ADVERTISEMENT

ಸಂತೇಮರಹಳ್ಳಿ | ಬಿಲ್ವಿದ್ಯೆ, ಕತ್ತಿವರಸೆ: ರಾಷ್ಟ್ರಮಟ್ಟದಲ್ಲಿ ಸಾಧನೆ

ಮಹದೇವ್ ಹೆಗ್ಗವಾಡಿಪುರ
Published 21 ಜುಲೈ 2024, 4:59 IST
Last Updated 21 ಜುಲೈ 2024, 4:59 IST
ಸಂತೇಮರಹಳ್ಳಿಯ ಬಿಲ್ವಿದ್ಯೆ ಹಾಗೂ ಕತ್ತಿವರಸೆ ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು
ಸಂತೇಮರಹಳ್ಳಿಯ ಬಿಲ್ವಿದ್ಯೆ ಹಾಗೂ ಕತ್ತಿವರಸೆ ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು   

ಸಂತೇಮರಹಳ್ಳಿ: ಗುಡ್ಡಗಾಡು ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಮಕ್ಕಳನ್ನು ಕರೆತಂದು ಅವರಿಗೆ ಶಿಕ್ಷಣದ ಜತೆಗೆ ಬಿಲ್ವಿದ್ಯೆ ಹಾಗೂ ಕತ್ತಿ ವರಸೆ ತರಬೇತಿ ನೀಡುತ್ತಿದೆ ಸಂತೇಮರಹಳ್ಳಿಯ ಬಿಲ್ವಿದ್ಯೆ ಹಾಗೂ ಕತ್ತಿವರಸೆ ಕ್ರೀಡಾ ವಸತಿ ಶಾಲೆ.

ಪರಿಶಿಷ್ಟ ವರ್ಗದ (ಎಸ್‌ಟಿ) ವಿದ್ಯಾರ್ಥಿಗಳಿಗೆ ಮೀಸಲಾಗಿರುವ ತರಬೇತಿ ಸಂಸ್ಥೆಯು ರಾಜ್ಯದ ಏಕೈಕ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಈ ವಸತಿ ಶಾಲೆಯಲ್ಲಿ ನಾಯಕ, ಸೋಲಿಗ, ಕಾಡು ಕುರುಬ, ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಸಿದ್ದಿ ಜನಾಂಗದ ಮಕ್ಕಳನ್ನು ಕರೆತಂದು ಅವರಿಗೂ ಬಿಲ್ವಿದ್ಯೆ ಹಾಗೂ ಕತ್ತಿ ವರಸೆ ಕಲಿಸಲಾಗುತ್ತಿದೆ.

2016–17ರಲ್ಲಿ 24 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 45 ವಿದ್ಯಾರ್ಥಿಗಳು ಇದ್ದಾರೆ. ಪ್ರತಿದಿನ ಬೆಳಿಗ್ಗೆ 5ರಿಂದ ಆರಂಭವಾದ ತರಬೇತಿ 7.30ಕ್ಕೆ ಮುಗಿಯುತ್ತದೆ. ಶಾಲೆ ಮುಗಿದ ಬಳಿಕ ಸಂಜೆ 4.30ರಿಂದ 7.30ರವರೆಗೆ ತರಬೇತಿ ನೀಡಲಾಗುತ್ತಿದೆ. ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಕ್ರೀಡಾ ವಸತಿ ಶಾಲೆಯ ನಿರ್ವಹಣೆ ಮಾಡುತ್ತಿದೆ.

ADVERTISEMENT

ಶಾಲೆಯ ತರಬೇತುದಾರರು ರಾಜ್ಯದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಸೋಲಿಗ, ಗುಡ್ಡಗಾಡು ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಮಕ್ಕಳನ್ನು ಹುಡುಕಿ ಕರೆತಂದು ಶಾಲೆಗೆ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಇದುವರೆಗೂ ಶಾಲೆಯ ಮುಖವನ್ನೇ ನೋಡದ ಅಲೆಮಾರಿ ಸಿದ್ದಿ ಜನಾಂಗಕ್ಕೆ ಸೇರಿದ ಮಕ್ಕಳನ್ನು ವಸತಿ ಶಾಲೆಗೆ ದಾಖಲು ಮಾಡಿರುವುದು ವಿಶೇಷ.

ತರಬೇತುದಾರರು ಧಾರವಾಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ವಾಡಾ ಗ್ರಾಮದ 4 ಸಿದ್ದಿ ಜನಾಂಗದ ಮಕ್ಕಳನ್ನು ಅವರ ಪೋಷಕರ ಮನವೊಲಿಸಿ ಕರೆತಂದು ಸರ್ಕಾರಿ ಶಾಲೆಗೆ ದಾಖಲಿಸಿ ಕ್ರೀಡಾ ತರಬೇತಿ ನೀಡುತ್ತಿದ್ದಾರೆ.

ಇಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ, ರಾಜ್ಯ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ವಸತಿ ಶಾಲೆಗೆ ಕೀರ್ತಿ ತಂದು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

2020–21ನೇ ಸಾಲಿನಲ್ಲಿ ಬಿಲ್ವಿದ್ಯೆ ಹಾಗೂ ಕತ್ತಿವರಸೆ ವಿಭಾಗದಲ್ಲಿ 16 ಮಂದಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. 2021–22ನೇ ಸಾಲಿನಲ್ಲಿ ಧನುಷ್ ಕತ್ತಿವರಸೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾನೆ.

2022–23ನೇ ಸಾಲಿನಲ್ಲಿ 16 ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದು, ಅದೇ ವರ್ಷ 28 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

2023–24ರಲ್ಲಿ 19 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಖೇಲೋ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿ ಮನೋಜ್ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಸಂಬಂಧ ಮಹಾರಾಷ್ಟ್ರದ ಸಾಯಿ ಕ್ರೀಡಾಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಸಂತೇಮರಹಳ್ಳಿಯ ಬಿಲ್ವಿದ್ಯೆ ಹಾಗೂ ಕತ್ತಿವರಸೆ ಕ್ರೀಡಾ ವಸತಿ ಶಾಲೆಯಲ್ಲಿ ಬಿಲ್ವಿದ್ಯೆ ತರಬೇತಿ ಪಡೆಯುತ್ತಿರುವ ಮಕ್ಕಳು

‘ಪ್ರತಿಭಾವಂತರಿಗೆ ವೇದಿಕೆ’

‘ರಾಜ್ಯದ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪೋಷಕರ ಮನವೊಲಿಸಿ ತರಬೇತಿ ಕೇಂದ್ರಕ್ಕೆ ಕರೆತಂದು ತರಬೇತಿ ನೀಡಲಾಗುತ್ತಿದೆ. ಮಕ್ಕಳು ಓದಿನ ಜತೆಗೆ ಕ್ರೀಡೆಗಳಲ್ಲಿ ತೊಡಗುತ್ತಿದ್ದು ಸಾಧನೆಯ ಹಾದಿಯಲ್ಲಿದ್ದಾರೆ’ ಎಂದು ತರಬೇತುದಾರ ರಘು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.