ಗುಂಡ್ಲುಪೇಟೆ: ತಾಲ್ಲೂಕಿನ ಗಡಿಭಾಗದಲ್ಲಿರುವ ಸುಲ್ತಾನ್ ಬತ್ತೇರಿ ಮಹಾ ಗಣಪತಿ ದೇವಸ್ಥಾನದ ಟ್ರಸ್ಟ್ ವತಿಯಿಂದ ನಿರ್ಮಿಸಿದ ಶಬರಿಮಲೆ ಯಾತ್ರಿಗಳ ವಿಶ್ರಾಂತಿ ಕೇಂದ್ರದ ಕಟ್ಟಡ ಉದ್ಘಾಟನೆಯನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ನೆರವೇರಿಸಿದರು.
ಹಲವು ರಾಜ್ಯಗಳಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಗುಂಡ್ಲುಪೇಟೆ ಮಾರ್ಗವಾಗಿ ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳು ಈ ಕ್ಷೇತ್ರದಲ್ಲಿ ವಿಶ್ರಾಂತಿ ಪಡೆದು ಸಾಗುತ್ತಿದ್ದದನ್ನು ಮನಗಂಡ ಬತ್ತೇರಿ ಮಹಾಗಣಪತಿ ದೇವಸ್ಥಾನದ ಟ್ರಸ್ಟ್ ವಿಶೇಷ ಆಸಕ್ತಿ ವಹಿಸಿ ವಿಶ್ರಾಂತಿ ಕೇಂದ್ರದ ಕಟ್ಟಡ ನಿರ್ಮಿಸಿರುವುದು ಉತ್ತಮ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತಿ, ಮತ, ಧರ್ಮವನ್ನ ತೊರೆದು ನಾವೆಲ್ಲ ಒಂದು ಎಂಬ ಸಂದೇಶದೊಂದಿಗೆ ಈ ಮಹತ್ತರವಾದ ಕಾರ್ಯವನ್ನು ಮಾಡಿರುವ ಮಹಾಗಣಪತಿ ದೇವಸ್ಥಾನ ಟ್ರಸ್ಟ್ ನ ಎಲ್ಲಾ ಮುಖಂಡರಿಗೆ ಪದಾಧಿಕಾರಿಗಳಿಗೆ ವಂದನೆ ಸಲ್ಲಿಸುವೆ ಎಂದ ಅವರು ಎಚ್.ಎಸ್.ಮಹದೇವಪ್ರಸಾದ್ ಟ್ರಸ್ಟ್ ವತಿಯಿಂದ ₹50 ಸಾವಿರ ರೂ. ದೇಣಿಗೆ ನೀಡಿದರು.
ಕ್ಷೇತ್ರಕ್ಕೆ ಪೂಂಕಾವನಂ ಎಂದು ನಾಮಕರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ ಶಾಸಕ ಐ.ಸಿ.ಬಾಲಕೃಷ್ಣನ್, ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ, ಸುಲ್ತಾನ್ ಬತ್ತೇರಿ ಪುರಸಭೆ ಅಧ್ಯಕ್ಷ ಟಿ.ಕೆ.ರಮೇಶ್, ನಲ್ಪೂಜ ಗ್ರಾಪಂ ಅಧ್ಯಕ್ಷರಾದ ಶೀಜ ಸತೀಶ್, ಮಹಾ ಗಣಪತಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಕೆ.ಜಿ.ಗೋಪಾಲ್ ಪಿಲೈ, ಪದಾಧಿಕಾರಿಗಳಾದ ಅವಿಥಾನ್ ಸುರೇಂದ್ರ, ಕೆ.ಎ.ಅಶೋಕನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.