮುದ್ರ ಗ್ರಾಮದ ರುದ್ರಮ್ಮ.
ಗುಂಡಿಗಳ ನಡುವೆ ಸಂಚಾರ: ಯಳಂದೂರು ತಾಲ್ಲೂಕಿನ ಗ್ರಾಮಿಣ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದು ಸಂಚಾರ ದುಸ್ತರವಾಗಿದೆ. ಪಟ್ಟಣದ ರಸ್ತೆಯೂ ಹಾಳಾಗಿದೆ. ದ್ವಿಚಕ್ರ ಮತ್ತು ತ್ರಿ ಚಕ್ರ ವಾಹನಗಳು ಪ್ರಯಾಸದಿಂದ ಸಂಚರಿಸಬೇಕು. ರಾತ್ರಿ ಸಮಯದಲ್ಲಿ ಅಪಘಾತಗಳ ಆತಂಕ ಹೆಚ್ಚಾಗಿದೆ. ಬಿಳಿಗಿರಿರಂಗನ ಬೆಟ್ಟದಿಂದ ಕೊಳ್ಳೇಗಾಲಕ್ಕೆ ಸಂಚರಿಸುವ ಗ್ರಾಮೀಣ ರಸ್ತೆ ಸಂಪೂರ್ಣ ಹಳಾಗಿದ್ದು ರಸ್ತೆ ದುರಸ್ತಿಗೆ ಮುಂದಾಗಬೇಕು ಎನ್ನುತ್ತಾರೆ ಗ್ರಾಮೀಣ ಜನರು.
ಚಾಮರಾಜನಗರ ವಿಧಾನಸಭಾ ವ್ಯಾಪ್ತಿಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಶೀಘ್ರ ನಗರದ ರಸ್ತೆಗಳು ಗುಂಡಿಮುಕ್ತವಾಗಲಿವೆ. ನಗರಸಭೆ ವ್ಯಾಪ್ತಿಯಲ್ಲಿ ಕೆಲವು ಬಡಾವಣೆಗಳು ಅನಧಿಕೃತವಾಗಿರುವುದರಿಂದ ರಸ್ತೆ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗಿವೆ. ನಗರಕ್ಕೆ ಹೊಸ ಯುಜಿಡಿ ರಸ್ತೆಗಳ ನಿರ್ಮಾಣ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.–ಪುಟ್ಟರಂಗಶೆಟ್ಟಿ ಚಾಮರಾಜನಗರ ಶಾಸಕ
ಚಾಮರಾಜನಗರದ ವಂಡರಬಾಳು ಸಮೀಪದ ನವೋದಯ ಶಾಲೆಯಿಂದ ಕೆ.ಗುಡಿಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹20 ಕೋಟಿ ಬಿಡುಗಡೆಯಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ. ರಾಜ್ಯ ಹೆದ್ದಾರಿಯಾಗಿರುವ ಯಳಂದೂರು–ಗುಂಡ್ಲುಪೇಟೆ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಚಾಮರಾಜನಗರದಿಂದ ಗುಂಡ್ಲುಪೇಟೆ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.–ಎಸ್.ಪಿ.ಮಹೇಶ್ ಚಾ.ನಗರ ಲೋಕೋಪಯೋಗಿ ಇಲಾಖೆ
ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್ ವಿ, ಮಲ್ಲೇಶ ಎಂ., ಮಹದೇವ್ ಹೆಗ್ಗವಾಡಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.