ADVERTISEMENT

ಹನೂರು | ಗೋಪಿನಾಥಂನಲ್ಲಿ ಶೀಘ್ರ ಸಫಾರಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 6:36 IST
Last Updated 1 ಆಗಸ್ಟ್ 2023, 6:36 IST
ಗೋಪಿನಾಥಂ ಮಿಸ್ಟ್ರಿ ಟ್ರೇಲ್‌ಕ್ಯಾಂಪ್‌ನ ಪ್ರವೇಶ ದ್ವಾರ
ಗೋಪಿನಾಥಂ ಮಿಸ್ಟ್ರಿ ಟ್ರೇಲ್‌ಕ್ಯಾಂಪ್‌ನ ಪ್ರವೇಶ ದ್ವಾರ   

ಹನೂರು: ತಾಲ್ಲೂಕಿನ ಗಡಿಭಾಗ, ಕಾವೇರಿ ವನ್ಯಧಾಮದ ಗೋಪಿನಾಥಂ ವಲಯದಲ್ಲಿ ಶೀಘ್ರ ಸಫಾರಿ ಆರಂಭವಾಗಲಿದ್ದು, ಇದಕ್ಕಾಗಿ ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ. 

ಗೋಪಿನಾಥಂನಲ್ಲಿ ಸಫಾರಿ ಸೇರಿದಂತೆ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿ 2021–22ನೇ ಸಾಲಿನ ಬಜೆಟ್‌ನಲ್ಲಿ ₹5 ಕೋಟಿ ಅನುದಾನ ಘೋಷಿಸಲಾಗಿತ್ತು. 

ವನ್ಯಜೀವಿ ವಲಯದ ಎರಕೆಯಂ, ಮೈಲುಮಲೆ ಬೆಟ್ಟ ಮುಂತಾದ ಕಡೆ ಸಫಾರಿಗಾಗಿ ಮಾರ್ಗಗಳನ್ನು ಮಾಡಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ, ಸಂಜೆ ವೇಳೆ 4 ರಿಂದ  6ವರೆಗೆ ಪ್ರಾಣಿ ಪ್ರಿಯರು ಸಫಾರಿ ಮಾಡಬಹುದು. ಆದರೆ ಸಫಾರಿ ಶುಲ್ಕವನ್ನು ಅರಣ್ಯ ಇಲಾಖೆ ಇನ್ನೂ ನಿಗದಿ ಪಡಿಸಿಲ್ಲ. ಶೀಘ್ರದಲ್ಲೇ ದರ ನಿಗದಿಪಡಿಸಿ ಸಫಾರಿ ಆರಂಭವಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಗೋಪಿನಾಥಂನಲ್ಲಿ ಈಗಾಗಲೇ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್ಸ್‌ನ (ಜೆಎಲ್‌ಆರ್‌) ಮಿಸ್ಟ್ರಿ ಟ್ರೇಲ್‌ ಕ್ಯಾಂಪ್‌ ಇದೆ. ಇದಕ್ಕೂ ಮೊದಲು ಇದನ್ನು ಅರಣ್ಯ ಇಲಾಖೆಯೇ ನಿರ್ವಹಿಸುತ್ತಿತ್ತು. 

ಸದ್ಯ, ಕ್ಯಾಂಪ್‌ನಲ್ಲಿ ವಾಸ್ತವ್ಯ ಹೂಡಿರುವ ಪ್ರವಾಸಿಗರಿಗೆ ಜೆಎಲ್‌ಆರ್‌ ಸಫಾರಿ ವ್ಯವಸ್ಥೆ ಕಲ್ಪಿಸುತ್ತಿದೆ. ಇದಲ್ಲದೇ ದೋಣಿ ವಿಹಾರ, ಪಕ್ಷಿ ವೀಕ್ಷಣೆಯಂತಹ  ಚಟುವಟಿಕೆಗಳನ್ನೂ ನಡೆಸುತ್ತಿದೆ. ಆದರೆ, ಸಾರ್ವಜನಿಕರಿಗೆ ಇಲ್ಲ.   

ಅರಣ್ಯ ಇಲಾಖೆ ಆರಂಭಸಲಿರುವ ಸಫಾರಿಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಇರಲಿದೆ. ಜೆಎಲ್‌ಆರ್‌ ಕ್ಯಾಂಪ್‌ ಆವರಣದಲ್ಲೇ ಸಫಾರಿ ಕೇಂದ್ರವೂ ಇರಲಿದೆ. 

ಇಲ್ಲಿ ಗೋಪಿನಾಥಂ ಅಣೆಕಟ್ಟು, ಎರಕೆಯಂ ಪ್ರದೇಶದಲ್ಲಿ ವೀರಪ್ಪನ್‌ನಿಂದ ಹತ್ಯೆಗೊಳಾಗದ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್‌ ಅವರ ಸ್ಮಾರಕ ಇದೆ. ಇಲ್ಲಿಂದ 15 ಕಿ.ಮೀ ದೂರದಲ್ಲಿ ಹೊಗೆನಕಲ್‌ ಜಲಪಾತವೂ ಇದೆ. 

ಮೂರನೇ ಸಫಾರಿ ಕೇಂದ್ರ: ಹೊಸ ಸಫಾರಿ ಕೇಂದ್ರ ಆರಂಭವಾದರೆ, ಜಿಲ್ಲೆಯಲ್ಲಿ ಮೂರು ಸಫಾರಿ ಕೇಂದ್ರಗಳಾಗುತ್ತವೆ. ಈಗಾಗಲೇ ಬಂಡೀಪುರದಲ್ಲಿ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಸಫಾರಿ ವ್ಯವಸ್ಥೆ ಇದೆ. 

ಹನೂರು ತಾಲ್ಲೂಕಿನ ಗೋಪಿನಾಥಂ ಸಮೀಪದಲ್ಲಿರುವ ಎರಕೆಯಂನಲ್ಲಿರುವ ಪಿ.ಶ್ರೀನಿವಾಸ್‌ ಅವರ ಸ್ಮಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.